ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ಅ. ‘ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು’.
೧. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು.
೨. ಕೈಗಳ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು.
೩. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರ ಇಡಬೇಕು.
೪. ಪ್ರಾಥಮಿಕ ಸ್ತರದಲ್ಲಿನ ಸಾಧಕರು ಮತ್ತು ಸರ್ವಸಾಮಾನ್ಯ ಜನರು ನಮಸ್ಕಾರ ಮಾಡುವಾಗ ಅಂಗೈಗಳನ್ನು ಒಂದಕ್ಕೊಂದು ತಾಗಿಸಿ ಹಿಡಿಯಬೇಕು. ಅಂಗೈಗಳ ನಡುವೆ ಟೊಳ್ಳನ್ನು ಬಿಡಬಾರದು. ಸಾಧನೆಯನ್ನು ಆರಂಭಿಸಿ ಐದಾರು ವರ್ಷಗಳಾಗಿರುವ ಮುಂದಿನ ಸ್ತರದಲ್ಲಿನ ಸಾಧಕರು ನಮಸ್ಕಾರ ಮಾಡುವಾಗ ಅಂಗೈಗಳ ನಡುವೆ ಟೊಳ್ಳನ್ನು ಬಿಡಬೇಕು.

ಆ. ಕೈಗಳನ್ನು ಜೋಡಿಸಿದ ನಂತರ ಸ್ವಲ್ಪ ಕೆಳಗೆ ಬಾಗಬೇಕು.

ಇ. ಅದೇ ಸಮಯಕ್ಕೆ ತಲೆಯನ್ನೂ ಸ್ವಲ್ಪ ಕೆಳಗೆ ಬಾಗಿಸಿ ಎರಡೂ ಕೈಗಳ ಹೆಬ್ಬೆರಳುಗಳನ್ನು ಭ್ರೂಮಧ್ಯದಲ್ಲಿ, ಅಂದರೆ ಕಣ್ಣಿನ ಎರಡೂ ಹುಬ್ಬುಗಳ ಮಧ್ಯಭಾಗದಲ್ಲಿಟ್ಟು ಮನಸ್ಸನ್ನು ದೇವರ ಚರಣಗಳಲ್ಲಿ ಏಕಾಗ್ರಗೊಳಿಸಲು ಪ್ರಯತ್ನಿಸಬೇಕು. (ಆಕೃತಿ ‘ಅ’ ನೋಡಿ.)

ಈ. ಆಮೇಲೆ ಜೋಡಿಸಿದ ಕೈಗಳನ್ನು ಒಮ್ಮೆಲೇ ಕೆಳಗೆ ತರದೇ ಜೋಡಿಸಿದ ಕೈಗಳ ಹೆಬ್ಬೆರಳುಗಳನ್ನು ಎದೆಯ ಮಧ್ಯಭಾಗಕ್ಕೆ ತಾಗುವಂತೆ ಸ್ವಲ್ಪ ಸಮಯ ಇಟ್ಟು ನಂತರ ಕೆಳಗೆ ತರಬೇಕು. (ಆಕೃತಿ ‘ಆ’ ನೋಡಿ.)


ಮೇಲಿನಂತೆ ನಮಸ್ಕಾರ ಮಾಡುವುದರಿಂದ ಸೂಕ್ಷ್ಮದಲ್ಲಾಗುವ ಪರಿಣಾಮ ಮತ್ತು ಅದರ ಶಾಸ್ತ್ರ :

ಕೈಗಳನ್ನು ಜೋಡಿಸಿದ ನಂತರ ಸ್ವಲ್ಪ ಮುಂದಕ್ಕೆ ಬಾಗಬೇಕು. ಇದರಿಂದ ನಿರ್ಮಾಣವಾಗುವ ಮುದ್ರೆಯಿಂದ ನಾಭಿಚಕ್ರದ ಮೇಲೆ ಒತ್ತಡವುಂಟಾಗಿ ನಾಭಿಯಲ್ಲಿರುವ ಪಂಚಪ್ರಾಣಗಳು ಕಾರ್ಯ ನಿರತವಾಗುತ್ತವೆ. ಪಂಚಪ್ರಾಣಗಳು ಶರೀರದಲ್ಲಿ ಚಲಿಸುವುದರಿಂದ, ಶರೀರವು ಸಾತ್ತ್ವಿಕ ಲಹರಿಗಳನ್ನು ಗ್ರಹಿಸಲು ಸಂವೇದನಾಶೀಲವಾಗುತ್ತದೆ. ಶರೀರದಲ್ಲಿ ಪಂಚಪ್ರಾಣಗಳ ಪ್ರವಾಹದಿಂದ ಜೀವದ ಆತ್ಮಶಕ್ತಿಯು ಜಾಗೃತವಾಗುತ್ತದೆ. ಈ ಇಂಧನದ ಬಲದಿಂದ ಜೀವದ ಭಾವವು ಜಾಗೃತವಾಗಿ ಅದಕ್ಕೆ ದೇವತೆಗಳಿಂದ ಬರುವ ಚೈತನ್ಯವನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.

