ಸಂಕಲನ : ಕು. ಶಿಲ್ಪಾ ಕರಿ, ಸನಾತನ ಸಂಸ್ಥೆ
ಮಕ್ಕಳೇ, ನಿಮಗೀಗ ಬೇಸಿಗೆಯ ರಜೆಯು ಆರಂಭವಾಗಿದೆಯಲ್ಲವೇ? ಹುಂ! ತಾವು ಈ ರಜೆಯಲ್ಲಿ ಮನೋರಂಜನೆಯ, ಹೊಸ ಆಟೋಟಗಳ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ, ನಿಮ್ಮ ದೂರದ ಅಜ್ಜ-ಅಜ್ಜಿಯರನ್ನು, ನೆಂಟರನ್ನು ಅಥವಾ ಮಿತ್ರರನ್ನು ಭೇಟಿಯಾಗುವ ಆಯೋಜನೆಯನ್ನು ಹಾಕಿಕೊಂಡಿರಬಹುದು. ತಮ್ಮಲ್ಲಿ ಕೆಲವರು ಮುಂದಿನ ತರಗತಿಯ ಅಭ್ಯಾಸದ ತಯಾರಿಯನ್ನು ಈಗಲೇ ಆರಂಭಿಸಿರಬಹುದು.
ಧರ್ಮರಕ್ಷಣೆಯ ಧ್ಯೇಯ ನಿಮ್ಮಲ್ಲಿದೆಯೇ?
‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಯನ್ನು ತಾವು ಕೇಳಿರಬಹುದು. ಇದರಂತೆ ಸಮಯವು ಒಂದು ಬಾರಿ ಕಳೆದು ಹೋದರೆ ಮರಳಿ ಬರಲಾರದು. ಹಾಗಾಗಿ ಮಕ್ಕಳೇ ತಾವು ಈ ಬೇಸಿಗೆ ರಜೆಯ ಅಮೂಲ್ಯ ಸಮಯದ ಸದುಪಯೋಗಕ್ಕಾಗಿ ವಿಶಿಷ್ಟವಾದುದೇನಾದರೂ ಮಾಡಲು ನಿರ್ಧರಿಸಿದ್ದೀರೇನು? ಜೀವನದಲ್ಲಿ ವಿಶಿಷ್ಟ ವಾದುದನ್ನೇದಾರೂ ಸಾಧಿಸಬೇಕಾಗಿದ್ದರೆ ನಾವು ಧ್ಯೇಯ ನಿರ್ಧರಿಸಿ ಅದನ್ನು ತಲುಪುವವರೆಗೆ ಸತತ ಪ್ರಯತ್ನ ಮಾಡಬೇಕು.
ಇಂದಿನ ಮಕ್ಕಳಿಗೆ ನಿನ್ನ ಜೀವನದ ಗುರಿ ಏನು ಎಂದು ಕೇಳಿದರೆ ಅವರು ಸಂತೋಷದಿಂದ ‘ನಾನು ಡಾಕ್ಟರ ಆಗುತ್ತೇನೆ ! ಇಂಜಿನಿಯರ ಆಗುತ್ತೇನೆ ! ದೊಡ್ಡ ಕಾರು ತೆಗೆದುಕೊಳ್ಳುತ್ತೇನೆ !’ ಇತ್ಯಾದಿ ಧ್ಯೇಯಗಳನ್ನು ಹೇಳುತ್ತಾರೆ. ಆದರೆ ಇಂದು ‘ನಾನು ರಾಷ್ಟ್ರಕ್ಕಾಗಿ ಅಥವಾ ಧರ್ಮಕ್ಕಾಗಿ ಹೋರಾಡುತ್ತೇನೆ’ ಎಂದು ಹೇಳುವ ಒಂದು ಮಗುವೂ ಸಿಗುವುದಿಲ್ಲ. ರಾಷ್ಟ್ರದ ಕೋಟಿಗಟ್ಟಲೆ ಮಕ್ಕಳಲ್ಲಿ ಒಂದು ಮಗುವಿಗೂ ಈ ರೀತಿಯ ವಿಚಾರ ಬರುವುದಿಲ್ಲ ಎಂದರೆ ಇದರ ಕಾರಣವೇನಿರಬಹುದು?
