Showing posts with label ಸಂತರ ಬೋಧನೆ. Show all posts
Showing posts with label ಸಂತರ ಬೋಧನೆ. Show all posts

ವಿನಾಕಾರಣ ತೊಂದರೆ ಕೊಟ್ಟ ಜಲೀಲಖಾನನಿಗೆ ಪಾಠ ಕಲಿಸುವ ಸಮರ್ಥ ರಾಮದಾಸಸ್ವಾಮಿ !


೧. ಹಿಂದೂ ಧರ್ಮ ಮತ್ತು ಹಿಂದೂ ಸಾಧು-ಸಂತರ ಬಗ್ಗೆ ತಿರಸ್ಕಾರವಿರುವ ಸುಭೇದಾರ ಜಲಾಲಖಾನನು ಜಯರಾಮಸ್ವಾಮೀಯವರ ಪ್ರವಚನದ ಸ್ಥಳಕ್ಕೆ ಹೋಗುವುದು : ಒಮ್ಮೆ ಮಹಾರಾಷ್ಟ್ರದ ಮೀರಜ್‌ನ ಸುಭೇದಾರ ಜಲಾಲಖಾನ ತಿರುಗಾಡುತ್ತಾ ಜಯರಾಮಸ್ವಾಮೀಯವರ ಪ್ರವಚನದ ಸ್ಥಳಕ್ಕೆ ತಲುಪಿದನು. ಜಲಾಲಖಾನನು ಬಾಲ್ಯದಿಂದಲೇ ಹಿಂದೂಗಳ ಬಗ್ಗೆ ಮನಸ್ಸಿನಲ್ಲಿ ದ್ವೇಷ ತುಂಬುವ ವಾತಾವರಣದಲ್ಲಿ ಬೆಳೆದಿದ್ದನು. ಅದರಿಂದ ಹಿಂದೂ ಸಾಧು-ಸಂತರ ಮತ್ತು ಹಿಂದೂ ಧರ್ಮದ ಬಗ್ಗೆ ಅವನ ಮನಸ್ಸಿನಲ್ಲಿ ತಿರಸ್ಕಾರವಿತ್ತು. ಅಲ್ಲಿಗೆ ಬಂದಾಗ ಅವನು, ನೋಡೋಣ ಇವನು ಏನು ಹೇಳುತ್ತಾನೆಂದು ವಿಚಾರ ಮಾಡಿದನು !

೨. ಸಂತರ ಮಾರ್ಗದಿಂದ ಹೋಗುವವರು ಭಗವಂತನ ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬ ಜಯರಾಮಸ್ವಾಮಿಯವರ ವಾಕ್ಯ ಕೇಳಿ ಜಲಾಲಖಾನನು ಅವರ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿ ಶ್ರೀರಾಮನ ದರ್ಶನ ಮಾಡಿಕೊಡಲು ಹೇಳುವುದು : ಜಯರಾಮಸ್ವಾಮೀಯವರು ಸತ್ಸಂಗದಲ್ಲಿ ಮಾತನಾಡುತ್ತಾ, ಸಂತರ ಮಾರ್ಗದಿಂದ ಹೋಗುವವರು ಭಗವಂತನ ಪ್ರಾಪ್ತಿಮಾಡಿಕೊಳ್ಳಬಹುದು ಎಂದು ಹೇಳಿದರು. (ಸಂತರು ಹೇಳಿದಂತೆ ಆಚರಣೆ ಮಾಡುವರಿಗೆ ಭಗವಂತನ ಪ್ರಾಪ್ತಿಯಾಗಬಹುದು ಎಂದು ಈ ವಚನದ ಭಾವಾರ್ಥವಿದೆ.) ಇದನ್ನು ಕೇಳಿದಾಗ ಜಲಾಲಖಾನನ ಮನಸ್ಸಿನಲ್ಲಿ ಜಯರಾಮಸ್ವಾಮಿಯವರಿಗೆ ಕಳಂಕಿಸುವ ಸಂಚನ್ನು ರೂಪಿಸಿದನು. ಮರುದಿನ ಅವನು ಅವರನ್ನು ಕರೆದು, ನೀವು ನಿನ್ನೆ ಸತ್ಸಂಗದಲ್ಲಿ ಸಂತರು ಹೇಳಿದಂತೆ ಆಚರಣೆ ಮಾಡುವರಿಗೆ ಭಗವಂತನ ಪ್ರಾಪ್ತಿಯಾಗಬಹುದು, ಎಂದಿದ್ದೀರಿ. ನಾನು ನಿಮ್ಮ ಮಾರ್ಗದಲ್ಲಿ ನಡೆಯುತ್ತೇನೆ. ನಂತರ ನೀವು ನಿಮ್ಮ ಇಷ್ಟದೇವರಾದ ಶ್ರೀರಾಮನ ಭೇಟಿ ಮಾಡಿಸಿರಿ ಮತ್ತು ಅವನ ದರ್ಶನ ಮಾಡಿಸಿರಿ. ಹೋಗಿ ವ್ಯವಸ್ಥೆ ಮಾಡಿರಿ. ನಾಳೆ ತನಕ ಸಮಯ ಕೊಡುತ್ತೇನೆ, ಇಲ್ಲದಿದ್ದರೆ ಅರಿತುಕೊಳ್ಳಿರಿ ಎಂದು ಹೇಳಿದನು.

೩. ಜಯರಾಮಸ್ವಾಮಿಯವರು ಸಮರ್ಥ ರಾಮದಾಸಸ್ವಾಮಿಯವರ ಸಹಾಯ ಕೇಳುವುದು
ಅರಿತುಕೊಳ್ಳಿರಿ, ಅಂದರೆ ಕಠಿಣ ಶಿಕ್ಷೆ ದೊರೆಯುತ್ತದೆ. ಜಯರಾಮಸ್ವಾಮೀಯವರು ಸ್ವಲ್ಪ ಹೆದರಿದರು. ಅವರು ನದಿದಂಡೆಗೆ ಹೋದರು. ಅಲ್ಲಿ ಸಮರ್ಥ ರಾಮದಾಸಸ್ವಾಮೀಯವರು ಸ್ನಾನಕ್ಕೆ ಬಂದಿದ್ದರು. ಸಮರ್ಥ ರಾಮದಾಸಸ್ವಾಮೀಯವರು ಸ್ನಾನ ಮಾಡಿ ನದಿಯಿಂದ ಹೊರಗೆ ಬಂದಾಗ ಜಯರಾಮಸ್ವಾಮೀಯವರು ಅವರಿಗೆ ಎಲ್ಲ ಪ್ರಸಂಗವನ್ನು ಹೇಳಿದರು. ಆಗ ಅವರಲ್ಲಿ ಮುಂದಿನ ಸಂಭಾಷಣೆಯಾಯಿತು.
ಸಮರ್ಥ ರಾಮದಾಸಸ್ವಾಮೀ (ಸ್ವಲ್ಪ ಸಿಟ್ಟುಗೊಂಡು) : ನಾನು ಏನು ಮಾಡಲಿ ? ಇಂತಹ ಶ್ರದ್ಧಾಭಂಜಕ ಮತ್ತು ನಿಂದಕ ಜನರೊಂದಿಗೆ ಮುಂಜಾಗ್ರತೆ ವಹಿಸಿ ಮಾತನಾಡಬೇಕು.
ಜಯರಾಮಸ್ವಾಮೀ : ಮಹಾರಾಜರೇ, ಈಗ ಈ ಬಲಿಷ್ಠನೊಂದಿಗೆ ಗಂಟು ಬಿದ್ದಿದೆ ಮತ್ತು ಇದರಿಂದ ಕೇವಲ ನೀವೇ ನನಗೆ ಉಳಿಸಬಹುದು.
ಸಮರ್ಥ ರಾಮದಾಸಸ್ವಾಮೀ : ಸರಿ. ಬೆಳಗ್ಗೆ ಸಂತರು ಅವರ ಪೂಜೆ-ಪುನಸ್ಕಾರ, ನಿಯಮ ಇತ್ಯಾದಿ ಮಾಡಿ ಹೊರಡುತ್ತಾರೆ. ಆಗ ನೀವು ಅವರ ಹಿಂದೆ ನಡೆಯಿರಿ. ನಾವು ಯಾವ ಮಾರ್ಗದಿಂದ ಹೋಗುವೆವೋ ಅದೇ ಮಾರ್ಗದಿಂದ ನೀವು ಬಂದರೆ ಮಾತ್ರ ಶ್ರೀರಾಮನೊಂದಿಗೆ ನಿಮ್ಮ ಭೇಟಿ ಮಾಡಿಸುವೆವು ಎಂದು ಜಲಾಲಖಾನನಿಗೆ ಸಂದೇಶ ಕಳಿಸಿರಿ.
ಜಲಾಲಖಾನನಿಗೆ ಅದರಂತೆ ಸಂದೇಶವನ್ನು ಕಳುಹಿಸಲಾಯಿತು. ಖಾನನು, ಹೇಗೆ ದರ್ಶನ ಮಾಡಿಸುತ್ತಾನೆ ನೋಡುತ್ತೇನೆ. ಮಾಡಿಕೊಡದಿದ್ದರೆ ಒಬ್ಬನದ್ದಲ್ಲ ಇಬ್ಬರು ಸಂತರ ಅವಸ್ಥೆ ಮಾಡುತ್ತೇನೆ, ಎಂದನು.

