ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!


ಶ್ರೀ ಗಣೇಶ ಚತುರ್ಥಿಯನ್ನು ಮನೆಯಲ್ಲಿ ಧಾರ್ಮಿಕವಾಗಿ ಆಚರಿಸಿ ಗಣೇಶತತ್ತ್ವದ ಲಾಭವನ್ನು ಪಡೆದುಕೊಳ್ಳೋಣ!
ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಕೆಲವು ಕುಟುಂಬಗಳಲ್ಲಿಯಂತೂ ಶ್ರೀ ಗಣೇಶ ಚತುರ್ಥಿಯ ಸಿದ್ಧತೆಯು ಒಂದು ತಿಂಗಳ ಮೊದಲೇ ಪ್ರಾರಂಭವಾಗಿರುತ್ತದೆ. ಸಂಪೂರ್ಣ ಮನೆಯ ಸ್ವಚ್ಛತೆ ಮಾಡುವುದು, ಮನೆಗೆ ಬಣ್ಣ ಹಚ್ಚುವುದು ಮುಂತಾದ ಸೇವೆಗಳು ಪ್ರಾರಂಭವಾಗಿರುತ್ತವೆ. ಆದರೆ ನಾವು ಉತ್ಸವದ ಮನೋರಂಜನೆಯಲ್ಲಿ ಯಾವಾಗ ಮುಳುಗಿ ಹೋಗುತ್ತೇವೆಯೋ ಗೊತ್ತಾಗುವುದಿಲ್ಲ. ಇದರಿಂದ ಗಣಪತಿಯು ಮನೆಯಲ್ಲಿದ್ದಾನೆ ಎಂದು ನಾವು ಮರೆತು ಬಿಡುತ್ತೇವೆ. ಈ ಉತ್ಸವದಲ್ಲಿ ನಾವು ನಮ್ಮ ಅಯೋಗ್ಯ ಕೃತಿಗಳನ್ನು ಸರಿಪಡಿಸಿ ಕೆಳಗಿನಂತೆ ಕೃತಿ ಮಾಡಿದರೆ ಶ್ರೀ ಗಣೇಶನಿಂದ ಆಧ್ಯಾತ್ಮಿಕ ಲಾಭ ದೊರಕುವುದು.

ಗಣೇಶಚತುರ್ಥಿಯಂದು ಶಾಸ್ತ್ರಾನುಸಾರ ಶ್ರೀ ಗಣೇಶ ಮೂರ್ತಿಯ ಪೂಜೆ ಮಾಡುವ ಕಾಲಾವಧಿ
ಶಾಸ್ತ್ರಾನುಸಾರ ಭಾದ್ರಪದ ಶುಕ್ಲ ಚತುರ್ಥಿಗೆ ಮಣ್ಣಿನಿಂದ ಮಾಡಿದ ಶ್ರೀ ಗಣೇಶಮೂರ್ತಿಯನ್ನು ತಯಾರಿಸಬೇಕು. ಅದನ್ನು ಎಡ ಕೈಯಲ್ಲಿಟ್ಟು ಸಿದ್ಧಿವಿನಾಯಕನ ಹೆಸರಿನಲ್ಲಿ ಮೂರ್ತಿಗೆ ಪ್ರಾಣಪ್ರತಿಷ್ಠೆ ಮತ್ತು ಪೂಜೆ ಮಾಡಬೇಕು ಹಾಗೂ ಕೂಡಲೇ ಅದನ್ನು ವಿಸರ್ಜನೆ ಮಾಡಬೇಕು. ಕುಲಾಚಾರಕ್ಕನುಸಾರ ಶ್ರೀ ಗಣೇಶಮೂರ್ತಿಯನ್ನು ಒಂದೂವರೆ, ಐದು, ಏಳು, ಹತ್ತು ಅಥವಾ ಹನ್ನೊಂದನೇ ದಿನ ಪೂಜಿಸುತ್ತಾರೆ ಹಾಗೂ ಎರಡನೇ, ಐದನೇ, ಏಳನೇ ಅಥವಾ ಹತ್ತನೇ ದಿನ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.

