Showing posts with label ಕ್ರಾಂತಿಕಾರಿ. Show all posts
Showing posts with label ಕ್ರಾಂತಿಕಾರಿ. Show all posts

ಚಂದ್ರಶೇಖರ ಆಝಾದ

ಓ ಆಜಾದ್ ಥಾ... ಆಜಾದ್ ಹೀ ರೆಹ್ ಗಯಾ...

ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೇ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ?.. ಜೈ!" “ವಂದೇ... ಮಾತರಂ!"

ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು? ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ?

ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ. ಎಂದಿನಂತೆ ಆಂಗ್ಲರ ಕಟಕಟೆಯಲ್ಲಿ ವಿಚಾರಣೆಯ ನಾಟಕ. ಅಲ್ಲೊಂದು ಸ್ವಾರಸ್ಯಕರ ಸಂಭಾಷಣೆ:

ನ್ಯಾಯಾಧೀಶ: ನಿನ್ನ ಹೆಸರೇನು?
ಹುಡುಗ: ಆಜಾದ್!
ನ್ಯಾಯಾಧೀಶ: ತಂದೆಯ ಹೆಸರು?
ಹುಡುಗ: ಸ್ವಾತಂತ್ರ
ನ್ಯಾಯಾಧೀಶ: ಮನೆ ಎಲ್ಲಿದೆ?
ಹುಡುಗ: ಸೆರೆಮನೆಯೇ ನನಗೆ ಮನೆ!

ಎರಡೂ ಕೈಸೇರಿಸಿ ಹಾಕಿದರೂ ಕೋಳ ತುಂಬದ ಪುಟ್ಟ ಹುಡುಗನ ಕೆಚ್ಚೆದೆ ಆ ಬಿಳಿಯನಿಗೆ ಮತ್ಸರ ಮೂಡಿಸಿರಬೇಕು. ಹದಿನೈದು ಛಡಿ ಏಟುಗಳ ಶಿಕ್ಷೆ ವಿಧಿಸಿಬಿಟ್ಟ. ಆದರೇನು? ‘ವಂದೇ ಮಾತರಂ’ ಎನ್ನುವ ಮತ್ತೇರಿಸುವ, ಮೈಮರೆಸುವ ಘೋಷ ವಾಕ್ಯದ ಎದುರು ಯಾವ ಪೆಟ್ಟು ತಾನೆ ನೋವುಂಟು ಮಾಡಬಹುದಾಗಿತ್ತು ಆ ಎಳೆಯ ದೇಶಭಕ್ತನಿಗೆ? ಒಂದು ಹೊಡೆತಕ್ಕೆ ಭಯಂಕರ ಅಪರಾಧಿಗಳೂ ಅಳುವ ಸ್ಥಿತಿಗೆ ಬರುತ್ತಿದ್ದರು, ಇಂತಹ ಬೆತ್ತದ ಕಟ್ಟಿಗೆಯ ೧೫ ಏಟುಗಳನ್ನು ಆಝಾದನು ‘ವಂದೇ ಮಾತರಮ್| ಭಾರತ ಮಾತಾಕೀ ಜೈ|’ ಎಂದು ಹೇಳುತ್ತಾ ಸಹಿಸಿಕೊಂಡನು. ಆಗ ಅವನ ಬೆನ್ನು ರಕ್ತಮಯವಾಗಿದ್ದರೂ ಅವನು ತುಟಿಪಿಟಿಕ್ಕೆನ್ನಲಿಲ್ಲ. ಈ ಹೊಡೆತದಿಂದಾದ ಗಾಯಗಳಿಗೆ ಉಪಾಚಾರ ಮಾಡಲು ಆಂಗ್ಲ ಅಧಿಕಾರಿಯು ಅವನಿಗೆ ಮೂರಾಣೆ ಕೊಟ್ಟನು, ಆಗ ಅವನು ಅವುಗಳನ್ನು ಅಧಿಕಾರಿಯ ಮುಖಕ್ಕೆ ಎಸೆದನು ಮತ್ತು ತಲೆಯೆತ್ತಿ ಕಾರಾಗೃಹದಿಂದ ಹೊರಬಂದನು.

ಶಿಕ್ಷೆಯುಂಡು ಹೊರಬಂದ ಬಾಲಕ ಪ್ರತಿಜ್ಞೆ ಮಾಡಿದ. “ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ? ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!"

