ಭಾರತೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಅನೇಕ ಕ್ರಾಂತಿಕಾರರು ತಮ್ಮ ಬಲಿದಾನದಿಂದ ಸ್ವಂತದ್ದೇ ಆದ ವಿಶಿಷ್ಟವಾದ ಸ್ಥಾನಮಾನವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಈ ಎಲ್ಲ ಕ್ರಾಂತಿಕಾರರಲ್ಲಿ ಕೇವಲ ಭಾವನೆಗಳಿಗೆ ಬಲಿಯಾಗದೇ ವಿವೇಕಬುದ್ಧಿಯ ಸಹಾಯದಿಂದ ನೀವು ನನಗೆ ರಕ್ತವನ್ನು ಕೊಡಿರಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುವೆನು ಎಂಬ ಆಹ್ವಾನಕಾರೀ ಕರೆಯನ್ನು ನೀಡುತ್ತಾ ತಮ್ಮಲ್ಲಿರುವ ತೇಜೋಮಯ ಕ್ಷಾತ್ರತೇಜಸ್ಸು ಮತ್ತು ಕೌಶಲ್ಯಪೂರ್ಣ ಸಂಘಟನೆಯ ದರ್ಶನವನ್ನು ನೀಡಿದವರೇ ನೇತಾಜಿ ಸುಭಾಷಚಂದ್ರ ಬೋಸ್. ಭಾರತೀಯರನ್ನು ಸಂಘಟಿಸಿ ಅವರನ್ನು ಬಲಾಢ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಕ್ರಾಂತಿಯ ದಿಕ್ಕಿನಲ್ಲಿ ಹೊರಳಿಸಿದಂತಹ ಮಹಾನ್ ನೇತಾರರೆಂದು ಸುಭಾಷಚಂದ್ರರ ಸ್ಥಾನವು ಇತಿಹಾಸದಲ್ಲಿ ಅಮರವಾಗಿದೆ. ಈ ನೇತಾರನ ಕ್ರಾಂತಿಕಾರ್ಯದ ಕಿರುಪರಿಚಯವನ್ನು ಮಾಡಿಕೊಳ್ಳುವಂತಹ ಲೇಖನವನ್ನು ಇಲ್ಲಿ ಕೊಡುತ್ತಿದ್ದೇವೆ.