ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರುನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್ತು. ರುಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಭಾಯಿಯವರೆಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಶ್ರೀ ಗಾಣಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಸ್ಠಾನ, ತಪವನ್ನಾಚರಿಸಿದರೆ ನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನು ನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವೃತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂಬುವನಾಗಿ ವರವನಿತ್ತು ಶ್ರೀ ದತ್ತನು ಅಂತರ್ಧಾನನಾದನು.
ಇದರಂತೆಯೇ ಗರ್ಭವತಿಯಾದ ಕಮಲಾಭಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಲಾಡ್ ಚಿಂಚೋಳಿಗೆ ಕರೆದೋಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಭರ್ಗ ಜಿಲ್ಲೆಯಲ್ಲಿ ಗಾಣಗಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦(07/12/1908) ರಲ್ಲಿ ಮಾರ್ಘಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಠೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಶ್ರೀಧರರ ೧೨ ನೇ ವಯಸ್ಸಿನೊಳಗಾಗಿಯೇ ತಂದೆ, ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗಲಿದ್ದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ "ನೂತನ ವಿದ್ಯಾಲಯದಲ್ಲೂ ಅನಂತರ ಪುಣೆಯ "ಅನಾಥ ವಿದ್ಯಾರ್ಥಿ ಗೃಹ" ಹಾಗು "ಭಾವೆ ವಿದ್ಯಾಲಯ" ದಲ್ಲಿಯೂ ನಡೆಯಿತು. ಶ್ರೀಧರರಿಗೆ ದಿನದಿಂದ ದಿನಕ್ಕೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ, ಕೇವಲ ಒಂದು ಕೊವ್ಪೀನ ಮಾತ್ರದ ಉಡುಪಿನಿಂದ ಗುರುಸೇವಾರೂಪಿ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕಡು ತಪಸ್ಸನ್ನಾಚರಿಸುತ್ತಿರಲು ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ’ಭಗವಾನ್’ ಎಂಬ ನಾಮವನ್ನು ಧರ್ಮ ಜಾಗೃತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು. ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರ್ಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಸಹವಾಸದಲ್ಲಿ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು.
ಅನಂತರ ಶಕೆ ೧೮೬೪ (೧೯೪೨ ನೇ ಇಸವಿ) ಚಿತ್ರಭಾನು ಸಂವತ್ಸರದ ವಿಜಯದಶಮಿಯಂದು ಶ್ರೀ ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರಸ್ವಾಮಿ ಮಹರಾಜರು ಚಿಕ್ಕಮಂಗಳೂರು, ಕಳಲೆ, ಮಂಗಳೂರು, ಕಾಶಿ, ಉತ್ತರಕಾಶಿ, ಕನ್ಯಾಕುಮಾರಿ, ಅಯೋಧ್ಯಾ, ಬದರಿಕಾಶ್ರಮ, ದ್ವಾರಕ, ಗಿರಿನಾರ್, ಕುರಗಡ್ಡೆ, ಸಜ್ಜನಗಡ, ವರದಪುರ, ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯವನ್ನು ಮಾಡಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋದ್ಧಾರ ಮಾಡಿದರು. ಪೇಟೆ-ಪಟ್ಟಣ, ಊರು-ಹಳ್ಳಿಗಳನ್ನು ಸಂಚರಿಸಿ ಭಕ್ತರಿಗೆ ದರ್ಶನವಿತ್ತು ಧರ್ಮ,ಭಕ್ತಿ, ಗ್ಯಾನ, ವ್ಯೆರಾಗ್ಯವನ್ನು ಭೋಧಿಸಿ ಧರ್ಮಜಾಗ್ರುತಿಯನ್ನುಂಟು ಮಾಡಿದರು. ಇವರ ಸನ್ನಿದಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ ಅರ್ಥಾರ್ಥಿ ಜಿಜ್ಞಾಸು ಜ್ಞಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು.
ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರದ ಸಮೀಪದ ವರದಪುರ (ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ, ನಿವಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಒ೦ದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚತುರ್ಮಾಸವು ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ’ಶ್ರೀಧರಾಶ್ರಮ’ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ಈ ರೀತಿಯಿಂದ ಧರ್ಮ ಜಾಗೃತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳವರ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯುಂಟಾಗಿ ಈ ವರದಪುರದಲ್ಲಿ ಮತ್ತು ಇನ್ನಿತರ ಭಾಗದಲ್ಲಿಯು ಏಕಾಂತ ಮಾಡಿದರು. ನಂತರ ೭ ವರ್ಷಗಳ ಏಕಾಂತ ಮಾಡಬೇಕೆಂಬ ವಿಚಾರವುಂಟಾಗಿ ವರದಪುರ ಶ್ರೀಧರತೀರ್ಥದ ಮೆಲ್ಭಾಗದಲ್ಲಿ ಏಕಾಂತಕ್ಕಾಗಿಯೇ ಹೊಸತಾಗಿ ನಿರ್ಮಿಸಲಾದ ಕುಟೀರದಲ್ಲಿ ಏಕಾಂತ ಪ್ರಾರಂಭವಾಯಿತು. ೫ ವರ್ಷಗಳು ಕಳೆದು ೬ನೇ ವರ್ಷ ಶ್ರೀಗಳವರು ತಮ್ಮ ದೇಹವನ್ನು ಬಿಡುವ ಸಂಕಲ್ಪ ಮಾಡಿ ಈ ವಿಚಾರವನ್ನು ಅಪ್ರತ್ಯಕ್ಷವಾಗಿ ಕೆಲವರಿಗೆ ಸೂಚಿಸಿದರೂ ಇದು ಆಗ ಎಷ್ಟೋ ಜನರಿಗೆ ತಿಳಿಯದೆಯೂ ಇರಬಹುದು. ಅಂತಿಮವಾಗಿ ಶ್ರೀಗಳವರು ಶಾ.ಶ.೧೮೯೫ ಪ್ರಮಾದಿ ನಾಮ ಸಂವತ್ಸರದ ಚೈತ್ರ ವದ್ಯ ೨ ನೇ ಗುರುವಾರ (ತಾ. 19/04/1973) ಬೆಳಗ್ಗೆ ಶ್ರೀಗಳವರು ಧ್ಯಾನಸ್ಥರಾಗಿ ಈ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು
No comments:
Post a Comment
Note: only a member of this blog may post a comment.