ಅಂದಿನಿಂದ ಚಂದ್ರ ಶೇಖರ ತಿವಾರಿ ಎನ್ನುವ ಭೀಮಬಲದ ಬಾಲಕ ರಾಷ್ಟ್ರಾರ್ಪಣೆಗೆ ಸಿದ್ಧನಾದ, ಚಂದ್ರ ಶೇಖರ ಆಜಾದ್ ಎಂದು ಪ್ರಸಿದ್ಧನಾದ. ಆಜಾದ್ ತಾನು ಮಾಡಿಕೊಂಡಿದ್ದ ಪ್ರತಿಜ್ಞೆಯನ್ನು ಕೊನೆಯವರೆಗೂ ಪಾಲಿಸಿದ. ಕಾಕೋರಿ ಲೂಟಿ, ಸ್ಯಾಂಡರ್ಸ್ ಹತ್ಯೆ, ಲಾಹೋರ್ ಕಾನ್ಸ್ ಪಿರೆಸಿ ಸೇರಿದಂತೆ ಹತ್ತು ಹಲವು ಆರೋಪಗಳು ಆತನ ಮೇಲಿದ್ದು, ಸದಾ ಗೂಢಚಾರರು ಆತನ ಪ್ರತಿ ನಡೆಯನ್ನು ಹದ್ದಿನ ಕಣ್ಣಲ್ಲಿ ಕಾಯ್ತಿದ್ದರೂ ಆತನ ಕೂದಲು ಕೂಡ ಕೊಂಕಿಸಲಾಗಲಿಲ್ಲ. ಆಜಾದ್ ಹೀಗೆ ಗೂಢಚಾರರಿಗೆ, ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ‘ಆಜಾದ’ನಾಗಿಯೇ ಉಳಿದ ಘಟನೆಗಳಂತೂ ಸ್ವಾರಸ್ಯಕರ.

ಕಾಕೋರಿ ಲೂಟಿಯ ನಂತರ ಕ್ರಾಂತಿ ಕಾರ್ಯದ ಬಹುತೇಕ ಪ್ರಮುಖರು ಸಿಕ್ಕಿಬಿದ್ದರು. ಅವರೆಲ್ಲರಿಗೆ ಮರಣದಂಡನೆಯ ಶಿಕ್ಷೆಯೂ ಆಯ್ತು. ಆದರೆ ಆಜಾದ್ ಮಾತ್ರ ತನ್ನ ಸುಳಿವು ಸಿಗದಂತೆ ವೇಷಮರೆಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ. ಇಂಥದೊಂದು ಸಂದರ್ಭದಲ್ಲಿ ಆಜಾದ್ ಸನ್ಯಾಸಿ ವೇಷ ತೊಟ್ಟು ಹೋಗುತ್ತಿದ್ದ. ಆತನ ಕಟ್ಟುಮಸ್ತಾದ, ಹುರಿಗೊಳಿಸಿದ ದೇಹ ಅಲ್ಲೇ ಗಸ್ತು ತಿರುಗುತ್ತಿದ್ದ ಪೋಲಿಸನಿಗೆ ಅನುಮಾನ ತರಿಸಿತು. ಅವನ ಕಣ್ ಮುಂದೆ ಬಹುಮಾನ, ಭಡ್ತಿಗಳ ದುರಾಸೆ ಸುಳಿದು ನೇರವಾಗಿ ಆಜಾದನ ಹೆಗಲ ಮೇಲೆ ಕೈ ಹಾಕಿ ತಡೆದು ನಿಲ್ಲಿಸಿಬಿಟ್ಟ.

