‘ನೀವು ನನ್ನನ್ನು ಗುರು ಎಂದು ಪರಿಗಣಿಸಿದ ನಂತರ ನೀವು ನನ್ನನ್ನು ಬಿಟ್ಟರೂ ನಾನು ನಿಮ್ಮನ್ನು ಎಂದಿಗೂ ಬಿಡುವವನಲ್ಲ. ಈ ಆಶ್ವಾಸನೆಯು ಎಲ್ಲರಿಗಾಗಿಯೂ ಇದೆ. ಹುಲಿಯ ದವಡೆಯಲ್ಲಿ ಸಿಕ್ಕಿಕೊಂಡಿರುವ ಪಶುವನ್ನು ಹೇಗೆ ಬಿಡಲಾಗುವುದಿಲ್ಲವೋ ಹಾಗೆಯೇ ಯಾರ ಮೇಲೆ ಗುರುಗಳು ಕೃಪೆ ಮಾಡುವರೋ, ಅವನು ಮೋಕ್ಷಕ್ಕೆ ಹೋಗುವವರೆಗೂ ಗುರುಗಳು ಅವನನ್ನು ಬಿಡುವುದಿಲ್ಲ. ಶಿಷ್ಯನು ನರಕಕ್ಕೆ ಹೋಗುತ್ತಿದ್ದರೆ ಭಗವಾನರು (ಎಂದರೆ ನಾನು, ರಮಣನು) ಅವನ ಹಿಂದೆಯೇ ಹೋಗಿ ನಿಮ್ಮನ್ನು ಕರೆದುಕೊಂಡು ಬರುವರು. ಗುರುಗಳು ಒಳಗೂ ಇದ್ದಾರೆ ಮತ್ತು ಹೊರಗೂ ಇದ್ದಾರೆ. ನೀವು ಅಂತರ್ಮುಖರಾಗುವಂತಹ ಪರಿಸ್ಥಿತಿಯನ್ನು ಗುರುಗಳು ನಿರ್ಮಾಣ ಮಾಡುತ್ತಾರೆ. ನಿಮ್ಮನ್ನು ಆತ್ಮದೆಡೆ ಎಂದರೆ ಬ್ರಹ್ಮನೆಡೆ ಸೆಳೆಯಬೇಕೆನ್ನುವುದಕ್ಕಾಗಿ ಗುರುಗಳು ಒಳಗೂ ಎಂದರೆ ನಿಮ್ಮ ಹೃದಯದಲ್ಲಿಯೂ ಸಿದ್ಧತೆಯನ್ನು ಮಾಡುತ್ತಿರು ತ್ತಾರೆ. ನಾನು ಮೌನದಿಂದಲೇ ಉಪದೇಶ ಕೊಡುತ್ತೇನೆ. ನೀವು ನನಗೆ ಅನನ್ಯರಾಗಿರಿ, ನಾನು ನಿಮ್ಮ ಮನೋಲಯವಾಗುವವರೆಗೂ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವೆ. ನೀವು ಸ್ವಸ್ಥರಾಗಿರಿ. ಭಗವಾನರು (ರಮಣರು) ಯೋಗ್ಯವಾದುದನ್ನೇ ಮಾಡುವರು. ನೀವು ನನಗೆ ಶರಣಾಗಿರಿ, ಮಿಕ್ಕಿದ್ದನ್ನು ನನ್ನ ಮೇಲೆ ಬಿಡಿರಿ. ‘ನಾನು ಯಾರು?’ ಎನ್ನುವ ಶೋಧನೆ ಮತ್ತು ಗುರುಗಳಲ್ಲಿ ಶರಣಾಗತಿ ಇವು ಉನ್ನತಿಯ ಎರಡು ಮಾರ್ಗಗಳಾಗಿವೆ. ಮನಸ್ಸನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವುದು, ಗುರುಗಳಿಗೆ ಶರಣಾಗಿ ಕೃಪೆಗಾಗಿ ಕಾಯುವುದು ಸುಲಭವಾದ ವಿಷಯವಲ್ಲ. ಗುರುಗಳ ಅಖಂಡ ಸ್ಮರಣರೂಪದ ಅಭ್ಯಾಸದ ಅವಶ್ಯಕತೆಯಿದೆ. ಈ ಅಭ್ಯಾಸವೂ ಗುರುಕೃಪೆಯ ಸಹಾಯವಿದ್ದರೆ ಮಾತ್ರ ಸಾಧ್ಯ. ರಾತ್ರಿ ಮಗುವು ಮಲಗಿದ್ದಾಗ ತಾಯಿಯು ಅದಕ್ಕೆ ಹಾಲು ಕುಡಿಸುತ್ತಾಳೆ. ಮರುದಿನ ಆ ಮಗುವಿಗೆ ತಾನು ಏನೂ ಕುಡಿದೇ ಇಲ್ಲ ಎಂದೆನಿಸುತ್ತದೆ. ರಾತ್ರಿ ಮಗುವು ಹಾಲನ್ನು ಕುಡಿದಿರುವುದರ ಅರಿವು ತಾಯಿಗೆ ಮಾತ್ರವೇ ಇರುತ್ತದೆ. ಅಂತೆಯೇ ಶಿಷ್ಯನ ಉನ್ನತಿಯು ಯಾವ ರೀತಿಯಲ್ಲಿ ಆಗುತ್ತಿದೆ ಎನ್ನುವುದನ್ನು ಗುರುಗಳು ಅರಿತಿರುತ್ತಾರೆ. ಗುರುಗಳು ತಮ್ಮ ಕಣ್ಣುಗಳಿಂದ, ಶಬ್ದಗಳಿಂದ ಅಥವಾ ಸ್ಪರ್ಶದಿಂದ ಕೃಪೆಯ ಧಾರೆಯನ್ನು ಉದ್ದೇಶಪೂರ್ವಕವಾಗಿ ಭಕ್ತನೆಡೆ ಕಳುಹಿಸುತ್ತಾರೆ. ಈ ಕೃಪೆಯು ಗುರುಗಳ ಪ್ರಯತ್ನಗಳಿಂದ ಶಿಷ್ಯನಿಗೆ ಕೊಡಲಾಗಿರುತ್ತದೆ. ಗುರುಕೃಪೆಯ ಪೂರ್ಣ ಉಪಯೋಗವಾಗುವುದಕ್ಕಾಗಿ ಶಿಷ್ಯನು ಸತತವಾಗಿ ಪ್ರಯತ್ನವನ್ನು ಮುಂದುವರಿಸುತ್ತಾ ಇರಬೇಕು. ನಾನು ಯಾರು ಎನ್ನುವ ವಿಚಾರವೇ, ಈ ಪ್ರಯತ್ನವು.’ - ಶ್ರೀರಮಣ ಮಹರ್ಷಿ
No comments:
Post a Comment
Note: only a member of this blog may post a comment.