ದೀಪಾವಳಿ

ಅ. ಉತ್ಪತ್ತಿ ಮತ್ತು ಅರ್ಥ: ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಆ. ಇದರಲ್ಲಿ ಬರುವ ದಿನಗಳು: ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಗಣನೆಗೆ ತೆಗೆದುಕೊಳ್ಳದೇ ದೀಪಾವಳಿಯು ಮೂರು ದಿನಗಳದ್ದಾಗಿದೆ ಎಂದು ನಂಬುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆ ಈ ದಿನಗಳು ದೀಪಾವಳಿಗೆ ಹೊಂದಿಕೊಂಡೇ ಬರುವುದರಿಂದ ಇವುಗಳನ್ನು ದೀಪಾವಳಿಯಲ್ಲಿಯೇ ಸಮಾವೇಶಗೊಳಿಸಲಾಗುತ್ತದೆ. ಆದರೆ ಈ ಹಬ್ಬಗಳು ಬೇರೆಬೇರೆಯಾಗಿವೆ.

ಇ. ಇತಿಹಾಸ: ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು.

ಈ. ದೀಪಾವಳಿಯ ಭಾವಾರ್ಥ: ‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರ (ದೈವೀವಿಚಾರ) ಗಳನ್ನು ನೀಡಿ ಸುಖಿಯಾಗಿಸಿದನು, ಅದುವೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರೀ, ಅಸುರಿ ವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

ದೀಪಾವಳಿಯ ಸ್ವರೂಪ

೧. ದೀಪಗಳ ಅಲಂಕಾರ : ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ. ವಿದ್ಯುತ್‌ದೀಪಗಳ ಮಾಲೆಗಳನ್ನು ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿಯಿರುತ್ತದೆ. ‘ದೀಪ’ ಎನ್ನುವ ಶಬ್ದದ ನಿಜವಾದ ಅರ್ಥವು ಎಣ್ಣೆ ಮತ್ತು ಬತ್ತಿಯ ಜ್ಯೋತಿ ಎಂದಾಗಿದೆ. ‘ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು’ ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ|’ ದೀಪಾವಳಿಯ ದಿನಗಳಲ್ಲಿ ಯಾರ ಮನೆಯಲ್ಲಿ ದೀಪಗಳನ್ನು ಹಚ್ಚುವುದಿಲ್ಲವೋ, ಅವರ ಮನೆಯಲ್ಲಿ ಯಾವಾಗಲೂ ಅಂಧಃಕಾರವೇ ಇರುತ್ತದೆ. ಅವರು ಪ್ರಕಾಶದೆಡೆಗೆ ಅಂದರೆ ಜ್ಞಾನದೆಡೆಗೆ ಹೋಗಲಾರರು. ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ. ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ.

೨. ಆಕಾಶದೀಪ : ಇದು ದೀಪಾಲಂಕಾರದ ಒಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗುಹಾಕುವ ದೀಪಕ್ಕೆ ‘ಆಕಾಶದೀಪ’ ಎನ್ನುತ್ತಾರೆ. ಅದರ ವಿಧಿಯು ಮುಂದಿನಂತಿದೆ.


ಮನೆಯ ಹತ್ತಿರದಲ್ಲಿಯೇ ಸ್ವಲ್ಪ ಜಾಗವನ್ನು ಗೋಮಯದಿಂದ ಸಾರಿಸಬೇಕು. ಅದರ ಮೇಲೆ ಚಂದನಯುಕ್ತ ಜಲವನ್ನು ಸಿಂಪಡಿಸಿ ಅಷ್ಟದಳ ಕಮಲವನ್ನು ಬಿಡಿಸಬೇಕು. ಅದರ ಮಧ್ಯಭಾಗದಲ್ಲಿ ೨೦, ೯ ಅಥವಾ ೫ ಕೈ ಅಳತೆಯ ಕಂಬವನ್ನು ನೆಡಬೇಕು. ಅದನ್ನು ವಸ್ತ್ರ, ಪತಾಕೆ, ಅಷ್ಟಘಂಟೆ ಮತ್ತು ಕಲಶ ಇವುಗಳಿಂದ ಅಲಂಕರಿಸಬೇಕು. ಅದರ ಮೇಲೆ ಅಷ್ಟದಳಾಕೃತಿ ಆಕಾಶದೀಪವನ್ನು (ಕಂದೀಲನ್ನು) ನೇತಾಡಿಸಬೇಕು. ಅದರಲ್ಲಿ ದೊಡ್ಡ ದೀಪವನ್ನು ಉರಿಸಿಡಬೇಕು. ಅದರ ಸುತ್ತಲೂ ಕಮಲದ ಪ್ರತಿಯೊಂದು ದಳದಲ್ಲಿ ಒಂದರಂತೆ ಎಂಟು ದೀಪಗಳನ್ನು ಧರ್ಮ, ಹರ, ಭೂತಿ, ದಾಮೋದರ, ಧರ್ಮರಾಜ, ಪ್ರಜಾಪತಿ, ಪಿತೃ ಮತ್ತು ಪ್ರೇತ ಇವರನ್ನುದ್ದೇಶಿಸಿ ಇಡಬೇಕು. ದೀಪಗಳಲ್ಲಿ ಎಳ್ಳೆಣ್ಣೆಯನ್ನು ಹಾಕಬೇಕು. ಅನಂತರ ಆಕಾಶದೀಪಕ್ಕೆ ಪಂಚೋಪಚಾರ ಪೂಜೆಯನ್ನು ಮಾಡಿ ಅದನ್ನು ಮುಂದಿನ ಮಂತ್ರೋಚ್ಚಾರದಿಂದ ಮೇಲಕ್ಕೇರಿಸಬೇಕು.

ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ||


ಅರ್ಥ: ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ಆಕಾಶದೀಪವನ್ನು ಅರ್ಪಿಸುತ್ತೇನೆ. ಆ ತೇಜಸ್ವೀ ಅನಂತನಿಗೆ ನಾನು ನಮಸ್ಕರಿಸುತ್ತೇನೆ. ಇದರ ಫಲವು ಲಕ್ಷ್ಮೀಪ್ರಾಪ್ತಿಯಾಗಿದೆ.’

ದೀಪಾವಳಿಯಂದು ಆಕಾಶದೀಪವನ್ನು ತೂಗಾಡಿಸುವುದರ ಹಿಂದಿನ ಶಾಸ್ತ್ರ

೧. ಮನೆಯ ಹೊರಗೆ ತೂಗಾಡಿಸಿದ ಆಕಾಶ ದೀಪದಲ್ಲಿನ ತೇಜತತ್ತ್ವದ ಲಹರಿಗಳು ಪಾತಾಳದಿಂದ ಮನೆಯೊಳಗೆ ಬರುವ ಆಪಮಯ ಲಹರಿಗಳನ್ನು ತಡೆಯುವುದು
ದೀಪಾವಳಿಯ ಸಮಯದಲ್ಲಿ ಆಪಮಯ ತತ್ತ್ವತರಂಗಕ್ಕೆ ಸಂಬಂಧಿಸಿದ ಅಧೋಗಾಮಿ ಲಹರಿಗಳು ಊರ್ಧ್ವ ದಿಕ್ಕಿನಲ್ಲಿ ಪ್ರಕ್ಷೇಪಣೆಯಾಗಲು ಆರಂಭವಾಗುತ್ತವೆ. ಆದುದರಿಂದ ಪೂರ್ಣ ವಾತಾವರಣದಲ್ಲಿ ಜಡತ್ವವು ನಿರ್ಮಾಣವಾಗಿ ಕೆಟ್ಟ ಘಟಕಗಳ ಪ್ರಭಾವ ಹೆಚ್ಚಾದುದರಿಂದ ಮನೆಯಲ್ಲಿ ಜಡತ್ವವು ಸೇರಿಕೊಂಡು ಪೂರ್ಣ ವಾಸ್ತು ದೂಷಿತವಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ದೀಪಾವಳಿಯ ಮುಂಚಿನ ದಿನದಿಂದಲೇ ಮನೆಯ ಹೊರಗೆ ಆಕಾಶದೀಪವನ್ನು ಹಚ್ಚುತ್ತಾರೆ. ಆಕಾಶದೀಪದಲ್ಲಿ ತೇಜತತ್ತ್ವದ ಸಮಾವೇಶವಿರುವುದರಿಂದ ಊರ್ಧ್ವ ದಿಕ್ಕಿನಿಂದ ಕಾರ್ಯನಿರತವಾಗುವ ಆಪಮಯ ಲಹರಿಗಳು ಹತೋಟಿಗೆ ಬಂದು ತೇಜತತ್ತ್ವದ ಜಾಗೃತಿದರ್ಶಕ ಲಹರಿಗಳು ಮನೆಯಲ್ಲಿ ವರ್ತುಲಾತ್ಮಕವಾಗಿ ಸಂಚರಿಸುತ್ತವೆ; ಹಾಗಾಗಿ ಮನೆಯ ಹೊರಗೆ ಆಕಾಶದೀಪವನ್ನು ಹಾಕುತ್ತಾರೆ. - ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೧೫.೧೦.೨೦೦೬, ರಾತ್ರಿ ೭.೦೭)