“ಓಯ್ ಬಹುರೂಪಿ! ನೀನು ಆಜಾದ್ ಅನ್ನೋದು ಗೊತ್ತಾಗಿದೆ ನನಗೆ. ನೀನು ಸಿಕ್ಕಿಬಿದ್ದಿರುವೆ. ನಡಿ ಠಾಣೆಗೆ!" ಸನ್ಯಾಸಿ ಹಿಂತಿರುಗಿ ದುರುಗುಟ್ಟಿದ. ಅವನ ಕಣ್ಣುಗಳು ಕೆಂಡದುಂಡೆಯಾದವು. ಮೈಮೇಲೆ ಆವೇಶ ಬಂದವನ ಹಾಗೆ “ಭಂ ಭಂ ಭೋಲೇ? ಭೋಲೇ ನಾಥ್" ಅನ್ನುತ್ತ ಹೂಂ ಕರಿಸಿದ. “ಸಾಧುವಾದ ತನ್ನನ್ನು ಕೊಲೆಗಟುಕನಿಗೆ ಹೋಲಿಸುತ್ತಿರುವೆಯಾ?" ಎಂದೆಲ್ಲ ಕೂಗಾಡಿ ಶಾಪ ಕೊಡುವವನ ಹಾಗೆ ಕಮಂಡಲುವಿನ ನೀರು ಬಗ್ಗಿಸಿದ. ಅಷ್ಟು ಸಾಕಾಯ್ತು ಪೋಲಿಸನ ನಶೆ ಇಳಿಯಲು. ಆತ ನಿಜವಾದ ಸನ್ಯಾಸಿಯೇ ಅನ್ನುವುದು ಅವನಿಗೆ ಮನವರಿಕೆಯಾಗಿ ಹೋಯ್ತು. ಕೈಕೈ ಮುಗಿದು ಕಾಲಿಗೆ ಬುದ್ಧಿ ಹೇಳಿದ ಆತ, ಮತ್ತೆ ತಿರುಗಿ ನೋಡಲಿಲ್ಲ! ನಮ್ಮ ಆಜಾದ್ ಒಳಗೊಳಗೆ ನಗುತ್ತ ಹೊರಗಿನಿಂದ ಸಿಡುಕುತ್ತ ತನ್ನ ಹಾದಿ ನಡೆದ.

ಮತ್ತೊಮ್ಮೆ ಹೀಗಾಯ್ತು. ರಾಜಗುರು, ಸುಖದೇವ್ ಮತ್ತು ಆಜಾದ್ ಹಳ್ಳಿ ಗಮಾರರಂತೆ ವೇಷ ತೊಟ್ಟು ಮಹಾರಾಷ್ಟ್ರದಲ್ಲಿ ಅಡ್ಡಾಡುತ್ತಿದ್ದರು. ರೈಲಿನಲ್ಲಿ ಅವರೊಮ್ಮೆ ಶಿವಾಜಿ ಮಹರಾಜರ ಕೋಟೆಕೊತ್ತಲಗಳ ಅವಶೇಷಗಳಿದ್ದ ಕಣಿವೆಯಲ್ಲಿ ಪ್ರಯಾಣಿಸಬೇಕಾಯ್ತು. ವೀರ ಮರಾಠಾ ರಾಜಗುರು ಶುದ್ಧ ಭಾವುಕ ಮನುಷ್ಯ. ಕಿಟಕಿಯಾಚೆ ಕಾಣುತ್ತಿದ್ದ ಕೋಟೆಗಳನ್ನ ನೋಡುತ್ತಲೇ ಉನ್ಮತ್ತನಾದ. “ಹಾ ಶಿವ್ ಬಾ? ಶಿವಾಜಿ ಮಹರಾಜ್.. ನೀನಿಲ್ಲದಿದ್ದರೆ ಇವತ್ತು ನಮ್ಮ ಗತಿ ಏನಾಗಿರುತ್ತಿತ್ತು.. " ಎಂದೇನೇನೋ ಪ್ರಲಾಪಕ್ಕೆ ಶುರುವಿಟ್ಟ. ಪಕ್ಕ ಕುಳಿತ ಆಜಾದನ ಕೋಪ ನೆತ್ತಿಗೇರಿತು. ರಾಜ ಗುರುವನ್ನು ತಡೆದು ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸತೊಡಗಿದ. ಅವನ ಗುಣಗಾನ ಮಾಡಿದ ರಾಜಗುರುವನ್ನೂ ಬಯ್ದ. ಮೊದಲು ಕಕ್ಕಾಬಿಕ್ಕಿಯಾದ ರಾಜಗುರುವಿಗೆ ನಂತರ ಪರಿಸ್ಥಿತಿಯ ಅರಿವಾಯ್ತು. ಅದಾಗಲೇ ಆಂಗ್ಲರ ಗುಲಾಮರು ತಮ್ಮ ಗೂಢಚಾರಿಕೆ ಮಾಡುತ್ತಿರುವುದು ಅವನಿಗೂ ಗೊತ್ತಿತ್ತು. ತನ್ನ ಅತಿರೇಕದಿಂದ ಎಲ್ಲರೂ ಸಿಕ್ಕಿಬೀಳುತ್ತಿದ್ದೆವಲ್ಲ ಎಂದು ತುಟಿಕಚ್ಚಿಕೊಂಡ. ಪ್ರಯಾಣ ಮುಗಿದು ಕೆಳಗಿಳಿದನಂತರ ಆಜಾದ್ ರಾಜಗುರುವನ್ನು ಚೆನ್ನಾಗಿ ಬಯ್ದ. ಆತ ಸಮಯ ಪ್ರಜ್ಞೆ ತೋರಿಲ್ಲದಿದ್ದರೆ ಅವರಿಗೆ ಕಂಟಕ ಕಾದಿತ್ತು. ಆಜಾದನಿಗೆ ತಮ್ಮ ಉಳಿವಿಗಾಗಿ ಶಿವಾಜಿ ಮಹರಾಜರನ್ನು ನಿಂದಿಸಬೇಕಾಯ್ತು ಎನ್ನುವುದೇ ನೋವಿನ ಸಂಗತಿಯಾಗಿ ಕಾಡುತಿತ್ತು.

