ಆರನೆಯ ಇಂದ್ರಿಯ : ಆಧ್ಯಾತ್ಮಿಕ ದೃಷ್ಟಿಕೋನ


ಆರನೆಯ ಇಂದ್ರಿಯ ಎಂದರೇನು?

ಸೂಕ್ಷ್ಮದಿಂದ ತಿಳಿದುಕೊಳ್ಳುವ ಕ್ಷಮತೆಯನ್ನು ‘ಆರನೆಯ ಇಂದ್ರಿಯ’ ಎಂದು ಹೇಳುತ್ತಾರೆ. ಈ ಕ್ಷಮತೆಯಿಂದ ಸೂಕ್ಷ್ಮ-ಜಗತ್ತಿನ ಬಗ್ಗೆ, ಉದಾ: ಕೆಟ್ಟ ಶಕ್ತಿಗಳು, ಸಪ್ತಪಾತಾಳ, ಸಪ್ತಲೋಕ, ದೇವತೆಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ನಮ್ಮ ಐದು ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಅರಿವಿನ ಆಚೆಗಿರುವ ಸೂಕ್ಷ್ಮ-ಜಗತ್ತಿನ ಬಗ್ಗೆ ಅಥವಾ ಯಾವುದಾದರೊಂದು ಘಟನೆಯ ಹಿಂದಿನ ಸೂಕ್ಷ್ಮ ಕಾರಣಗಳು, ಪರಿಣಾಮ ಮತ್ತು ಅವುಗಳ ನಡುವಿನ ಸಂಬಂಧ ಇವೆಲ್ಲವುಗಳನ್ನು ಕೇವಲ ಸೂಕ್ಷ್ಮಜ್ಞಾನವಿರುವ ವ್ಯಕ್ತಿಗಳಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯವಿದೆ.

‘ಅನುಭವ’ ಮತ್ತು ‘ಅನುಭೂತಿ’ ಇವುಗಳಲ್ಲಿನ ವ್ಯತ್ಯಾಸ

ಯಾವಾಗ ನಾವು ಒಂದು ಗುಲಾಬಿ ಹೂವಿನ ಸುಗಂಧವನ್ನು ತೆಗೆದುಕೊಳ್ಳುತ್ತೇವೆಯೋ ಆಗ ಆ ಸುಗಂಧದ ಅಥವಾ ಆ ಅನುಭವದ ಮೂಲ ಉಗಮವು ಗುಲಾಬಿಯ ಹೂವಾಗಿರುತ್ತದೆ. ಯಾರಾದರೊಬ್ಬ ವ್ಯಕ್ತಿಗೆ ಅಕಸ್ಮಾತ್ತಾಗಿ ಸುಗಂಧವು ಬರುತ್ತದೆ ಮತ್ತು ಆ ಸುಗಂಧವು ಆ ವ್ಯಕ್ತಿಗೆ ಮಾತ್ರ ಅರಿವಾಗುತ್ತದೆಯೇ ಹೊರತು ಆರನೆಯ ಇಂದ್ರಿಯ ಜಾಗೃತವಾಗದ ಸುತ್ತಮುತ್ತಲಿನ ಇತರ ವ್ಯಕ್ತಿಗಳಿಗೆ ಅರಿವಾಗುವುದಿಲ್ಲ ಹಾಗೆಯೇ ಸುಗಂಧದ ಮೂಲವನ್ನು ಹುಡುಕಿದರೂ ಅವನಿಗೆ ಅದು ಸಿಗುವುದಿಲ್ಲ; ಆಗ ಆ ಅನುಭವಕ್ಕೆ ‘ಅನುಭೂತಿ’ ಎಂದು ಹೇಳುತ್ತಾರೆ. ಆ ವ್ಯಕ್ತಿಗೆ ಈ ಅನುಭೂತಿಯು ಅವನ ಸೂಕ್ಷ್ಮಜ್ಞಾನೇಂದ್ರಿಯಗಳ ಮೂಲಕ ಬಂದಿರುತ್ತದೆ.

ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಸೂಕ್ಷ್ಮಜ್ಞಾನದ ಪ್ರಾಪ್ತಿಯಾಗುವುದು

ನಮ್ಮ ಸೃಷ್ಟಿಯು ಪಂಚಮಹಾಭೂತಗಳಿಂದ (ಪಂಚತತ್ತ್ವಗಳಿಂದ) ನಿರ್ಮಾಣವಾಗಿದೆ. ಈ ಪಂಚತತ್ತ್ವಗಳು ನಮಗೆ ಕಾಣಿಸದಿದ್ದರೂ ಪ್ರತಿಯೊಂದು ವಿಷಯವು ಈ ಪಂಚತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಯಾವಾಗ ನಮ್ಮ ಆರನೆಯ ಇಂದ್ರಿಯವು ಜಾಗೃತವಾಗುತ್ತದೆಯೋ ಆಗ ನಮಗೆ ಏರಿಕೆಯ ಕ್ರಮದಲ್ಲಿ ಸ್ಥೂಲದಿಂದ ಸೂಕ್ಷ್ಮದವರೆಗಿನ ಪಂಚತತ್ತ್ವಗಳ ಬಗ್ಗೆ ಅರಿವಾಗತೊಡಗುತ್ತದೆ. ಗಂಧ (ವಾಸನೆ), ರುಚಿ, ದೃಶ್ಯ, ಸ್ಪರ್ಶ ಮತ್ತು ನಾದ ಈ ಸೂಕ್ಷ್ಮಜ್ಞಾನಗಳ ಮೂಲಕ ನಾವು ಅನುಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವುಗಳ ಅನುಭೂತಿಯನ್ನು ಪಡೆಯಬಹುದು.

ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಆಗುವ ಸೂಕ್ಷ್ಮಜ್ಞಾನ ಅಂದರೆ ನಮಗೆ ಬರುವ ಒಳ್ಳೆಯ ಮತ್ತು ಕೆಟ್ಟ ಅನುಭೂತಿಗಳು. ಇದರ ಉದಾಹರಣೆಗಳನ್ನು ಲೇಖನದ ಕೊನೆಯಲ್ಲಿರುವ ಕೋಷ್ಟಕದಲ್ಲಿ ನೀಡಲಾಗಿದೆ.

ಈ ಕೋಷ್ಟಕದಿಂದ ತಿಳಿದು ಬರುವುದೇನೆಂದರೆ ಯಾರಾದರೊಬ್ಬ ವ್ಯಕ್ತಿಗೆ ಸೂಕ್ಷ್ಮದಲ್ಲಿನ ಅನುಭೂತಿಯು ಬಂದರೆ ಉದಾ: ವಾಸನೆ ಬಂದರೆ, ಅದರ ಉಗಮವು ಒಳ್ಳೆಯ ಶಕ್ತಿ ಎಂದರೆ ದೇವತೆಗಳು ಅಥವಾ ಕೆಟ್ಟ ಶಕ್ತಿ ಎಂದರೆ ಭೂತ ಇತ್ಯಾದಿಗಳಿರಬಹುದು.

ಆಧ್ಯಾತ್ಮಿಕ ಮಟ್ಟಕ್ಕನುಸಾರ ಆರನೆಯ ಇಂದ್ರಿಯದ ಕ್ಷಮತೆ

ಸೂಕ್ಷ್ಮ-ಜಗತ್ತು ನಮ್ಮ ಸುತ್ತಮುತ್ತಲೂ ಇದ್ದರೂ ಅದನ್ನು ನಮಗೆ ನೋಡಲು ಆಗುವುದಿಲ್ಲ; ಆದರೆ ಅದರ ಪ್ರಭಾವವು ನಮ್ಮ ಜೀವನದ ಮೇಲೆ ಬಹಳಷ್ಟು ಪ್ರಮಾಣದಲ್ಲಾಗುತ್ತದೆ. ಈ ಸೂಕ್ಷ್ಮ-ಜಗತ್ತಿನೊಂದಿಗೆ ಸಂಪರ್ಕ ಮಾಡಲು ‘ಆಧ್ಯಾತ್ಮಿಕ ಆಂಟೆನಾ’ದ ಅಂದರೆ ಆರನೆಯ ಇಂದ್ರಿಯವನ್ನು ಜಾಗೃತಗೊಳಿಸುವ ಅವಶ್ಯಕತೆಯಿರುತ್ತದೆ. ಸಾಧನೆ ಮಾಡುವುದರಿಂದ ಆರನೆಯ ಇಂದ್ರಿಯವು ಜಾಗೃತವಾಗುತ್ತದೆ. ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತಾ ಹೋದಂತೆ ಸೂಕ್ಷ್ಮ-ಜಗತ್ತಿನ ವಿಷಯಗಳನ್ನು ತಿಳಿದುಕೊಳ್ಳುವ ನಮ್ಮ ಆರನೆಯ ಇಂದ್ರಿಯದ ಕ್ಷಮತೆಯೂ ಹೆಚ್ಚುತ್ತಾ ಹೋಗುತ್ತದೆ. ಆಧ್ಯಾತ್ಮಿಕ ಮಟ್ಟವು (ಟಿಪ್ಪಣಿ ೧) ಹೆಚ್ಚಾಗುತ್ತಾ ಹೋದಂತೆ ಆರನೆಯ ಇಂದ್ರಿಯದ ಕ್ಷಮತೆಯು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.


