ಷೋಡಶೋಪಚಾರ ಪೂಜೆಯ ಕೃತಿಗಳನ್ನು ಮುಂದೆ ಕೊಡಲಾಗಿದೆ. ಇವುಗಳಲ್ಲಿನ ಹೆಚ್ಚಿನ ಕೃತಿಗಳ ಹಿಂದಿನ ಶಾಸ್ತ್ರವನ್ನು ಮತ್ತು ವಿವರವಾದ ಮಾಹಿತಿಯನ್ನು ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’ ಇದರಲ್ಲಿ ಕೊಡಲಾಗಿದೆ.
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
೧. ಮೊದಲನೆಯ ಉಪಚಾರ
ದೇವತೆಯ ಆವಾಹನೆಯನ್ನು ಮಾಡಬೇಕು (ದೇವತೆಯನ್ನು ಕರೆಯುವುದು)
ಅ. ಆವಾಹನೆಯ ಮೊದಲು ದೇವತೆಯ ಧ್ಯಾನವನ್ನು ಮಾಡಬೇಕು. ‘ಧ್ಯಾನ’ವೆಂದರೆ ದೇವತೆಯ ವರ್ಣನೆ ಮತ್ತು ಸ್ತುತಿ.
ಆ. ‘ದೇವತೆಯು ತನ್ನ ಎಲ್ಲ ಅಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹಿತ ಬಂದು ಮೂರ್ತಿಯಲ್ಲಿ ಪ್ರತಿಷ್ಠಿತಳಾಗಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು’ ಎಂದು ದೇವತೆಯಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಗೆ ‘ಆವಾಹನೆ’ ಎನ್ನುತ್ತಾರೆ. ಆವಾಹನೆಯ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು.
ಇ. ಅವಾಹನೆಯ ನಂತರ ದೇವತೆಯ ಹೆಸರನ್ನು ಉಚ್ಚರಿಸಿ ಕೊನೆಗೆ ‘ನಮಃ’ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ದೇವತೆಗೆ ಅರ್ಪಿಸಿ ಕೈಗಳನ್ನು ಜೋಡಿಸಿ ನಮಸ್ಕರಿಸಬೇಕು.
ಟಿಪ್ಪಣಿ - ೧.ದೇವತೆಗಳ ರೂಪಕ್ಕನುಸಾರ ಅವರ ಹೆಸರನ್ನು ತೆಗೆದುಕೊಳ್ಳಬೇಕು. ಉದಾ.ಶ್ರೀ ಗಣಪತಿಯಾಗಿದ್ದಲ್ಲಿ ‘ಶ್ರೀ ಗಣಪತಯೇ ನಮಃ’| ಶ್ರೀ ಭವಾನಿದೇವಿಯಾಗಿದ್ದಲ್ಲಿ ‘ಶ್ರೀಭವಾನಿದೇವ್ಯೈ ನಮಃ’| ಮತ್ತು ವಿಷ್ಣು ಪಂಚಾಯತನವಿದ್ದಲ್ಲಿ ‘ಶ್ರೀ ಮಹಾವಿಷ್ಣು ಪ್ರಮುಖ ಪಂಚಾಯತನ ದೇವತಾಭ್ಯೋ ನಮಃ’| ಎಂದು ಹೇಳಬೇಕು.
೨. ಎರಡನೆಯ ಉಪಚಾರ
ದೇವತೆಗೆ ಕುಳಿತುಕೊಳ್ಳಲು ಆಸನವನ್ನು ಕೊಡಬೇಕು.
ದೇವರ ಆಗಮನದ ನಂತರ ಕುಳಿತುಕೊಳ್ಳಲು ಆಸನವನ್ನು ಕೊಡಬೇಕು. ಆಸನವೆಂದು ಆಯಾಯ ದೇವತೆಗಳಿಗೆ ಪ್ರಿಯವಾದ ಹೂವು, ಪತ್ರೆ ಇತ್ಯಾದಿ (ಉದಾ.ಶ್ರೀ ಗಣೇಶನಿಗೆ ಗರಿಕೆ, ಶಿವನಿಗೆ ಬಿಲ್ವ, ಶ್ರೀವಿಷ್ಣುವಿಗೆ ತುಳಸಿ) ಕೊಡಬೇಕು ಅಥವಾ ಅಕ್ಷತೆಯನ್ನು ಅರ್ಪಿಸಬೇಕು.
೩. ಮೂರನೆಯ ಉಪಚಾರ
ಪಾದ್ಯ (ದೇವತೆಗೆ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡಬೇಕು)
ದೇವತೆಯನ್ನು ಹರಿವಾಣದಲ್ಲಿಟ್ಟು ಉದ್ಧರಣೆಯಿಂದ ನೀರನ್ನು ಹಾಕಬೇಕು.