ಆಜಾದ್ ವೇಷ ಮರೆಸಿಕೊಳ್ಳುವುದರಲ್ಲಿ ಅದೆಷ್ಟು ನಿಪುಣನೆಂದರೆ, ಕೆಲವೊಮ್ಮೆ ಅವನ ಸಹಚರರಿಗೂ ಆತನ ಪರಿಚಯ ಸಿಗುತ್ತಿರಲಿಲ್ಲ. ಹೀಗೇ ಒಮ್ಮೆ ಆತ ಹಳ್ಳಿಯೊಂದರಲ್ಲಿ ಹನುಮಾನನ ಗುಡಿಯ ಪೂಜಾರಿಯಾಗಿ ಕೆಲವು ಕಾಲ ತಂಗಿದ್ದ. ಆಗ ಅಂಟಿಕೊಂಡ ‘ಪಂಡಿತ್ ಜೀ’ ಅಭಿದಾನ ಜೀವಮಾನದುದ್ದಕ್ಕೂ ಅವನ ಜೊತೆ ಸಾಗಿತು. ಹೀಗೆ ಆತನ ನೈಜ ಹೆಸರನ್ನೂ, ಪರಿಚಯವನ್ನೂ ಮರೆಸುವಷ್ಟು ಸಹಜವಾಗಿ ಆತ ತಾನು ಹಾಕಿಕೊಂಡ ವೇಷದಲ್ಲಿ ನಟಿಸುತ್ತಿದ್ದ. ಆದರೆ ಆಂತರ್ಯದಲ್ಲಿ ಮಾತ್ರ ತನ್ನ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಪ್ರಜ್ಞೆ ಹೊಂದಿದ್ದು ಅದರ ಕಾಳಜಿ ವಹಿಸುತ್ತಿದ್ದ.

ಒಮ್ಮೆ ಆತ ಮೆಕ್ಯಾನಿಕನಾಗಿ ವೇಷ ಧರಿಸಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಕೆಲಸ ಮಾಡುವಾಗೊಮ್ಮೆ ಆತನ ಕೈಮೂಳೆಗೆ ತೀವ್ರವಾಗಿ ಪೆಟ್ಟಾಯ್ತು. ವೈದ್ಯರು ಆಪರೇಶನ್ ಮಾಡಬೇಕೆಂದರು. ಆಜಾದ್ ತನಗೆ ಅನಸ್ತೇಶಿಯಾ ಕೊಡದೆ ಆಪರೇಶನ್ ಮಾಡಿ ಎಂದು ತಾಕೀತು ಮಾಡಿದ. ಅನಸ್ತೇಶಿಯಾದಿಂದ ಎಚ್ಚರ ತಪ್ಪಿದಾಗ ತಾನು ಸದಾ ಧ್ಯಾನಿಸುವ ಕ್ರಾಂತಿಕಾರ್ಯದ ವಿಷಯಗಳನ್ನು ಕನವರಿಸಿಬಿಟ್ಟರೆ? ತನ್ನ ಕಥೆಯಂತೂ ಮುಗಿಯುವುದು, ಆದರೆ ಇಡಿಯ ಸಂಘಟನೆಯ ರಹಸ್ಯವೂ ಬಯಲಾಗಿಬಿಡುವುದಲ್ಲ?

