ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ

೧. ವ್ಯಾಖ್ಯೆ : ತೀರ್ಥಕ್ಷೇತ್ರಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ತ್ರಿಪಿಂಡಿ ಶ್ರಾದ್ಧ ಎಂದು ಹೇಳುತ್ತಾರೆ.

೨. ಉದ್ದೇಶ : ನಮಗೆ ತಿಳಿಯದೇ ಇರುವ, ನಮ್ಮ ವಂಶದಲ್ಲಿ ಸದ್ಗತಿ ಸಿಗದಿರುವವರ ಅಥವಾ ದುರ್ಗತಿಗೆ ಹೋಗಿರುವವರ ಮತ್ತು ನಮ್ಮ ಕುಲದವರನ್ನು ಪೀಡಿಸುವ ಪಿತೃಗಳಿಗೆ, ಅವರ ಪ್ರೇತತ್ವವು ದೂರವಾಗಿ ಸದ್ಗತಿಯು ಸಿಗಲು ಅಂದರೆ ಭೂಮಿ, ಅಂತರಿಕ್ಷ ಮತ್ತು ಆಕಾಶ ಈ ಮೂರು ಕಡೆಗಳಲ್ಲಿರುವ ಆತ್ಮಗಳಿಗೆ ಮುಕ್ತಿಯು ಸಿಗಲು ತ್ರಿಪಿಂಡಿ ಶ್ರಾದ್ಧವನ್ನು ಮಾಡುವ ಪದ್ಧತಿಯಿದೆ. ಎಂದಿನಂತೆ ಮಾಡುವ ಶ್ರಾದ್ಧಗಳು ಒಬ್ಬರನ್ನು ಉದ್ದೇಶಿಸಿ ಅಥವಾ ವಸು-ರುದ್ರ- ಆದಿತ್ಯ ಈ ಶ್ರಾದ್ಧ ದೇವತೆಗಳ ಪಿತೃಗಣದಲ್ಲಿನ ಪಿತಾ-ಪಿತಾಮಹ-ಪ್ರಪಿತಾಮಹ (ತಂದೆ, ತಾತ, ಮುತ್ತಾತ) ಈ ತ್ರಯಿಗಳನ್ನು ಉದ್ದೇಶಿಸಿ ಮಾಡಿದ ಶ್ರಾದ್ಧಗಳು ೩ ಪೀಳಿಗೆಗಳಿಗೆ ಸೀಮಿತವಾಗಿರುತ್ತವೆ. ಆದರೆ ತ್ರಿಪಿಂಡಿ ಶ್ರಾದ್ಧದಿಂದ ಅದಕ್ಕೂ ಮೊದಲಿನ ಪೀಳಿಗೆಗಳಲ್ಲಿನ ಪಿತೃಗಳಿಗೂ ತೃಪ್ತಿ ಸಿಗುತ್ತದೆ. ಪ್ರತಿಯೊಂದು ಕುಟುಂಬದಲ್ಲಿ ಈ ವಿಧಿಯನ್ನು ಪ್ರತಿ ೧೨ ವರ್ಷಗಳಿಗೊಮ್ಮೆ ಮಾಡಬೇಕು ಅಥವಾ ಪಿತೃಗಳಿಂದ ತೊಂದರೆಯಾಗುತ್ತಿರುವ ಕುಟುಂಬಗಳು ಈ ವಿಧಿಯನ್ನು ದೋಷ ನಿವಾರಣೆಗಾಗಿ ಮಾಡಬೇಕು.

