Showing posts with label ಧರ್ಮರಕ್ಷಣೆ. Show all posts
Showing posts with label ಧರ್ಮರಕ್ಷಣೆ. Show all posts

ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದಲ್ಲಿ ಆಚರಿಸಬೇಡಿರಿ!


ಹಿಂದೂ ಸಂಸ್ಕೃತಿಯಲ್ಲಿ ವಿವಾಹಕ್ಕೆ ಹದಿನಾರು ಸಂಸ್ಕಾರಗಳಲ್ಲಿನ ಕೊನೆಯ ಸಂಸ್ಕಾರದ ಮಹತ್ವವಿದೆ. ಆದುದರಿಂದ ಹಿಂದಿನ ಕಾಲದಲ್ಲಿ ಹಿಂದೂಗಳು ವಿವಾಹಗಳನ್ನು ಧಾರ್ಮಿಕ ಪದ್ಧತಿಯಿಂದ ಆಚರಿಸುತ್ತಿದ್ದರು. ಅಲ್ಲದೇ ವಧು-ವರರಿಗೆ ದೇವಸ್ಥಾನಗಳಲ್ಲಿನ ಚೈತನ್ಯದ ಲಾಭವು ಸಿಗಬೇಕೆಂದು ವಿವಾಹ ಸಂಸ್ಕಾರಗಳನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿತ್ತು;

ಆದರೆ ಇತ್ತೀಚೆಗೆ ಹಿಂದೂಗಳಿಗೆ ವಿವಾಹವೆಂದರೆ ಒಂದು ಮೋಜು ಮಾಡುವ ಮನೋರಂಜನೆಯ ಕಾರ್ಯಕ್ರಮವಾಗಿದೆ ಎಂದೆನಿಸುತ್ತಿದೆ. ಆದುದರಿಂದ ವಿವಾಹದ ವಿಧಿಗಳು ನಡೆಯುತ್ತಿರುವಾಗ ಅಲ್ಲಿ ಸೇರಿದ ಜನರು ಹರಟೆ ಹೊಡೆಯುವುದರಲ್ಲಿ ಮಗ್ನರಾಗಿರುತ್ತಾರೆ. ಅಲ್ಲದೇ ಅಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾರೆ ಮತ್ತು ಬ್ಯಾಂಡ್‌ಗಳೂ ಸಹ ಇರುತ್ತವೆ. ಈ ಗಲಾಟೆಯಿಂದಾಗಿ ವಿಧಿಗಳಲ್ಲಿನ ಸಾತ್ತ್ವಿಕತೆಯು ಉಳಿಯುವುದಿಲ್ಲ, ಬದಲಾಗಿ ಅದು ಕಡಿಮೆಯಾಗುತ್ತದೆ. ಕೆಲವರು ವಧು-ವರರು ಪರಸ್ಪರರ ಕೊರಳಿಗೆ ಮಾಲೆಯನ್ನು ಹಾಕಿದ ನಂತರ ಹೊರಗೆ ಪಟಾಕಿಗಳನ್ನು ಸಿಡಿಸುತ್ತಾರೆ. ಇದರಿಂದಾಗಿಯೂ ಅಲ್ಲಿನ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ಇಂತಹ ಧಾರ್ಮಿಕವಲ್ಲದ ಮತ್ತು ಸಾಮಾಜಿಕ ಪದ್ಧತಿಯ ವಿವಾಹವನ್ನು ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಿದರೆ ದೇವಸ್ಥಾನದ ಚೈತನ್ಯದ ಲಾಭವು ಯಾರಿಗೂ ಸಿಗುವುದಿಲ್ಲ. ಇದರ ಬದಲಾಗಿ ದೇವಸ್ಥಾನದಲ್ಲಿ ರಜ-ತಮವು ಹರಡುತ್ತದೆ.

ಆದುದರಿಂದ ಹಿಂದೂಗಳೇ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿಕೊಂಡು ಅಲ್ಲಿ ವಿವಾಹ ಸಂಸ್ಕಾರವನ್ನು ನೆರವೇರಿಸಿರಿ. ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದ ಹೊರಗೆ ಆಚರಿಸಿರಿ.
 - ಪ.ಪೂ.ಡಾ.ಜಯಂತ ಬಾಳಾಜಿ ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ.