ಹಿಂದೂಧರ್ಮದ ಸಂಸ್ಕಾರಗಳೆಲ್ಲಿ?
‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ಗಾದೆಯನ್ನು ನೀವೆಲ್ಲ ಕೇಳಿದ್ದೀರಿ. ಮಕ್ಕಳ ಮನಸ್ಸಿನ ಮೇಲೆ ಮನೆಯ ಮತ್ತು ಸುತ್ತಮುತ್ತಲಿನ ವಾತಾವರಣವು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಪ್ರಸ್ತುತ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಯಾವುದೇ ಕಷ್ಟವಾಗಬಾರದು ಎಂದು ಅವರ ಎಲ್ಲ ಬೇಡಿಕೆಗಳನ್ನು ಪೂರೈಸುತ್ತಿದ್ದಾರೆ. ಮಕ್ಕಳನ್ನು ಹೂವಿನಂತೆ ಬೆಳೆಸುತ್ತೇವೆಂಬ ನೆಪದಲ್ಲಿ ಅವರ ಜೀವನವನ್ನು ತುಂಬಾ ಸೂಕ್ಷ್ಮ ಹಾಗೂ ಸ್ವಾರ್ಥಿಯನ್ನಾಗಿಸಿದ್ದಾರೆ. ಇದರಿಂದ ಮಕ್ಕಳು ಜೀವನದಲ್ಲಿ ಕ್ಲಿಷ್ಟಕರ ಪ್ರಸಂಗಗಳು ಎದುರಾದಾಗ ತಮ್ಮ ಮಾನಸಿಕ ಸಮತೋಲನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಇಂದಿನ ಜನರು ಭೋಗವಾದದ ಮತ್ತು ಐಷಾರಾಮದ ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತಾ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಮಾಡುತ್ತಾ ಧರ್ಮಾಚರಣೆ ಯನ್ನು ಮರೆತು ಬಿಟ್ಟಿದ್ದಾರೆ. ಅದಲ್ಲದೇ ಹಿಂದೂಗಳ ದೇವಸ್ಥಾನಗಳಲ್ಲಾಗಲಿ ಅಥವಾ ಶಾಲೆಗಳಲ್ಲಾಗಲಿ ಮಕ್ಕಳಿಗೆ ಧರ್ಮಶಿಕ್ಷಣವೇ ಸಿಗುವುದಿಲ್ಲ. ಯಾರು ಎಷ್ಟು ಹಣವನ್ನು ಗಳಿಸಿದರು, ಹೆಚ್ಚು ದುಡ್ಡನ್ನು ಕಡಿಮೆ ಸಮಯದಲ್ಲಿ ಹೇಗೆ ಗಳಿಸಬೇಕು, ಅನಾವಶ್ಯಕ ಆಡಂಬರಗಳಿಂದ ಜನರ ಗಮನವನ್ನು ಹೇಗೆ ಸೆಳೆಯಬೇಕು ಇತ್ಯಾದಿಗಳ ಬಗ್ಗೆ ಚಿಂತನೆ ಮಾಡುತ್ತಿರುವ ಜನರಿಂದ ಮಕ್ಕಳು ಮತ್ತೇನು ಬೋಧ ಪಡೆಯಬಹುದು!
ನಿಮ್ಮ ಮನೆಯಲ್ಲಿ ಜೀಜಾಬಾಯಿ ಇದ್ದಾರೆಯೇ?
