ವಾತಾವರಣದಲ್ಲಿನ ಅನಿಷ್ಟಶಕ್ತಿಗಳಿಂದ ಮಾನವನ ಶರೀರ ಮತ್ತು ಶರೀರದಲ್ಲಿ ನಡೆಯುವ ಜೀವ-ರಾಸಾಯನಿಕ ಕ್ರಿಯೆಗಳ ಸಂರಕ್ಷಣೆಯಾಗಬೇಕೆಂದು ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಮಾನವನು ನೂತನ ವಾಸ್ತುವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಿದರೆ ನಿಶ್ಚಿತವಾಗಿಯೂ ಅವನಿಗೆ ಮನಃಶಾಂತಿ ಸಿಗುವುದು ಮತ್ತು ಸುಖ ಸಮೃದ್ಧಿಯು ಪ್ರಾಪ್ತವಾಗುವುದು. ಇಂತಹ ಅದ್ಭುತ ಶಾಸ್ತ್ರದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ವ್ಯಾಖ್ಯೆ ಮತ್ತು ಅರ್ಥ
ವಾಸ್ತು ಎಂದರೆ ಯಾವುದಾದರೊಂದು ಬಯಲು ಜಾಗದಲ್ಲಿ ನಾಲ್ಕು ಗೋಡೆಗಳನ್ನು ಕಟ್ಟಿ ಬಂಧಿಸಿದ ಜಾಗ. ಆ ಜಾಗಕ್ಕೆ ಮೇಲ್ಛಾ ವಣಿ ಇದ್ದರೂ ಅಥವಾ ಇಲ್ಲದಿದ್ದರೂ ಅದು ವಾಸ್ತುವೇ ಆಗುತ್ತದೆ. ವಾಸ್ತುದೇವನು ಈ ಜಾಗದ ಅಧಿಪತಿಯಾಗಿದ್ದಾನೆ. ವಾಸ್ತುವಿನೊಳಗಿನ ಸ್ಪಂದನಗಳು ಆ ವಾಸ್ತುವಿನ ಹೊರಗೆ ತಿಳಿಯುವುದಿಲ್ಲ.
ಇತರ ಹೆಸರುಗಳು
ವಾಸ್ತುದೇವ, ವಾಸ್ತುಪುರುಷ. ಪೃಥ್ವಿಯು ವಾಸ್ತುಪುರುಷನ ಗೃಹಸ್ವಾಮಿನಿಯಾಗಿದ್ದಾಳೆ.
ಕಾರ್ಯ
ವಾಸ್ತುದೇವ ಎಂದರೆ ವಾಸ್ತುವಿನ ಶಕ್ತಿ ಕೇಂದ್ರ. ವಾಸ್ತುದೇವತೆಯ ಕಾರ್ಯವು ವಾಸ್ತುವಿನಲ್ಲಿ ಏನೇನು ನಡೆಯುತ್ತದೆಯೋ (ಒಳ್ಳೆಯದು-ಕೆಟ್ಟದ್ದು) ಅದಕ್ಕೆ ಶಕ್ತಿಯನ್ನು ಪೂರೈಸುವುದಾಗಿದೆ. ವಾಸ್ತುದೇವತೆಯು ‘ತಥಾಸ್ತು’ (ಹಾಗೆ ಆಗಲಿ) ಎನ್ನುತ್ತಾಳೆ. ಆದುದರಿಂದಲೇ ಮನೆಗಳಲ್ಲಿ ಅಶುಭವನ್ನು ನುಡಿಯಬಾರದು ಎಂದು ಹೇಳುತ್ತಾರೆ.
ವಾಸ್ತುದೇವರ ಶಕ್ತಿ
ಬಹಳ ಹಿಂದಿನ ಕಾಲದಲ್ಲಿ ಮನೆಗಳಿರಲಿಲ್ಲ. ಮನುಷ್ಯರು ಕಾಡಿನಲ್ಲಿ ಇರುತ್ತಿದ್ದರು. ಮನುಷ್ಯರು ವಾಸಕ್ಕಾಗಿ ಮನೆಗಳನ್ನು ನಿರ್ಮಾಣ ಮಾಡಿದ ನಂತರ ಕೆಲವು ಮನೆಗಳು ಲಾಭದಾಯಕವೂ ಆನಂದದಾಯಕವೂ ಮತ್ತು ಕೆಲವು ಮನೆಗಳು ತೊಂದರೆದಾಯಕವಾಗಿರುತ್ತವೆ ಎನ್ನುವುದರ ಅನುಭೂತಿಯು ಬರತೊಡಗಿತು. ಇದರಿಂದಲೇ ಮುಂದೆ ವಾಸ್ತುಶಾಸ್ತ್ರದ ಉಗಮವಾಯಿತು.
ವಾಸ್ತುಗಳ ವಿಧಗಳು
೧. ಮನೆ, ೨. ವಠಾರ, ೩. ಮಠ, ೪. ಸಭಾಭವನ, ೫. ಗೋದಾಮು, ೬. ನಗರ, ಅದರಲ್ಲಿನ ಮಾರುಕಟ್ಟೆ, ಗಲ್ಲಿಗಳು ಇತ್ಯಾದಿ.