೩. ವಿಧಿ
೩ ಅ. ವಿಧಿಯನ್ನು ಮಾಡಲು ಯೋಗ್ಯ ಕಾಲ
೧. ತ್ರಿಪಿಂಡಿ ಶ್ರಾದ್ಧಕ್ಕಾಗಿ ಅಷ್ಟಮಿ, ಏಕಾದಶಿ, ಚತುರ್ದಶಿ, ಅಮಾವಾಸ್ಯೆ, ಹುಣ್ಣಿಮೆ ಈ ತಿಥಿಗಳು ಮತ್ತು ಸಂಪೂರ್ಣ ಪಿತೃಪಕ್ಷವು ಯೋಗ್ಯವಾಗಿರುತ್ತದೆ.
೨. ಗುರು ಶುಕ್ರಾಸ್ತ, ಗಣೇಶೋತ್ಸವ ಮತ್ತು ಶಾರದಾ ನವರಾತ್ರಿಯಲ್ಲಿ (ಶರನ್ನವರಾತ್ರಿ) ಈ ವಿಧಿಯನ್ನು ಮಾಡಬಾರದು. ಹಾಗೆಯೇ ಕುಟುಂಬದಲ್ಲಿ ಮಂಗಲಕಾರ್ಯವಾದ ಮೇಲೆ ಮತ್ತು ಅಶುಭ ಘಟನೆಗಳಾದ ಮೇಲೆ ಒಂದು ವರ್ಷದವರೆಗೆ ತ್ರಿಪಿಂಡಿಶ್ರಾದ್ಧವನ್ನು ಮಾಡಬಾರದು. ಅನಿವಾರ್ಯವಾಗಿದ್ದರೆ ಉದಾ.ಒಂದು ಮಂಗಲಕಾರ್ಯ ಆದ ಕೆಲವು ತಿಂಗಳುಗಳ ನಂತರ ಇನ್ನೊಂದು ಮಂಗಲಕಾರ್ಯವಿದ್ದರೆ ಇವೆರಡರ ಮಧ್ಯಕಾಲದಲ್ಲಿ ತ್ರಿಪಿಂಡಿ ಶ್ರಾದ್ಧವನ್ನು ಮಾಡಬೇಕು.

೩ ಆ. ವಿಧಿಯನ್ನು ಮಾಡಲು ಯೋಗ್ಯ ಸ್ಥಳ : ತ್ರ್ಯಂಬಕೇಶ್ವರ, ಗೋಕರ್ಣ ಮಹಾಬಲೇಶ್ವರ, ಗರುಡೇಶ್ವರ, ಹರಿಹರೇಶ್ವರ (ದಕ್ಷಿಣ ಕಾಶಿ), ಕಾಶಿ (ಬನಾರಸ್) ಈ ಸ್ಥಳಗಳು ತ್ರಿಪಿಂಡಿಶ್ರಾದ್ಧವನ್ನು ಮಾಡಲು ಯೋಗ್ಯ ಸ್ಥಳಗಳಾಗಿವೆ.

೩ ಇ. ಪದ್ಧತಿ : ‘ಮೊದಲು ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಿ ಶ್ರಾದ್ಧದ ಸಂಕಲ್ಪವನ್ನು ಮಾಡಬೇಕು. ನಂತರ ಮಹಾವಿಷ್ಣುವಿನ ಮತ್ತು ಶ್ರಾದ್ಧಕ್ಕಾಗಿ ಕರೆದಿರುವ ಬ್ರಾಹ್ಮಣರಿಗೆ ಶ್ರಾದ್ಧವಿಧಿಯ ಪ್ರಕಾರ ಪೂಜೆ ಮಾಡಬೇಕು. ನಂತರ ಜವೆಗೋಧಿ (ಬಾರ್ಲಿ), ಅಕ್ಕಿ ಮತ್ತು ಎಳ್ಳು ಇವುಗಳ ಹಿಟ್ಟಿನ ಪ್ರತಿಯೊಂದರ ಒಂದೊಂದು ಪಿಂಡವನ್ನು ತಯಾರು ಮಾಡಬೇಕು. ದರ್ಭೆಯನ್ನು ಹಾಸಿ ಅದರ ಮೇಲೆ ತಿಲೋದಕವನ್ನು ಸಿಂಪಡಿಸಿ ಪಿಂಡದಾನ ಮಾಡಬೇಕು.

೧. ಜವೆಗೋಧಿಯ ಪಿಂಡ (ಧರ್ಮಪಿಂಡ): ಮಾತೃವಂಶದಲ್ಲಿ (ತಾಯಿಯ ವಂಶದಲ್ಲಿನ) ಮತ್ತು ಪಿತೃವಂಶದಲ್ಲಿ (ತಂದೆಯ ವಂಶದಲ್ಲಿನ) ಉತ್ತರಕ್ರಿಯೆ ಆಗದಿರುವವರು, ಸಂತಾನ ಇಲ್ಲವೆಂದು ಯಾರ ಪಿಂಡದಾನವಾಗಿಲ್ಲವೋ ಅವರು ಅಥವಾ ಜನ್ಮತಃ ಅಂಗವಿಕಲರು (ಅಂಗವಿಕಲರಾಗಿರುವುದರಿಂದ ಮದುವೆ ಆಗಿರದೇ ಸಂತಾನರಹಿತವಾಗಿದ್ದವರು), ಇಂತಹ ಪಿತೃಗಳ ಪ್ರೇತತ್ವವು ನಾಶವಾಗಿ ಸದ್ಗತಿ ಸಿಗಲೆಂದು ಜವೆಗೋಧಿಯ ಪಿಂಡವನ್ನು ಕೊಡುತ್ತಾರೆ. ಇದಕ್ಕೆ ಧರ್ಮಪಿಂಡ ಎಂಬ ಹೆಸರು ಇದೆ.