ಹಿಂದೆ ಒಂದು ಕಾಲವಿತ್ತು. ಮಹಾರಾಷ್ಟ್ರವು ಮೊಘಲರ ದಬ್ಬಾಳಿಕೆ ಯಲ್ಲಿದ್ದಾಗ ಶಿವಾಜಿಯ ತಾಯಿ ಜೀಜಾಬಾಯಿ ಶಿವಾಜಿ ಗರ್ಭದಲ್ಲಿರು ವಾಗಲೇ ಮೊಘಲರು ನಾಶಮಾಡಬೇಕು, ಅದಕ್ಕಾಗಿ ಶಿವಾಜಿಯನ್ನು ಸಜ್ಜು ಗೊಳಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದರು. ಜೀಜಾಬಾಯಿ ಯವರಿಗೆ ಸುಖಶಯ್ಯೆ, ಸುಗಂಧದ್ರವ್ಯ, ವಿಹಾರ, ವಿಲಾಸ, ರುಚಿಕರ ತಿಂಡಿ ಇದಾವುದೂ ಬೇಡವಾಗಿತ್ತು. ಅವರಿಗೆ ಯುದ್ಧ ಕವಚ ಧರಿಸಿ, ಕೈಯಲ್ಲಿ ಖಡ್ಗ ಮತ್ತು ಭರ್ಚಿ ಹಿಡಿದು ಸಮರಾಂಗಣಕ್ಕೆ ಧಾವಿಸಬೇಕು ಎಂದೆನಿಸುತ್ತಿತ್ತು. ಇಂತಹ ಕ್ರಾಂತಿಯ ಬೀಜವು ಶಿವಾಜಿಯಲ್ಲೂ ಮೂಡಿತು. ಮೊಘಲರಿಂದ ಧ್ವಂಸಗೊಂಡ ದೇವಸ್ಥಾನಗಳು, ಸ್ತ್ರೀಯರ ಮೇಲಿನ ಅತ್ಯಾಚಾರಗಳನ್ನು ಸಹಿಸದೇ ಇದಕ್ಕೆಲ್ಲ ಉತ್ತರ ನೀಡುವವರು ಯಾರು ಎಂದು ಶಿವಾಜಿ ಸ್ವತಃ ಮೊಘಲರ ವಿರುದ್ಧ ಹೋರಾಡಲು ಸಜ್ಜಾದನು. ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆಗಳಲ್ಲಿ ನಿಪುಣನಾದ, ಮಣ್ಣಿನ ಕೋಟೆ ಕಟ್ಟಿ ಯುದ್ಧ ಆಡುವುದೆಂದರೆ ಅವನಿಗೆ ಅಸಾಧ್ಯ ಹುಚ್ಚು! ತನ್ನ ಮಿತ್ರರಾದ ಮಾವಳ ರೊಂದಿಗೆ ಸೇರಿಕೊಂಡು ಒಂದು ಸೈನ್ಯವನ್ನು ಕಟ್ಟಿದನು. ಆಗ ಅವನು ಕೇವಲ ೧೩ ವರ್ಷದವನಾಗಿದ್ದನು. ಮೊಘಲರ ವಿರುದ್ಧ ಹೋರಾಡಲು ತನ್ನ ಸೈನ್ಯವನ್ನು ಸಿದ್ಧಗೊಳಿಸಿದನು. ‘ಮೊಘಲರ ವಿರುದ್ಧ ನಾವು ಗೆಲ್ಲುವವರೇ ಇದ್ದೇವೆ’ ಎಂಬ ಮನೋವೃತ್ತಿಯನ್ನು ತನ್ನ ಸೈನ್ಯದಲ್ಲಿ ಮೂಡಿಸಿ ತಮ್ಮಲ್ಲಿಯೇ ಪ್ರತ್ಯಕ್ಷ ಹೋರಾಟ ನಡೆಸಿ ತರಬೇತಿ ನೀಡುತ್ತಿದ್ದನು.
