ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ

೧. ಧನತ್ರಯೋದಶಿ : ಇದನ್ನೇ ಆಡುಭಾಷೆಯಲ್ಲಿ ‘ಧನತೇರಸ್’ ಎನ್ನುತ್ತಾರೆ. ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ತಿಜೋರಿಯನ್ನು) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.

೧ಅ. ಭಾವಾರ್ಥ: ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮೀ. ಶ್ರೀಸೂಕ್ತದಲ್ಲಿ ವಸು, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವುಗಳಿಗೆ ಧನವೆಂದೇ ಹೇಳಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷಿ ! ಇಲ್ಲದಿದ್ದಲ್ಲಿ ಅಲಕ್ಷ್ಮೀಯಿಂದ ಅನರ್ಥವಾಗುತ್ತದೆ.

ಧನತ್ರಯೋದಶಿಯ ದಿನದಂದು ಹೊಸ ಚಿನ್ನವನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ವರ್ಷವಿಡೀ ಮನೆಯಲ್ಲಿ ಧನಲಕ್ಷ್ಮೀ  ವಾಸಿಸುತ್ತಾಳೆ. ವಾಸ್ತವದಲ್ಲಿ ಲಕ್ಷ್ಮೀ ಪೂಜೆಯ ಸಮಯದಲ್ಲಿ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ. ಧನತ್ರಯೋದಶಿಯವರೆಗೆ ಬಾಕಿ ಉಳಿದ ಸಂಪತ್ತನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಿದರೆ, ಸತ್‌ಕಾರ್ಯಕ್ಕಾಗಿ ಧನವು ಖರ್ಚಾಗುವುದರಿಂದ ಧನಲಕ್ಷ್ಮೀಯು ಕೊನೆತನಕ ಲಕ್ಷ್ಮೀರೂಪದಲ್ಲಿ ಮನೆಯಲ್ಲಿ ಇರುತ್ತಾಳೆ. ಧನವೆಂದರೆ ಹಣ. ಈ ಹಣವು ಕಪ್ಪು ಹಣವಾಗಿರದೇ, ಸ್ವತಃ ಕಷ್ಟದಿಂದ ಗಳಿಸಿದ ಮತ್ತು ಇಡೀ ವರ್ಷದಲ್ಲಿ ಒಂದೊಂದು ಪೈಸೆಯನ್ನು ಜಮೆ ಮಾಡಿದ್ದಾಗಿರಬೇಕು. ಈ ಹಣದಲ್ಲಿ ಕನಿಷ್ಟಪಕ್ಷ 1/6 ರಷ್ಟು ಭಾಗವನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಬೇಕು, ಎಂದು ಶಾಸ್ತ್ರವು ಹೇಳುತ್ತದೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ವರ್ಷದ ಕೊನೆಯಲ್ಲಿ ತಮ್ಮ ಸಂಪೂರ್ಣ ಖಜಾನೆಯನ್ನು ಸತ್ಪಾತ್ರರಿಗೆ ದಾನ ಮಾಡಿ ಖಾಲಿ ಮಾಡುತ್ತಿದ್ದರು. ಆಗ ಅವರಿಗೆ ನಾವು ಧನ್ಯರಾದೆವೆಂದು ಅನಿಸುತ್ತಿತ್ತು. ಇದರಿಂದಾಗಿ ಜನತೆ ಹಾಗೂ ರಾಜನ ನಡುವಿನ ಸಂಬಂಧವು ಕೌಟುಂಬಿಕ ಸ್ವರೂಪದ್ದಾಗಿತ್ತು. ರಾಜನ ಖಜಾನೆಯು ಜನತೆಯದ್ದಾಗಿದ್ದು ರಾಜನು ಕೇವಲ ಆ ಖಜಾನೆಯ ಸಂರಕ್ಷಕನಾಗಿರುತ್ತಿದ್ದನು.

ಇದರಿಂದ ಜನರು ಸಹ ಯಾವುದೇ ಪ್ರತಿಬಂಧವಿಲ್ಲದೇ ತೆರಿಗೆಯನ್ನು ನೀಡುತ್ತಿದ್ದರು. ಸಹಜವಾಗಿಯೇ ಖಜಾನೆಯು ಪುನಃ ತುಂಬುತ್ತಿತ್ತು. ಧನವನ್ನು ಸತ್‌ಕಾರ್ಯಕ್ಕಾಗಿ ವಿನಿಯೋಗಿಸುವುದರಿಂದ ಆತ್ಮಬಲವು ಹೆಚ್ಚಾಗುತ್ತದೆ. ಹಣವೆಂದರೆ ಕೇವಲ ಧನವಾಗಿಲ್ಲ, ಪಂಚಮಹಾಭೂತಗಳೇ ನಿಜವಾದ ಧನಗಳಾಗಿವೆ. ಯಾವುದರಿಂದ ನಮ್ಮ ಜೀವನದ ಪೋಷಣೆಯು ಸುವ್ಯವಸ್ಥಿತವಾಗಿ ನಡೆಯುತ್ತದೆಯೋ ಅಂತಹ ಧನವನ್ನು ಪೂಜಿಸುತ್ತಾರೆ. ಇಲ್ಲಿ ಧನ ಎಂದರೆ ಶುದ್ಧ ಲಕ್ಷ್ಮೀ.