೪. ಸಮರ್ಥ ರಾಮದಾಸಸ್ವಾಮೀಯವರು ಖಾನನಿಗೆ ಅವರ ಹಿಂದೆ ಬರಲು ಹೇಳುವುದು ಲಘಿಮಾ ಸಿದ್ಧಿಯಿಂದ ಸಮರ್ಥರು ಜಯರಾಮಸ್ವಾಮೀಯವರಿಗೆ ಕರೆದುಕೊಂಡು ಸೂಕ್ಷ್ಮ-ರೂಪದಿಂದ ಕೋಟೆಯ ತೀರಾ ಚಿಕ್ಕ ರಂಧ್ರದಿಂದ ಕೋಟೆಯನ್ನು ಪ್ರವೇಶಿಸುವುದು; ಆದರೆ ಜಲಾಲಖಾನನಿಗೆ ಅದರಂತೆ ಹೋಗಲು ಬರದಿರುವುದು : ಜಲಾಲಖಾನನು ಬಂದನು. ಸಮರ್ಥರು ಅವನಿಗೆ ಹಿಂದೆ ಬರಲು ಹೇಳಿದರು. ಎಲ್ಲರೂ ನಡೆಯುತ್ತಾ ಮೀರಜ ಕೋಟೆಯ ವರೆಗೆ ತಲುಪಿದರು. ಕೋಟೆಯ ಒಳಗಿನಿಂದ ಗುಂಡು ಹಾರಿಸಲು ಚಿಕ್ಕ ಚಿಕ್ಕ ರಣಧ್ರಗಳಿದ್ದವು, ಅವುಗಳ ಪೈಕಿ ಒಂದು ರಂಧ್ರದತ್ತ ನೋಡುತ್ತಾ ಲಘಿಮಾ ಸಿದ್ಧಿಯ ಬಳಕೆ ಮಾಡಿದರು. ಸಂಕಲ್ಪ ಮಾಡಿ ಸಮರ್ಥರು ತೀರಾ ಚಿಕ್ಕವರಾದರು ಮತ್ತು ಆ ರಂಧ್ರದಿಂದ ಕೋಟೆಯೊಳಗೆ ಹೋದರು. ಅವರು ಜಯರಾಮ ಸ್ವಾಮೀಯವರಿಗೂ ಸಂಕಲ್ಪಬಲದಿಂದ ಕೊಂಡೊಯ್ದರು. ನಂತರ ಸಮರ್ಥರು, ‘ಜಲಾಲಖಾನ್, ಯಾವ ಮಾರ್ಗದಿಂದ ನಾವು ಬಂದಿದ್ದೇವೆಯೋ ಅದೇ ಮಾರ್ಗದಿಂದ ನೀವು ಕೂಡಾ ಬನ್ನಿರಿ. ಶ್ರೀರಾಮನು ಇಲ್ಲಿಯೇ ನಿಂತಿದ್ದಾನೆ. ಬನ್ನಿರಿ ನಾವು ನಿಮಗೆ ತೋರಿಸುತ್ತೇವೆ’ ಎಂದು ಹೇಳಿದರು.

೫. ಆಧಿದೈವಿಕ ಮತ್ತು ಆಧ್ಯಾತ್ಮಿಕ ಅಧಿಕಾರವಿರುವ ಸಂತರ ಶ್ರೇಷ್ಠತೆಯು ಖಾನನ ಗಮನಕ್ಕೆ ಬಂದು ಅವನು ಶರಣಾಗಿ ಕ್ಷಮೆ ಕೇಳುವುದು
ಜಲಾಲಖಾನನು ನಾಚಿಕೆಯಿಂದ ತಲೆ ತಗ್ಗಿಸಿದನು. ದೇಹಬುದ್ಧಿಯಲ್ಲಿ ಜೀವಿಸುವ, ಅಹಂಕಾರಿ ಮತ್ತು ಆಧಿಭೌತಿಕ ಬಲವನ್ನೇ ಎಲ್ಲ ಎಂದು ತಿಳಿಯುವ ಜಲಾಲಖಾನನು ಆ ರಂಧ್ರದಿಂದ ಹೇಗೆ ಹೋಗುವನು ? ಮಹಾಪುರುಷರಲ್ಲಿ ಆಧಿದೈವಿಕ ಮತ್ತು ಆಧ್ಯಾತ್ಮಿಕ ಅಧಿಕಾರವಿರುತ್ತದೆ. ಆಧಿಭೌತಿಕದವರ ಬಲವು ಅಲ್ಲೇನು ಮಾಡುವುದು ! ಅವನು ಸಮರ್ಥರಲ್ಲಿ ಕ್ಷಮೆ ಯಾಚಿಸಿದನು ಮತ್ತು ಇನ್ನುಮುಂದೆ ನಾನು ಯಾವುದೇ ಹಿಂದೂ ಸಾಧುವಿನ ಸತ್ಸಂಗದಲ್ಲಿನ ಸಂತ-ವಚನದ ಅಪಾರ್ಥ ಮಾಡಿ ಅವರಿಗೆ ತೊಂದರೆ ಕೊಡುವ ದುಃಸಾಹಸವನ್ನು ಮಾಡುವುದಿಲ್ಲ ಎಂದು ಹೇಳಿದನು. (ಋಷಿಪ್ರಸಾದ, ಫೆಬ್ರವರಿ ೨೦೧೨)

ಕೃಪೆ - ದೈನಿಕ ಸನಾತನ ಪ್ರಭಾತ

ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳ ಸಂಕ್ಷಿಪ್ತ ಚರಿತ್ರೆ


ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರುನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್ತು. ರುಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಭಾಯಿಯವರೆಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಶ್ರೀ ಗಾಣಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಸ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನು ನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವೃತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂಬುವನಾಗಿ ವರವನಿತ್ತು ಶ್ರೀ ದತ್ತನು ಅಂತರ್ಧಾನನಾದನು.

ಇದರಂತೆಯೇ ಗರ್ಭವತಿಯಾದ ಕಮಲಾಭಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಲಾಡ್ ಚಿಂಚೋಳಿಗೆ ಕರೆದೋಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಭರ್ಗ ಜಿಲ್ಲೆಯಲ್ಲಿ ಗಾಣಗಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦(07/12/1908) ರಲ್ಲಿ ಮಾರ್ಘಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಠೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಶ್ರೀಧರರ ೧೨ ನೇ ವಯಸ್ಸಿನೊಳಗಾಗಿಯೇ ತಂದೆ, ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗಲಿದ್ದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ "ನೂತನ ವಿದ್ಯಾಲಯದಲ್ಲೂ ಅನಂತರ ಪುಣೆಯ "ಅನಾಥ ವಿದ್ಯಾರ್ಥಿ ಗೃಹ" ಹಾಗು "ಭಾವೆ ವಿದ್ಯಾಲಯ" ದಲ್ಲಿಯೂ ನಡೆಯಿತು. ಶ್ರೀಧರರಿಗೆ ದಿನದಿಂದ ದಿನಕ್ಕೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ, ಕೇವಲ ಒಂದು ಕೊವ್ಪೀನ ಮಾತ್ರದ ಉಡುಪಿನಿಂದ ಗುರುಸೇವಾರೂಪಿ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕಡು ತಪಸ್ಸನ್ನಾಚರಿಸುತ್ತಿರಲು ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ’ಭಗವಾನ್’ ಎಂಬ ನಾಮವನ್ನು ಧರ್ಮ ಜಾಗೃತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು. ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರ್ಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಸಹವಾಸದಲ್ಲಿ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು.

ಅನಂತರ ಶಕೆ ೧೮೬೪ (೧೯೪೨ ನೇ ಇಸವಿ) ಚಿತ್ರಭಾನು ಸಂವತ್ಸರದ ವಿಜಯದಶಮಿಯಂದು ಶ್ರೀ ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರಸ್ವಾಮಿ ಮಹರಾಜರು ಚಿಕ್ಕಮಂಗಳೂರು, ಕಳಲೆ, ಮಂಗಳೂರು, ಕಾಶಿ, ಉತ್ತರಕಾಶಿ, ಕನ್ಯಾಕುಮಾರಿ, ಅಯೋಧ್ಯಾ, ಬದರಿಕಾಶ್ರಮ, ದ್ವಾರಕ, ಗಿರಿನಾರ್, ಕುರಗಡ್ಡೆ, ಸಜ್ಜನಗಡ, ವರದಪುರ, ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯವನ್ನು ಮಾಡಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋದ್ಧಾರ ಮಾಡಿದರು. ಪೇಟೆ-ಪಟ್ಟಣ, ಊರು-ಹಳ್ಳಿಗಳನ್ನು ಸಂಚರಿಸಿ ಭಕ್ತರಿಗೆ ದರ್ಶನವಿತ್ತು ಧರ್ಮ,ಭಕ್ತಿ, ಗ್ಯಾನ, ವ್ಯೆರಾಗ್ಯವನ್ನು ಭೋಧಿಸಿ ಧರ್ಮಜಾಗ್ರುತಿಯನ್ನುಂಟು ಮಾಡಿದರು. ಇವರ ಸನ್ನಿದಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ ಅರ್ಥಾರ್ಥಿ ಜಿಜ್ಞಾಸು ಜ್ಞಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು.

ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರದ ಸಮೀಪದ ವರದಪುರ (ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ, ನಿವಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಒ೦ದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚತುರ್ಮಾಸವು ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ’ಶ್ರೀಧರಾಶ್ರಮ’ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ಈ ರೀತಿಯಿಂದ ಧರ್ಮ ಜಾಗೃತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳವರ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯುಂಟಾಗಿ ಈ ವರದಪುರದಲ್ಲಿ ಮತ್ತು ಇನ್ನಿತರ ಭಾಗದಲ್ಲಿಯು ಏಕಾಂತ ಮಾಡಿದರು. ನಂತರ ೭ ವರ್ಷಗಳ ಏಕಾಂತ ಮಾಡಬೇಕೆಂಬ ವಿಚಾರವುಂಟಾಗಿ ವರದಪುರ ಶ್ರೀಧರತೀರ್ಥದ ಮೆಲ್ಭಾಗದಲ್ಲಿ ಏಕಾಂತಕ್ಕಾಗಿಯೇ ಹೊಸತಾಗಿ ನಿರ್ಮಿಸಲಾದ ಕುಟೀರದಲ್ಲಿ ಏಕಾಂತ ಪ್ರಾರಂಭವಾಯಿತು. ೫ ವರ್ಷಗಳು ಕಳೆದು ೬ನೇ ವರ್ಷ ಶ್ರೀಗಳವರು ತಮ್ಮ ದೇಹವನ್ನು ಬಿಡುವ ಸಂಕಲ್ಪ ಮಾಡಿ ಈ ವಿಚಾರವನ್ನು ಅಪ್ರತ್ಯಕ್ಷವಾಗಿ ಕೆಲವರಿಗೆ ಸೂಚಿಸಿದರೂ ಇದು ಆಗ ಎಷ್ಟೋ ಜನರಿಗೆ ತಿಳಿಯದೆಯೂ ಇರಬಹುದು. ಅಂತಿಮವಾಗಿ ಶ್ರೀಗಳವರು ಶಾ.ಶ.೧೮೯೫ ಪ್ರಮಾದಿ ನಾಮ ಸಂವತ್ಸರದ ಚೈತ್ರ ವದ್ಯ ೨ ನೇ ಗುರುವಾರ (ತಾ. 19/04/1973) ಬೆಳಗ್ಗೆ ಶ್ರೀಗಳವರು ಧ್ಯಾನಸ್ಥರಾಗಿ ಈ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು

ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೊಳ್ಳಬಾರದು - ೩೫೬

ಒಬ್ಬ ಹುಡುಗನು ಮನೆಯಿಂದ ಓಡಿಹೋದನು. ಆಗ ಅವನ ತಾಯಿಯು "ಅವನು ಎಲ್ಲಿಯೇ ಇರಲಿ, ಆದರೆ ಸುಖವಾಗಿರಲಿ", ಎಂದು ಅಂದಳು. ಅದರಂತೆ ನೀವು ಎಲ್ಲಿಯೇ ಇದ್ದರೂ ನಾಮದಲ್ಲಿರಬೇಕು. ನಾಮವನ್ನು ಅತ್ಯಂತ ಆಗ್ರಹದಿಂದ ತೆಗೆದುಕೊಳ್ಳಿರಿ. ಶ್ರದ್ಧೆಯಿಂದ ತೆಗೆದುಕೊಂಡರೆ ಹೆಚ್ಚು ಉತ್ತಮ. ವೃತ್ತಿಗಳನ್ನು ಶಾಂತಗೊಳಿಸಿ ನಾಮದಲ್ಲಿದ್ದರೆ ಇನ್ನೂ ಹೆಚ್ಚು ಉತ್ತಮ; ವನಸ್ಪತಿಯ ಎಲೆಗಳ ರಸ ತೆಗೆಯುವುದಕ್ಕಾಗಿ, ಕೆಲವು ಎಲೆಗಳಲ್ಲಿ ಜೇನುತುಪ್ಪ ಹಾಕಬೇಕಾಗುತ್ತದೆ. ಕೆಲವು ಎಲೆಗಳಲ್ಲಿ ಹಾಲು, ತುಪ್ಪ ಅಥವಾ ನೀರು ಹಾಕಬೇಕಾಗುತ್ತದೆ. ಅದರಂತೆ ಭಗವಂತನ ಪ್ರೇಮ ಪ್ರಾಪ್ತವಾಗುವುದಕ್ಕಾಗಿ ಹಾಗೂ ನಾಮದಲ್ಲಿ ರುಚಿ ನಿರ್ಮಾಣವಾಗುವುದಕ್ಕಾಗಿ, ಆ ನಾಮದಲ್ಲಿ ಸ್ವಲ್ಪ ಶ್ರದ್ಧೆ ಹಾಕಬೇಕು. "ನಾನು ಬ್ರಹ್ಮ ಇರುತ್ತೇನೆ", ಈ ಅನುಭವದಲ್ಲಿಯೂ ಕೂಡ ಅಹಂಭಾವ ಇರುತ್ತದೆ. ನಾಮವು ಅದಕ್ಕೂ ಆಚೆಗೆ ಇರುತ್ತದೆ. ಆದ್ದರಿಂದ ಭಗವಂತನ ನಾಮಸ್ಮರಣೆ ನಿರಂತರ ಮಾಡಬೇಕು; ಅದರಿಂದ ಪ್ರಪಂಚವು ಸುಲಭವಾಗುತ್ತದೆ. ನಾಮದ ಸತ್ತೆಯು ಅತ್ಯಂತ ಬಲವತ್ತರವಾಗಿರುತ್ತದೆ. ಜಗತ್ತಿನಲ್ಲಿ ಎಂಥ ಪಾಪವೂ ನಾಮದ ಮುಂದೆ ನಿಲ್ಲಲು ಶಕ್ಯವಾಗುವುದಿಲ್ಲ. ನಾಮವು ಭಗವಂತನ ಶತ್ರುವಿಗೂ ಸಹಾಯ ಮಾಡುತ್ತದೆ. ಅಂದ ಮೇಲೆ ನಮಗೆ ಸಹಾಯ ಮಾಡೇ ಮಾಡುತ್ತದೆ. ರೂಪದ ಧ್ಯಾನವು ಮನಸ್ಸಿನಲ್ಲಿ ಬರದೆ ಇದ್ದರೂ ನಾಮ ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ಸತ್ಯಕ್ಕೆ ಏನಾದರೂ ರೂಪ ಕೊಡದ ಹೊರತು ನಮಗೆ ಅದರ ಅನುಸಂಧಾನ ಇಟ್ಟುಕೊಳ್ಳಲಿಕ್ಕಾಗುವುದಿಲ್ಲ.. ನಾಮವು ಅದರ ರೂಪವಾಗಿರುತ್ತದೆ. ಆದ್ದರಿಂದ ನಾಮದ ನಿರಂತರ ಅನುಸಂಧಾನವಿರಬೇಕು. ಭಗವಂತನ ನಾಮದಲ್ಲಿ ಪ್ರತಿಫಲದ ಅಪೇಕ್ಷೆ ಇರುವುದಿಲ್ಲ. ಆದ್ದರಿಂದ ಅದು ಅಪೂರ್ಣವಾಗಿರುವುದಿಲ್ಲ. ದಡ್ಡ ಜನರಿಗೆ ನಾಮ ತೆಗೆದುಕೊಳ್ಳಲು ಹೇಳಿದರೆ ಅವರು ಕೂಡಲೇ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ವಿದ್ವಾಂಸರು ಮಾತ್ರ " ನಾಮದ ಪ್ರೇಮವಿದ್ದರೆ, ನಾನು ನಾಮ ತೆಗೆದುಕೊಳ್ಳುತ್ತೇನೆ." ಎಂದು ಅನ್ನುತ್ತಾರೆ. ವಿಷಯರೂಪೀ ಸರ್ಪದ ವಿಷವು ಇಳಿದಿರದಿದ್ದರೆ ಭಗವಂತನ ಅಮೃತದಂತೆ ಮಧುವಾಗಿರುವ ನಾಮವು ನಮಗೆ ರುಚಿಸಲಾರದು. ಇದಕ್ಕಾಗಿ ಈ ಕ್ಷಣದಿಂದಲೇ ನಾಮ ತೆಗೆದುಕೊಳ್ಳಲು ಪ್ರಾರಂಭಿಸಬೇಕು. ನಾವು ರಾಮನವರಾಗಬೇಕು ಹಾಗೂ ಅವನಿಗೆ ಏನು ಸೇರುತ್ತದೆಯೋ ಅದನ್ನು ಮಾಡಬೇಕು. ಭಗವಂತನಿಗೆ ಬುಧ್ಧಿವಂತಿಕೆಯಿಂದ ಶರಣು ಹೋಗದೆ ಅಜ್ಞಾನದ ಭಾವದಿಂದ ಶರಣು ಹೋಗಬೇಕು. ಭಗವಂತನಿಗೆ ಅನನ್ಯವಾಗಿ ಶರಣು ಹೋಗಿ ಅನುಭವ ಪಡೆಯಬೇಕು. ನೀತಿಯಿಂದ ನಡೆಯಬೇಕು. ಭಕ್ತಿ ಮಾಡಬೇಕು. ಅಂದರೆ ಭಗವಂತನು ಪ್ರಸನ್ನನಾಗುತ್ತಾನೆ.

ಜ್ಞಾನವು ಶ್ರೇಷ್ಠವಾದದ್ದೇನೋ ನಿಜ. ಆದರೆ ಅದು ಭಕ್ತಿಯ ಹೊರತಾಗಿ ಜೀವಂತವಾಗಿರಲಾರದು. ಏಕೆಂದರೆ ಭಗವಂತನಿಂದ ಎಂದೂ ವಿಭಕ್ತನಾಗದಿರುವವನೆ ಭಕ್ತನಾಗಿರುತ್ತಾನೆ ಹಾಗೂ ಅದು ಭಕ್ತಿಯ ಆಧಾರದಿಂದಲೇ ಉಳಿಯುತ್ತದೆ. ನಿಜವಾದ ಭಕ್ತನು ಜ್ಞಾನಿಯೇ ಆಗಿರುತ್ತಾನೆ. ಭಗವಂತನಿಗಾಗಿಯೇ ಭಗವಂತನು ಬೇಕೆಂದು ಭಕ್ತಿ ಮಾಡುವವರು ಲಕ್ಷದಲ್ಲಿ ಒಬ್ಬರು. ಇದೇ ನಿಜವಾದ ಭಕ್ತಿ ಎಂದು ತಿಳಿಯಬೇಕು. ನಾಮಕ್ಕಾಗಿಯೇ ನಾವು ನಾಮ ತೆಗೆದುಕೊಳ್ಳಬೇಕು. ರಾಮನು ಇಟ್ಟದ್ದರಲ್ಲಿಯೇ ಸಮಾಧಾನ ಹೊಂದಬೇಕು. ಭಗವಂತನನ್ನು ಪ್ರಪಂಚಕ್ಕಾಗಿ ಸಾಧನೆ ಮಾಡಿಕೂಳ್ಳಬಾರದು. ಅವನು ಸಾಧ್ಯನಾಗಿರಬೇಕು. ಯಾರು ಭಗವಂತನ ನಾಮದಲ್ಲಿ ತಮ್ಮ ಆಯುಷ್ಯವನ್ನು ಕಳೆದಿರುವರೋ, ಅವರು ಹುಟ್ಟಿ ಬಂದು ಎಲ್ಲವನ್ನೂ ಸಾಧಿಸಿದರು ಹಾಗೂ ಜೀವನವನ್ನು ಸಾರ್ಥಕ ಮಾಡಿಕೊಂಡರು.

ಮಹರ್ಷಿ ವಾಲ್ಮೀಕಿ

ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ.

ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಸರ್ಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಾಹದ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯೆ!”

ನಾರದರು ನುಡಿದರು - “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಈ ಸಂವೇದನೆಯಲ್ಲಿ ಆತನ ಕಠೋರ ಹೃದಯ ಕರಗಿತು. ಅವನು ಹೇಳಿದನು – “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು.”

ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ನಿನ್ನಿಂದ ಕೇವಲ ಸಾಕಲ್ಪಡಲು ಮಾತ್ರ ಅಧಿಕಾರಿಗಳಾಗಿರುವರೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು.”

ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು!