೪. ನಾಲ್ಕನೆಯ ಉಪಚಾರ
ಅರ್ಘ್ಯ (ದೇವತೆಗೆ ಕೈಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡಬೇಕು)
ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಹಾಕಿ ಅವುಗಳನ್ನು ದೇವತೆಯ ಮೇಲೆ ಅರ್ಪಿಸಬೇಕು.
೫. ಐದನೆಯ ಉಪಚಾರ
ಆಚಮನ (ದೇವತೆಗೆ ಬಾಯಿ ಮುಕ್ಕಳಿಸಲು ನೀರನ್ನು ಕೊಡಬೇಕು)
ಉದ್ಧರಣೆಯಲ್ಲಿ ಕರ್ಪೂರಮಿಶ್ರಿತ ನೀರನ್ನು ತೆಗೆದುಕೊಂಡು ಅದನ್ನು ದೇವರಿಗೆ ಅರ್ಪಿಸಲು ಹರಿವಾಣದಲ್ಲಿ ಬಿಡಬೇಕು.
೬. ಆರನೆಯ ಉಪಚಾರ
ಸ್ನಾನ (ದೇವತೆಯ ಮೇಲೆ ನೀರನ್ನು ಹಾಕಬೇಕು)
ಲೋಹದ ಮೂರ್ತಿ, ಯಂತ್ರ, ಸಾಲಿಗ್ರಾಮ ಮುಂತಾದವುಗಳಿದ್ದರೆ ಅವುಗಳ ಮೇಲೆ ನೀರು ಹಾಕಬೇಕು. ಮಣ್ಣಿನ ಮೂರ್ತಿಯಿದ್ದರೆ ಹೂವಿನಿಂದ ಅಥವಾ ತುಳಸಿ ಎಲೆಯಿಂದ ಕೇವಲ ನೀರನ್ನು ಸಿಂಪಡಿಸಬೇಕು. ಚಿತ್ರಗಳಿದ್ದರೆ ಅವುಗಳನ್ನು ಮೊದಲು ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳ ಬೇಕು. (ಧೂಳು ಇತ್ಯಾದಿ ಹೋಗಲು ಬಟ್ಟೆಯಿಂದ ಝಾಡಿಸಬೇಕು.) ಅನಂತರ ಒದ್ದೆ ಬಟ್ಟೆಯಿಂದ ಒರೆಸಿ ಮತ್ತೊಮ್ಮೆ ಒಣಬಟ್ಟೆಯಿಂದ ಒರೆಸಿಕೊಳ್ಳಬೇಕು. ದೇವತೆಗಳನ್ನು ಒರೆಸುವ ಬಟ್ಟೆಯು ಸ್ವಚ್ಛ ವಾಗಿರಬೇಕು. ಹೊಸಬಟ್ಟೆಯಾಗಿದ್ದರೆ ಒಂದೆರಡು ಸಲ ನೀರಿನಲ್ಲಿ ನೆನೆಸಿ ಒಣಗಿಸಬೇಕು. ನಮ್ಮ ಹೆಗಲಿನ ಮೇಲಿರುವ ಉಪವಸ್ತ್ರದಿಂದ ಅಥವಾ ಉಟ್ಟ ಬಟ್ಟೆಗಳಿಂದ ದೇವತೆಗಳನ್ನು ಒರೆಸಬಾರದು.
ಅ. ದೇವತೆಗಳಿಗೆ ಮೊದಲು ಪಂಚಾಮೃತದಿಂದ ಸ್ನಾನವನ್ನು (ಅಭಿಷೇಕ) ಮಾಡಿಸಬೇಕು. ಪಂಚಾಮೃತದಿಂದ ಸ್ನಾನವನ್ನು ಮಾಡಿಸುವಾಗ ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆ ಈ ಕ್ರಮದಿಂದ ಸ್ನಾನವನ್ನು ಮಾಡಿಸಬೇಕು. ಒಂದು ಪದಾರ್ಥದಿಂದ ಸ್ನಾನವಾದ ನಂತರ ಇನ್ನೊಂದು ಪದಾರ್ಥದಿಂದ ಸ್ನಾನವನ್ನು ಮಾಡಿಸುವ ಮೊದಲು ದೇವತೆಯ ಮೇಲೆ ನೀರನ್ನು ಸುರಿಯಬೇಕು. ಉದಾ. ಹಾಲಿನ ಅಭಿಷೇಕವಾದ ನಂತರ ಮೊಸರಿನ ಅಭಿಷೇಕ ಮಾಡುವ ಮೊದಲು ನೀರನ್ನು ಹಾಕಬೇಕು.
ಆ. ಅನಂತರ ದೇವತೆಗಳಿಗೆ ಗಂಧ ಮತ್ತು ಕರ್ಪೂರಮಿಶ್ರಿತ ನೀರಿನಿಂದ ಸ್ನಾನ ಮಾಡಿಸಬೇಕು.