ಕೈಗಳ ಹೆಬ್ಬೆರಳುಗಳಿಂದ ಭ್ರೂಮಧ್ಯವನ್ನು ಸ್ಪರ್ಷಿಸಬೇಕು. ಈ ಮುದ್ರೆಯಿಂದ ಜೀವದಲ್ಲಿನ ಶರಣಾಗತಿಯ ಭಾವವು ಜಾಗೃತ ವಾಗುವುದರಿಂದ ಬ್ರಹ್ಮಾಂಡದಲ್ಲಿನ ಆವಶ್ಯಕವಿರುವ ದೇವತೆಯ ಸೂಕ್ಷ್ಮತರ ಲಹರಿಗಳು ಕಾರ್ಯನಿರತವಾಗುತ್ತವೆ ಹಾಗೂ ಅವು ಜೀವದ ಆಜ್ಞಾಚಕ್ರದಿಂದ ಒಳಗೆ ಹೋಗಿ, ಆಜ್ಞಾಚಕ್ರಕ್ಕೆ ಸಮಾಂತರವಾಗಿರುವ ತಲೆಯ ಹಿಂದಿನ ಟೊಳ್ಳಿನಲ್ಲಿ ಸ್ಥಿರವಾಗುತ್ತವೆ. ಈ ಟೊಳ್ಳಿನಲ್ಲಿ ಚಂದ್ರ, ಸುಷುಮ್ನಾ ಮತ್ತು ಸೂರ್ಯನಾಡಿಯ ದ್ವಾರಗಳು ಒಂದೆಡೆ ಸೇರಿರುತ್ತವೆ. ಈ ಟೊಳ್ಳಿನಲ್ಲಿ ಸ್ಥಿರವಾಗಿರುವ ಸೂಕ್ಷ್ಮತರ ಲಹರಿಗಳ ಚಲನವಲನದಿಂದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಈ ಸೂಕ್ಷ್ಮತರ ಲಹರಿಗಳು ಸಂಪೂರ್ಣ ಶರೀರದಲ್ಲಿ ವೇಗವಾಗಿ ಹರಡಲು ಸಹಾಯವಾಗುವುದರಿಂದ ಒಂದೇ ಸಮಯದಲ್ಲಿ ಸ್ಥೂಲದೇಹ ಮತ್ತು ಸೂಕ್ಷ್ಮ ದೇಹಗಳ ಶುದ್ಧಿಯಾಗಲು ಸಹಾಯವಾಗುತ್ತದೆ.

ನಮಸ್ಕಾರ ಮಾಡುವುದರಿಂದ ಕೈಗಳಲ್ಲಿ ಗ್ರಹಿಸಲ್ಪಟ್ಟ ದೇವತೆಗಳ ಚೈತನ್ಯವು ಅಥವಾ ಶಕ್ತಿಯು ಶರೀರದಲ್ಲಿ ಸಂಪೂರ್ಣ  ಹರಡಬೇಕೆಂದು, ನಮಸ್ಕಾರ ಮಾಡಿದ ನಂತರ ಜೋಡಿಸಿದ ಕೈಗಳನ್ನು ನೇರವಾಗಿ ಕೆಳಗೆ ತರದೇ, ಎದೆಯ ಮಧ್ಯಭಾಗದಲ್ಲಿ ಮಣಿಕಟ್ಟುಗಳು ಎದೆಗೆ ತಾಗುವಂತೆ ಇಡಬೇಕು. ಈ ಸ್ಥಳದಲ್ಲಿ ಅನಾಹತಚಕ್ರವಿರುತ್ತದೆ ಹಾಗೂ ಆಜ್ಞಾಚಕ್ರದಂತೆ ಅನಾಹತಚಕ್ರದ ಕಾರ್ಯವೂ ಸಾತ್ತ್ವಿಕತೆಯನ್ನು ಗ್ರಹಿಸುವುದಾಗಿರುತ್ತದೆ. ಮಣಿಕಟ್ಟುಗಳನ್ನು ಎದೆಗೆ ತಾಗಿಸುವುದರಿಂದ ಅನಾಹತಚಕ್ರವು ಜಾಗೃತವಾಗಿ ಸಾತ್ತ್ವಿಕತೆಯನ್ನು ಗ್ರಹಿಸಲು ಸಹಾಯವಾಗುತ್ತದೆ.

(ಆಧಾರ: ಸನಾತನ ಸಂಸ್ಥೆಯ ಕಿರುಗ್ರಂಥ ‘ನಮಸ್ಕಾರಗಳ ಯೋಗ್ಯ ಪದ್ಧತಿ’)

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

2 comments:

Note: only a member of this blog may post a comment.