ವಾಸ್ತುಶಾಸ್ತ್ರ
ವಾಸ್ತುಶಾಸ್ತ್ರಕ್ಕನುಸಾರ ವಾಸ್ತುದೇವ ನನ್ನು ವಾಸ್ತುಪುರುಷ ಎಂದು ಕರೆಯುತ್ತಾರೆ. ಪುರುಷ ಎಂದರೆ ಆತ್ಮ. ಆದುದರಿಂದ ವಾಸ್ತುಪುರುಷನು ವಾಸ್ತುವಿನ ಆತ್ಮನಾಗಿದ್ದಾನೆ. ಇವನು ವಿಶಿಷ್ಟ ಸೌಮ್ಯ ಹಾವಭಾವಗಳಲ್ಲಿ ವಿದ್ಯಮಾನನಾಗಿದ್ದು ಇವನಿಗೆ ಒಂಬತ್ತು ಮರ್ಮಸ್ಥಳಗಳಿವೆ. ಇವುಗಳಿಗೆ ಕಳಂಕ ಉಂಟಾಗಬಾರದು (ಅಂದರೆ ವಾಸ್ತುವಿನಲ್ಲಿ ಯೋಗ್ಯ ಸ್ಪಂದನಗಳಿರಬೇಕು). ಭೂಖಂಡ, ವಾಸ್ತುಪುರುಷ ಮತ್ತು ಮಂಡಲ ಇವುಗಳಿಂದ ವಾಸ್ತುಪುರುಷ ಮಂಡಲವು ರೂಪುಗೊಳ್ಳುತ್ತದೆ. ಮಂಡಲ ಎಂದರೆ ಆಕಾರ ರೇಖೆ ಅಥವಾ ಸ್ವರ್ಗೀಯ (ಸೂಕ್ಷ್ಮ) ಆಲೇಖ. ವಾಸ್ತುಪುರುಷ ಮಂಡಲ ಎಂದರೆ ಭೂಮಿಯ ಮೇಲೆ ಬಿದ್ದಿರುವ ಅಸುರನ ಆಕೃತಿ. (ಸರ್ವ ಸಾಮಾನ್ಯ ವಾಸ್ತುಗಳು ರಜ-ತಮ ಪ್ರಧಾನವಾಗಿರುವುದರಿಂದ ಅವುಗಳಲ್ಲಿ ಶಕ್ತಿಯ ರೂಪವು ದೇವತೆಗಳಂತೆ ಇರದೇ ಅಸುರರಂತೆ ಇರುತ್ತವೆ) ಇವನನ್ನು ತೈತ್ತಿರೀಯ ಸಂಹಿತೆಯಲ್ಲಿ ‘ಯಜ್ಞತನು’ ಎನ್ನಲಾಗಿದೆ. ಇವನನ್ನೇ ವಿಶ್ವಪುರುಷ ಎಂದೂ ಕರೆಯುತ್ತಾರೆ. ವಾಸ್ತುಶಿಲ್ಪದ ದೃಷ್ಟಿಯಿಂದ ವಾಸ್ತು ಪುರುಷ ಮಂಡಲಕ್ಕೆ ಮುಂದಿನ ಮೂರು ಮಟ್ಟಗಳಿವೆ.ಅ. ಮಹಾಕಾಶ (ಮಹಾ ಆಕಾಶ): ಸಂಪೂರ್ಣ ವಿಶ್ವದಲ್ಲಿನ ವಿದ್ಯಮಾನ ಆಕಾಶ.
ಆ. ಗೃಹಾಕಾಶ (ಗೃಹ ಆಕಾಶ): ನಾಲ್ಕು ಗೋಡೆಗಳು ಮತ್ತು ಮೇಲ್ಛಾವಣಿ ಗಳ ಸಮಾವೇಶವಿರುವ ಆಕಾಶ.
ಇ. ಘಟಾಕಾಶ (ಘಟ ಆಕಾಶ): ಪಾತ್ರೆಗಳಲ್ಲಿನ ಜಾಗ. ಮಾನವನ ಶರೀರಕ್ಕೂ ‘ಪಾತ್ರೆ’ ಎನ್ನುವ ಸಂಜ್ಞೆಯನ್ನು ಕೊಡಲಾಗಿದೆ.
ಆಕಾಶದ ಈ ೩ ಮಟ್ಟಗಳು ಸುಸಂವಾದ ಮತ್ತು ಪ್ರಮಾಣಬದ್ಧವಾಗಿರಬೇಕು. ನಾವಿರುವ ಅಥವಾ ಕೆಲಸ ಮಾಡುವಲ್ಲಿನ ಮಹಾಕಾಶದಿಂದ ತೆಗೆದುಕೊಂಡ ಆಕಾರ ಮಾನವು ಪ್ರಮಾಣಬದ್ಧವಾಗಿರಬೇಕು.
(ಆಧಾರಗ್ರಂಥ: ಸನಾತನ ಸಂಸ್ಥೆಯು ಮುದ್ರಿಸಿದ 'ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು')
ಸಂಬಂಧಿತ ವಿಷಯ
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುಶಾಂತಿಯ ಮಹತ್ವ
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?
ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸುವುದು ?
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
No comments:
Post a Comment
Note: only a member of this blog may post a comment.