ಶ್ರೀ ಗಣೇಶನ ಉಪಾಸನೆ ಎಲ್ಲರಿಗೂ ಲಾಭದಾಯಕವಾಗಿರಲು ಕಾರಣ
ಪೃಥ್ವಿ ಮತ್ತು ಆಪ ತತ್ತ್ವಗಳ ಇಚ್ಛಾ ಲಹರಿಗಳೊಂದಿಗೆ ಶ್ರೀ ಗಣೇಶನ ಸಂಬಂಧವಿದೆ. ಆದುದರಿಂದ ಶ್ರೀ ಗಣೇಶ ಪೂಜೆಯು ಸ್ತ್ರೀ ಹಾಗೂ ಪುರುಷರಿಗೆ ಲಾಭದಾಯಕವಾಗಿದೆ. ಶರೀರದಲ್ಲಿ ಸಾಧನೆ ಬಗ್ಗೆ ವಿಚಾರ ಲಹರಿಗಳ ಸಂಚಾರವಾಗುವುದಕ್ಕಾಗಿ ಶ್ರೀ ಗಣೇಶ ಪೂಜೆ ಸಹಾಯವಾಗುತ್ತದೆ. ಶ್ರೀ ಗಣೇಶ ಪೂಜೆಯ ಮೂಲಕ ಶರೀರದಲ್ಲಿ ಸತ್ತ್ವಗುಣ ಸಂವರ್ಧನೆಯಾಗುವುದು ಹಾಗೂ ಸಾಧನೆಯ ವಿಚಾರ ವೃದ್ಧಿಯಾಗುವುದು. ಆದುದರಿಂದ ಶ್ರೀ ಗಣೇಶೋತ್ಸವದ ಸಮಯದಲ್ಲಿ ಎಷ್ಟು ದಿನ ಶ್ರೀಗಣೇಶ ಪೂಜೆ ಮಾಡಲಾಗುವುದೋ, ಅಷ್ಟು ದಿನ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗುತ್ತಾರೆ ಹಾಗೂ ಕುಲಾಚಾರಕ್ಕನುಸಾರ ಪೂಜೆ, ಅರ್ಚನೆ ಇತ್ಯಾದಿ ಮಾಡುತ್ತಾರೆ.

ಶ್ರೀ ಗಣೇಶೋತ್ಸವದ ವೇಳೆ ಮಾಡಬೇಕಾದ ಧಾರ್ಮಿಕ ಕೃತಿಗಳು
೧. ಪ್ರತಿದಿನ ಅಂಗಳದಲ್ಲಿ ಅಥವಾ ಶ್ರೀಗಣೇಶಮೂರ್ತಿಯ ಎದುರು ಗಣೇಶ ತತ್ತ್ವವನ್ನು ಆಕರ್ಷಿಸುವ ರಂಗೋಲಿ ಹಾಕಬೇಕು. ಇಂತಹ ಸಾತ್ತ್ವಿಕ ರಂಗೋಲಿಗಳ ನಮೂನೆಗಳು ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥಗಳಲ್ಲಿವೆ.
೨. ಪ್ರತಿದಿನ ಬೆಳಗ್ಗೆ ಹಾಗೂ ಸಾಯಂ ಕಾಲ ಶ್ರೀಗಣೇಶನಿಗೆ ಪೂಜೆ ಮಾಡಬೇಕು.
೩. ಪೂಜೆಯ ನಂತರ ಮನೆಯ ಎಲ್ಲ ಸದಸ್ಯರೊಂದಿಗೆ ಸೇರಿಕೊಂಡು ಶ್ರೀಗಣೇಶನಿಗೆ ಭಾವಪೂರ್ಣ ಆರತಿ ಮಾಡಬೇಕು.

ಮಂಟಪದ ಅಲಂಕಾರಕ್ಕಾಗಿ ‘ಥರ್ಮಾಕೋಲ್’ನ್ನು ಉಪಯೋಗಿಸಬಾರದು!
ಶ್ರೀ ಗಣೇಶನ ಮೂರ್ತಿಗಾಗಿ ಮಂಟಪವನ್ನು ತಯಾರಿಸುವಾಗ ‘ಥರ್ಮಾಕೋಲ್’ನ್ನು ಉಪಯೋಗಿಸಬಾರದು.
೧. ‘ಥರ್ಮಾಕೋಲ್’ ವಿಘಟನೆಯಾಗುವುದಿಲ್ಲ, ಅದರ ಬಳಕೆಯಿಂದ ಪರಿಸರವು ನಾಶವಾಗುತ್ತದೆ. ಹಾಗೆಯೇ ‘ಥರ್ಮಾಕೋಲ್’ನ್ನು ರಾಸಾಯನಿಕ ಪ್ರಕ್ರಿಯೆಯಿಂದ ತಯಾರಿಸಿದ್ದರಿಂದ ಅದು ರಜ-ತಮವಾಗಿದೆ. ಇಂತಹ ರಜ-ತಮ ಥರ್ಮಾಕೋಲ್ ಸಾತ್ತ್ವಿಕತೆಯನ್ನು ಗ್ರಹಿಸುವುದಿಲ್ಲ, ಅದರ ಬದಲು ಅದು ರಜ-ತಮ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ.
೨. ಮಂಟಪಕ್ಕಾಗಿ ಬಾಳೆಯ ದಿಂಡನ್ನು ಉಪಯೋಗಿಸಬೇಕು. ಬಾಳೆಯ ದಿಂಡಿನಿಂದ ತಯಾರಿಸಿದ ಮಂಟಪವು ಹೆಚ್ಚು ಸಾತ್ತ್ವಿಕವಾಗಿರುತ್ತದೆ.


