ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ


‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬುದು ಹಿಂದೂಧರ್ಮದಲ್ಲಿನ ಒಂದು ಮಹತ್ವದ ಸಿದ್ಧಾಂತವಾಗಿದೆ.
ಈ ಸಿದ್ಧಾಂತಕ್ಕನುಸಾರ ಧರ್ಮಾಚರಣೆಯ ಪದ್ಧತಿಗಳೂ ಬೇರೆಬೇರೆಯಾಗಿರುತ್ತವೆ. ಪದ್ಧತಿಗಳು ಬೇರೆಬೇರೆಯಾಗಿದ್ದರೂ ಅವುಗಳ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಬೇರೆಬೇರೆ ಪದ್ಧತಿಗಳಿಂದ ಈಶ್ವರೀತತ್ತ್ವದ ಲಾಭವು ಮಾತ್ರ ಖಂಡಿತವಾಗಿಯೂ ಸಿಗುತ್ತದೆ. ನಮ್ಮ ಪ್ರಕೃತಿಗೆ ಯಾವ ಪದ್ಧತಿಯು ಅನುಕೂಲವಾಗಿದೆಯೋ ಅದನ್ನು ಅವಲಂಬಿಸಿದರೆ ಹೆಚ್ಚಿನ ಲಾಭವಾಗುತ್ತದೆ. ಹುಟ್ಟುಹಬ್ಬವನ್ನು ಆಚರಿಸುವ ಎರಡು ಪದ್ಧತಿಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಪದ್ಧತಿ ೧

ಅ. ಮೊದಲನೆಯ ವರ್ಷ ಪ್ರತಿ ತಿಂಗಳು ಹಾಗೂ ಅನಂತರ ಪ್ರತಿವರ್ಷ ಜನ್ಮದಿನದ ತಿಥಿಯಂದು ಹುಟ್ಟುಹಬ್ಬವನ್ನು ಆಚರಿಸುವಾಗ ಮೊದಲು ಅಭ್ಯಂಗಸ್ನಾನವನ್ನು ಮಾಡಿಸಿ ಕುಂಕುಮ ತಿಲಕವನ್ನು ಹಚ್ಚಬೇಕು.

ಆ. ‘ಆಯುರಭಿವೃದ್ಧ್ಯರ್ಥಂ ವರ್ಷ (ಅಥವಾ ಮಾಸ) ವೃದ್ಧಿಕರ್ಮ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ಒಂದು ಮಣೆಯ ಮೇಲೆ ಅಥವಾ ಚೌರಂಗದ ಮೇಲೆ ಕುಲದೇವತೆ, ಜನ್ಮನಕ್ಷತ್ರ, ತಾಯಿ-ತಂದೆ, ಪ್ರಜಾಪತಿ, ಸೂರ್ಯ, ಗಣೇಶ, ಮಾರ್ಕಂಡೇಯ, ವ್ಯಾಸ, ಪರಶುರಾಮ, ರಾಮ, ಅಶ್ವತ್ಥಾಮ, ಕೃಪಾಚಾರ್ಯ, ಬಲಿ, ಪ್ರಹ್ಲಾದ, ಹನುಮಂತ, ವಿಭೀಷಣ ಮತ್ತು ಷಷ್ಠಿದೇವತೆಗಳ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಒಂದು ಮುಷ್ಠಿಯಷ್ಟು ಅಕ್ಕಿಯನ್ನು ಇಟ್ಟು ಹದಿನೇಳು ರಾಶಿಗಳನ್ನು ಮಾಡಬೇಕು. ಆಮೇಲೆ ಆಯಾಯ ದೇವತೆಗಳನ್ನು ಆವಾಹನೆ ಮಾಡಿ ಅವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಷಷ್ಠಿದೇವತೆಗೆ ಮೊಸರನ್ನದ ನೈವೇದ್ಯವನ್ನು ತೋರಿಸಬೇಕು. ಅನಂತರ ಆ ಅನ್ನವನ್ನು ಆಕಳಿಗೆ ಅಥವಾ ಇತರ ಯಾವುದಾದರೂ ಪ್ರಾಣಿಗೆ ನೀಡಬೇಕು. ಇತರ ದೇವತೆಗಳಿಗೆ ಪೇಡಾ ಅಥವಾ ಕಲ್ಲುಸಕ್ಕರೆಯ ನೈವೇದ್ಯ ತೋರಿಸಿ ಆ ನೈವೇದ್ಯವನ್ನು ಪ್ರಸಾದವೆಂದು ಹಂಚಬೇಕು.