ಇದೇ ರೀತಿಯ ಇನ್ನೊಂದು ಉದಾಹರಣೆ ಎಂದರೆ ಸ್ವಾತಂತ್ರ್ಯವೀರ ಸಾವರಕರರು. ಇವರಿಗೆ ಚಿಕ್ಕವರಿರುವಾಗಲೇ ಶಿವಾಜಿ ಸಿಂಹಗಡವನ್ನು ಗೆದ್ದದ್ದು, ಅಫ್ಜಲ್‌ಖಾನನ ಹೊಟ್ಟೆ ಬಗೆದದ್ದು, ಮಹಮ್ಮದ ಘೋರಿಯನ್ನು ಪೃಥ್ವಿರಾಜ ಚೌಹಾಣನು ಮೆಟ್ಟಿ ನಿಂತದ್ದು ಕರಗತವಾಗಿ ಹೋಗಿದ್ದವು. ಚಿಕ್ಕವಯಸ್ಸಿನಲ್ಲಿಯೇ ಗುಡ್ಡಗಾಡು ಪ್ರದೇಶಗಳಲ್ಲಿ ಕಲ್ಲು ಮುಳ್ಳನ್ನು ಲೆಕ್ಕಿಸದೇ ಅನೇಕ ಮೈಲಿ ಓಡುವುದು ಅವರ ಹವ್ಯಾಸವಾಗಿತ್ತು. ತಮ್ಮ ಮಿತ್ರರೊಂದಿಗೆ ಕುಸ್ತಿಯಾಡುತ್ತಾ ಇನ್ನಿತರ ಕಸರತಗಳನ್ನು ಮಾಡುತ್ತಿದ್ದರು. ಈ ರೀತಿಯ ಅಭ್ಯಾಸದಿಂದಾಗಿಯೇ ಅವರು ಆಂಗ್ಲರ ಬಂಧನದಿಂದ ತಪ್ಪಿಸಿಕೊಳ್ಳಲು ಮೃತ್ಯುಕೂಪದಂತಿದ್ದ ಸಾಗರಕ್ಕೆ ಹಾರಿ ಈಜಿಕೊಂಡು ದಡ ಸೇರಿದ್ದರು.
ಇಂತಹ ಅನೇಕ ಸಾಹಸಗಳನ್ನು ನಮ್ಮ ಅನೇಕ ಕ್ರಾಂತಿವೀರರು ಮಾಡಿ ದ್ದಾರೆ. ಹಿಂದೂಧರ್ಮದ ಮೇಲಾಗುತ್ತಿರುವ ಹಾನಿಯನ್ನು ನೋಡಿದರೆ ಈಗ ಕ್ರಾಂತಿಯು ಅನಿವಾರ್ಯವಾಗಿದೆ. ಆದರೆ ಇಂದಿನ ಮಕ್ಕಳಿಗೆ ಇದಕ್ಕಾಗಿ ಯಾವುದೇ ರೀತಿಯ ತರಬೇತಿಯನ್ನು ನೀಡಲಾಗುತ್ತಿಲ್ಲ, ಮಕ್ಕಳಿಗೂ ಸ್ವತಃ ಇದಕ್ಕಾಗಿ ಏನಾದರೂ ಮಾಡಬೇಕು ಎಂದೆನಿಸುವುದಿಲ್ಲ.