ತನ್ನ ಕುಟುಂಬದವರ ಮಾತನ್ನು ಕೇಳಿ ರತ್ನಾಕರನ ಹೃದಯಕ್ಕೆ ಆಘಾತವಾಯಿತು. ಅವನ ಅರಿವಿನ ಕಣ್ಣು ತೆರೆಯಿತು. ಅವನು ಬೇಗನೇ ಕಾಡಿಗೆ ಹೋಗಿ ನಾರದರ ಬಂಧನವನ್ನು ಬಿಡಿಸಿ, ವಿಲಪಿಸುತ್ತಾ ಅವರ ಚರಣಗಳಲ್ಲಿ ಕುಸಿದುಬಿದ್ದನು. ಅವನ ಪ್ರಲಾಪದಲ್ಲಿ ಆಳವಾದ ಪಶ್ಚಾತ್ತಾಪ ತುಂಬಿತ್ತು. ನಾರದರು ಅವನಿಗೆ ಧೈರ್ಯಹೇಳಿ ರಾಮನಾಮದ ಉಪದೇಶ ನೀಡಿದರು. ಆದರೆ ಹಿಂದೆ ಮಾಡಿದ ಪಾಪಗಳಿಂದಾಗಿ ಅವನಿಗೆ ರಾಮನಾಮವನ್ನು ಉಚ್ಚರಿಸಲಾಗಲಿಲ್ಲ. ಆಗ ನಾರದರು ಯೋಚಿಸಿ ‘ಮರಾ-ಮರಾ’ ಎಂದು ಜಪಿಸಲು ಹೇಳಿದರು. ಮರ ಅವನಿಗೆ ಪರಿಚಿತವಾದ್ದರಿಂದ ಹಾಗೇ ಜಪಿಸತೊಡಗಿದನು. ಮರಾ-ಮರಾ ಎಂದು ನಿರಂತರ ಹೇಳುವುದರಿಂದ ರಾಮ-ನಾಮದ ಉಚ್ಚಾರವು ಸಹಜವಾಗೆಂಬಂತೆ ಆಯಿತು. ಇದನ್ನೇ ದಾಸರು “ಆ ಮರ ಈ ಮರ ಎಂದು ಧ್ಯಾನಿಸುವಾಗ, ರಾಮ ರಾಮ ಎಂಬ ನಾಮವೇಕಾಯಿತೋ” ಎಂದು ಹಾಡಿರುವುದು.

ನಾರದರಿಂದ ಉಪದೇಶ ಪಡೆದು ರತ್ನಾಕರನು ನಾಮಜಪದಲ್ಲಿ ಮುಳುಗಿಹೋದನು. ಹಲವಾರು ವರ್ಷಗಳವರೆಗೆ ನಾಮಜಪದ ಪ್ರಬಲ ನಿಷ್ಠೆಯಿಂದ ಅವನ ಸಮಸ್ತ ಪಾಪಗಳೂ ತೊಳೆದುಹೋದವು. ಅವನ ಶರೀರದ ಮೇಲೆ ಹುತ್ತ ಬೆಳೆಯಿತು. ಹುತ್ತಕ್ಕೆ ವಲ್ಮೀಕವೆಂದು ಹೇಳುವರು. ದೈವ ಸಾಕ್ಷಾತ್ಕಾರದಿಂದ ವಲ್ಮೀಕದಿಂದ ಹೊರಬಂದ ಕಾರಣದಿಂದ ಅವನ ಹೆಸರು ವಾಲ್ಮೀಕಿ ಎಂದಾಯಿತು.

ಮಹರ್ಷಿಗಳಾದ ವಾಲ್ಮೀಕಿಗಳು ಪ್ರಪಂಚದಲ್ಲಿ ಲೌಕಿಕ ಛಂದಸ್ಸುಗಳ ಆದಿಕವಿಗಳೇ ಆದರು. ಈ ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಬ್ರಹ್ಮನ ಮಡದಿಯಾದ ವಾಗ್ದೇವಿ ತಾನಾಗಿಯೇ ವಾಲ್ಮೀಕಿಯ ನಾಲಿಗೆಯಲ್ಲಿದು ರಾಮಾಯಣವನ್ನು ಹೊರಹೊಮ್ಮಿಸಿದಳು ಎಂಬುದು ಭಕ್ತಿಪೂರ್ಣ ಭಾರತೀಯ ಭಾವವಾಗಿದೆ.

ತಮ್ಮ ಬೋಧನೆಯಿಂದ ಮಹರ್ಷಿಯಾದ ಈ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಒಮ್ಮೆ ನಾರದರು ಆಗಮಿಸಿದರು. ಬಂದ ದೇವರ್ಷಿಗಳನ್ನು ಯಥೋಚಿತವಾಗಿ ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದರು ವಾಲ್ಮೀಕಿ. ಸತ್ಕಾರವಾದ ಮೇಲೆ ತಪೋನಿರತರಾದ ನಾರದರನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಮಹರ್ಷಿಗಳು ಪ್ರಶ್ನಿಸಿದರು - “ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಇದ್ದರೆ ದಯೆಯಿಟ್ಟು ತಿಳಿಸಿ, ನನಗೆ ಬಹಳ ಕುತೂಹಲವಾಗಿದೆ. ಸ್ವಾಮಿ, ನೀವು ಇದನ್ನು ತಿಳಿಸಲು ಸಮರ್ಥರು – ಅದಕ್ಕೇ ನಾನು ಕೇಳುತ್ತಿದ್ದೇನೆ; ದಯೆಯಿಟ್ಟು ತಿಳಿಸಿ”.

ಈ ಪ್ರಶ್ನೆಯನ್ನು ಕೇಳಿದ ನಾರದ ಸಂತೋಷದಿಂದ ವಾಲ್ಮೀಕಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಸಂಕ್ಷೇಪವಾಗಿ ಶ್ರೀರಾಮಾವತಾರದಿಂದ ಪ್ರಾರಂಭಿಸಿ, ಸೀತಾಕಲ್ಯಾಣ, ಅರಣ್ಯಾಗಮನ, ಪಾದುಕಾ ಪ್ರದಾನ, ಸೀತಾಪಹರಣ, ಸುಗ್ರೀವ ಸಖ್ಯ, ಸೇತುಬಂಧ, ರಾವಾಣಾಧಿಗಳ ನಿಗ್ರಹ, ಅಯೋಧ್ಯೆಯಲ್ಲಿ ಪಟ್ಟಾಭಿಷೇಕದವರೆಗೆ ಶ್ರೀರಾಮ ಕಥೆಯನ್ನು ಹೇಳಿದರು.

ರಾಮನಾಮದ ಮಹಿಮೆಯಿಂದಲೇ ಮಹರ್ಷಿಗಳಾದ ವಾಲ್ಮೀಕಿಗಳಿಗೂ ಶ್ರೀರಾಮನ ಕಥೆಯ ಅನುಭಾವವಾಗಿತ್ತು. ತಮಗೆ ತಿಳಿದಿರುವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವ ಸಲುವಾಗಿಯೇ ಅವರು ನಾರದರನ್ನು ಕೇಳಿದ್ದರು.

ನಾರದರು ಹೊರಟು ಹೋದಮೇಲೆ ವಾಲ್ಮೀಕಿ ಮಹರ್ಷಿಗಳು ಸ್ನಾನ ಮಾಡಲು ಶಿಷ್ಯನಾದ ಭಾರದ್ವಾಜನೊಡನೆ ತಮಸಾನದೀ ತೀರಕ್ಕೆ ಬರುತ್ತಾರೆ. ನದೀ ತೀರದ ದೃಶ್ಯ ಸುಮನೋಹರವಾಗಿದೆ. ನದಿಯ ನೀರು ಸತ್ಪುರುಷರ ಮನಸ್ಸಿನಂತೆ ತಿಳಿಯಾಗಿದೆ. ಸತ್ಪುರುಷರ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ಅಂತೆಯೇ ಸರೋವರದ ಜಲವೂ ಸ್ಪಟಿಕದಂತೆ ಶುಭ್ರವಾಗಿ ತಿಳಿಯಾಗಿರುವುದನ್ನು ಕಂಡು ವಾಲ್ಮೀಕಿ ಸಂತೋಷ ಪಡುತ್ತಾರೆ. ಸುತ್ತಲೂ ತಿರುಗಿ ಪ್ರಕೃತಿ ಸೌಂದರ್ಯವನ್ನು ನೋಡತೊಡಗುತ್ತಾರೆ.

ಆ ಸಮಯದಲ್ಲಿ ಯಾವನೋ ಒಬ್ಬ ಬೇಡ ಮರದ ಮೇಲೆ ಸಂತೋಷದಿಂದ ಕುಳಿತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ. ಗಂಡು ಹಕ್ಕಿ ಕೆಳಗುರುಳಿದಾಗ ಅದನ್ನು ಕಂಡು ಹೆಣ್ಣು ಹಕ್ಕಿ ವಿಲಪಿಸುತ್ತದೆ. ಈ ದೃಶ್ಯವನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಸಂಕಟವಾಗಿ ಕೋಪ ಬರುತ್ತದೆ. ಕೋಪದ ಭರದಲ್ಲಿ “ಹೇ ನಿಷಾದ! ಕಾಮಮೋಹಿತವಾಗಿರುವ ಈ ಪಕ್ಷಿದ್ವಯರಲ್ಲಿ ಗಂಡು ಹಕ್ಕಿಯನ್ನು ಕೊಂದೆಯಾದ ಕಾರಣ ನೀನು ಬಹುಕಾಲ ಬದುಕುವುದು ಬೇಡ” ಎಂದು ಶಪಿಸುತ್ತಾರೆ.

ಶಪಿಸಿದ ನಂತರ ಜಿತಕ್ರೋಧರಾಗಿರಬೇಕಾದ ತಮ್ಮಿಂದ ಶಾಪ ಹೊರಹೊಮ್ಮಿತಲ್ಲಾ ಎಂದು ಕಳವಳ ಪಡುತ್ತಾರೆ. ಸ್ನಾನ-ಅಹ್ನೀಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಬಂದು ತಾವು ಹೇಳಿದ ಶ್ಲೋಕವನ್ನೇ ಮತ್ತೆ ಮತ್ತೆ ಧ್ಯಾನಿಸತೊಡಗುತ್ತಾರೆ. ಅದೇ ಸಮಯಕ್ಕೆ ಬ್ರಹ್ಮದೇವರು ವಾಲ್ಮೀಕಿಯ ಬಳಿ ಬರುತ್ತಾರೆ.