ಇ. ಹುಟ್ಟುಹಬ್ಬವನ್ನು ಆಚರಿಸುವವನು ಪ್ರಾರ್ಥನೆ ಮಾಡಿ ಮುಷ್ಠಿಯಷ್ಟು ಎಳ್ಳು, ಬೆಲ್ಲದ ಒಂದು ತುಂಡು ಹಾಗೂ ಅರ್ಧಲೋಟ ಹಾಲನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಸ್ವೀಕರಿಸಬೇಕು.

ಈ. ಬಂಧುಬಳಗ ಮತ್ತು ಮಿತ್ರರಿಗೆ ಭೋಜನವನ್ನು ನೀಡಬೇಕು. ಅದರೊಂದಿಗೆ ಹೆಚ್ಚೆಚ್ಚು ದಾನಧರ್ಮ ಮತ್ತು ಅನ್ನದಾನವನ್ನು ಮಾಡಬೇಕು.

ಉ. ಪ್ರತಿಗ್ರಹ ಅಂದರೆ ಇತರರಿಂದ ಹಣ ಅಥವಾ ಉಡುಗೊರೆಯನ್ನು ಸ್ವೀಕರಿಸಬಾರದು.

ಪದ್ಧತಿ ೨

ಅ. ಅಭ್ಯಂಗಸ್ನಾನ ಮಾಡುವುದು: ಹುಟ್ಟುಹಬ್ಬದ ದಿನ ಸಚೈಲ ಅಂದರೆ ವಸ್ತ್ರಸಹಿತ ಅಭ್ಯಂಗಸ್ನಾನವನ್ನು ಮಾಡಬೇಕು. (ಹುಟ್ಟುಹಬ್ಬದ ದಿನ ಅಭ್ಯಂಗಸ್ನಾನವನ್ನು ಮಾಡುವುದು ಎಂದರೆ ಸ್ನಾನದ ಮಾಧ್ಯಮದಿಂದ ಭೂತಕಾಲವನ್ನು ಮರೆತು ಸತತವಾಗಿ ವರ್ತಮಾನಕಾಲದಲ್ಲಿ ಇರಲು ಈಶ್ವರನಲ್ಲಿ ಪ್ರಾರ್ಥನೆ ಮಾಡುವುದು) ಸ್ನಾನವನ್ನು ಮಾಡುವಾಗ ‘ನಿರ್ಮಲ ಮತ್ತು ಶುದ್ಧಗಂಗೆಯ ರೂಪದಲ್ಲಿ ಸ್ನಾನದ ನೀರು ನನ್ನ ಶರೀರದ ಮೇಲೆ ಬಿದ್ದು ನನ್ನ ದೇಹವನ್ನು ಮತ್ತು ಅಂತಃಕರಣವನ್ನು ಶುದ್ಧ ಮಾಡುತ್ತಿದೆ’ ಎಂಬ ಭಾವವನ್ನು ಇಟ್ಟುಕೊಳ್ಳಬೇಕು.

ಆ. ಸ್ನಾನದ ನಂತರ ಹೊಸ ಉಡುಪುಗಳನ್ನು ಧರಿಸಬೇಕು.

ಇ. ತಂದೆ-ತಾಯಿ ಹಾಗೂ ಹಿರಿಯರಿಗೆ ನಮಸ್ಕಾರ ಮಾಡಬೇಕು.

ಈ. ಕುಲದೇವರಿಗೆ ಅಭಿಷೇಕವನ್ನು ಮಾಡಬೇಕು ಅಥವಾ ಮನಃಪೂರ್ವಕವಾಗಿ ಅವರ ಪೂಜೆಯನ್ನು ಮಾಡಬೇಕು.

ಉ. ಆರತಿಯನ್ನು ಬೆಳಗುವುದು: ಯಾರ ಹುಟ್ಟುಹಬ್ಬವಿರುತ್ತದೆಯೋ ಅವರಿಗೆ ಆರತಿಯನ್ನು ಬೆಳಗಬೇಕು. ಆರತಿ ಬೆಳಗಿಸಿಕೊಳ್ಳುವವರು ಹಾಗೂ ಆರತಿ ಮಾಡುವವರು ಇಬ್ಬರೂ ‘ಪರಸ್ಪರರ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನೇ ಆರತಿಯನ್ನು ಮಾಡುತ್ತಿದ್ದಾನೆ ಮತ್ತು ಅವನು ನಮಗೆ ಆಶೀರ್ವಾದವನ್ನು ನೀಡುತ್ತಿದ್ದಾನೆ’ ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಆರತಿಯನ್ನು ಬೆಳಗಿದ ನಂತರ ಕುಲದೇವತೆ ಅಥವಾ ಉಪಾಸ್ಯದೇವತೆಯನ್ನು  ಸ್ಮರಿಸಿ ಹುಟ್ಟುಹಬ್ಬವಿರುವವರ ತಲೆಯ ಮೇಲೆ ಮೂರು ಬಾರಿ ಅಕ್ಷತೆಯನ್ನು ಹಾಕಬೇಕು.
(ಆರತಿಯನ್ನು ಬೆಳಗುವ ಪದ್ಧತಿ ಮತ್ತು ಶಾಸ್ತ್ರದ ಬಗೆಗಿನ ಮಾಹಿತಿಯನ್ನು ಗ್ರಂಥದಲ್ಲಿ ಕೊಡಲಾಗಿದೆ.)