ಆಜಾದ್ ತನ್ನ ಧ್ಯೇಯಕ್ಕಾಗಿ ಆ ನೋವನ್ನು ಕೂಡ ಸಹಿಸಲು ಸಿದ್ಧನಾಗಿದ್ದ. ಆದರೆ ವೈದ್ಯರು ಮಾತು ಮಾತಲ್ಲಿ ಅನಸ್ತೇಶಿಯಾ ಕೊಟ್ಟೇಬಿಟ್ಟರು. ಚಿಕಿತ್ಸೆಯೂ ನಡೆಯಿತು. ಆತನಿಗೆ ಎಚ್ಚರವಾದಾಗ ವೈದ್ಯರು, ‘ಆಜಾದ್’ ಎಂದು ಕರೆದಿದ್ದು ಕೇಳಿ ಗಾಬರಿ! ಅಂದರೆ? ತನ್ನ ಪತ್ತೆಯಾಗಿಬಿಟ್ಟಿದೆ!?

ಆದರೆ ಅಲ್ಲಿ ಆತಂಕಕ್ಕೆ ಆಸ್ಪದವಿರಲಿಲ್ಲ. ಆಜಾದನ ರಾಷ್ಟ್ರಪ್ರೇಮ ವೈದ್ಯರ ಮನಸ್ಸು ತಟ್ಟಿತ್ತು. ಅವರು ಅಲ್ಲಿ ನಡೆದ ಯಾವ ಸಂಗತಿಯನ್ನೂ ಯಾರಿಗೂ ಹೆಳುವುದಿಲ್ಲವೆಂದು ಮಾತುಕೊಟ್ಟ ಬಳಿಕವೇ ಆಜಾದನಿಗೆ ನಿಶ್ಚಿಂತೆ.

ಆಜಾದ್ ಅದೆಷ್ಟು ಎಚ್ಚರಿಕೆಯಿಂದ ಇರುತ್ತಿದ್ದನೆಂದರೆ, ಬಹಳ ವರ್ಷಗಳ ನಂತರ ತಂದೆ ತಾಯಿಯರನ್ನು ಭೇಟಿಯಾಗಲು ಹೋದಾಗ ಕೂಡ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತ ನಿದ್ದೆಯನ್ನು ಕೂಡ ಮಾಡದೆ ತನ್ನನ್ನು ತಾನು ಕಾಯ್ದುಕೊಳ್ಳುತ್ತಿದ್ದ. ಊರಿಗೆ ಬಂದ ಮಗ ಮನೆಗೆ ಬರದೆ ಯಾರದೋ ಮನೆಯಲ್ಲಿರುವನೆಂದು ತಾಯಿಗೆ ಬೇಸರ. ಆದರೆ ದೇಶಕ್ಕಾಗಿ ಆತನನ್ನು ಅವರು ಅದೆಂದೋ ಬಿಟ್ಟುಕೊಟ್ಟಿದ್ದರಲ್ಲವೆ? ಆತ ಬದುಕಿರುವನೆಂಬುದೇ ಅವರ ಪಾಲಿಗೆ ಭಾಗ್ಯವಾಗಿತ್ತು. ಊರಲ್ಲಿರುವಷ್ಟೂ ದಿನ ನಿದ್ದೆ ಕಳಕೊಂಡಿದ್ದ ಆಜಾದ್ ಕಾಡು ಸೇರಿದಾಗ ಮಾತ್ರ ಗಡದ್ದು ನಿದ್ರೆ ಹೊಡೆಯುತ್ತಿದ್ದ. ಕೇಳಿದರೆ, ‘ಊರಿನ ಮನುಷ್ಯರಿಗಿಂತ ಕಾಡಿನ ಪ್ರಾಣಿಗಳನ್ನು ನಂಬುವುದೇ ಮೇಲು’ ಅನ್ನುತ್ತಿದ್ದ.

ಇಂತಹ ಆಜಾದನನ್ನು ಹಿಡಿಯಲು ಕೊನೆಗೂ ಬಿಳಿಯರಿಗೆ ವಿದ್ರೋಹದ ನೆರವೇ ಬೇಕಾಯ್ತು. ದ್ರೋಹಿಯೊಬ್ಬ ಪಾರ್ಕಿನಲ್ಲಿ ಯಾರನ್ನೋ ಕಾದುಕುಳಿತಿದ್ದ ಆಜಾದನ ಪತ್ತೆ ಪೋಲಿಸರಿಗೆ ನೀಡಿದ. ಅವನನ್ನು ಬಂಧಿಸುವ ಇರಾದೆಯಿಂದ ಬಂದ ಪೋಲಿಸರು ಅವನ ಪಿಸ್ತೂಲಿನ ಉತ್ತರ ಎದುರಿಸಬೇಕಾಯ್ತು. ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ ಕೊನೆಯ ಗುಂಡು ಇರುವ ತನಕವೂ ಕಾದಾಡಿದ ಆಜಾದ್ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಪೋಲಿಸರು ಅವನನ್ನು ಸುತ್ತುಗಟ್ಟಿ ಬಂಧಿಸುವ ಮೊದಲೇ ಕೊನೆಯ ಗುಂಡಿನಿಂದ ತನಗೆ ತಾನೇ ಹೊಡೆದುಕೊಂಡು ಮುಕ್ತನಾದ.