ಟಿಪ್ಪಣಿ ೧ - ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿರುತ್ತವೆ. ವ್ಯಕ್ತಿಯು ಸಾಧನೆ, ಅಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನವನ್ನು ಪ್ರಾರಂಭಿಸಿದ ನಂತರ ಅವನಲ್ಲಿನ ರಜ-ತಮ ಗುಣಗಳ ಪ್ರಮಾಣವು ಕಡಿಮೆಯಾಗತೊಡಗುತ್ತದೆ ಮತ್ತು ಸತ್ತ್ವಗುಣದ ಪ್ರಮಾಣ ಹೆಚ್ಚಾಗತೊಡಗುತ್ತದೆ. ಸತ್ತ್ವಗುಣದ ಪ್ರಮಾಣದ ಮೇಲೆ ಆಧ್ಯಾತ್ಮಿಕ ಮಟ್ಟವು ಅವಲಂಬಿಸಿರುತ್ತದೆ. ಸತ್ತ್ವಗುಣದ ಪ್ರಮಾಣವು ಎಷ್ಟು ಹೆಚ್ಚಿರುತ್ತದೆಯೋ, ಆಧ್ಯಾತ್ಮಿಕ ಮಟ್ಟವು ಅಷ್ಟೇ ಹೆಚ್ಚಿರುತ್ತದೆ. ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೨೦ರಷ್ಟಿರುತ್ತದೆ. ಸಾಧನೆ ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವ್ಯಕ್ತಿಗೆ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ. ಶೇ.೬೦ ಮತ್ತು ಅದರ ಮುಂದಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ವ್ಯಕ್ತಿಗೆ ಮೃತ್ಯುವಿನ ನಂತರ ಪುನರ್ಜನ್ಮವಿರುವುದಿಲ್ಲ. ಇಂತಹ ವ್ಯಕ್ತಿಯು ಮುಂದಿನ ಸಾಧನೆಗಾಗಿ ಅಥವಾ ಮಾನವಜಾತಿಯ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯಲ್ಲಿ ಜನಿಸಬಲ್ಲನು. ಶೇ.೭೦ರ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳನ್ನು ಸಂತರೆಂದು ಪರಿಗಣಿಸಲಾಗುತ್ತದೆ. ಅವರಿಗೆ ಜನಲೋಕ ಪ್ರಾಪ್ತವಾಗುತ್ತದೆ. ಮೋಕ್ಷಕ್ಕೆ ಹೋದ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೧೦೦ರಷ್ಟಿರುತ್ತದೆ ಮತ್ತು ಆಗ ಅವನು ತ್ರಿಗುಣಾತೀತನಾಗುತ್ತಾನೆ.