ಊ. ಯಾರ ಹುಟ್ಟುಹಬ್ಬ ಇರುತ್ತದೆಯೋ ಅವರಿಗೆ ಏನಾದರೂ ಉಡುಗೊರೆಯನ್ನು ಕೊಡಬೇಕು. ಉಡುಗೊರೆಯನ್ನು ಕೊಡುವಾಗ ಮುಂದಿನ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು. ಚಿಕ್ಕಮಕ್ಕಳಿಗೆ ಕರ್ತವ್ಯಬುದ್ಧಿಯಿಂದ ಅವರನ್ನು ಪ್ರಶಂಸೆ ಮಾಡಲು ಉಡುಗೊರೆಗಳನ್ನು ಕೊಡಬೇಕು. ಹಿರಿಯರಿಗೆ ಉಡುಗೊರೆಯನ್ನು ಕೊಡುವಾಗ ಕರ್ತೃತ್ವವನ್ನು ಇಟ್ಟುಕೊಳ್ಳಬಾರದು. ಅಪೇಕ್ಷೆಯನ್ನು ಇಟ್ಟುಕೊಳ್ಳದೇ ಯಾರಿಗಾದರೂ ದಾನ ಮಾಡಿದರೆ ಸ್ವಲ್ಪ ಸಮಯದ ನಂತರ ನಾವು ಆ ದಾನವನ್ನು ಮರೆಯುತ್ತೇವೆ. ಹುಟ್ಟುಹಬ್ಬದ ದಿನದಂದು ಸಹ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ದಾನವನ್ನು ಕೊಡಬೇಕು. ದಾನದಲ್ಲಿ ಕರ್ತೃತ್ವ ಅಥವಾ ಅಪೇಕ್ಷೆಯನ್ನು ಇಟ್ಟುಕೊಂಡರೆ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ನಿರ್ಮಾಣವಾಗುತ್ತದೆ. ದಾನ ಅಥವಾ ಉಡುಗೊರೆಯನ್ನು ಸ್ವೀಕರಿಸುವವನು ‘ಇದು ಈಶ್ವರನ ಕೃಪೆಯಿಂದ ಸಿಕ್ಕಿದ ಪ್ರಸಾದವೇ ಆಗಿದೆ’ ಎಂಬ ಭಾವವನ್ನು ಇಟ್ಟುಕೊಂಡರೆ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ನಿರ್ಮಾಣವಾಗುವುದಿಲ್ಲ.

ಎ.ಹುಟ್ಟುಹಬ್ಬದ ದಿನ ನಾವು ಯಾವ ಬಟ್ಟೆಗಳನ್ನು ಉಟ್ಟುಕೊಂಡು ಸ್ನಾನವನ್ನು ಮಾಡುತ್ತೇವೆಯೋ ಆ ಬಟ್ಟೆಗಳನ್ನು ಸ್ವತಃ ಉಪಯೋಗಿಸದೇ ಮತ್ತು ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ಯಾರಿಗಾದರೂ ದಾನವನ್ನು ಮಾಡಬೇಕು. ದಾನವು ಯಾವಾಗಲೂ ‘ಸತ್ಪಾತ್ರೇ ದಾನ’ವಾಗಿರಬೇಕು. ಆದುದರಿಂದ ಬಟ್ಟೆಗಳನ್ನು ಭಿಕ್ಷುಕರಿಗೆ ಅಥವಾ ಇತರರಿಗೆ ಕೊಡುವುದಕ್ಕಿಂತ ದೇವರ ಉಪಾಸನೆಯನ್ನು ಮಾಡುವವರಿಗೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡುವವರಿಗೆ ಕೊಡಬೇಕು. ಇದರಿಂದ ಪುಣ್ಯ ಪ್ರಾಪ್ತವಾಗುತ್ತದೆ.