೨. ಆಕಾಶದೀಪದಿಂದ ಬ್ರಹ್ಮಾಂಡದಲ್ಲಿ ಸಂಚರಿಸುತ್ತಿರುವ ಲಕ್ಷ್ಮೀತತ್ತ್ವ ಮತ್ತು ಪಂಚತತ್ತ್ವ ಇವುಗಳ ಲಾಭವಾಗುವುದು : ದೀಪಾವಳಿಯ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಕೆಟ್ಟ ಘಟಕಗಳ ನಿರ್ಮೂಲನೆಗಾಗಿ ಶ್ರೀ ಲಕ್ಷಿ ತತ್ತ್ವ ಕಾರ್ಯನಿರತವಾಗಿರು ತ್ತದೆ. ಈ ತತ್ತ್ವದ ಲಾಭ ಪಡೆಯಲು ಪಂಚತತ್ತ್ವದ ಎಲ್ಲ ಸ್ತರಗಳನ್ನು ಒಂದು ಕಡೆ ಮಾಡಿ ಅದಕ್ಕೆ ವಾಯುತತ್ತ್ವದ ಗತಿಮಾನತೆಯ ಆಕರ್ಷಣೆಯಿಂದ ಆಕಾಶ ಟೊಳ್ಳಿನ ಸಂಚಾರದಿಂದ ಗ್ರಹಣ ಮಾಡಲಾಗುತ್ತದೆ. ಇದಕ್ಕಾಗಿ ಆಕಾಶದೀಪ ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಹಾಕಲಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿ ಸಂಚಾರವಾಗುವ ತತ್ತ್ವದ ಲಾಭವಾಗುತ್ತದೆ. - ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರ ಮಾಧ್ಯಮದಿಂದ, ೧೫.೧೦.೨೦೦೬, ರಾತ್ರಿ ೭.೧೬)

೩. ರಂಗೋಲಿ : ದೀಪಾವಳಿಯ ಸಮಯದಲ್ಲಿ ಮನೆಯ ಮುಂದೆ ಅಂಗಳದಲ್ಲಿ ಮತ್ತು ಬಾಗಿಲಿನ ಮುಂದೆ ಬಹಳ ಉತ್ಸಾಹದಿಂದ ರಂಗೋಲಿಯನ್ನು ಬಿಡಿಸುತ್ತಾರೆ. (ರಂಗೋಲಿಯ ಮಹತ್ವ, ವೈಶಿಷ್ಟ , ಆಯಾ ದೇವತೆಗಳ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿ ಮುಂತಾದ ವಿಷಯಗಳ ಬಗೆಗಿನ ಜ್ಞಾನವನ್ನು ಸನಾತನ-ನಿರ್ಮಿತ ಗ್ರಂಥ ‘ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳು’ ಇದರಲ್ಲಿ ನೀಡಲಾಗಿದೆ.)

11 ಚುಕ್ಕೆ 11 ಸಾಲು

ಓ. ದೀಪಾವಳಿಯ ಮಂಗಲಸಮಯದಲ್ಲಿ ನಿಮ್ಮಿಂದ ಏನಾದರೂ ಅಮಂಗಲ ಘಟಿಸುವುದಿಲ್ಲವಲ್ಲ, ಎಂಬುದರ ವಿಚಾರ ಮಾಡಿರಿ!

೧. ದೀಪಾವಳಿಯಲ್ಲಿ ಪ್ರೇಮದ ಕೊಡುಕೊಳ್ಳುವಿಕೆಯಾಗಬೇಕೆಂದು ಸಂಬಂಧಿಕರು, ಮಿತ್ರರು ಮುಂತಾದವರಿಗೆ ಸಿಹಿತಿಂಡಿಯ ಪೆಟ್ಟಿಗೆಗಳನ್ನು ಉಡುಗೊರೆಯೆಂದು ನೀಡಲಾಗುತ್ತದೆ. ಕೆಲವು ಸಲ ಪೆಟ್ಟಿಗೆಗಳ ಹೊದಿಕೆಗಳ ಮೇಲೆ ದೇವತೆಗಳ ಚಿತ್ರ ಅಥವಾ ಹೆಸರುಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಖಾಲಿಯಾದ ನಂತರ ಈ ಪೆಟ್ಟಿಗೆಗಳನ್ನು ಕಸದಲ್ಲಿ ಎಸೆಯಲಾಗುತ್ತದೆ.