ಈ ಕೋಷ್ಟಕದಿಂದ ತಿಳಿದು ಬರುವ ವಿಷಯವೇನೆಂದರೆ, ಒಬ್ಬ ವ್ಯಕ್ತಿಯು ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ನಂತರವೇ ಆ ವ್ಯಕ್ತಿಗೆ ಪಂಚಸೂಕ್ಷ್ಮಜ್ಞಾನೇಂದ್ರಿಯಗಳ ಮೂಲಕ ಸೂಕ್ಷ್ಮದಿಂದ ತಿಳಿದುಕೊಳ್ಳುವ ಸರ್ವೋಚ್ಚ ಕ್ಷಮತೆಯು ಪ್ರಾಪ್ತವಾಗುತ್ತದೆ. ಮುಂದೆ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತಾ ಹೋದರೂ ಪಂಚ-ಸೂಕ್ಷ್ಮಜ್ಞಾನೇಂದ್ರಿಯಗಳ ಸೂಕ್ಷ್ಮದಿಂದ ತಿಳಿದುಕೊಳ್ಳುವ ಕ್ಷಮತೆಯು ಹೆಚ್ಚಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಮಟ್ಟವು ಶೇ. ೧೦೦ ರಷ್ಟು ಆಗುವವರೆಗೂ ಮನೋದೇಹ ಮತ್ತು ಕಾರಣದೇಹವು (ಬುದ್ಧಿಯು) ಅನುಕ್ರಮವಾಗಿ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗುವ ಪ್ರಕ್ರಿಯೆಯು ನಡೆಯುತ್ತಲೇ ಇರುತ್ತದೆ.


ಮೇಲಿನ ಕೋಷ್ಟಕದಲ್ಲಿ ಪ್ರತಿಯೊಂದು ಪಂಚ-ಸೂಕ್ಷ್ಮಜ್ಞಾನೇಂದ್ರಿಯಗಳ ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆಯು ಪ್ರಾಪ್ತವಾಗಲು ಅವಶ್ಯಕವಿರುವ ಕನಿಷ್ಟ ಆಧ್ಯಾತ್ಮಿಕ ಮಟ್ಟವನ್ನು ನೀಡಲಾಗಿದೆ, ಉದಾ: ಶೇ.೪೦ರಷ್ಟು ಆಧ್ಯಾತ್ಮಿಕ ಮಟ್ಟದಲ್ಲಿ ಸೂಕ್ಷ್ಮ-ಗಂಧವನ್ನು ತಿಳಿಯುವ ಕ್ಷಮತೆಯು ಪ್ರಾಪ್ತವಾಗುತ್ತದೆ. ಈ ಕೋಷ್ಟಕವು ನಮಗೆ ಆಧ್ಯಾತ್ಮಿಕ ಮಟ್ಟ ಹಾಗೂ ಆರನೆಯ ಇಂದ್ರಿಯ ಇವುಗಳ ನಡುವಿನ ಪ್ರತ್ಯಕ್ಷ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಇದಕ್ಕೆ ಸಂಬಂಧಿಸಿದ ಇನ್ನು ಕೆಲವು ಮಹತ್ವದ ವಿಷಯಗಳನ್ನು ನೋಡೋಣ.

೧. ಯಾರಾದರೊಬ್ಬರಿಗೆ ಸೂಕ್ಷ್ಮ-ಗಂಧದ ಅನುಭೂತಿಯು ಬಂದರೆ ಅವರ ಆಧ್ಯಾತ್ಮಿಕ ಮಟ್ಟವು ಶೇ. ೪೦ ರಷ್ಟಿದೆ ಎಂದು ಇದರ ಅರ್ಥವಲ್ಲ. ಬಹಳಷ್ಟು ಬಾರಿ ಆ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ತಾತ್ಕಾಲಿಕವಾಗಿ ಆ ಸಮಯಕ್ಕೆ ಮಾತ್ರ ಹೆಚ್ಚಾಗಿರುತ್ತದೆ. ತಳಮಳ ಮತ್ತು ಭಾವಪೂರ್ಣ ನಾಮಜಪದಿಂದ ಅಥವಾ ಸಂತರ ಸಹವಾಸದಿಂದ ಆಧ್ಯಾತ್ಮಿಕ ಮಟ್ಟವು ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ.

೨. ಇನ್ನು ಕೆಲವು ಬೇರೆ ಕಾರಣಗಳಿಂದ ಸೂಕ್ಷ್ಮ-ಗಂಧವು ಬರಬಹುದು, ಉದಾ: ರಾಕ್ಷಸ, ಪಿಶಾಚಿ ಮುಂತಾದ ಕೆಟ್ಟ ಶಕ್ತಿಗಳು ಒಬ್ಬ ವ್ಯಕ್ತಿಯನ್ನು ಹೆದರಿಸಬೇಕೆಂದು ನಿರ್ಧರಿಸಿದರೆ, ಅವುಗಳು ತಮ್ಮ ಸ್ವಂತದ ಆಧ್ಯಾತ್ಮಿಕ ಬಲದ ಮೇಲೆ ಕೆಟ್ಟ ವಾಸನೆಯನ್ನು ನಿರ್ಮಾಣ ಮಾಡಬಹುದು. ಇಂತಹ ಉದಾಹರಣೆಗಳಲ್ಲಿ ಕೆಟ್ಟಶಕ್ತಿಯ ಹಿಡಿತದಲ್ಲಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗಿರುವುದಿಲ್ಲ. ಆದರೂ ಅವನಿಗೆ ಸೂಕ್ಷ್ಮ-ದುರ್ಗಂಧವು ಬರುತ್ತದೆ.