ಹುಟ್ಟುಹಬ್ಬದ ದಿನ ಕೆಲವೊಂದು ಕೃತಿಗಳನ್ನು ಮಾಡಬಾರದೆಂದು ಹೇಳುತ್ತಾರೆ ಅವುಗಳ ಹಿಂದಿನ ಶಾಸ್ತ್ರವೇನು?

೧. ಶಾಸ್ತ್ರಕ್ಕನುಸಾರ ಕೆಲವು ನಿಷಿದ್ಧ ಕೃತಿಗಳು: ಹುಟ್ಟುಹಬ್ಬದ ದಿನ ಉಗುರು ಮತ್ತು ಕೂದಲುಗಳನ್ನು ಕತ್ತರಿಸುವುದು, ವಾಹನದಲ್ಲಿ ಪ್ರವಾಸ ಮಾಡುವುದು, ಕಲಹ, ಹಿಂಸೆ ಮಾಡುವುದು, ಅಭಕ್ಷ್ಯಭಕ್ಷಣ (ನಿಶಿದ್ಧ ಆಹಾರವನ್ನು ಸೇವಿಸುವುದು), ಅಪೇಯಪಾನ, ಸ್ತ್ರೀಸಂಪರ್ಕ (ಸ್ತ್ರೀಯೊಂದಿಗೆ ಶಾರೀರಿಕ ಸಂಬಂಧ) ಮುಂತಾದವುಗಳನ್ನು ಮಾಡಬಾರದು.

೨. ಹುಟ್ಟುಹಬ್ಬದ ದಿನ ಬೆಳಗಿಸಿದ ದೀಪವನ್ನು ಆರಿಸಬಾರದು: ದೀಪದ ಜ್ಯೋತಿಯ ತುಲನೆಯನ್ನು ಜೀವದ ಶರೀರದಲ್ಲಿನ ಪಂಚಪ್ರಾಣಗಳ ಇಂಧನದಿಂದ ನಡೆಯುವ ಸ್ಥೂಲ ಕಾರ್ಯದೊಂದಿಗೆ ಮಾಡಲಾಗಿದೆ. ದೀಪ ಆರುವುದು ಎಂದರೆ ಜೀವದ ಶರೀರದಲ್ಲಿನ ಪಂಚಪ್ರಾಣಗಳ ಕಾರ್ಯವು ಮುಗಿದು ಜೀವದ ಪ್ರಾಣಶಕ್ತಿಯು ನಾಶವಾಗುವುದು ಮತ್ತು ಅದರ ಜೀವನ ಜ್ಯೋತಿಯು ನಂದಿ ಹೋಗುವುದರ ಪ್ರತೀಕವಾಗಿದೆ. ಬೆಳಗಿಸಿದ ದೀಪವನ್ನು ಆರಿಸುವುದು ಆಕಸ್ಮಿಕ ಮೃತ್ಯುವಿಗೆ, ಅಂದರೆ ಅಪಮೃತ್ಯುವಿಗೆ ಸಂಬಂಧಿಸಿರುವುದರಿಂದ ಅದನ್ನು ಅಶುಭವೆಂದು ತಿಳಿದುಕೊಳ್ಳಲಾಗುತ್ತದೆ. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ ೨೧.೧.೨೦೦೫, ರಾತ್ರಿ ೯.೧೧) ಮತ್ತು ಈಶ್ವರ (ಕು.ಮಧುರಾ ಭೋಸಲೆ ಇವರ ಮಾಧ್ಯಮದಿಂದ, ೮.೫.೨೦೦೫, ರಾತ್ರಿ ೧೦.೨೧)

(ಮೇಲಿನ ಎಲ್ಲ ಕೃತಿಗಳ ಹಿಂದಿನ ವಿವರವಾದ ಶಾಸ್ತ್ರ ಮತ್ತು ತಿಥಿಗನುಸಾರ ಹುಟ್ಟುಹಬ್ಬವನ್ನು ಆಚರಿಸುವಾಗ ಬಂದ ಅನುಭೂತಿಗಳನ್ನು ಗ್ರಂಥದಲ್ಲಿ ಕೊಡಲಾಗಿದೆ.)

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ’)

ನಿಮ್ಮ ಜನ್ಮತಿಥಿ ತಿಳಿಯಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.

ಸಂಬಂಧಿತ ವಿಷಯ
ಹುಟ್ಟುಹಬ್ಬವನ್ನು ತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ
Dharma Granth

No comments:

Post a Comment

Note: only a member of this blog may post a comment.