ಇ. ಅನಂತರ ಸುಗಂಧದ್ರವ್ಯಮಿಶ್ರಿತ ನೀರಿನಿಂದ ಸ್ನಾನವನ್ನು ಮಾಡಿಸಬೇಕು.
ಈ. ದೇವರಿಗೆ ಉಷ್ಣೋದಕದಿಂದ ಸ್ನಾನವನ್ನು ಮಾಡಿಸಬೇಕು. ಉಷ್ಣೋದಕವೆಂದರೆ ಬಹಳ ಬಿಸಿಯಾಗದ ಉಗುರುಬೆಚ್ಚಗಿನ ನೀರು.
ಉ. ಅನಂತರ ದೇವರಿಗೆ ಮಹಾಭಿಷೇಕ ಸ್ನಾನವನ್ನು ಮಾಡಿಸಬೇಕು. ಮಹಾಭಿಷೇಕವನ್ನು ಮಾಡುವಾಗ ದೇವತೆಯ ಮೇಲೆ ನಿರಂತರ ಧಾರೆಯನ್ನು ಬಿಡಬೇಕು. ಇದಕ್ಕೆ ಅಭಿಷೇಕ ಪಾತ್ರೆಯನ್ನು ಉಪಯೋಗಿಸಬೇಕು. ಮಹಾಭಿಷೇಕದ ಸಮಯದಲ್ಲಿ ಸಾಧ್ಯವಿದ್ದಲ್ಲಿ ವಿವಿಧ ಸೂಕ್ತಗಳನ್ನು ಪಠಿಸಬೇಕು.
ಊ. ಮಹಾಭಿಷೇಕದ ನಂತರ ಮತ್ತೊಮ್ಮೆ ಆಚಮನಕ್ಕಾಗಿ ಹರಿವಾಣದಲ್ಲಿ ನೀರು ಬಿಡಬೇಕು ಮತ್ತು ದೇವತೆಗಳನ್ನು ಒರೆಸಿಡಬೇಕು.
೭. ಏಳನೆಯ ಉಪಚಾರ
ದೇವತೆಗೆ ವಸ್ತ್ರಗಳನ್ನು ಕೊಡಬೇಕು.
ದೇವತೆಗೆ ಹತ್ತಿಯ ಎರಡು ವಸ್ತ್ರಗಳನ್ನು ಅರ್ಪಿಸಬೇಕು. ಒಂದು ವಸ್ತ್ರವನ್ನು ದೇವತೆಯ ಕೊರಳಿನಲ್ಲಿ ಅಲಂಕಾರದಂತೆ ಹಾಕಬೇಕು, ಇನ್ನೊಂದನ್ನು ದೇವರ ಚರಣಗಳಲ್ಲಿಡಬೇಕು.
೮. ಎಂಟನೆಯ ಉಪಚಾರ
ದೇವತೆಗೆ ಉಪವಸ್ತ್ರ ಅಥವಾ ಯಜ್ಞೋಪವೀತ (ಜನಿವಾರ) ವನ್ನು ಅರ್ಪಿಸಬೇಕು.
ಪುರುಷದೇವತೆಗಳಿಗೆ ಮಾತ್ರ ಯಜ್ಞೋಪವೀತ (ಜನಿವಾರ) ವನ್ನು ಅರ್ಪಿಸಬೇಕು.
೯ ರಿಂದ ೧೩. ಒಂಬತ್ತನೆಯ ಉಪಚಾರದಿಂದ ಹದಿಮೂರನೆಯ ಉಪಚಾರ
ದೇವತೆಗೆ ಗಂಧವನ್ನು (ಚಂದನ) ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು (ಅಥವಾ ಊದುಬತ್ತಿಯಿಂದ ಬೆಳಗುವುದು), ದೀಪವನ್ನು ಬೆಳಗುವುದು ಮತ್ತು ನೈವೇದ್ಯವನ್ನು ತೋರಿಸುವುದು (ಈ ಪಂಚೋಪಚಾರದ ಮಾಹಿತಿಯನ್ನು ಪ್ರತ್ಯೇಕ ಲೇಖನಮಾಲಿಕೆಯಲ್ಲಿ ನೀಡಲಾಗಿದೆ.)
೧೪. ಹದಿನಾಲ್ಕನೆಯ ಉಪಚಾರ
ದೇವತೆಗೆ ಮನಃಪೂರ್ವಕ ನಮಸ್ಕಾರ ಮಾಡಬೇಕು.
೧೫. ಹದಿನೈದನೆಯ ಉಪಚಾರ
ಪ್ರದಕ್ಷಿಣೆ ಹಾಕಬೇಕು.