೩. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಯಾವುದೇ ಪ್ರಕಾರದ ಸೂಕ್ಷ್ಮಗಂಧವನ್ನು ಶೇ.೧೦೦ ರಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು, ಎಂದೂ ಇರುವುದಿಲ್ಲ. ಶೇ.೪೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳಿಗೆ ಸೂಕ್ಷ್ಮಗಂಧದ ಅನುಭೂತಿಯು ಬರಲೇಬೇಕು, ಎಂದೂ ಇಲ್ಲ. ಒಬ್ಬ ವ್ಯಕ್ತಿಯು ಪಂಚ-ಸೂಕ್ಷ್ಮಜ್ಞಾನೇಂದ್ರಿಯಗಳ ಮೂಲಕ ಯಾವುದೇ ರೀತಿಯ ಅನುಭೂತಿಯನ್ನು ಪಡೆಯದೆ ಸಂತರ ಮಟ್ಟಕ್ಕೆ (ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ) ತಲುಪಬಹುದು. ಅವರಿಗೆ ಇಂತಹ ಅನುಭೂತಿಗಳು ಬರದಿರಲು ಕಾರಣವೇನೆಂದರೆ ಅವರು ತಮ್ಮ ಹಿಂದಿನ ಜನ್ಮದಲ್ಲಿ ಪಂಚಸೂಕ್ಷ್ಮಜ್ಞಾನೇಂದ್ರಿಯಗಳ ಅನುಭೂತಿಗಳನ್ನು ಪಡೆದಿರುತ್ತಾರೆ. ಆದುದರಿಂದ ಅವರಿಗೆ ಈ ಜನ್ಮದಲ್ಲಿ ಮತ್ತೆ ಅಂತಹ ಅನುಭೂತಿಗಳು ಬರುವ ಮತ್ತು ಅದರಿಂದ ಕಲಿಯುವ ಅವಶ್ಯಕತೆಯು ಇರುವುದಿಲ್ಲ. ಎಲ್ಲ ಸಂತರ ಆರನೆಯ ಇಂದ್ರಿಯವು ಮನೋದೇಹ ಮತ್ತು ಕಾರಣದೇಹ (ಬುದ್ಧಿ) ಇವುಗಳೊಂದಿಗೆ ಸಂಬಂಧಿಸಿರುತ್ತದೆ.

ಮೇಲಿನ ಕೋಷ್ಟಕದಿಂದ ತಿಳಿದು ಬರುವ ಇನ್ನೊಂದು ವಿಷಯವೇನೆಂದರೆ, ಸೂಕ್ಷ್ಮ-ಸ್ಪರ್ಶ ಮತ್ತು ಸೂಕ್ಷ್ಮ-ನಾದಗಳ ಅನುಭೂತಿಗಳು ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಮೇಲೆಯೇ ಬರುತ್ತವೆ; ಏಕೆಂದರೆ ಅವು ಹೆಚ್ಚು ಸೂಕ್ಷ್ಮವಾಗಿವೆ.


ಸೂಕ್ಷ್ಮ ಜ್ಞಾನ ಸಿಗುವ ವಿಧಗಳು

ಅ. ತನ್ನಿಂದ ತಾನೇ ಬರೆಯಲ್ಪಡುವುದು: ಸೂಕ್ಷ್ಮಶಕ್ತಿಯು ಯಾರಾದರೊಬ್ಬರ ಕೈಯಿಂದ ತನ್ನ ಸಂದೇಶವನ್ನು ಬರೆಯಿಸಿಕೊಳ್ಳುತ್ತದೆ.