೨. ದೀಪಾವಳಿಯ ಸಮಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ದೇವತೆಗಳ ಚಿತ್ರ ಅಥವಾ ಹೆಸರುಗಳಿರುವ ಲಾಟರಿ ಟಿಕೇಟುಗಳ ಮಾರಾಟವಾಗುತ್ತಿರುತ್ತದೆ. ಹೆಚ್ಚಿನ ಜನರು ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ.

ಅಧ್ಯಾತ್ಮಶಾಸ್ತ್ರಕ್ಕನುಸಾರ ದೇವತೆಯ ಚಿತ್ರ ಅಥವಾ ರೂಪವಿದ್ದಲ್ಲಿ ದೇವತೆಯ ತತ್ತ್ವವಿರುತ್ತದೆ, ಅಂದರೆ ಸೂಕ್ಷ್ಮದಲ್ಲಿ ದೇವತೆಯ ಅಸ್ತಿತ್ವವಿರುತ್ತದೆ. ಆದ್ದರಿಂದ ಮೇಲಿನ ಪ್ರಕಾರಗಳಿಂದ ದೇವತೆಗಳ ವಿಡಂಬನೆಯೇ ಆಗುತ್ತದೆ. ಇದರಿಂದ ದೇವತೆಗಳ ಅವಕೃಪೆಯಾಗುತ್ತದೆ. ಇದೇ ರೀತಿಯಲ್ಲಿ ರಾಷ್ಟ್ರಪುರುಷರ ವಿಡಂಬನೆಯೂ ಆಗುತ್ತಿರುತ್ತದೆ. ಇದಕ್ಕಾಗಿ,

೧. ಇಂತಹ ಅಧರ್ಮಾಚರಣೆಯನ್ನು ಸ್ವತಃ ತಡೆಗಟ್ಟಿರಿ!
೨. ಇದರ ಬಗ್ಗೆ ಇತರರಿಗೂ ಪ್ರಬೋಧನೆ ಮಾಡಿರಿ!
೩. ಉದ್ದೇಶಪೂರ್ವಕವಾಗಿ ವಿಡಂಬನೆ ಮಾಡುವವರನ್ನು ನಿಷೇಧಿಸಿರಿ ಮತ್ತು ಅವರ ಉತ್ಪಾದನೆಗಳನ್ನು ಬಹಿಷ್ಕರಿಸಿರಿ!
೪. ಧಾರ್ಮಿಕ ಭಾವನೆಯನ್ನು ನೋಯಿಸಿದ್ದಕ್ಕಾಗಿ ಪೊಲೀಸರಲ್ಲಿ ದೂರು ನೀಡಿರಿ!

ದೀಪಾವಳಿಯನ್ನು ಆಚರಿಸಲು ಪಟಾಕಿಗಳನ್ನು ಸಿಡಿಸಬೇಡಿರಿ !

ದೀಪಾವಳಿಯು ಮನೋರಂಜನೆಯ ಹಬ್ಬವಾಗಿರದೇ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಬ್ಬವಾಗಿದೆ: ದೀಪಾವಳಿಯ ಆನಂದವನ್ನು ಪಡೆಯಲು ಸಣ್ಣವರು-ದೊಡ್ಡವರು ಎಲ್ಲರೂ ಪಟಾಕಿಗಳನ್ನು ಸಿಡಿಸುತ್ತಾರೆ. ಆನಂದವನ್ನು ಪಡೆಯಲು ಪಟಾಕಿಗಳ ಆವಶ್ಯಕತೆ ಇರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯವನ್ನು ಮಾಡುವ ಪಟಾಕಿಗಳು ನಮಗೆ ಹಾಗೆಯೇ ಇತರರಿಗೂ ತ್ರಾಸದಾಯಕವಾಗಿರುತ್ತವೆ. ಇತರರಿಗೆ ತೊಂದರೆಯನ್ನು ನೀಡಿ ಉತ್ಸವಗಳನ್ನು ಆಚರಿಸುವುದನ್ನು ಹಿಂದೂ ಧರ್ಮದಲ್ಲಿ ನಿಂದ್ಯವೆನ್ನಲಾಗಿದೆ. ದೀಪಾವಳಿಯ ದಿನಗಳಲ್ಲಿ ಯೋಗ್ಯರೀತಿಯಲ್ಲಿ ಧರ್ಮಾಚರಣೆ ಯನ್ನು ಮಾಡಿಯೇ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ತಾವೂ ಇದರ ಅನುಭೂತಿಯನ್ನು ಖಂಡಿತವಾಗಿ ಪಡೆದುಕೊಳ್ಳಬಹುದು. ಇದಕ್ಕಾಗಿ ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಸಿಡಿಸದೇ ಶಾಸ್ತ್ರದಲ್ಲಿ ಹೇಳಿದಂತೆ ಆಚರಿಸಿರಿ!