೨. ಮಧುರತ್ರಯಯುಕ್ತ ಅನ್ನದ ಪಿಂಡ: ಪಿಂಡದ ಮೇಲೆ ಸಕ್ಕರೆ, ಜೇನುತುಪ್ಪ ಮತ್ತು ತುಪ್ಪ ಇವುಗಳ ಮಿಶ್ರಣವನ್ನು ಹಾಕುವುದಕ್ಕೆ ಮಧುರತ್ರಯೀ ಎನ್ನುತ್ತಾರೆ. ಇದನ್ನು ಕೊಡುವುದ ರಿಂದ ಅಂತರಿಕ್ಷದಲ್ಲಿರುವ ಪಿತೃಗಳಿಗೆ ಸದ್ಗತಿ ಸಿಗುತ್ತದೆ.

೩. ಎಳ್ಳು ಪಿಂಡ : ಭೂಮಿಯ ಮೇಲೆ ಕ್ಷುದ್ರಯೋನಿಯಲ್ಲಿದ್ದು ಇತರರಿಗೆ ತೊಂದರೆ ಕೊಡುವ ಪಿತೃಗಳಿಗೆ ಎಳ್ಳು ಪಿಂಡದಿಂದ ಸದ್ಗತಿಯು ಪ್ರಾಪ್ತವಾಗುತ್ತದೆ.

ಈ ಮೂರು ಪಿಂಡಗಳಿಗೆ ತಿಲೋದಕ ಕೊಡಬೇಕು. ನಂತರ ಪಿಂಡಗಳ ಪೂಜೆಯನ್ನು ಮಾಡಿ ಅರ್ಘ್ಯವನ್ನು ಅರ್ಪಿಸಬೇಕು. ಶ್ರೀವಿಷ್ಣುವಿಗೆ ತರ್ಪಣ ಕೊಡಬೇಕು. ಬ್ರಾಹ್ಮಣರಿಗೆ ಭೋಜನವನ್ನು ನೀಡಿ ದಕ್ಷಿಣೆಯೆಂದು ವಸ್ತ್ರ, ಪಾತ್ರೆ, ಬೀಸಣಿಗೆ, ಪಾದರಕ್ಷೆಗಳನ್ನು ಕೊಡಬೇಕು’.

೪. ಪಿತೃದೋಷವಿದ್ದರೆ ತಾಯಿ-ತಂದೆ ಜೀವಂತವಿರುವಾಗಲೇ ಮಗನು ವಿಧಿಯನ್ನು ಮಾಡುವುದು ಯೋಗ್ಯವಾಗಿದೆ: ಶ್ರಾದ್ಧಕರ್ತನ ಜಾತಕದಲ್ಲಿ ಪಿತೃದೋಷವಿದ್ದರೆ ಅದರ ನಿವಾರಣೆಗಾಗಿ ತಾಯಿ-ತಂದೆ ಜೀವಂತ ಇರುವಾಗಲೇ ಈ ವಿಧಿಯನ್ನು ಮಾಡಬೇಕು.

೫. ವಿಧಿಯನ್ನು ಮಾಡುವಾಗ ಕೂದಲನ್ನು ತೆಗೆಯುವುದರ ಆವಶ್ಯಕತೆ: ಶ್ರಾದ್ಧ ಕರ್ತನ ತಂದೆಯು ಜೀವಂತವಿಲ್ಲದಿದ್ದರೆ ಅವನು ವಿಧಿಯನ್ನು ಮಾಡುವಾಗ ಕೂದಲುಗಳನ್ನು ತೆಗೆಯಬೇಕು. ತಂದೆಯು ಜೀವಂತವಿರುವ ಶ್ರಾದ್ಧಕರ್ತನಿಗೆ ಕೂದಲುಗಳನ್ನು ತೆಗೆಯುವ ಆವಶ್ಯಕತೆ ಇರುವುದಿಲ್ಲ.