ತನ್ನ ಪ್ರತಿಜ್ಞೆಯಂತೆ, ಸ್ವತಂತ್ರನಾಗಿಯೇ ಬದುಕಿದ್ದ. ಸ್ವತಂತ್ರನಾಗಿಯೇ ಪ್ರಾಣತೆತ್ತ.

ಆಧಾರ : ಬಾಲಸಂಸ್ಕಾರ ಸಂಕೇತಸ್ಥಳ - http://balsanskar.com/kannada/lekh/141.html

ವಾಸುದೇವ ಬಳವಂತ ಫಡಕೆ

ಶ್ರೇಷ್ಠ ಕ್ರಾಂತಿಕಾರಿ ವಾಸುದೇವ ಬಳವಂತ ಫಡಕೆ !

ದೇಶದ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸಾಮರ್ಥ್ಯದ ಪರಾಕಾಷ್ಠೆಯನ್ನು ತೋರಿಸಿದ, ರಹಸ್ಯ ಸಂಘಟನೆಯನ್ನು ಕಟ್ಟಿದ, ಸ್ವಾತಂತ್ರ್ಯಕ್ಕಾಗಿ ಭಾಷಣಗಳಿಂದ ಜನಜಾಗೃತಿಯ ಸೆಳೆತವನ್ನುಂಟು ಮಾಡಿದ, ಶಸ್ತ್ರಬಲದಿಂದ ವಿದೇಶೀ ರಾಜ್ಯಭಾರವನ್ನೇ ನಡುಗಿಸಿದ, ಭಾರತೀಯ ದಂಡಸಂಹಿತೆಯ ರಾಜದ್ರೋಹ ಮತ್ತು ಸರಕಾರದ ವಿರುದ್ದ ಬಂಡಾಯ ಎಂಬ ಕಲಂನಡಿಯಲ್ಲಿ ಆರೋಪವನ್ನು ಹೊರಿಸಲಾಗಿದ್ದ ಹಾಗೂ ಇಂತಹ ವೈಶಿಷ್ಯ್ಟಗಳಿದ್ದ ಕ್ರಾಂತಿಕಾರರ ನಡುವೆ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟ ವಾಸುದೇವ ಬಲವಂತ ಫಡಕೆಯವರು ನವೆಂಬರ ೪, ೧೮೪೫ ರಲ್ಲಿ ರಾಯಗಡ ಜಿಲ್ಲೆಯ ಶಿರಢೋಣ ಎಂಬ ಊರಿನಲ್ಲಿ ಜನಿಸಿದರು.