ಶ್ರೀಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ, ಸೂರ್ಯ ಇವುಗಳನ್ನು ಧನವೆಂದೇ ಕರೆಯಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅದುವೇ ನಿಜವಾದ ಲಕ್ಷ್ಮೀ. - ಪ.ಪೂ. ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.



೨. ಧನ್ವಂತರಿ ಜಯಂತಿ : ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ (ದೇವರ ವೈದ್ಯ) ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಕೊಡುತ್ತಾರೆ. ಇದರಲ್ಲಿ ಬಹುದೊಡ್ಡ ಅರ್ಥವಿದೆ. ಬೇವು ಅಮೃತದಿಂದ ಉತ್ಪನ್ನವಾಗಿದೆ. ಧನ್ವಂತರಿಯು ಅಮೃತತತ್ವವನ್ನು ಕೊಡುವವನಾಗಿದ್ದಾನೆ ಎಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ಪ್ರತಿದಿನ ಬೇವಿನ ಐದಾರು ಎಲೆಗಳನ್ನು ತಿಂದರೆ ರೋಗಗಳು ಬರುವ ಸಂಭವವೇ ಕಡಿಮೆಯಾಗುತ್ತದೆ. ಬೇವಿಗೆ ಇಷ್ಟೊಂದು ಮಹತ್ವವಿರುವುದರಿಂದಲೇ ಈ ದಿನ ಅದನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ. ಬೇವಿನ ಆಧ್ಯಾತ್ಮಿಕ ಮಹತ್ವವನ್ನು ಸನಾತನದ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು' ಇದರಲ್ಲಿ ಕೊಡಲಾಗಿದೆ.



೩. ಯಮದೀಪದಾನ : ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಧನತ್ರಯೋದಶಿಯಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) (ಟಿಪ್ಪಣಿ ೧) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿಡಬೇಕು. ಆನಂತರ ಮುಂದಿನ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.



ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂದಿಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ||

ಅರ್ಥ: ಧನತ್ರಯೋದಶಿಯಂದು ಯಮನಿಗೆ ನೀಡಿದ ದೀಪದ ದಾನದಿಂದ ಅವನು ಪ್ರಸನ್ನನಾಗಿ ನನ್ನನ್ನು ಮೃತ್ಯುಪಾಶ ಮತ್ತು ಶಿಕ್ಷೆಯಿಂದ ಮುಕ್ತಗೊಳಿಸಲಿ.

ಟಿಪ್ಪಣಿ ೧ - ಕೆಲವು ಕಡೆಗಳಲ್ಲಿ ೧೩ ದೀಪಗಳನ್ನು ಹಚ್ಚುವ ಪದ್ಧತಿಯಿದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

5 comments:

  1. ಅಧ್ಯಾತ್ಮ ಬಂಧುಗಳಿಗೆ ನಮಸ್ಕಾರಗಳು....ಶಾಸ್ತ್ರದ ಪ್ರಕಾರ ಶ್ರೀಧನ್ವಂತರಿ ಜಯಂತಿಯ ಆಚರಣೆ ಕಾರ್ತೀಕ ಕೃಷ್ಣ(ಬಹುಳ) ತ್ರಯೋದಶಿ ಇರುವುದು ಆಶ್ವೀಜ ಬಹುಳ ತ್ರಯೋದಶಿ ಅಲ್ಲ...

    ReplyDelete
    Replies
    1. ನಮಸ್ಕಾರ, ಮಾಹಿತಿಗಾಗಿ ಈ ಕೊಂಡಿಯನ್ನು ಕೂಡ ನೋಡಿ - http://en.wikipedia.org/wiki/Dhanvantari
      ಕಾರ್ತಿಕ ಕೃಷ್ಣ ತ್ರಯೋದಶಿ ಎಂದು ಯಾವ ಶಾಸ್ತ್ರದಲ್ಲಿದೆ ಎಂದು ದಯವಿಟ್ಟು ತಿಳಿಸಿ. ಪರಿಶೀಲಿಸಬಹುದು.

      Delete
  2. ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು'

    ಈ ಗ್ರಂಥ ಪುಸ್ತಕ ಖರಿದಿಸಲು ಸಿಗುವುದೆ? ದಯವಿಟ್ಟು ತಿಳಿಸಿ.

    ReplyDelete
    Replies
    1. ಹೌದು ಖಂಡಿತ. 8951937332 ಸಂಖ್ಯೆಗೆ ಕರೆ ಮಾಡಿದರೆ ನಿಮ್ಮ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿಸುತ್ತಾರೆ.

      Delete

Note: only a member of this blog may post a comment.