ಆ. ಸೂಕ್ಷ್ಮದೃಷ್ಟಿ: ಸೂಕ್ಷ್ಮಜ್ಞಾನ ಪ್ರಾಪ್ತವಾಗುವವರ ಕಣ್ಣೆದುರು ಶಬ್ದ ಅಥವಾ ವಾಕ್ಯಗಳು ಕಾಣಿಸುತ್ತವೆ.

ಇ. ಮನಸ್ಸಿನಲ್ಲಿ ವಿಚಾರಗಳು ಬರುವುದು : ಸೂಕ್ಷ್ಮಜ್ಞಾನವು ಸಿಗುವ ಮೇಲಿನ ಪ್ರಕಾರಗಳಲ್ಲಿ ‘ಮನಸ್ಸಿನಲ್ಲಿ ವಿಚಾರಗಳು ಬರುವುದು’ ಈ ಪ್ರಕಾರವು ಸೂಕ್ಷ್ಮತಮವಾಗಿದೆ (ಅತಿಸೂಕ್ಷ್ಮವಾಗಿದೆ).

ಸೂಕ್ಷ್ಮಜ್ಞಾನದ ಉಗಮ

ಅ. ಸೂಕ್ಷ್ಮಜ್ಞಾನವನ್ನು ಪಡೆದುಕೊಳ್ಳುವ ವ್ಯಕ್ತಿಗಳಲ್ಲಿ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಗಳೊಂದಿಗೆ ಏಕರೂಪವಾಗುವ ಕ್ಷಮತೆಯಿರುವುದರಿಂದ ಅವರಿಗೆ ಇವುಗಳಿಂದ ತನ್ನಿಂದ ತಾನೇ ಜ್ಞಾನವು ಸಿಗುತ್ತದೆ. ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಿಂದ ಸಿಗುವ ಜ್ಞಾನವು ಸರ್ವೋಚ್ಚಸ್ತರದ ಜ್ಞಾನವಾಗಿದೆ. ಇಂತಹ ಜ್ಞಾನವನ್ನು ಕೇವಲ ಸಂತರೇ ಪಡೆದುಕೊಳ್ಳಬಹುದು. ಇದರ ಉತ್ತಮ ಉದಾಹರಣೆಯೆಂದರೆ ವೇದಗಳಲ್ಲಿರುವ ಜ್ಞಾನ. ವೇದಗಳೆಂದರೆ ಪ್ರಾಚೀನ ಭಾರತದಲ್ಲಿನ ಋಷಿ ಮುನಿಗಳಿಗೆ ಪ್ರಾಪ್ತವಾದ ಜ್ಞಾನ.

ಆ. ವ್ಯಕ್ತಿಯ ಸೂಕ್ಷ್ಮ ಮನಸ್ಸು ಮತ್ತು ಸೂಕ್ಷ್ಮ ಬುದ್ಧಿಯ ಮೂಲಕ ಸೂಕ್ಷ್ಮಶಕ್ತಿಗಳಿಗೆ ಯಾವುದಾದರೊಂದು ಪ್ರಶ್ನೆಯನ್ನು ಕೇಳಿ ಅದರ ಉತ್ತರವನ್ನು ಪಡೆದುಕೊಳ್ಳುವುದು.

ಮೇಲಿನ ಎರಡೂ ಪದ್ಧತಿಗಳಲ್ಲಿ ವ್ಯಕ್ತಿಗೆ ಸೂಕ್ಷ್ಮದಿಂದ ಜ್ಞಾನವು ಸಿಗುವುದು ತಿಳಿಯುತ್ತದೆ; ಆದರೆ ಅವರಿಗೆ ಮೇಲಿನ ಪದ್ಧತಿಗಳಲ್ಲಿನ ಯಾವ ಪದ್ಧತಿಯಿಂದ ಜ್ಞಾನವು ಸಿಗುತ್ತದೆ ಎಂಬುದು ತಿಳಿಯುವುದಿಲ್ಲ. ಅದು ಕೇವಲ ಉನ್ನತರಿಗೆ ಮಾತ್ರ ತಿಳಿಯುತ್ತದೆ.