೧೮೫೭ರ ಸ್ವಾತಂತ್ರ್ಯ ಸಮರದಲ್ಲಿ ರಾಣಿ ಲಕ್ಷ್ಮೀ ಬಾಯಿ, ತಾತ್ಯಾ ಟೋಪೆಯವರು ತೋರಿಸಿದಂತಹ ಪರಾಕ್ರಮವನ್ನು ಕೇಳಿದಾಗ ಅವರ ಮನಸ್ಸು ಪ್ರಫುಲ್ಲಿತವಾಗುತ್ತಿತ್ತು ಮತ್ತು ಇಂತಹ ಹೋರಾಟವನ್ನು ತಾನೂ ಮಾಡಬಹುದೇನು ಎಂಬ ಪ್ರಶ್ನೆಯು ಅವರ ಬಾಲಮನಸ್ಸಿನಲ್ಲಿ ಮೂಡುತ್ತಿತ್ತು. ಕಾಲಕಳೆದಂತೆ ಇಂತಹ ಹೋರಾಟವನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ವಾಸುದೇವರಾಯರ ಕೈಗೊಪ್ಪಿಸಲಾಯಿತು. ೧೮೭೬ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಉಂಟಾದ ಸಮಯದಲ್ಲಿ ಬ್ರಿಟಿಷ್ ಸರಕಾರವು ಉಪವಾಸ ಬಿದ್ದ ರೈತರನ್ನು ದುರ್ಲಕ್ಷ್ಯ ಮಾಡುವುದನ್ನು ಅವರು ನೋಡಿದರು. ಆ ಕಾಲದಲ್ಲಿ ಸೇನಾಸಾಮಾಗ್ರಿ ಕಾರ್ಯಾಲಯದ ತಮ್ಮ ನೌಕರಿಗೆ ದೀರ್ಘಕಾಲೀನ ರಜೆಯನ್ನು ಹಾಕಿ ಅವರು ಇಂದೂರು, ನಾಗಪುರ, ಬಡೋದಾ, ನಾಸಿಕ, ಕೊಲ್ಹಾಪುರ, ಸಾಂಗ್ಲಿ ಮುಂತಾದ ಸ್ಥಳಗಳಲ್ಲಿದ್ದ ದೇಶಬಾಂಧವರ ದುಃಸ್ಥಿತಿಯನ್ನು ಅನುಭವಿಸಿದರು. ಇದರಿಂದಲೇ ಅವರ ಹೆಜ್ಜೆಗಳು ಸಶಸ್ತ್ರ ಕ್ರಾಂತಿಯ ಮಾರ್ಗದೆಡೆಗೆ ಹೊರಳಿದವು. ತಮ್ಮ ಪತ್ನಿಯನ್ನು ಅವರ ಮಾವನವರ ಬಳಿಗೆ ಕಳುಹಿಸಿದರು. ಆಂಗ್ಲ ರಾಜ್ಯವನ್ನು ಹೇಗೆ ನಾಶಗೊಳಿಸುವುದು ಎನ್ನುವ ಬಗ್ಗೆ ಪುಣೆಯ ಸುತ್ತಮುತ್ತಲಿನ ಪರಿಸರದಲ್ಲಿ ಅವರು ಭಾಷಣ ನೀಡತೊಡಗಿದರು. ಅವರು ಮಹಾರ್, ಮಾಂಗ, ರಾಮೋಶಿ, ಭಿಲ್ಲ, ಕೋಳಿ ಮುಂತಾದ ಜಾತಿಯವರನ್ನೆಲ್ಲ ಒಟ್ಟು ಸೇರಿಸಿ ಒಂದು ಸೈನ್ಯವನ್ನು ಸಜ್ಜುಗೊಳಿಸಿದರು.

ದೇಶವನ್ನು ಸ್ವತಂತ್ರಗೊಳಿಸಲು ಅವರು ಸಾಹುಕಾರರಿಂದ ಹಣವನ್ನು ಕೇಳತೊಡಗಿದರು. ಧನವು ಈ ರೀತಿಯ ಬೇಡಿಕೆಯಿಂದ ಸಿಗುವುದಿಲ್ಲ ಎಂದು ತಿಳಿದಾಗ ತಮ್ಮ ಸೇನೆಯ ಸಹಾಯದಿಂದ ಅವರು ಅನೇಕ ಊರುಗಳಲ್ಲಿದ್ದ ಜಮೀನುದಾರರ, ಸಾಹುಕಾರರ ಮೇಲೆ ದಾಳಿ ನಡೆಸಿ ಧನವನ್ನು ಪಡೆದರು. ಆ ಮೊತ್ತಕ್ಕೆ ವಚನ ಚೀಟಿಯನ್ನು (ಪುನಃ ಪಾವತಿಸುವ, ಸಾಲ ತೀರಿಸುವ ವಚನ) ಅವರು ಬರೆದು ಕೊಟ್ಟರು.

ವಾಸುದೇವರಾಯರ ಬಂಡಾಯದಿಂದ ಬ್ರಿಟಿಷ ಸರಕಾರವು ಬೇಸತ್ತು ಹೋಯಿತು. ಸರಕಾರವು ಅವರನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಿತು. ವಾಸುದೇವರಾಯರು ಅದಕ್ಕಿಂತಲೂ ದೊಡ್ಡ ಮೊತ್ತದ ಬಹುಮಾನವನ್ನು ಗವರ್ನರ್ ಮತ್ತು ಜಿಲ್ಲಾಧಿಕಾರಿಗಳ ತಲೆಗೆ ಘೋಷಿಸಿದರು.

