೨. ಇತಿಹಾಸ : ಶ್ರೀಮದ್ಭಾಗವತ ಪುರಾಣದಲ್ಲಿ ಹೀಗೊಂದು ಕಥೆಯಿದೆ - ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ಬಹಳ ತೊಂದರೆ ಗಳನ್ನು ಕೊಡತೊಡಗಿದನು. ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ ೧೬೦೦೦ ವಿವಾಹಯೋಗ್ಯ ರಾಜಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರವನ್ನು (ಯುಕ್ತಿಯನ್ನು) ಮಾಡಿದ್ದನು. ಇದರಿಂದ ಎಲ್ಲ ಕಡೆಗಳಲ್ಲಿಯೂ ಹಾಹಾಕಾರವೆದ್ದಿತು. ಶ್ರೀಕೃಷ್ಣನಿಗೆ ಈ ವೃತ್ತಾಂತವು ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನೊಂದಿಗೆ ಯುದ್ಧವನ್ನು ಮಾಡಿ ನರಕಾಸುರನನ್ನು ವಧಿಸಿದನು ಮತ್ತು ಆ ರಾಜಕನ್ಯೆಯರನ್ನು ಮುಕ್ತಗೊಳಿಸಿದನು. ಸಾಯುವಾಗ ನರಕಾಸುರನು ಕೃಷ್ಣನಲ್ಲಿ ‘ಇಂದಿನ ತಿಥಿಗೆ ಯಾರು ಮಂಗಲಸ್ನಾನವನ್ನು ಮಾಡುತ್ತಾರೆಯೋ, ಅವರಿಗೆ ನರಕದ ತೊಂದರೆಯಾಗದಿರಲಿ’ ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು. ಅಂದಿನಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿಯೆಂದು ಪರಿಗಣಿಸಲ್ಪಟ್ಟಿತು ಮತ್ತು ಜನರು ಆ ದಿನ ಸೂರ್ಯೋದಯಕ್ಕೆ ಮೊದಲು ಎದ್ದು ಅಭ್ಯಂಗಸ್ನಾನವನ್ನು ಮಾಡತೊಡಗಿದರು. ಚತುರ್ದಶಿಯಂದು ಬೆಳಗಿನ ಜಾವದಲ್ಲಿ ನರಕಾಸುರನನ್ನು ವಧಿಸಿ ಅವನ ರಕ್ತದ ತಿಲಕವನ್ನು ಹಣೆಯ ಮೇಲೆ ಇಟ್ಟುಕೊಂಡು ಶ್ರೀಕೃಷ್ಣನು ಮನೆಗೆ ಬಂದ ಕೂಡಲೇ ತಾಯಂದಿರು ಅವನನ್ನು ಆಲಿಂಗಿಸಿಕೊಂಡರು. ಸ್ತ್ರೀಯರು ಆರತಿ ಎತ್ತಿ ತಮ್ಮ ಆನಂದವನ್ನು ವ್ಯಕ್ತಪಡಿಸಿದರು.’
೩. ಹಬ್ಬವನ್ನು ಆಚರಿಸುವ ಪದ್ಧತಿ
ಅ. ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.
ಆ. ಯಮತರ್ಪಣ: ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು. ಅನಂತರ ತಾಯಿಯು ಮಕ್ಕಳಿಗೆ ಆರತಿಯನ್ನು ಎತ್ತುತ್ತಾಳೆ. ನರಕಾಸುರನ ವಧೆಯ ಪ್ರತೀಕವೆಂದು ಕೆಲವರು (ಮಹಾಲಿಂಗನ ಬಳ್ಳಿಯ) ಹಿಂಡ್ಲಚ್ಚಿ ಕಾಯಿಯನ್ನು ಕಾಲಿನಿಂದ ಜಜ್ಜಿ ಕಾಲಿನಿಂದಲೇ ಬಿಸಾಡುತ್ತಾರೆ. ಇನ್ನೂ ಕೆಲವರು ಅದರ ರಸವನ್ನು (ರಕ್ತವನ್ನು) ನಾಲಗೆಗೆ ಹಚ್ಚಿಕೊಳ್ಳುತ್ತಾರೆ.
ಇ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡಿ ವಸ್ತ್ರದಾನ ಮಾಡುತ್ತಾರೆ.
ಈ. ಪ್ರದೋಷಕಾಲದಲ್ಲಿ ದೀಪದಾನ ಮಾಡುತ್ತಾರೆ. ಪ್ರದೋಷವ್ರತವನ್ನು ತೆಗೆದುಕೊಂಡವರು ಪ್ರದೋಷಪೂಜೆ ಮತ್ತು ಶಿವಪೂಜೆಯನ್ನು ಮಾಡುತ್ತಾರೆ.
ಸಂಬಂಧಿತ ವಿಷಯಗಳು
ದೀಪಾವಳಿ
ಗೋವತ್ಸ ದ್ವಾದಶಿ
ಅಭ್ಯಂಗಸ್ನಾನದ ಮಹತ್ವ ಮತ್ತು ಲಾಭ
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ಬಲಿಪಾಡ್ಯ (ದೀಪಾವಳಿ ಪಾಡ್ಯ)
No comments:
Post a Comment
Note: only a member of this blog may post a comment.