ಚಿಂತಾಕ್ರಾಂತರಾಗಿರುವ ಋಷಿವರ್ಯರನ್ನು ಕಂಡು “ಚಿಂತಿಸುವ ಕಾರಣವಿಲ್ಲ. ನಿಮ್ಮ ಬಾಯಿಂದ ಸಾಕ್ಷಾತ್ ವಾಣಿಯೇ ಆ ಶ್ಲೋಕವನ್ನು ನುಡಿಸಿದ್ದಾಳೆ. ಇದು ನೀವು ರಚಿಸುವ 24,000 ಶ್ಲೋಕವುಳ್ಳ ರಾಮಾಯಣ ಕಾವ್ಯಕ್ಕೆ ನಾಂದೀ ಶ್ಲೋಕವಾಗಿ, ಮಂಗಳ ಶ್ಲೋಕವಾಗಿ ಪರಿಣಮಿಸುತ್ತದೆ” ಎಂದು ನುಡಿದರು.

ವಾಲ್ಮೀಕಿ ಮಹರ್ಷಿಗಳ ಬಾಯಿಂದ ಹೊರಟ ಶ್ಲೋಕವಾದರೋ ಹೀಗಿತ್ತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”

“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಮೇಲ್ನೋಟಕ್ಕೆ ತೋರಿ ಬರುವ ಅರ್ಥ ಇದು. ಈ ಶ್ಲೋಕ ಶಾಪರೂಪವಾಗಿ ಹೊರಬಂದಿತು. ಆದರೆ ಅದು ಶಾಪವಾಗಿರದೆ ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಹೊರಹೊಮ್ಮಿದ್ದನ್ನು ಕಂಡು ವಾಲ್ಮೀಕಿಗೇ ಅಚ್ಚರಿಯಾಗುತ್ತದೆ”

ಅದನ್ನೇ ಬ್ರಹ್ಮ ವಾಲ್ಮೀಕಿಗೆ ಸಮಾಧಾನ ಮಾಡುತ್ತಾ “ಇದು ಮಂಗಳ ಶ್ಲೋಕ ಎಂದು ಹೇಳಿದ್ದು. ಈ ಶ್ಲೋಕಕ್ಕೆ ಅನೇಕ ಜ್ಞಾನಿಗಳು ವ್ಯಾಖ್ಯಾನ ಮಾಡಿದ್ದಾರೆ. “ಮಾ” ಶಬ್ದ ಲಕ್ಷ್ಮಿಗೆ ಅನ್ವಯಿಸುತ್ತದೆ. ಲಕ್ಮೀಸಮೇತ ನಾರಾಯಣ ಸ್ವರೂಪ ಶ್ರೀರಾಮ, ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು ಕೊಂದೆಯಾದ್ದರಿಂದ ನೀನು “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು. ಅದುವರೆಗೆ ತಾವು ಕೇಳಿದ ರಾಮಾಯಣ ಕಥಾನಾಯಕ ಶ್ರೀರಾಮನನ್ನು ಕುರಿತು, ಮಂಗಳಾಶೀರ್ವಾದ ಮಾಡುತ್ತಿರುವ ಶ್ಲೋಕವಾಗಿದೆ ಇದು.

ಕ್ರೌಂಚಪಕ್ಷಿಗಳೇ ರಾವಣ ಮಂಡೋದರಿಯ ಪ್ರತೀಕ. ಆ ಬೇಡನೇ ಶ್ರೀರಾಮ. ಕಾಮ ಮೋಹಿತವಾದ ಕ್ರೌಂಚ ಪಕ್ಷಿ ಎಂದರೆ ಕಾಮಿಯಾದ ರಾವಣ ಎಂದರ್ಥ. ಅಂಥ ಕ್ರೌಂಚ ಪಕ್ಷಿಯ ಹೊಡೆದ ಬೇಡನೇ ಶ್ರೀರಾಮ. “ರಾವಣನಿಗ್ರಹ ಮಾಡಿದ ರಾಮ! ನೀನು ಶಾಶ್ವತವಾಗಿ ಬಾಳುವಂಥವನಾಗು” ಎಂದು ರಾಮನಿಗೆ ಮಂಗಳಾಶೀರ್ವಾದ ಮಾಡುವ ಶ್ಲೋಕ ಇದು.

“ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” ಎಂಬುದಾಗಿ ಬ್ರಹ್ಮದೇವರು ವಾಲ್ಮೀಕಿಯನ್ನು ಅನುಗ್ರಹಿಸಿದರಂತೆ

“ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು – ಅವು ರಹಸ್ಯವೇ ಆದರೂ –ವೇದ್ಯವಾಗಲೀ” ಎಂದು ಬ್ರಹ್ಮರು ವಾಲ್ಮೀಕಿಯನ್ನು ಹರಸಿ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದರು. ಬ್ರಹ್ಮ ದೇವರು ಹೊರಟು ಹೋದಮೇಲೆ ಧರ್ಭೆಯ ಆಸನದಲ್ಲಿ ಕುಳಿತು ವಾಲ್ಮೀಕಿ ಧ್ಯಾನಾಸಕ್ತರಾದರು. ಬ್ರಹ್ಮದೇವನ ಅನುಗ್ರಹದಿಂದ ವಾಗ್ದೇವಿಯಿಂದ ಪ್ರೇರಿತವಾಗಿ ತಮಗೆ ತಾವೇ ಎಲ್ಲಾ ದೃಶ್ಯಗಳೂ ಒಂದಾದ ಮೇಲೊಂದು ಮನಃಪಟಲದಲ್ಲಿ ಕಂಡುಬರುತ್ತಿರುವಂತೆ ವಾಲ್ಮೀಕಿ 24,000 ಶ್ಲೋಕಗಳುಳ್ಳ ಶ್ರೀಮದ್ರಾಮಾಯಣವನ್ನು ರಚಿಸಿದರು. ಇದು ಇತಿಹಾಸ – ಅಂದರೆ ನಡೆದದ್ದನ್ನು ನಡೆದಂತೆ ಹೇಳುವ ಕಾವ್ಯ ಎನಿಸಿಕೊಂಡಿತು.

ರಾಮಾಯಣದ ರಚನೆಯೇನೋ ಆಯಿತು. ಆದರೆ ಅದರ ಪ್ರಚಾರ ಹೇಗಾಗುವುದೋ ಎಂಬ ಚಿಂತೆ ವಾಲ್ಮೀಕಿ ಮಹರ್ಷಿಗಳನ್ನು ಕಾಡುತ್ತಿತ್ತು. ಆ ವೇಳೆಗೆ ಸರಿಯಾಗಿ ಚಂದ್ರ ಸೂರ್ಯರಂತೆ ಅಲ್ಲಿಗೆ ಕುಶ ಲವರು ಬಂದು ವಾಲ್ಮೀಕಿಯ ಚರಣಗಳಿಗೆ ನಮಿಸಿದರು. ರಾಮಾಯಣವನ್ನು ರಾಮನ ಕುವರರಾದ ಕುಶ ಲವರಿಗೆ ವಾಲ್ಮೀಕಿ ಉಪದೇಶಿಸಿದರು. ಅವರು ಮೊದಲು ಋಷಿಗಳ ಸಮೂಹದಲ್ಲಿ ರಾಮಾಯಣವನ್ನು ಗಾನ ಮಾಡಿದರು. ರಸಿಕರಾದ ಋಷಿಗಳೆಲ್ಲಾ ಮಧುಪಾನ ಮಾಡಿದವರಂತೆ ರಾಮಾಯಣದ ಮಧುವನ್ನು ಆಸ್ವಾದಿಸಿದರು. ತುಷ್ಟರಾದರು. ಎಲ್ಲ ಋಷಿಗಳೂ ಮುದದಿಂದ ಕುಮಾರರಿಬ್ಬರನ್ನೂ “ಚಿರಾಯುಗಳಾಗಿ” ಎಂದು ಹರಸಿದರು.

ಅಷ್ಟರಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಶ್ರೀರಾಮರಿಂದ ಅಶ್ವಮೇಧ ಯಾಗಕ್ಕೆ ದಯಮಾಡಿಸುವಂತೆ ಕರೆ ಬಂದಿತು. ಆಗ ಅವರು ತಮ್ಮೊಂದಿಗೆ ಕುಶ ಲವರನ್ನೂ ಕರೆದೊಯ್ದರು. ರಾಮಾಯಣದ ಗಾನರೂಪಕ ಶ್ರೀರಾಮನ ಅಶ್ವಮೇಧ ಮಹಾಮಂಟಪದಲ್ಲಿ ಕಿಕ್ಕಿರಿದ ಜನಸ್ತೋಮದ ಇದಿರು ನಡೆಯಿತು. ಇಂದ್ರ ಅಗ್ನಿಯಂತೆ ಶೋಭಿಸುತ್ತಿರುವ ಕುಶ ಲವರು ಸುಶ್ರಾವ್ಯವಾದ ಕಂಠದೊಡನೆ ಮಧುರವಾದ ವೀಣಾನಾದ ಜೊತೆಗೂಡುತ್ತಿದ್ದಂತೆ ರಾಮಾಯಣವನ್ನು ಗಾನ ಮಾಡಿದರು. ಎಲ್ಲರೂ ಕೇಳಿ ಮೆಚ್ಚಿದರು. ಸಿಂಹಾಸನದಲ್ಲಿ ಕುಳಿತಿದ್ದ ಶ್ರೀರಾಮರು ರಾಮಾಯಣದ ಮಾಧುರ್ಯಕ್ಕೆ ಮನಸೋತವರಾಗಿ ಮೆಲ್ಲ ಮೆಲ್ಲಗೆ ತೆವಳುತ್ತಾ ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಬಂದು ಕುಳಿತರಂತೆ. ವಸಿಷ್ಠರು “ಇದೇನು, ರಾಮ? ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆ” ಎನಲು, ಶ್ರೀರಾಮರು “ಇದನ್ನು ನಾನು ಮೆಚ್ಚುಗೆಯಿಂದ ಕೇಳುತ್ತಿರುವುಡು ನನ್ನ ಕಥೆ ಎಂದಲ್ಲ, ಸೀತೆಯ ಕಥೆ ಎಂದು” ಎಂದು ನುಡಿದರಂತೆ.

ಹೀಗೆ ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಪ್ರಚಾರ ನಡೆಯಿತು. ಕುಶ ಲವರು ಶ್ರೀರಾಮನ ಸಮ್ಮುಖದಲ್ಲಿ ರಾಮಾಯಣವನ್ನು ಗಾನ ಮಾಡತೊಡಗಿದರು. ಮುಂದೆ ಅದು ಜನಪದದಲ್ಲಿ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಹರಿಯುತ್ತಲೇ ಇದೆ. ಹೀಗೆ ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕೆಲಸ ಶ್ರೀರಾಮನ ಕೀರ್ತಿಯಷ್ಟೇ ಅಜರಾಮರವಾದದ್ದು. ಈ ವಾಲ್ಮೀಕಿ ಎಂಬ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಭಕ್ತಿಯಿಂದ ವಂದಿಸೋಣ.

