ನಾವು ಜೀವದ ಸುತ್ತ ಹೊದ್ದಿರುವ ನಮ್ಮ ದೇಹ ಎಂಬ ಚಾದರ ಸಾವಿನ ನಂತರ ನಮ್ಮದಾಗಿ ಉಳಿಯುವುದಿಲ್ಲ. ಹಾಗಾಗಿಯೇ ಸಾವು ನಮಗೆ ಅನಿವಾರ್ಯವಾದರೂ ಅಪ್ರಿಯ. ಪುರಾಣಗಳಲ್ಲಿ ಬರುವ ಕೆಲವು ಘಟನೆಗಳು ಈ ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತವೆ.
ಬಲರಾಮ, ಕೃಷ್ಣರ ಗುರು ಸಾಂದೀಪನಿ ಮುನಿಗಳು. ಶಿಷ್ಯರ ಶಿಕ್ಷಣ ಮುಗಿದಾಗ ಗುರುದಕ್ಷಿಣೆಯಾಗಿ ಪ್ರಭಾಸ ಕ್ಷೇತ್ರದಲ್ಲಿ ಮುಳುಗಿ ಕಳೆದು ಹೋದ ತನ್ನ ಮಗನನ್ನು ಬಯಸಿದರು. ಸಮುದ್ರ ತೀರಕ್ಕೆ ಬಂದು ಅವನಿಗಾಗಿ ಅರಸಿದ ಕೃಷ್ಣ, ಸಮುದ್ರದೇವನ ಹೇಳಿಕೆಯಂತೆ ಸಮುದ್ರದಾಳದಲ್ಲಿ ಶಂಖರೂಪಿಯಾಗಿ ಅಡಗಿದ್ದ ‘ಪಂಚಜನ’ ಎಂಬ ರಕ್ಕಸನನ್ನು ಕೊಂದು ಅವನ ಹೊಟ್ಟೆಯಲ್ಲಿ ಸಿಕ್ಕಿದ ಅಮೂಲ್ಯ ಶಂಖಕ್ಕೆ ‘ಪಾಂಚಜನ್ಯ’ ಎಂದು ಹೆಸರಿಟ್ಟು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ಅವನ ಆಹಾರವಾಗಿ ಸಿಕ್ಕಿ ಈಗಾಗಲೇ ಮೃತ್ಯುಲೋಕಕ್ಕೆ ಸೇರಿರುವ ಗುರುಪುತ್ರನನ್ನು ಅರಸುತ್ತಾ ಯಮನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಯಮಧರ್ಮನನ್ನು ಭೇಟಿಯಾಗಿ, ಗುರುಪುತ್ರನನ್ನು ಮರಳಿ ಭೂಲೋಕಕ್ಕೆ ಒಯ್ಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಅದಕ್ಕೆ ಯಮನು ‘ಒಮ್ಮೆ ಸತ್ತವರನ್ನು ಮರಳಿ ಪಡೆಯುವುದುಂಟೇ? ಲೋಕನಾಥನಾದ ನೀನೇ ಈ ನಿಯಮವನ್ನು ಮೀರಬಹುದೇ?’ ಎಂದು ಪ್ರಶ್ನಿಸುತ್ತಾನೆ.
ಉತ್ತರವಾಗಿ ಕೃಷ್ಣನು ‘ಜೀವನದ ಬಗ್ಗೆ, ಜೀವಿಗಳ ಸಾರ್ಥಕತೆಯ ಬಗ್ಗೆ ಇನ್ನೊಬ್ಬರಿಗೆ ತಿಳಿಹೇಳುವ ನನ್ನ ಗುರುವು ಈಗ ತನಗೆ ತಾನೇ ಮಗನ ಮೇಲಿನ ಮೋಹಪಾಶದಲ್ಲಿ ಬಂಧಿಯಾಗಿದ್ದಾನೆ. ಅವನ ಕಣ್ಣುಗಳನ್ನು ತೆರೆಯಿಸಲು ಬೇರೆ ದಾರಿ ಇಲ್ಲ. ಆದ್ದರಿಂದ ಆತ್ಮರೂಪಿ ಗುರುಪುತ್ರನನ್ನು ನನ್ನೊಂದಿಗೆ ಕಳುಹಿಸು’ ಎಂದು ಕೇಳಿದಾಗ ಯಮನು ಒಪ್ಪಿ ಕಳುಹಿಸುತ್ತಾನೆ.