ಪುಟ್ಟ ಕೈಗಳೀಗ ಸದೃಢವಾಗಬೇಕು
ಮಕ್ಕಳೇ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆ, ದೇವಸ್ಥಾನಗಳ ಮೇಲಿನ ಆಕ್ರಮಣ, ದೇವ-ದೇವತೆಗಳ, ರಾಷ್ಟ್ರ ಪುರುಷರ ಮತ್ತು ಸಂತರ ವಿಡಂಬನೆ, ಮೀಸಲಾತಿಯ ಸಮಸ್ಯೆ, ಮೆಕಾಲೆ ಶಿಕ್ಷಣ ಪದ್ಧತಿ ಇವೆಲ್ಲವನ್ನು ನೋಡಿ ನಿಮ್ಮ ರಕ್ತವೇಕೆ ಕುದಿಯುವುದಿಲ್ಲ? ನೀವೇ ಯೋಚಿಸಿ, ಮುಂದೆ ನೀವು ಈ ದೇಶದ ಪ್ರಜೆಗಳಾಗಲಿದ್ದೀರಿ. ಯೋಗ್ಯ ರಾಜ್ಯಾಡಳಿತವು ನಡೆಯಲು ತಮ್ಮ ಸಹಭಾಗ ಬಹಳ ಮಹತ್ವ ದ್ದಾಗಿದೆ. ನೀವು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸದೃಢರಾದರೆ ಮಾತ್ರ ಎಂತಹ ದುರ್ಜರನ್ನೂ ಎದುರಿಸಬಹುದು. ಆದುದ ರಿಂದ ಮಕ್ಕಳೇ, ತಮಗೆ ಬೇಸಿಗೆ ರಜೆಯಲ್ಲಿ ಸಿಗುವಂತಹ ಪ್ರತಿಯೊಂದು ಕ್ಷಣದ ಸದುಪಯೋಗ ಮಾಡಿಕೊಳ್ಳಿರಿ. ವೀರ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ಕ್ರಾಂತಿಕಾರಿಗಳ ಪುಸ್ತಕಗಳನ್ನು ಓದಿರಿ. ದೇವ-ದೇವತೆ ಗಳ ಮೇಲೆ ಶ್ರದ್ಧೆ ಹೆಚ್ಚಾಗುವಂತಹ ಗ್ರಂಥಗಳ ಅಧ್ಯಯನ ಮಾಡಿರಿ, ಧರ್ಮ ಮತ್ತು ರಾಷ್ಟ್ರದ ಮೇಲಾಗುತ್ತಿರುವ ಅಪಾಯವನ್ನು ಅರಿತುಕೊಳ್ಳಿರಿ, ಮಿತ್ರರೊಂದಿಗೆ ಇವೆಲ್ಲ ವಿಷಯಗಳ ಬಗ್ಗೆ ಚರ್ಚಾಕೂಟಗಳನ್ನು ನಡೆಸಿರಿ, ಸಾಧ್ಯವಾದರೆ ಹೊಸ ಹೊಸ ವಿಷಯಗಳನ್ನು ಕಲಿಯಿರಿ, ಉದಾ. ಕರಾಟೆ, ಈಜು, ವಿವಿಧ ಬಗೆಗಳ ವಾಹನಗಳನ್ನು ಚಲಾಯಿಸುವುದು, ಕುದುರೆ ಸವಾರಿ, ವಿವಿಧ ಕಸರತ್ತುಗಳು, ಲಾಠಿ ಚಲಾಯಿಸುವುದು, ಯೋಗಾಭ್ಯಾಸ ಇತ್ಯಾದಿಗಳನ್ನು ಕಲಿಯಿರಿ. ಕೇವಲ ಒಳಾಂಗಣದ ಆಟವನ್ನು ಆಡದೇ, ಹೊರಾಂಗಣದ ಆಟ ಆಡಿರಿ. ಇದರ ಜೊತೆಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳಲು ಧ್ಯಾನ, ಜಪ ಇತ್ಯಾದಿ ಕೃತಿಗಳನ್ನು ಮಾಡಿರಿ.
ಮಕ್ಕಳೇ, ಸ್ವಲ್ಪ ಗಂಭೀರವಾಗಿ ಯೋಚಿಸಿ ಇಂತಹ ಅಮೂಲ್ಯ ಸಮಯ ಮತ್ತೆ ಮರಳಿ ಬರುವುದೇನು?
(ಪೋಷಕರೂ ಸಹ ತಮ್ಮ ಮಕ್ಕಳನ್ನು ರಾಷ್ಟ್ರಕ್ಕಾಗಿ ಬೆಳೆಸಲು ಪ್ರಯತ್ನಿಸಬೇಕು.)
No comments:
Post a Comment
Note: only a member of this blog may post a comment.