ತುಳಸಿಯ ಮಹತ್ವ


ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸಿಯ ಸೃಷ್ಟಿ : ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದುದು. ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿಸಾಟಿಯಾಗದಿದ್ದುದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.

ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು : ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆಯಾಗುವುದೆಂದು ಹೇಳಲಾಗಿದೆ.

ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಉರಿಸಿಡಬೇಕು? ಏಕೆ?

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||

ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ:
ಯನ್ಮೂಲೇ ಸರ್ವ ತೀರ್ಥಾನಿ
ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ
ತುಲಸಿ ತ್ವಾಂ ನಮಾಮ್ಯಹಮ್||

ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನಿರಿಸುವುದರಿಂದ ಅವುಗಳು ಮನೆಮಂದಿಗೂ ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವವು ತಿಳಿಯುತ್ತದೆ. ಹೀಗಾಗಿ ಆಸ್ತಿಕ ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.

ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ?

ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖಮಾಡಿ ನಿಲ್ಲಬೇಕು. ಮುಖ್ಯದ್ವಾರದಿಂದ ಬಲಗಡೆಗೆ ಅರ್ಧಕೋಲು (ಇನ್ನು ಮುಂದೆ ಒಂದು ಕೋಲು ಅಂದರೆ ೨೮ ಇಂಚು ಎಂದು ತಿಳಿಯಬೇಕು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್‌ನ ಗೋಡೆಗೆ ಒಂದು ಗುರುತು ಮಾಡಿರಿ. ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿಕಟ್ಟೆಯಿರುವುದು. ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಯಾ ಉತ್ತರಾಭಿಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದೆದುರು ನಿಂತು ಎಡಗಡೆಗೆ ಅರ್ಧಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಯಾ ಉತ್ತರಾಭಿಮುಖವಾಗಿ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯುವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ನಿಮ್ಮ ಮನೆಯ ದಿಕ್ಕು ಸ್ವಲ್ಪ ತಿರುಗಿ ಇದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಜನ ಸಾಮಾನ್ಯರು ತುಳಸಿಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸಬಹುದಾದ ಸುಲಭ ವಿಧಾನವಾಗಿದೆ.

ತುಳಸಿಕಟ್ಟೆಯ ಉದ್ದಗಲ ಅಳತೆಗಳು ಹೀಗಿದ್ದರೆ ಚೆನ್ನ

ಸಾಮಾನ್ಯವಾಗಿ ತುಳಸಿಕಟ್ಟೆಯ ಉದ್ದ, ಅಗಲ, ಎತ್ತರಗಳು ತಲಾ ೧೯ ಅಂಗುಲ (೧೯) ಆಗಿದ್ದರೆ ಉತ್ತಮ. ತುಳಸಿಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರವಾಗಿರಬಹುದು. ಅದಕ್ಕಿಂತ ಹೆಚ್ಚು ಎತ್ತರವು ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.

ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?

ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.

ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?

ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.

ಕೊನೆಯ ಮಾತು

ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. ಆಸಕ್ತರು ಬೇರೆ ಬೇರೆ ಗ್ರಂಥಗಳನ್ನೋದಿ ಅವುಗಳನ್ನು ಅರಿತುಕೊಳ್ಳಬಹುದು ಇದು ಮುಂಬರುವ ಉತ್ಥಾನ ದ್ವಾದಶಿಯ ಸಾಂದರ್ಭಿಕ ಕಿರುಲೇಖನ ಮಾತ್ರ. ಮುಂಬರುವ ಉತ್ಥಾನ ದ್ವಾದಶಿಯಂದು (ನವೆಂಬರ ೧೪, ೨೦೧೩) ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.

ಸಂಗ್ರಹ: ಶ್ರೀ. ಬಿ. ರಾಮ ಭಟ್, ನಿವೃತ್ತ ಉಪತಹಸೀಲ್ದಾರರು ಮತ್ತು ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ ದ.ಕ. ದೂ. : ೯೪೮೧೭೫೬೦೨೮

ಗ್ರಂಥ ಋಣ :
ಕನ್ನಡ ಕುಲಭೂಷಣ-ವಿದ್ಯಾಭೂಷಣ, ದಾಸಸಾಹಿತ್ಯ ಪ್ರದೀಪ, ಸಾಹಿತ್ಯ ಚಿಂತಾಮಣಿ
ಆದ್ಯ ರಾಮಾಚಾರ್ಯ ವಿರಚಿತ ಗ್ರಂಥ ಶುಭಂ ಭವತು ಮತ್ತು ಸನಾತನ ಸಂಸ್ಥೆಯ ಪ್ರಕಟಣೆಗಳು ಹಾಗೂ ಸನಾತನ ಪ್ರಭಾತ ಕನ್ನಡ ಸಾಪ್ತಾಹಿಕ ಪತ್ರಿಕೆ

ಸಂಬಂಧಿತ ವಿಷಯಗಳು
ತುಳಸಿ ವಿವಾಹ
ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು?
Dharma Granth

2 comments:

  1. एतादृशानि लेखनाने अत्यावश्यकानि सर्वेभ्यः ।

    ReplyDelete
  2. Hindu dharmadalli nambike elladavaru view maadabaaradu.

    ReplyDelete

Note: only a member of this blog may post a comment.