೬. ಮನೆಯಲ್ಲಿ ಯಾರಾದರೊಬ್ಬರು ವಿಧಿಯನ್ನು ಮಾಡುವಾಗ ಇತರರು ಪೂಜೆ ಇತ್ಯಾದಿ ಮಾಡುವುದು ಯೋಗ್ಯವಾಗಿದೆ: ತ್ರಿಪಿಂಡಿ ಶ್ರಾದ್ಧದಲ್ಲಿ ಶ್ರಾದ್ಧಕರ್ತನಿಗೆ ಮಾತ್ರ ಅಶೌಚವಿರುತ್ತದೆ. ಮನೆಯಲ್ಲಿನ ಇತರರಿಗೆ ಇರುವುದಿಲ್ಲ. ಆದುದರಿಂದ ಮನೆಯಲ್ಲಿನ ಒಬ್ಬರು ವಿಧಿಯನ್ನು ಮಾಡುವಾಗ ಇತರರು ಪೂಜೆ ವಗೈರೆಗಳನ್ನು ನಿಲ್ಲಿಸುವ ಅವಶ್ಯಕತೆಯಿಲ್ಲ.

೭. ತ್ರಿಪಿಂಡಿ ಶ್ರಾದ್ಧದ ಬಗೆಗಿನ ಒಂದು ಅನುಭೂತಿ

ಅ. ಮೃತನಾದ ಚಿಕ್ಕಪ್ಪನು ಓರ್ವ ಸ್ತ್ರೀಯಲ್ಲಿ ಪ್ರಕಟವಾಗಿ ತಾಯಿಯನ್ನು ಬೀಳಿಸಿದ ಬಗ್ಗೆ, ಮನೆ ಖರೀದಿ ಮಾಡಲು ಅಡಚಣೆಯುಂಟು ಮಾಡುತ್ತಿರುವುದರ ಬಗ್ಗೆ ಹೇಳುವುದು ಮತ್ತು ತ್ರಿಪಿಂಡಿಶ್ರಾದ್ಧ ಮಾಡಿದ ಬಳಿಕ ತೊಂದರೆಯು ದೂರವಾಗುವುದು: ‘ನನ್ನ ಖಾಸಾ ಚಿಕ್ಕಪ್ಪನವರು ನಮ್ಮ ಮನೆಯ ಹತ್ತಿರದ ಒಂದು ವಠಾರದಲ್ಲಿ ವಾಸವಾಗಿದ್ದರು. ಅವರಿಗೆ ಸಂತಾನವಿರಲಿಲ್ಲ. ಅವರು ನಮ್ಮ ಮೂವರು ಸಹೋದರರನ್ನು ಅದರಲ್ಲಿಯೂ ವಿಶೇಷವಾಗಿ ನನ್ನನ್ನು ಬಹಳ ಪ್ರೀತಿಸುತ್ತಿದ್ದರು. ೧೩ ವರ್ಷಗಳ ಹಿಂದೆ ಕೆಲವು ಗೂಂಡಾಗಳು ಅವರ ಮೇಲೆ ನಡೆಸಿದ ಹಲ್ಲೆಯಿಂದಾಗಿ ಅವರು ಮೃತರಾದರು. ಮೃತ್ಯುವಿನ ಮೂರು ವರ್ಷಗಳ ನಂತರ ಅವರು ನವರಾತ್ರಿಯ ಎಂಟನೆಯ ದಿನ ಒಬ್ಬ ಗುಜರಾತಿ ಸ್ತ್ರೀಯಲ್ಲಿ ಪ್ರಕಟವಾದರು. ತನಗೆ ಇಷ್ಟವಾದ ತಿನಿಸುಗಳು ಬೇಕೆಂದು ಆ ಸ್ತ್ರೀಯು ಶುದ್ಧ ಮರಾಠಿಯಲ್ಲಿ ಪುರುಷರ ಧ್ವನಿಯಲ್ಲಿ ಮಾತನಾಡಿದಳು. ತದನಂತರ ಚಿಕ್ಕಪ್ಪನವರು ಅನೇಕ ವರ್ಷಗಳ ಕಾಲ ಪ್ರಕಟವಾಗಲಿಲ್ಲ.