ಶ್ರೀ ಗಣೇಶನ ಆರತಿ ಮಾಡುವಾಗ ಗಮನದಲ್ಲಿ ಇಡಬೇಕಾದ ಅಂಶಗಳು
೧. ಆರತಿಯ ವೇಳೆ ಎಲ್ಲರೂ ಸಾಲಾಗಿ ನಿಲ್ಲಬೇಕು.
೨. ಆರತಿಯನ್ನು ಮಧುರವಾಗಿ ಹಾಗೂ ನಿಧಾನವಾಗಿ ಹಾಡಬೇಕು.
೩. ನಾದ ನಿರ್ಮಾಣವಾಗುವುದಕ್ಕಾಗಿ ಮಂದಸ್ವರದಲ್ಲಿ ಚಪ್ಪಾಳೆ ಅಥವಾ ತಾಳ ಬಾರಿಸಬೇಕು.

ಆರತಿ ಹಾಡುವಾಗ ಮನಸ್ಸಿನಲ್ಲಿ ಈಶ್ವರನ ಅನುಸಂಧಾನವಿಡಲು ಪ್ರಯತ್ನಿಸಿರಿ. ಅನೇಕ ಆರತಿಗಳನ್ನು ಹಾಡದೇ ಒಂದೆರಡು ಒಳ್ಳೆಯ ಆರತಿಗಳನ್ನು ಆರಿಸಿ, ಅವುಗಳನ್ನು ಭಾವಪೂರ್ಣವಾಗಿ ಗಣೇಶ ಪ್ರತ್ಯಕ್ಷ ನಮ್ಮೊಂದಿಗಿದ್ದಾನೆ ಎಂಬ ಭಾವದಿಂದ ಹಾಡಬೇಕು. ಆರತಿಯಾಗುವಾಗ ಪರಸ್ಪರರೊಂದಿಗೆ ಮಾತನಾಡಬಾರದು. ಭಾವಪೂರ್ಣ ಆರತಿ ಮಾಡಿದರೆ ವಾಸ್ತುವಿನಲ್ಲಿ ಸಾತ್ತ್ವಿಕ ಸ್ಪಂದನ ನಿರ್ಮಾಣವಾಗುತ್ತದೆ. ಅದನ್ನು ಕಾಪಾಡಿಕೊಳ್ಳಲು ಹಾಗೂ ಅದರ ಲಾಭ ಪಡೆಯುವುದಕ್ಕಾಗಿ ಆರತಿಯ ನಂತರ ಸಾಮೂಹಿಕ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯ ನಂತರ ಸ್ವಲ್ಪ ಸಮಯ ಒಟ್ಟಿಗೆ ಕುಳಿತು ನಾಮಜಪ ಮಾಡಬೇಕು.

ಸಾಯಂಕಾಲ ಪುನಃ ಆರತಿ ಮಾಡಿ ಪರಿವಾರದ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಶ್ರೀ ಗಣೇಶಸ್ತೋತ್ರ ಪಠಣ ಮತ್ತು ‘ಓಂ ಗಂ ಗಣಪತಯೇ ನಮಃ’ ನಾಮಜಪ ಮಾಡಬೇಕು. ಶ್ರೀ ಗಣೇಶೋತ್ಸವದ ಕಾಲದಲ್ಲಿ ಹಚ್ಚೆಚ್ಚು ಸಾಧನೆ ಮಾಡಿ ವಾತಾವರಣ ದಲ್ಲಿರುವ ಚೈತನ್ಯವನ್ನು ಗ್ರಹಣ ಮಾಡಿರಿ.