ಜ್ಞಾನವು ಸಿಗುವ ಕನಿಷ್ಠ ಮಾಧ್ಯಮ

ಕನಿಷ್ಠ ಲೋಕಗಳಲ್ಲಿನ ಅಂದರೆ ಭುವರ್ಲೋಕ ಮತ್ತು ಪಾತಾಳ ಕ್ರಮಾಂಕ ೧ ರಿಂದ ೩ ರಲ್ಲಿರುವ ಸೂಕ್ಷ್ಮಶಕ್ತಿಗಳಿಂದ ಸಿಗುವ ಜ್ಞಾನವು ಭೌತಿಕ ಜಗತ್ತಿಗೆ ಸಂಬಂಧಿಸಿದ್ದು, ಬಹಳ ಕಡಿಮೆ ಮಹತ್ವದ ಮತ್ತು ಅಶಾಶ್ವತದ ಬಗ್ಗೆ ಇರುತ್ತದೆ. ಉದಾ: ಒಂದು ದೇಶದಲ್ಲಿ ಯಾವ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂಬುದರ ಜ್ಞಾನವು ಸಿಗುವುದು.

ಪ್ರಖ್ಯಾತ ಭವಿಷ್ಯಕಾರರಾದ ನಾಸ್ಟ್ರಡಾಮಸ್ ಇವರಿಗೆ ದೊರಕಿದ ಜ್ಞಾನವು ಈ ರೀತಿಯದ್ದಾಗಿತ್ತು. ಅವರ ಆಧ್ಯಾತ್ಮಿಕ ಮಟ್ಟವು ಶೇ. ೫೦ ರಷ್ಟಿತ್ತು ಮತ್ತು ಅವರಿಗೆ ಶೇ. ೪೦ ರಷ್ಟು ಮಟ್ಟವಿರುವ ಸೂಕ್ಷ್ಮಶಕ್ತಿಗಳಿಂದ ಜ್ಞಾನವು ಸಿಗುತ್ತಿತ್ತು. ಸೂಕ್ಷ್ಮಜ್ಞಾನವನ್ನು ಪಡೆದುಕೊಳ್ಳುವ ಬಹಳಷ್ಟು ಜನರ ಜ್ಞಾನವು ಇದೇ ಪ್ರಕಾರದ್ದಾಗಿರುತ್ತದೆ.

ವ್ಯವಹಾರದಲ್ಲಿ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿಯನ್ನು ಹೇಗೆ ಓರ್ವ ಮನೆ ಕಟ್ಟುವ ಉಪ್ಪಾರನು ಒಳ್ಳೆಯ ಉಪ್ಪಾರನಿಂದ ಪಡೆದುಕೊಳ್ಳು ತ್ತಾನೆ, ಅಥವಾ ಓರ್ವ ಬಡಿಗನು ಇನ್ನೋರ್ವ ಒಳ್ಳೆಯ ಬಡಿಗನಿಂದ ಮರಕೆಲಸದ ಬಗ್ಗೆ ಹೇಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾನೆ ಹಾಗೆಯೇ ಶೇ.೪೦ರಷ್ಟು ಮಟ್ಟವಿರುವ ಸೂಕ್ಷ್ಮಶಕ್ತಿಗಳಿಗೆ ಅದಕ್ಕಿಂತ ಹೆಚ್ಚು ಮಟ್ಟವಿರುವ ಸೂಕ್ಷ್ಮಶಕ್ತಿಗಳಿಂದ ಜ್ಞಾನವು ಸಿಗಬಹುದು.

ಜ್ಞಾನವು ಸಿಗುವ ಉಚ್ಚ ಮಾಧ್ಯಮ

ಸ್ವರ್ಗಲೋಕದ ಮುಂದಿನ ಲೋಕಗಳಲ್ಲಿನ ಸೂಕ್ಷ್ಮಶಕ್ತಿಗಳಿಂದ ಸಿಗುವ ಜ್ಞಾನವು ಅಧ್ಯಾತ್ಮದ ಬಗ್ಗೆ ಇರುತ್ತದೆ. ಈ ಜ್ಞಾನವು ಇಡೀ ಬ್ರಹ್ಮಾಂಡಕ್ಕೆ ಉಪಯುಕ್ತವಾಗುವಂತಹ ಮತ್ತು ಅನೇಕ ಶತಮಾನಗಳವರೆಗೂ ಉಳಿಯುವಂತಹದ್ದಾಗಿರುತ್ತದೆ.