ಹಿಂದೂ ಧರ್ಮದ ರಕ್ಷಣೆಗೆ ನಾವೇನು ಮಾಡಬಹುದು?

ಅ. ಧರ್ಮಜಾಗೃತಿ ಮಾಡುವುದು: ನಮ್ಮಲ್ಲಿ ಮತ್ತು ನಮ್ಮ ಧರ್ಮ ಬಂಧುಗಳಲ್ಲಿ ಧರ್ಮಜಾಗೃತಿಯನ್ನು ಮೂಡಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವೇ ಆಗಿದೆ. ಇದೆಲ್ಲವನ್ನು ನಾನೇ ಏಕೆ ಮಾಡಲಿ? ಬೇರೆ ಯಾರಾದರೂ ಮಾಡಲಿ ಎಂಬ ವಿಚಾರ ಮಾಡಿ ಸುಮ್ಮನಿರಬೇಡಿರಿ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಚನಕ್ಕನುಸಾರ ಯಾವನು ಧರ್ಮವನ್ನು ರಕ್ಷಿಸುತ್ತಾನೆಯೋ ಅವನನ್ನು ಧರ್ಮವು ಅಂದರೆ ಈಶ್ವರನು ರಕ್ಷಿಸುತ್ತಾನೆ.

ಆ. ಧರ್ಮಹಾನಿಯನ್ನು ತಡೆಗಟ್ಟುವುದು: ನಮ್ಮಿಂದ ಅನೇಕ ಧರ್ಮಹಾನಿಯ ಕೃತಿಗಳಾಗುತ್ತಿರುತ್ತವೆ, ಉದಾ. ಜಾಹಿರಾತು, ಚಲನಚಿತ್ರ, ನಾಟಕ, ಉತ್ಪಾದನೆಗಳ ಮೂಲಕ ರಾಷ್ಟ್ರಪುರುಷರ ಮತ್ತು ಹಿಂದೂ ದೇವತೆಗಳ ವಿಡಂಬನೆ ಮಾಡುವುದು, ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಮಾಡುವುದು, ರಾಷ್ಟ್ರಲಾಂಛನಗಳ ಅಗೌರವ ಮುಂತಾದವುಗಳು ನಮ್ಮ ಕಣ್ಣೆದುರು ನಡೆಯುತ್ತಿರುವಾಗ ಅವರಿಗೆ ಪ್ರಬೋಧನೆ ಮಾಡಿ ಅವುಗಳನ್ನು ತಡೆಗಟ್ಟಬೇಕು.

ಇ. ಧರ್ಮಶಿಕ್ಷಣ ಪಡೆಯುವುದು ಮತ್ತು ಇತರರಿಗೆ ನೀಡುವುದು: ಧರ್ಮದ ಬಗ್ಗೆ ಸ್ವತಃ ಜ್ಞಾನವನ್ನು ಪಡೆದುಕೊಂಡು ಧರ್ಮಾಚರಣೆ ಮಾಡುವುದು ಮತ್ತು ಇತರರಿಗೆ ಧರ್ಮಶಿಕ್ಷಣ ನೀಡುವುದು ಕಾಲದ ಅವಶ್ಯಕತೆಯಾಗಿದೆ. ಧರ್ಮವನ್ನು ಅರಿತುಕೊಂಡು ನಮ್ಮಲ್ಲಿ ನಿಜವಾದ ಹಿಂದೂತ್ವವನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ.