ಮೂಲ - ಕನ್ನಡ ಸಂಪದ

ಶ್ರೀ ರಾಘವೇಂದ್ರ ಸ್ವಾಮಿಗಳು


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ...

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ಭವ್ಯ ಆರಾಧನೆ ನಡೆಯುತ್ತದೆ.

೧. ಪೂರ್ವಾಶ್ರಮ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕ್ರಿಷ್ಣ ಭಟ್ಟರು ವೀಣೆ ಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ೧೫೯೫ ರಲ್ಲಿ ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದರು.

ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಷ್ಮೀ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕ್ರೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲು ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತಿದ್ದರು. ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯು ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗು ದೇವರ ನಾಮಸ್ಮರಣೆ ಬಿಡಲಿಲ್ಲ.

ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೆ ಗಂಧ ಅರಿಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ಪದ್ಧತಿಯ ಪ್ರಕಾರ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ಅಗ್ನಿ ಸೂಕ್ತ ಉಚ್ಚರಿಸುತ್ತ ಗಂಧ ತೇಯ್ದಿರುವುದಾಗಿ ಹೇಳಿ, ಅದರಿಂದಲೇ ಹೀಗಾಗಿರಬಹುದೆಂದು ಊಹಿಸಿದರು. ಮತ್ತು ವರುಣ ಮಂತ್ರವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಸ್ತೋತ್ರದ ಶಕ್ತಿ.

೨. ಸಂನ್ಯಾಸಾಶ್ರಮ

ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ದೇವರೇ ಬಂದು ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನೆಸಿ ನಕಾರತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ಸರಸ್ವತೀ ದೇವಿಯೇ ಸ್ವಪ್ನದಲ್ಲಿ ಕಂಡು ಸಂನ್ಯಾಸಾಶ್ರಮ ಸ್ವೀಕರಿಸಲು ಆಜ್ಞೆಯಿತ್ತಳು. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥನು ಫಾಲ್ಗುಣ ಶುಕ್ಲ ದ್ವಿತೀಯಾದಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು.

ಸಂನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವಸ್ಥೆಯಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೊಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನಾದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೇ ವಿದ್ಯಾರ್ಥಿಯು ಮಹಾಪ್ರಸಾದವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

ಮಾಹಿತಿ ಕೃಪೆ - ಅಂತರ್ಜಾಲ

ಮಧ್ವಾಚಾರ್ಯರು


'ದ್ವೈತ’ವೆಂಬ ತತ್ವವಾದವನ್ನೂ, ಉಡುಪಿಯ ಶ್ರೀಕೃಷ್ಣನನ್ನೂ, ಉಡುಪಿಯ ಅಷ್ಟಮಠಗಳನ್ನೂ, ಅದ್ಭುತ ಜ್ಞಾನಭಂಡಾರವನ್ನೂ ನಮ್ಮ ನಾಡಿಗೆ ಕೊಟ್ಟ ಯತಿವರ್ಯ ಮಧ್ವರು ವಿಜಯದಶಮಿಯ ದಿನದಂದು ಜನ್ಮ ತಳೆದವರು.

ಗಂಗೆಯ ತೀರದ ಒಂದು ಊರು. ಆಚೆಯ ತಡಿಯಲ್ಲಿ ಮುಸ್ಲಿಂ ದೊರೆಯೊಬ್ಬನ (ಈತ ಜಲಾಲುದ್ದೀನ್ ಖಿಲ್ಜಿ ಇರಬೇಕು ಎಂದು ವಿದ್ವಾಂಸರ ಅಭಿಪ್ರಾಯ) ರಾಜ್ಯ. ನದಿಯ ಸುತ್ತ ಸೈನಿಕರ ಭದ್ರಕಾವಲು. ದಾಟಲು ದೋಣಿಯ ವ್ಯವಸ್ಥೆಯೂ ಇಲ್ಲ. ಎಲ್ಲಿ ನೆರೆಯ ಹಿಂದೂ ರಾಜನ ಗೂಢಚಾರರು ಬಂದುಬಿಡುತ್ತಾರೋ ಎನ್ನುವ ಭಯ!

ಈಚೆಯ ತಡಿಯಲ್ಲಿ ಧೀರ ಸನ್ಯಾಸಿಯೊಬ್ಬರು ಶಿಷ್ಯ ಪರಿವಾರದೊಡನೆ ನಿಂತಿದ್ದಾರೆ. ಮುಂದೆ ಸಾಗುವ ಬಗೆ ಹೇಗೆ? ಶಿಷ್ಯರಿಗೆ ಚಿಂತೆ.

ಶಿಷ್ಯರ ಕಳವಳ ಗುರುವಿಗೆ ಅರಿವಾಯಿತು. ಅವರು ತಮ್ಮ ವ್ಯಕ್ತಿತ್ವದಷ್ಟೆ ಗಂಭೀರವಾದ ದನಿಯಿಂದ ನುಡಿದರು. “ಹೆದರಬೇಡಿ. ನಾವು ಸಂಸಾರದ ನದಿಯನ್ನೇ ದಾಟಿಸುವೆವು, ಹೀಗಿರುವಾಗ ಗಂಗೆಯನ್ನು ದಾಟಿಸಲಾರೆವೆಂದು ತಿಳಿದಿರಾ? ನನ್ನ ಬೆನ್ನ ಹಿಂದೆಯೆ ನೀರಿಗಿಳಿದು ಧೈರ್ಯವಾಗಿ ನಡೆದು ಬನ್ನಿ.”

ನೀರಿನಲ್ಲಿ ನಡೆದು ಬರುತ್ತಿದ್ದ ಸಂನ್ಯಾಸಿಗಳನ್ನು ಕಂಡು ಸೈನಿಕರು ಕೂಗಿದರು “ಇತ್ತ ಬರಬೇಡಿ ಬಂದು ಸಾಯಬೇಡಿ”

ಇತ್ತಕಡೆಯಿಂದ ಮಧ್ವರು ಕೂಗಿ ಹೇಳಿದರು “ಹೆದರಬೇಡಿ!”.

ಜೊತೆಯಿದ್ದವರೋ ಕೆಲವೊಂದು ಸಂನ್ಯಾಸಿಗಳು. ಅತ್ತ ಕಡೆಯೋ ಶಸ್ತ್ರಸಜ್ಜಿತ ಸಾವಿರಾರು ಸೈನಿಕರು. ಆದರೆ ಈ ಸಂನ್ಯಾಸಿ ಹೇಳುತ್ತಿದ್ದಾರೆ “ಹೆದರಬೇಡಿ” ಎಂದು.

ಸಿಕ್ಕವರನ್ನೆಲ್ಲಾ ತುಂಡರಿಸಿ ಅತ್ತಕಡೆ ಬಾರದಂತೆ ಮಾಡುತ್ತಿದ್ದ ಸೈನಿಕರಿಗೆ ಈ ಯತಿಯ ಮಾತು ಕೇಳಿ ವಿಸ್ಮಯ. ಇಂತಹ ನಿರ್ಭಯ ವ್ಯಕ್ತಿತ್ವವನ್ನು ಅವರು ಕಂಡದ್ದೇ ಇಲ್ಲ. ಏನೂ ಮಾಡುವುದು ತಿಳಿಯದೆ, ದಡಕ್ಕೆ ಸೇರಿದೊಡನೆ ದೊರೆಯ ಬಳಿ ಕರೆದೊಯ್ದು ವಿಷಯ ತಿಳಿಸಿದರು.

ದೊರೆಗೂ ಅಚ್ಚರಿ. ಕೇಳಿದ, “ಇಷ್ಟೊಂದು ಸೈನಿಕರಿರುವಾಗ ನಿಮಗೆ ಇಲ್ಲಿಯವರೆಗೆ ಬರಲು ಧೈರ್ಯ ಬಂದದ್ದಾದರೂ ಹೇಗೆ?”

ಆಚಾರ್ಯ ಮಧ್ವರು ನುಡಿದರು “ನಿನ್ನ ತಂದೆ ನನ್ನ ತಂದೆ ಒಂದೇ ಆಗಿರುವಾಗ ಹೆದರಿಕೆಯಾದರೂ ನಮಗೇಕೆ?”. ಆಚಾರ್ಯರ ಮಾತು ಕೇಳಿ ದೊರೆ ದಂಗುಬಡಿದು ಹೋದ.

ಆಚಾರ್ಯರು ನಗುತ್ತ ವಿವರಿಸಿದರು “ನಿನ್ನ, ನನ್ನ, ನಮ್ಮೆಲ್ಲರ ದೇವರು ? ಜಗತ್ತನ್ನೆ ಬೆಳಗುವ ಭಗವಂತ ಅಲ್ಲಿದ್ದಾನೆ. ನಿನಗೆ ಅವನು ಅಲ್ಲಾ. ನನಗೆ ನಾರಾಯಣ. ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ. ತಲೆಗೊಬ್ಬ ದೇವರಿಲ್ಲ. ನೀನು, ನಾನು, ನಾವೆಲ್ಲ ಅವನ ರಾಜ್ಯದ ಪ್ರಜೆಗಳು. ಅವನ ಅನುಗ್ರಹದಿಂದಲೇ ನಾವು ದೋಣಿ ಇಲ್ಲದೆ ನದಿಯನ್ನು ದಾಟಿದೆವು; ಕೊಲ್ಲ ಬಂದ ನಿನ್ನ ಸೈನಿಕರ ಮನವೊಲಿಸಿ ಇತ್ತ ಬಂದೆವು. ಇದೆಲ್ಲ ಅವನ ಕರುಣೆ. ನಾವು ನಿನ್ನ ರಾಜ್ಯದ ಮಾರ್ಗವಾಗಿ ಉತ್ತರಕ್ಕೆ ಹೊರಟವರು??..”