ವಾಸುದೇವರಾಯರ ಬಂಡಾಯವನ್ನು ಹತ್ತಿಕ್ಕಲು ೧೮೦೦ ಸೈನಿಕರನ್ನು ಆಯೋಜಿಸಲಾಗಿತ್ತು. ಆದರೆ ಅದರಿಂದೇನೂ ಉಪಯೋಗವಾಗುತ್ತಿರಲಿಲ್ಲ. ಇದೇ ಸಮಯದಲ್ಲಿ ದುರ್ದೈವವಶಾತ್ ಒಬ್ಬ ಪರಿಚಿತ ಸ್ತ್ರೀಯು ವಾಸುದೇವರಾಯರನ್ನು ಗಾಣಗಾಪುರದಲ್ಲಿ ನೋಡಿದ ಬಗ್ಗೆ ಪುಣೆಯ ಒಂದು ದೇವಸ್ಥಾನದಲ್ಲಿ ಇನ್ನೊಬ್ಬ ಹೆಂಗಸಿಗೆ ತಿಳಿಸಿದಳು. ಅದನ್ನು ಕೇಳಿದ ಒಬ್ಬ ಜಮೀನುದಾರನ ಹೆಂಡತಿಯು ತನ್ನ ಪತಿಗೆ ವಾಸುದೇವರಾಯರ ಸ್ಥಳ ವಿಳಾಸವನ್ನು ಹೇಳಿದಳು. ಈ ಸುದ್ದಿಯು ಅವರು ಹಿಡಿಯಲು ನೇಮಿಸಲ್ಪಟ್ಟಿದ್ದ ಮೇಜರ್ ಡೆನಿಯಲ್‌ಗೆ ತಲುಪಿತು. ಅವರು ಜುಲೈ ೨೦ರಂದು ತಡರಾತ್ರಿಯಂದು ಒಂದು ದೇವಸ್ಥಾನದಲ್ಲಿ ಮಲಗಿದ್ದ ವಾಸುದೇವರಾಯರನ್ನು ಬಂಧಿಸಿದರು. ನವಂಬರ ತಿಂಗಳಿನಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಜನವರಿ ೯, ೧೮೮೦ ರಂದು ಅವರನ್ನು ಏಡನ್‌ನ ಸೆರೆಮನೆಗೆ ತಳ್ಳಲಾಯಿತು.

ಈ ಕಾರಾಗೃಹವಾಸದಲ್ಲಿ ಅವರ ಸ್ಥಿತಿಯು ಚಿಂತಾಜನಕವಾಯಿತು. ಆದರೂ ಅಕ್ಟೋಬರ ೧೨, ೧೮೮೦ರಂದು ಬೆಳಗ್ಗೆ ಕೈಕಾಲುಗಳಿಗೆ ತೋಡಿಸಿದ್ದ ಬೇಡಿಗಳನ್ನು ಕಿತ್ತೊಗೆದು ಕೊಠಡಿಯ ಬೀಗವನ್ನು ಮುರಿದು ಸೆರೆಮನೆಯ ಗೋಡೆಯಿಂದ ಜಿಗಿದು ಅವರು ೧೨ ಮೈಲುಗಳಷ್ಟು ದೂರ ಓಡುತ್ತಾ ಹೋದರು. ಮರುದಿನ ಸಾಯಂಕಾಲ ಅವರನ್ನು ಮತೊಮ್ಮೆ ಬಂಧಿಸಲಾಯಿತು. ಅನಂತರದ ಎರಡು ವರ್ಷಗಳಲ್ಲಿ ಅವರಿಗೆ ಎಷ್ಟೊಂದು ಚಿತ್ರಹಿಂಸೆ ನೀಡಲಾಯಿತು ಎಂದರೆ ಕಟ್ಟುಮಸ್ತಾದ ಶರೀರವು ಸೊರಗಿಹೋಯಿತು. ಕೊನೆಗೆ ಫೆಬ್ರವರಿ ೧೭, ೧೮೮೩ ರಂದು ಆ ಶ್ರೇಷ್ಠಕ್ರಾಂತಿಕಾರನು ಹಿಂದೂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಆಹುತಿಯಾದನು.

ವಾಸುದೇವ ಬಲವಂತ ಫಡಕೆಯವರು ಹಚ್ಚಿದ ಈ ರಾಷ್ಟ್ರಯಜ್ಞದಿಂದಲೇ ಹಿಂದೂಸ್ಥಾನದ ರಾಜ್ಯಕ್ರಾಂತಿಯ ಜ್ವಾಲೆಯು ಮುಂದೆ ಧಗಧಗಿಸಿತು.

ಆಧಾರ : ಬಾಲಸಂಸ್ಕಾರ ಸಂಕೇತಸ್ಥಳ - http://balsanskar.com/kannada/lekh/98.html