(ಚಿತ್ರ ಸ್ಪಷ್ಟವಾಗಿ ತಿಳಿಯಲು ಕ್ಲಿಕ್ ಮಾಡಿ.)

ಪಟಾಕಿಗಳನ್ನು ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು
 
ಅ. ಶಾರೀರಿಕ ದುಷ್ಪರಿಣಾಮ : ಪಟಾಕಿಗಳ ಶಬ್ದದಿಂದ ಕಿವುಡುತನ ಬರುವುದು, ಪಟಾಕಿಗಳನ್ನು ಸಿಡಿಸುವಾಗ ಕಣ್ಣುಗಳಿಗೆ ತಾಗಿ ಕುರುಡರಾಗುವುದು, ಪಟಾಕಿಯ ಕಾರ್ಖಾನೆಗಳಲ್ಲಿ ಸ್ಫೋಟವಾಗಿ ಅನೇಕರು ಸಾವಿಗೀಡಾಗುವುದು ಇತ್ಯಾದಿ.

ಆ. ಭೌತಿಕ ದುಷ್ಪರಿಣಾಮ : ಬಾಣಗಳಂತಹ ಪಟಾಕಿಗಳಿಂದ ಹುಲ್ಲಿನ ಗುಡಿಸಲು, ಹುಲ್ಲಿನ ರಾಶಿ (ಬಣವೆ) ಮುಂತಾದವುಗಳು ಸುಡುವುದು.

ಇ. ಆರ್ಥಿಕ ದುಷ್ಪರಿಣಾಮ :
ದೇಶವು ಸಾಲದಲ್ಲಿರುವಾಗ ಪ್ರತೀವರ್ಷ ಕೋಟ್ಯಾವಧಿ ರೂಪಾಯಿಗಳನ್ನು ಈ ರೀತಿಯಲ್ಲಿ ಸುಟ್ಟು ಹಾಕುವುದೆಂದರೆ ಪಾಪವೇ ಆಗಿದೆ.

ಈ. ಆಧ್ಯಾತ್ಮಿಕ ದುಷ್ಪರಿಣಾಮ : ಭಜನೆ, ಆರತಿ ಅಥವಾ ಸಾತ್ತ್ವಿಕ ನಾದಗಳಿಂದ ಒಳ್ಳೆಯ ಶಕ್ತಿ ಮತ್ತು ದೇವತೆಗಳು ಬರುತ್ತಾರೆ ಹಾಗೂ ಪಟಾಕಿ ಮತ್ತು ತಾಮಸಿಕ ಆಧುನಿಕ ಸಂಗೀತಗಳಿಂದ ಅಸುರೀ ಶಕ್ತಿಗಳು ಆಕರ್ಷಿತಗೊಳ್ಳುತ್ತವೆ. ಮನುಷ್ಯರ ಮೇಲೆ ಅಸುರೀ ಶಕ್ತಿಗಳಲ್ಲಿನ ತಮೋಗುಣದ ಪರಿಣಾಮವಾಗಿ ಅವರ ವೃತ್ತಿಯೂ ತಾಮಸಿಕವಾಗುತ್ತದೆ.
 - ಪ.ಪೂ.ಡಾ.ಜಯಂತ ಆಠವಲೆ, ಸನಾತನ ಸಂಸ್ಥೆಯ ಸಂಸ್ಥಾಪಕರು.

ಪಟಾಕಿಗಳಿಂದಾಗುವ ದುಷ್ಪರಿಣಾಮಗಳ ವಿಡಿಯೋ ನೋಡಿ.



(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು') 

ಸಂಬಂಧಿತ ವಿಷಯಗಳು
ಗೋವತ್ಸ ದ್ವಾದಶಿ
ಅಭ್ಯಂಗಸ್ನಾನದ ಮಹತ್ವ ಮತ್ತು ಲಾಭ
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ) 

1 comment:

Note: only a member of this blog may post a comment.