ಆ ಗಾಂಭೀರ್ಯ, ಎದೆಗಾರಿಕೆ, ಆತ್ಮಶಕ್ತಿ, ದಿವ್ಯ ತೇಜಸ್ಸು ಕಂಡು, ಆ ಮೋಡಿಯ ಮಾತುಗಳನ್ನು ಕೇಳಿ ಮುಸ್ಲಿಂ ದೊರೆ ಬೆರಗಾದ. ಅಟ್ಟದಿಂದ ಇಳಿದು ಬಂದು ಸಂನ್ಯಾಸಿಯನ್ನು ಪರಿಪರಿಯಾಗಿ ಸತ್ಕರಿಸಿದ. ತನ್ನ ರಾಜ್ಯದಲ್ಲೇ ಬಹುದೊಡ್ಡ ಜಹಗೀರನ್ನು ಬಿಟ್ಟು ಕೊಡುತ್ತೇನೆ, ಎಲ್ಲ ಸೌಕರ್ಯವನ್ನೂ ಮಾಡಿಕೊಡುತ್ತೇನೆ, ಅಲ್ಲೆ ಆಶ್ರಮ ಕಟ್ಟಿಕೊಂಡಿರುವಂತೆ ಭಿನ್ನವಿಸಿಕೊಂಡ.

ಈ ಧೀರ ಸಂನ್ಯಾಸಿ ರಾಜನ ಈ ಕೊಡುಗೆಯನ್ನು ಸೌಜನ್ಯದಿಂದಲೆ ಬೇಡವೆಂದರು. ಶಿಷ್ಯ ಪರಿವಾರದೊಡನೆ ಉತ್ತರಾಭಿಮುಖವಾಗಿ ಬದರಿಯತ್ತ ಹೊರಟೇಬಿಟ್ಟರು.

ಆಚಾರ್ಯ ಮಧ್ವರು ಅಚ್ಚ ಕನ್ನಡಿಗರು. ಕನ್ನಡನಾಡಿನ ಪಡುಕಡಲ ತೀರದ ಉಡುಪಿಯ ಸಮೀಪದ ಪುಟ್ಟಹಳ್ಳಿ ಪಾಜಕ ಆಚಾರ್ಯರ ಜನ್ಮಭೂಮಿ. ಪಾಜಕ ಪ್ರಾಕೃತಿಕವಾಗಿ ತುಂಬ ಸುಂದರವಾದ ಹಳ್ಳಿ. ಅಕ್ಕಪಕ್ಕದಲ್ಲಿ ಎರಡು ಪುಟ್ಟ ಬೆಟ್ಟಗಳು. ಒಂದರ ತುದಿಯಲ್ಲಿ ತಾಯಿ ದುರ್ಗೆಯ ಪ್ರಾಚೀನ ಗುಡಿ. ಇನ್ನೊಂದು ಬದಿಯ ಬಂಡೆಬೆಟ್ಟದಲ್ಲಿ ಪರಶುರಾಮನ ಗುಡಿ. ಎರಡು ಬೆಟ್ಟಗಳ ಬುಡದಲ್ಲಿ ಸಸ್ಯ ಶ್ಯಾಮಲವಾದ ಪುಟ್ಟಹಳ್ಳಿ ಪಾಜಕ.

ಯಾವ ಭಾಷೆಯಲ್ಲಿ, ಯಾವ ಹೆಸರಿನಲ್ಲಿ ಕರೆದರೂ ಭಗವಂತನಿಗೆ ಕೇಳಿಸುತ್ತದೆ ಎಂದು ಜಗತ್ತಿನ ಮುಂದೆ ಘೋಷಿಸಿದ ಭಾರತೀಯ ಪ್ರವಾದಿ ಆಚಾರ್ಯ ಮಧ್ವರು.. “ದೇವರನ್ನು ಹೇಗೆ ಕರೆಯಲಿ ಎಂದು ಗೊಂದಲವೇಕೆಬೇಕು.. ಯಾವ ಭಾಷೆಯ ಯಾವ ಹೆಸರಿನಿಂದಲೂ ಅವನನ್ನು ಕರೆಯಬಹುದು. ಏಕೆಂದರೆ ಅವನ ಹೆಸರಿಲ್ಲದ ಯಾವ ನುಡಿಯೂ ಈ ಜಗತ್ತಿನಲ್ಲಿಲ್ಲ. ನಮ್ಮ ಆಡು ಮಾತಷ್ಟೆ ಅಲ್ಲ ? ಇಡಿಯ ಪ್ರಕೃತಿಯೇ ಭಗವಂತನ ಗುಣಗಾನಕ್ಕೆ ಶ್ರುತಿ ಹಿಡಿದಿದೆ. ಸಮುದ್ರದ ಮೊರೆತ, ಗಾಳಿಯ ಸುಯಿಲು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು ? ಜಗತ್ತಿನ ಎಲ್ಲ ನಾದವೂ ಭಗವಂತನ ಗುಣಗಾನ. ಎಲ್ಲ ನಾದದಲ್ಲಿ ಭಗವಂತನ ಹಿರಿಮೆಯನ್ನು, ಎಲ್ಲಡೆಯಲ್ಲೂ ಭಗವಂತನ ಇರವನ್ನು ಕಾಣಲು ಕಲಿಯಿರಿ; ಭಗವನ್ಮಯವಾಗಿ ಬಾಳಿರಿ.”

ಭಗವದ್ಗೀಗೀತೆಗೆ ಬರೆದ ಭಾಷ್ಯದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: “ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲದ ವೇಷಮಾತ್ರ ಬ್ರಾಹ್ಮಣನಿಗಿಂತ ಆಧ್ಯಾತ್ಮದ ದಾರಿ ತುಳಿದ ಚಂಡಾಲ ಮೇಲು”

ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು ಎನ್ನುವುದು ತುಂಬಾ ಆಶ್ಚರ್ಯದ ಸಂಗತಿ.

ಭಾರತದ ಆಚಾರ್ಯ ಪುರುಷರ ಮಾಲಿಕೆಯಲ್ಲಿ ಮೂವರು ಹೆಚ್ಚು ಖ್ಯಾತರಾದವರು: ಅದ್ವೈತ ಮತ ಸ್ಥಾಪಕರಾದ ಆಚಾರ್ಯ ಶಂಕರರು, ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಆಚಾರ್ಯ ರಾಮಾನುಜರು ಮತ್ತು ದ್ವೈತ ಮತ್ತು ಸ್ಥಾಪಕರಾದ ಆಚಾರ್ಯ ಮಧ್ವರು. ‘ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೇ ಸತ್ಯ ಎಂದರು ಆಚಾರ್ಯ ಶಂಕರರು.’ ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಆದರಿಂದ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು. ‘ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿ’ ಎಂದು ಆಚಾರ್ಯ ಮಧ್ವರು.

ಪ್ರಾಚೀನ ಗ್ರಂಥಗಳಲ್ಲಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ದ್ವೈತವಾದ ಎನ್ನುವ ಬದಲು ತತ್ತ್ವವಾದ ಎಂದೇ ಕರೆದಿದ್ದಾರೆ. ‘ಈ ಜಗತ್ತು ಕನಸಿನ ಮಾಯೆಯಲ್ಲ, ಭಗವಂತನು ಜಾದೂಗಾರನೂ ಅಲ್ಲ, ಅವನು ಸತ್ಯಕರ್ಮ. ಇದು ಭಗವಂತನ ಸತ್ಯಸೃಷ್ಟಿ. ಆದರಿಂದ ಇದೂ ಒಂದು ಸತ್ಯತತ್ತ್ವ. ಭಗವಂತನ ಮಹಿಮೆಯನ್ನರಿಯುವ ಶಿಕ್ಷಣ ಶಾಲೆ’ ಎನ್ನುವ ವಾದವನ್ನು ಮಂಡಿಸಿದ್ದರಿಂದ ಇದಕ್ಕೆ ತತ್ತ್ವವಾದ ಎಂದು ಹೆಸರಾಯಿತು.

ಆಚಾರ್ಯ ಮಧ್ವರು ತಮ್ಮ ತತ್ತ್ವವಾದದ ಪ್ರಚಾರಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬಯಸಿ ಬಂದ ಮಂದಿಗೆಲ್ಲ ತತ್ತ್ವದ ತನಿರಸವನ್ನು ಉಣಿಸಿದರು. ಪಾಠ ಪ್ರವಚನಗಳಿಂದ ಶಿಷ್ಯರನ್ನು ತರಬೇತುಗೊಳಿಸಿದರು. ಮುಂದಿನ ಪೀಳಿಗೆಗಾಗಿ ನಲ್ವತ್ತು ಗ್ರಂಥಗಳನ್ನು ಬರೆದಿಟ್ಟರು. ಅವು ಮೇಲುನೋಟಕ್ಕೆ ಮಕ್ಕಳಿಗೂ ಅರ್ಥವಾಗುವಂಥ ಸರಳ ಗ್ರಂಥಗಳು; ಓದಿದಷ್ಟೂ ಆಳಕ್ಕೆ ಕೊಂಡೊಯ್ಯಬಲ್ಲ, ಪಂಡಿತರಿಗೂ ದುರೂಹ್ಯವಾದ ಮಹಾಗ್ರಂಥಗಳು.

ಸಂನ್ಯಾಸಿಯಾದ ತರುಣದಲ್ಲೇ ಕನ್ಯಾಕುಮಾರಿ, ರಾಮೇಶ್ವರ, ಅನಂತ ಶಯನ, ಶ್ರೀರಂಗ ಇತ್ಯಾದಿ ದಕ್ಷಿಣದ ಎಲ್ಲ ಕ್ಷೇತ್ರಗಳನ್ನೂ ಸಂದರ್ಶಿಸಿದರು. ಒಟ್ಟು ಮೂರು ಬಾರಿ ಉತ್ತರದ ತುತ್ತತುದಿಯ ಬದರಿಯ ತನಕ ಸಂಚರಿಸಿ ಬಂದರು. ಉಡುಪಿಯಲ್ಲಿ ಬರೆದ ಪ್ರಥಮ ಕೃತಿ ಗೀತಾ ಭಾಷ್ಯವನ್ನು ಬದರಿಯಲ್ಲಿ ಗುರು ವೇದವ್ಯಾಸರಿಗೆ ಅರ್ಪಿಸಿದರು. ಅಲ್ಲೇ ನಿಂತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದರು.