ಈ. ಸ್ವತಃ ಧರ್ಮಾಚರಣೆ ಮಾಡುವುದು ಮತ್ತು ಧರ್ಮಾಭಿಮಾನವನ್ನು ಹೆಚ್ಚಿಸುವುದು: ದೈನಂದಿನ ಧಾರ್ಮಿಕ ಕೃತಿಗಳು ಉದಾ. ಪೂಜೆ, ಅರ್ಚನೆ, ಆರತಿ, ಪ್ರಾಸಂಗಿಕ ಹಬ್ಬ ಮತ್ತು ಉತ್ಸವಗಳ ಶಾಸ್ತ್ರವನ್ನು ಅರಿತುಕೊಂಡು ಆಚರಣೆ ಮಾಡುವುದಕ್ಕೆ ಧರ್ಮಾಚರಣೆ ಎನ್ನುತ್ತಾರೆ. ಪ್ರಸ್ತುತ ಪೂಜೆಗಾಗಿ ಯಾವುದಾದರೊಂದು ಮನೆಗೆ ಹೋದರೆ ನಮಗೆ ಏನು ನೋಡಲು ಸಿಗುತ್ತದೆ? ಗಣಪತಿಯ ಪೂಜೆಯು ನಡೆಯುತ್ತಿರುವಾಗ ಅರ್ಚಕರು ಪೂಜೆ ಮಾಡುತ್ತಿರುವುದು ಮತ್ತು ಇತರರೆಲ್ಲರೂ ದೂರದರ್ಶನದಲ್ಲಿ ಕಾರ್ಯಕ್ರಮ ವೀಕ್ಷಿಸುವುದರಲ್ಲಿ ಮಗ್ನರಾಗಿರುವುದು ಕಂಡು ಬರುತ್ತದೆ. ಹೀಗೆ ಮಾಡಿದರೆ ಆ ಪೂಜೆಯಿಂದ ನಮಗೆ ಆಧ್ಯಾತ್ಮಿಕ ಲಾಭವು ಸಿಗಬಹುದೇನು? ಇದಕ್ಕಾಗಿ ಶಾಸ್ತ್ರವನ್ನು ಅರಿತುಕೊಂಡು ಅದಕ್ಕನುಸಾರ ಕೃತಿಯನ್ನು ಮಾಡಿ ನಾವು ಧರ್ಮಾಚರಣೆ ಮಾಡಬೇಕು ಮತ್ತು ನಮ್ಮ ಧರ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು.

ಉ. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಬಿತ್ತುವುದು: ನಮ್ಮ ಮಕ್ಕಳಲ್ಲಿ ಈಗಿನಿಂದಲೇ ಧರ್ಮಶಿಕ್ಷಣದ ಮೂಲಕ ಧರ್ಮದ ಸಂಸ್ಕಾರವನ್ನು ಬಿತ್ತಿದರೆ ಮುಂದಿನ ಪೀಳಿಗೆಯು ಚಾರಿತ್ರ್ಯವಂತವಾಗುವುದು ಎನ್ನುವುದರಲ್ಲಿ ಸಂದೇಹವಿಲ್ಲ. ಸಹಜವಾಗಿ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಅಭಿಮಾನವಿರುತ್ತದೆ.

ಊ. ಹಿಂದೂ ಸಂಘಟನೆ ಮಾಡುವುದು: ಮೇಲಿನ ವಿಷಯಗಳನ್ನು ಸಾಧಿಸಬೇಕಾದರೆ ಜಾತಿ, ಪಂಥ, ಪಕ್ಷ, ಸಂಘಟನೆಗಳನ್ನು ಮರೆತು ಈ ಕಾರ್ಯದಲ್ಲಿ ಹಿಂದೂ ಎಂದು ಒಂದಾಗುವ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಪ್ರತಿಯೊಬ್ಬರೂ ಹಿಂದೂ ಸಂಘಟನೆಗಾಗಿ ಪ್ರಯತ್ನಿಸಬೇಕಾಗಿದೆ.

ಇವೆಲ್ಲವುಗಳನ್ನು 'ಸನಾತನ ಸಂಸ್ಥೆ' ಮತ್ತು 'ಹಿಂದೂ ಜನಜಾಗೃತಿ ಸಮಿತಿ'ಯು ಮಾಡುತ್ತಿದೆ. ತಾವೂ ಈ ಕಾರ್ಯದಲ್ಲಿ ಪಾಲ್ಗೊಳ್ಳಿ ಮತ್ತು ಪ್ರತಿದಿನ ರಾಷ್ಟ್ರ-ಧರ್ಮಕ್ಕೋಸ್ಕರ ಒಂದು ಗಂಟೆಯಾದರೂ ನೀಡುವ ಸಂಕಲ್ಪ ಮಾಡಿ.

(ಆಧಾರ : ಸಾಪ್ತಾಹಿಕ ಪತ್ರಿಕೆ `ಸನಾತನ ಪ್ರಭಾತ`)