ನಮಸ್ಕಾರದ ನಂತರ ದೇವರ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಬೇಕು. ದೇವರ ಸುತ್ತಲೂ ಪ್ರದಕ್ಷಿಣೆ ಹಾಕಲು ಸಾಧ್ಯವಿಲ್ಲದಿದ್ದರೆ ನಿಂತಲ್ಲಿಯೇ ಸ್ವಂತದ ಸುತ್ತಲೂ ತಿರುಗಿ ಮೂರು ಪ್ರದಕ್ಷಿಣೆಗಳನ್ನು ಹಾಕಬೇಕು.
೧೬. ಹದಿನಾರನೆಯ ಉಪಚಾರ
ಮಂತ್ರಪುಷ್ಪ
ಪ್ರದಕ್ಷಿಣೆಯ ನಂತರ ಮಂತ್ರಪುಷ್ಪ ಪಠಿಸಿ ದೇವರಿಗೆ ಅಕ್ಷತೆಯನ್ನು ಅರ್ಪಿಸಬೇಕು.
ಕೊನೆಗೆ ಪೂಜೆಯನ್ನು ಮಾಡುವಾಗ ತಿಳಿದು ಅಥವಾ ತಿಳಿಯದೇ ನಮ್ಮಿಂದ ಏನಾದರೂ ತಪ್ಪುಗಳಾಗಿದ್ದರೆ, ಅದರಂತೆಯೇ ಪೂಜೆಯಲ್ಲಿ ಏನಾದರೂ ಕಡಿಮೆಯಾಗಿದ್ದರೆ ದೇವರಲ್ಲಿ ಕ್ಷಮೆ ಕೇಳಿ ಪೂಜೆಯನ್ನು ಮುಕ್ತಾಯಗೊಳಿಸಬೇಕು.
(ಹೆಚ್ಚಿನ ಮಾಹಿತಿಗಾಗಿ ಓದಿರಿ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಸಂಬಂಧಿತ ಲೇಖನಗಳು
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
NITYA DEVATA POOJA MANTRA SAHITAVAGI TILISUVIRA
ReplyDeleteನಮಸ್ಕಾರ, ಶ್ರೀ ಗಣೇಶ ಪೂಜಾವಿಧಿ ಎಂಬ ಈ ಕೊಂಡಿ ನೋಡಿ. ಅದರಲ್ಲಿರುವ ಮಂತ್ರಗಳನ್ನು ಸಾಮಾನ್ಯವಾಗಿ ಎಲ್ಲದಕ್ಕೂ ಹೇಳುತ್ತಾರೆ. http://dharmagranth.blogspot.in/2012/12/blog-post_4686.html
Deleteಐದನೇಯ ಉಪಚಾರ ಅಚಮನ
ReplyDeleteಆಚಮನ ಎಂದರೆ ದೇಹ ಶುದ್ದಿಗೋಸ್ಕರ ಮಾಡುವ ಕ್ರೀಯೆಯೋ ಅಥವಾ ಬಾಯಿ ಶುದ್ದಿಗೊಸ್ಕರ ಮಾಡುವ ಕ್ರೀಯೆಯೋ
ಹಾಗೆಯೇ ಆಚಮನದಲ್ಲಿ ದೇವತೆಗಳಿಗೆ ಉದ್ಧರಣೆಯಲ್ಲಿ ಹರಿವಾಣಕ್ಕೆ ಬಿಡುವುದಾದರೆ, ಮಾನವರು ಆಚಮನ ಮಾಡುವಾಗ ಬಾಯಿಯನ್ನು ಮುಕ್ಕಳಿಸಬೇಕೆ ಅಥವಾ ನೀರನ್ನು ಕುಡಿಯಬೇಕೆ ತಿಳಿಸಿ
ನಮಸ್ಕಾರ,
Deleteದೇವರು ಆಚಮನ ಮಾಡುತ್ತಿದ್ದಾರೆ ಎಂದು ಭಾವಿಸಿ ಉದ್ಧರಣೆಯಲ್ಲಿ ನೀರು ತೆಗೆದುಕೊಂಡು ದೇವರಿಗೆ ಹರಿವಾಣದಲ್ಲಿ ಅರ್ಪಿಸಬೇಕು.
ಯಾವುದೇ ಪೂಜೆಯಲ್ಲಾಗಲೀ ಪೂಜೆ ಮಾಡುವಾಗ ಪೂಜಕನು ಬಾಯಿ ಮುಕ್ಕಳಿಸುವ ಕೃತಿ ಬರುವುದೇ ಇಲ್ಲ. ಸ್ವತಃ ಆಚಮನ ಮಾಡುವಾಗ ಮಾತ್ರ ಮೂರು ಸಲ ನೀರನ್ನು ಕುಡಿದು ನಾಲ್ಕನೇ ಸಲ ಹರಿವಾಣದಲ್ಲಿ ಬಿಡಬೇಕಾಗಿರುತ್ತದೆ.