ಹೋದೆಡೆಯಲ್ಲೆಲ್ಲ ಅಚಾರ್ಯರ ಅದ್ಭುತ ಪ್ರವಚನವನ್ನು ಕೇಳಿ ಜನ ಮೈಮರೆತರು. ಅತ್ತ ಇಸ್ಲಾಂ ಧರ್ಮ ಭಾರತದ ಮೇಲೆ ದಾಳಿ ನಡೆಸಿತ್ತು. ಸ್ವಲ್ಪ ಮಟ್ಟಿಗೆ ಕ್ರೈಸ್ತ ಧರ್ಮವೂ ಕಾಲೂರಿತ್ತು. ಹೀಗೆ ವಿದೇಶೀಯ ಧರ್ಮಗಳ ಪ್ರಭಾವದಿಂದ ಭಾರತದಲ್ಲಿ ಒಂದು ಬಗೆಯ ಸಂದಿಗ್ಧತೆ ನೆಲೆಸಿತ್ತು. ಜತೆಗೆ ಭಾರತೀಯರಲ್ಲೇ ಹತ್ತು ಹಲವು ಪಂಥಗಳ ಒಳಜಗಳದಿಂದ ಜನಸಾಮಾನ್ಯರಲ್ಲಿ ಒಂದು ಬಗೆಯ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಈ ತಾತ್ತ್ವಿಕ ಅಭದ್ರತೆಯ ವಾತಾವರಣದಲ್ಲಿ ಆಚಾರ್ಯರು ದೇಶದಾದ್ಯಂತ ಸಂಚರಿಸಿ ಜನತೆಯಲ್ಲಿ ಭರವಸೆ ಮೂಡಿಸಿದರು. ಆಚಾರ್ಯರ ವ್ಯಕ್ತಿತ್ವವನ್ನು ಕಂಡು ಜನ ತಲೆದೂಗಿದರು: ಪ್ರವಚನವನ್ನು ಕೇಳಿ ತಲೆಬಾಗಿದರು. ಹೋದೆಡೆಯಲ್ಲೆಲ್ಲ ಶಿಷ್ಯಸಂಪತ್ತು ಬೆಳೆಯಿತು.

ಆಚಾರ್ಯರು ಉಡುಪಿಗೆ ಮರಳಿ ಬಂದಾಗ ತಮ್ಮ ಶಿಷ್ಯನ ಭಾಷ್ಯಕೃತಿಯನ್ನು ಗುರು ಅಚ್ಯುತಪ್ರಜ್ಞರೂ ಓದಿದರು. ಆಚಾರ್ಯರೊಡನೆ ಚರ್ಚೆ ನಡೆಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡು ತಾವೂ ಆಚಾರ್ಯರ ಸಿದ್ಧಾಂತದ ಅನುಯಾಯಿಯಾದರು. ಗುರುವಿಗೇ ಸಿದ್ಧಾಂತದ ದೀಕ್ಷೆಕೊಟ್ಟ ಈ ಶಿಷ್ಯ ಜನತೆಯ ಹೃದಯದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆದರು.

ಪದ್ಮನಾಭತೀರ್ಥರೆಂಬುವರು ಆಚಾರ್ಯರ ಪ್ರಮುಖ ಶಿಷ್ಯರು. ಅಲ್ಲದೆ ಇನ್ನೂ ಎಂಟು ಮಂದಿ ಆಚಾರ್ಯರ ಅಂತರಂಗ ಶಿಷ್ಯರಿದ್ದರು. ಹೃಷಿಕೇಶತೀರ್ಥ, ನರಸಿಂಹತೀರ್ಥ, ಜನಾರ್ಧನತೀರ್ಥ, ಉಪೇಂದ್ರತೀರ್ಥ, ವಾಮನತೀರ್ಥ, ವಿಷ್ಣುತೀರ್ಥ, ರಾಮತೀರ್ಥ ಮತ್ತು ಅಧೋಕ್ಷಜ ತೀರ್ಥ. ಈ ಎಂಟು ಮಂದಿ ಯತಿಗಳೇ ಮುಂದೆ ಕೃಷ್ಣಪೂಜೆಯ ಹೊಣೆಹೊತ್ತು ಉಡುಪಿಯ ಅಷ್ಟಮಠಗಳ ಮೂಲಪುರುಷರಾದರು.

ಪ್ರಾಚೀನ ದಾಖಲೆಗಳಲ್ಲಿ ಕಂಡುಬರುವಂತೆ ಉಡುಪಿಯಲ್ಲಿ ಕೃಷ್ಣಪ್ರತಿಷ್ಠೆಯ ಕಥೆ ಹೀಗಿದೆ:

ದ್ವಾರಕೆಯಿಂದ ಹಡಗೊಂದು ಹೊರಟಿತು. ಸಾಮಾನಿನ ಜೊತೆಗೆ ಕೆಲವು ಗೋಪಿಚಂದನದ ಗಟ್ಟಿಗಳನ್ನು ಅದರಲ್ಲಿರಿಸಿದ್ದರು. ಉಡುಪಿಯಿಂದ ಮೂರು ಮೈಲಿ ಪಶ್ಚಿಮದಲ್ಲಿ ಮಲ್ಪೆಯ ಸಮುದ್ರತೀರದಲ್ಲಿ ಈ ದೋಣಿ ಸಾಗುತ್ತಿದ್ದಾಗ ಗಾಳಿಯ ಸುಳಿಗೆ ಸಿಕ್ಕ ದೋಣಿ ದಾರಿ ತಪ್ಪಿ ಬಂಡೆಯೊಂದಕ್ಕೆ ಬಡಿಯಿತು. ದೋಣಿ ಒಡೆದು ಸಮುದ್ರತಳವನ್ನು ಸೇರಿತು.

ಒಂದು ದಿನ ಧ್ಯಾನಯೋಗದಿಂದ ಎದ್ದ ಆಚಾರ್ಯರು ಇದ್ದಕ್ಕಿದ್ದಂತೆ ಮಲ್ಪೆಯತ್ತ ಹೊರಟರು. ಸಮುದ್ರತಳದಲ್ಲಿ ಮುಳುಗಿದ್ದ ಭಗವಂತನನ್ನು ಉಪ್ಪುನೀರಿನಿಂದ ತೆಗೆಸಿ ಉಡುಪಿಗೆ ಹೊತ್ತು ತಂದರು. ಜಲಾಧಿವಾಸದ ಅನಂತರ ತನ್ನ ಮಠದಲ್ಲಿ ಪ್ರತಿಷ್ಠಿಸಿದರು. ಹೀಗೆ ಹಲವು ವರ್ಷಗಳ ಕಾಲ ಶ್ರೀಕೃಷ್ಣನನ್ನು ಆಚಾರ್ಯರು ಸ್ವಯಂ ಪೂಜಿಸಿದರು.

ಹೀಗೆ ಏಳು ಶತಕಗಳಿಂದ ಶ್ರೀಕೃಷ್ಣ ಉಡುಪಿಯ ಅಧಿದೈವವಾಗಿ ನಾಡಿನ ಭಕ್ತರಿಗೆ-ಭಾವುಕರಿಗೆ ಅಭೀಷ್ಟ ಪ್ರಧಾನ ದೀಕ್ಷಿತನಾಗಿ ಉಡುಪಿಯಲ್ಲಿ ನೆಲೆಸಿದ್ದಾನೆ. ಇದು ಅತ್ಯಂತ ಪುರಾತನ ಪುರಾವೆಗಳಲ್ಲಿ ದೊರೆಯುವ, ಸಂಪ್ರದಾಯಜ್ಞರು ಒಪ್ಪಿಕೊಂಡು ಬಂದ ಐತಿಹ್ಯ.

ತಮ್ಮ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ‘ಪ್ರಸ್ಥಾನತ್ರಯ’ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ “ಮಹಾಭಾರತ ತಾತ್ಪರ್ಯ ನಿರ್ಣಯ” ಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನೂ ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’ ಬರೆದರು. ವಾಸ್ತುಶಿಲ್ಪ -ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ‘ತಂತ್ರಸಾರಸಂಗ್ರಹ’ ಬರೆದರು. ಅಪೂರ್ವ ಗಣಿತ ಗ್ರಂಥ ‘ತಿಥಿ ನಿರ್ಣಯ’ವನ್ನೂ ಬರೆದರು. ಇನ್ನೂ ಅನೇಕ ಗ್ರಂಥಗಳನ್ನು ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ಇಷ್ಟೇ ಅಲ್ಲದೆ ಅವನ ಜೀವನದ ಒಂದು ಘಟನೆಯೂ ಇದಕ್ಕೆ ಸಾಕ್ಷಿ ಹೇಳುತ್ತದೆ.

ಗೋವೆಯಿಂದ ಹೊರಟ ಆಚಾರ್ಯರು ಪಶುಪೆ ಎಂಬಲ್ಲಿ ತಂಗಿದ್ದರು. ಆಚಾರ್ಯರ ಕಂಠ ಮಾಧುರ್ಯ - ಸಂಗೀತ ಪಾಂಡಿತ್ಯಗಳ ಬಗೆಗೆ ಕೇಳಿ ತಿಳಿದಿದ್ದ ಜನ ಅವರ ಸಂಗೀತವನ್ನೆ ಕೇಳಬಯಸಿದರು. ಜನರ ಬಯಕೆಯಂತೆ ಆಚಾರ್ಯರು ಹಾಡತೊಡಗಿದರು. ಕೇಳಿದ ಜನ ಮೈಮರೆಯುವಂತಹ ಮಾಧುರ್ಯ.

ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂದ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದು ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು. ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ. ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು.

೭೯ ವರ್ಷಗಳ ಕಾಲ ಇಂಥ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. ೧೩೧೭) ಮಾಘ ಶುಕ್ಲ ನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು ಬದರಿಗೆಂದು ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ. ಇಂದಿಗೂ ಈ ದಿನವನ್ನು ‘ಮಧ್ವನವಮಿ’ ಎಂದು ಅವರ ಪುಣ್ಯತಿಥಿಯನ್ನಾಗಿ ಆಚರಿಸಲಾಗುತ್ತಿದೆ.

(ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಮಾತು ಮತ್ತು ರಾಷ್ಟ್ರೋತ್ಥಾನ ಪ್ರಕಟಿಸಿದ ಬರಹ)

ಇತರ ವಿಷಯಗಳು
ಬ್ರಾಹ್ಮತೇಜದ ಮಹತ್ವ
ಶ್ರೀ ರಾಘವೇಂದ್ರ ಸ್ವಾಮಿಗಳು
ಮಹರ್ಷಿ ವಾಲ್ಮೀಕಿ
ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳ ಸಂಕ್ಷಿಪ್ತ ಚರಿತ್ರೆ
Dharma Granth