ಈ ಪದ್ಧತಿಯಲ್ಲಿ ಶ್ರೀಗಣೇಶನ ಉಪಾಸನೆ ಮಾಡುವವರಿಗೆ ಶೀಘ್ರವಾಗಿ ಫಲಪ್ರಾಪ್ತಿಯಾಗುವುದು. ಏಕೆಂದರೆ ಉಚ್ಚ ದೇವತೆಗಳ ಲೋಕಗಳಲ್ಲಿ ಗಣೇಶಲೋಕವು ಭೂಲೋಕಕ್ಕೆ ಹತ್ತಿರವಿದೆ. ಗಣೇಶಲಹರಿಗಳು ಇತರ ಉಚ್ಚ ದೇವತೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಭೂಮಿಯ ಮೇಲೆ ಕಾರ್ಯನಿರತವಾಗಿರುತ್ತವೆ. ಆದುದರಿಂದ ಗಣೇಶ ಲಹರಿಗಳು ಪೃಥ್ವಿಯ ಮೇಲೆ ವಾಸಿಸುವ ಜೀವಗಳ ಪ್ರಾರ್ಥನೆಯನ್ನು ಉಚ್ಚದೇವತೆಗಳಿಗೆ ತಲುಪಿಸುತ್ತವೆ. ಮಾನವನಿಗೆ ಉಚ್ಚ ದೇವತೆಗಳ ಸಮೀಪ ಹೋಗಲು ಸಾಧನೆ ಮಾಡಬೇಕು ಹಾಗೂ ದೇವತೆಗಳ ಬಗ್ಗೆ ಭಾವ ವೃದ್ಧಿಯಾಗುವ ಅವಶ್ಯಕತೆಯಿದೆ.

ಶ್ರೀ ಗಣೇಶೋತ್ಸವದ ಕಾಲದಲ್ಲಿ ಮಾಡಲ್ಪಡುವ ವಿವಿಧ ಧಾರ್ಮಿಕ ಕೃತಿಗಳು ಹಾಗೂ ಅವುಗಳಿಂದಾಗುವ ಲಾಭದ ಪ್ರಮಾಣವನ್ನು ಮುಂದೆ ಕೊಡಲಾಗಿದೆ -
೧. ಶ್ರೀಗಣೇಶನ ಪೂಜೆ ಮಾಡುವುದರಿಂದ ಶೇ. ೨೦ ರಷ್ಟು ಲಾಭ ವಾಗುತ್ತದೆ.
೨. ತಮ್ಮ ಶರೀರದಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವುದಕ್ಕಾಗಿ ಮಾಡಬೇಕಾದ ಆಚರಣೆ ಮಾಡಿದರೆ ಶೇ. ೨೦ ರಷ್ಟು ಲಾಭವಾಗುತ್ತದೆ.
೩. ಶ್ರೀಗಣೇಶನ ನಾಮಜಪ ಮಾಡಿದರೆ ಶೇ.೩೦ರಷ್ಟು ಹಾಗೂ ಶ್ರೀಗಣೇಶನ ವಿಡಂಬನೆಯನ್ನು ತಡೆಯುವುದರಿಂದ ಶೇ. ೩೦ ರಷ್ಟು ಲಾಭವಾಗುವುದು.
ಈ ರೀತಿ ಈ ನಾಲ್ಕು ಕೃತಿಗಳನ್ನು ಮಾಡಿದರೆ ಉಪಾಸಕನಿಗೆ ಒಟ್ಟು ಶೇ. ೧೦೦ ರಷ್ಟು ಲಾಭವಾಗುತ್ತದೆ.

ಗಣೇಶೋತ್ಸವದ ಸಮಯದಲ್ಲಿ ಮಾಡಬೇಕಾದ ಪ್ರಾರ್ಥನೆ
ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ. (ಪ್ರಾರ್ಥನೆಯ ಬಗ್ಗೆ ಸವಿಸ್ತಾರವಾದ ವಿವೇಚನೆ ಮತ್ತು ಜೀವನದಲ್ಲಿನ ವಿವಿಧ ಪ್ರಸಂಗಗಳಲ್ಲಿ ಮಾಡಬೇಕಾದ ಪ್ರಾರ್ಥನೆಗಳನ್ನು ಸನಾತನದ ‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’ ಈ ಕಿರುಗ್ರಂಥದಲ್ಲಿ ನೀಡಲಾಗಿದೆ.)

(ಆಧಾರ : ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯಂದು ಮಾಡಬೇಕಾದ ಕೃತಿಗಳು
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.