೨೦೦೪ರಲ್ಲಿ ನನ್ನ ತಾಯಿಯವರು ಕಾಲು ಜಾರಿ ಒಂದು ಗುಂಡಿಯಲ್ಲಿ ಬಿದ್ದರು. ಅನಂತರ ಅವರು ಬಹಳ ದಿನ ಅನಾರೋಗ್ಯವಾಗಿದ್ದರು. ೨೦೦೪ರ ನವರಾತ್ರಿಯ ಎಂಟನೆಯ ದಿನ ನನ್ನ ಚಿಕ್ಕಪ್ಪನವರು ಅದೇ ಗುಜರಾತಿ ಸ್ತ್ರೀಯಲ್ಲಿ ಪ್ರಕಟವಾಗಿ ನನ್ನನ್ನು ಕರೆಯಲು ಹೇಳಿದರು. ಆಗ ಸುತ್ತಮುತ್ತಲಿನ ಬಹಳಷ್ಟು ಜನರು ಅಲ್ಲಿ ಸೇರಿದ್ದರು. ನಾನು ಅಲ್ಲಿಗೆ ಹೋದಾಗ ಅವರು ನನ್ನ ಮೇಲೆ ಬಹಳ ಕೋಪಗೊಂಡರು. ಅನಂತರ ಅವರು ಆ ಸ್ತ್ರೀಯ ಮೂಲಕ ನನಗೆ ಹೀಗೆ ಹೇಳಿದರು - ‘ನನ್ನ ಆತ್ಮವು ಅಲೆದಾಡುತ್ತಿದೆ, ಇದಕ್ಕಿಂತ ಮೊದಲೇ ನಾನು ನಿನಗೆ ತ್ರಿಪಿಂಡಿ ಶ್ರಾದ್ಧ ಮಾಡಲು ಹೇಳಿದ್ದೆ; ಆದರೆ ನೀನು ಮಾತ್ರ ಮನೆ ಖರೀದಿಯ ವ್ಯವಹಾರದಲ್ಲಿ ತೊಡಗಿರುವೆ, ಎಲ್ಲಿಯವರೆಗೆ ನೀನು ನನ್ನನ್ನು ಬಿಡಿಸುವುದಿಲ್ಲವೋ ಅಲ್ಲಿಯವರೆಗೆ ನಾನು ನಿನಗೆ ಮನೆ ಖರೀದಿಸಲು ಬಿಡುವುದಿಲ್ಲ. ನಾನು ನಿನ್ನ ತಾಯಿಗೆ ತೊಂದರೆ ಕೊಡುವೆನು. ಕೆಲವು ದಿನಗಳ ಹಿಂದೆ ನಾನೇ ನಿನ್ನ ತಾಯಿಯನ್ನು ಬೀಳಿಸಿದ್ದೆ. ನೀನು ತ್ರಿಪಿಂಡಿಶ್ರಾದ್ಧವನ್ನು ಮಾಡುವವರೆಗೆ ನಾನು ನಿನಗೆ ಹೀಗೆಯೇ ತೊಂದರೆ ಕೊಡುತ್ತಿರುತ್ತೇನೆ’. ನಾನು ಖರೀದಿಸಬೇಕೆಂದಿರುವ ಮನೆಯ ವಿಳಾಸವನ್ನೂ ಚಿಕ್ಕಪ್ಪನವರು ಸರಿಯಾಗಿ ಹೇಳಿದರು. ಆ ಪ್ರಸಂಗದ ನಂತರ ನಾನು ಕೂಡಲೇ ತ್ರಯಂಬಕೇಶ್ವರಕ್ಕೆ ಹೋಗಿ ತ್ರಿಪಿಂಡಿಶ್ರಾದ್ಧ ಮಾಡಿದೆ. ಅನಂತರ ಇವತ್ತಿನವರೆಗೆ ಚಿಕ್ಕಪ್ಪನವರು ಮತ್ತೆ ಪ್ರಕಟವಾಗಲಿಲ್ಲ. - ಶ್ರೀ.ನರೇಂದ್ರ ಸಖಾರಾಮ ಸುರ್ವೆ, ಘಾಟಕೋಪರ, ಮುಂಬೈ.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

No comments:

Post a Comment

Note: only a member of this blog may post a comment.