ಕೃಷ್ಣನು, ತಮ್ಮ ಪುತ್ರನನ್ನು ಕರೆತಂದದ್ದನ್ನು ನೋಡಿ ಸಾಂದೀಪನಿ ಮಹರ್ಷಿ ಮತ್ತು ಅವರ ಮಡದಿ ಬೆರಗಾಗುತ್ತಾರೆ. ತನ್ನ ಪುತ್ರನನ್ನು ‘ಮಗನೇ’ ಎಂದು ಬರಸೆಳೆಯಲು ತಾಯಿ ಮುಂದಾಗುತ್ತಾಳೆ. ಆದರೆ ಆತ್ಮರೂಪಿ ಗುರುಪುತ್ರನು ಇವರನ್ನು ಅಪರಿಚಿತರಂತೆ ಕಾಣುತ್ತಾನೆ. ಆಗ ಕೃಷ್ಣನು ಅವರನ್ನು ಪರಿಚಯಿಸುತ್ತಾ ‘ಇವರೇ ನಿನ್ನ ತಂದೆ, ತಾಯಿ’ ಎನ್ನುತ್ತಾನೆ. ಅದಕ್ಕುತ್ತರವಾಗಿ ಆ ಆತ್ಮವು ದಂಪತಿಗಳಿಗೆ ಕೈ ಮುಗಿದು ‘ನೀವು ನನ್ನ ಯಾವ ಜನ್ಮದ ತಂದೆ ತಾಯಿಗಳೆಂದು ನನಗೆ ತಿಳಿದಿಲ್ಲ. ಯಾಕೆಂದರೆ ‘ನಾನು’ ಎನ್ನುವುದು ಏನೆಂದು ನನಗೆ ಗೊತ್ತಿಲ್ಲ, ಕ್ಷಮಿಸಿ’ ಎಂದಿತು.
ಇದನ್ನು ಕೇಳಿದ ಗುರು ‘ಸಾವಿನ ನಂತರ ಏನೆಂಬುದು ಸತ್ತವರಿಗೂ ಗೊತ್ತಿಲ್ಲ. ಇದ್ದವರಿಗೂ ಗೊತ್ತಿಲ್ಲ. ಇನ್ನು ಮಗನ ವ್ಯಾಮೋಹದಲ್ಲಿ ಇದ್ದೂ ಸತ್ತಂತೆ ಬದುಕುವ ನಮಗೆ ಹೇಗೆ ಅರಿವಿಗೆ ಬಂದೀತು? ಇಲ್ಲಿಯವರೆಗೆ ಯಾವ ದೇಹವನ್ನು ಮನದಲ್ಲಿ ಇಟ್ಟುಕೊಂಡು ಮಗನೆಂದು ಗುರುತಿಸುತ್ತಿದ್ದೆವೋ ಆ ದೇಹ ಅಳಿದ ಮೇಲೆ ಆತ್ಮಕ್ಕೆ ನಮ್ಮ ಜೊತೆ ಸಂಬಂಧ ಇಲ್ಲ ಎಂಬ ಸತ್ಯವನ್ನು ನೀನು ನಮಗೆ ಪರಿಚಯಿಸಿದೆ. ಈ ಅರಿವೇ ನೀನು ನಮಗಿತ್ತ ಗುರುದಕ್ಷಿಣೆ’ ಎಂದು ಹೇಳಿದರು.
- ಅನಿತಾ ನರೇಶ ಮಂಚಿ, ೨೮.೩.೨೦೧೨ರ ಹೊಸದಿಗಂತ
nice
ReplyDelete