ಸೂಕ್ಷ್ಮಜ್ಞಾನದ ಉಗಮ ಬಹಳಷ್ಟು ಸಲ ಸೂಕ್ಷ್ಮಶಕ್ತಿಗಳಿಂದ ಜ್ಞಾನ ಪಡೆಯುವ ವ್ಯಕ್ತಿಗಳ ಸಂಭಾಷಣೆಯು ಸೂಕ್ಷ್ಮ-ಜಗತ್ತಿನ ಭುವರ್ಲೋಕ, ಪಾತಾಳದಂತಹ ವಿವಿಧ ಲೋಕಗಳಲ್ಲಿರುವ ಶಕ್ತಿಗಳೊಂದಿಗೆ ಆಗುತ್ತಿರುತ್ತದೆ ಮತ್ತು ಕೆಲವೊಂದು ಸಲ ಮಾತ್ರ ದೇವತೆಗಳೊಂದಿಗೆ ಮತ್ತು ವಿಶ್ವಮನಸ್ಸು ಹಾಗೂ ವಿಶ್ವಬುದ್ಧಿಯೊಂದಿಗೆ ಆಗುತ್ತದೆ. ಜ್ಞಾನ ಸಿಗುವ ಪ್ರಕಾರ ಮತ್ತು ಜ್ಞಾನದ ಮಟ್ಟ ಇವು ಜ್ಞಾನ ಸಿಗುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟದ ಮೇಲೆ ಅವಲಂಬಿಸಿರುತ್ತದೆ.

ಓರ್ವ ವ್ಯಕ್ತಿಗೆ ಸಿಗುವ ಸೂಕ್ಷ್ಮಜ್ಞಾನದ ಉಗಮ ಮತ್ತು ಅದರ ಸತ್ಯತೆಯ ವಿಶ್ಲೇಷಣೆಯನ್ನು ಕೇವಲ ಶೇ.೯೦ಕ್ಕಿಂತ ಮುಂದಿನ ಮಟ್ಟದ ಸಂತರೇ ಮಾಡಬಲ್ಲರು.

ಸೂಕ್ಷ್ಮ ಬುದ್ಧಿಯಿಂದ ಜ್ಞಾನವನ್ನು ಪಡೆಯಲು ಅವಶ್ಯಕವಿರುವ ಘಟಕಗಳು

ಅ. ಆಧ್ಯಾತ್ಮಿಕ ಮಟ್ಟ : ಸೂಕ್ಷ್ಮಜ್ಞಾನವನ್ನು ಪ್ರಾಪ್ತಮಾಡಿಕೊಳ್ಳಲು ಅವಶ್ಯಕವಿರುವ ಘಟಕಗಳಲ್ಲಿ ಇದು ಒಂದು ಪ್ರಮುಖ ಘಟಕವಾಗಿದೆ.

ಆ. ಜಿಜ್ಞಾಸೆ ಮತ್ತು ತಳಮಳ : ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಯಾವುದಾದರೊಬ್ಬ ವ್ಯಕ್ತಿಗೆ ಕನಿಷ್ಠ ಸ್ತರದಲ್ಲಿನ (ಉದಾ.ಪೃಥ್ವಿಯ ಮೇಲೆ ದಿನನಿತ್ಯ ನಡೆಯುವ ಘಟನೆಗಳು) ಜ್ಞಾನವನ್ನು ಪಡೆದುಕೊಳ್ಳುವ ಇಚ್ಛೆಯಿದ್ದಲ್ಲಿ ಅವನಿಗೆ ಉಚ್ಚಸ್ತರದ ಸೂಕ್ಷ್ಮಶಕ್ತಿಗಳಿಂದ ಜ್ಞಾನವನ್ನು ಪಡೆದುಕೊಳ್ಳುವ ಕ್ಷಮತೆಯಿದ್ದರೂ ಕನಿಷ್ಠ ಸ್ತರದ ಸೂಕ್ಷ್ಮಶಕ್ತಿಗಳಿಂದ ಜ್ಞಾನವು ಸಿಗುತ್ತದೆ. ತದ್ವಿರುದ್ಧವಾಗಿ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ (ಉದಾ. ಶೇ.೫೦ರಷ್ಟು ಆಧ್ಯಾತ್ಮಿಕ ಮಟ್ಟ) ವ್ಯಕ್ತಿಗಳಿಗೆ ಉಚ್ಚ ಆಧ್ಯಾತ್ಮಿಕ ಸ್ತರದ ಜ್ಞಾನವನ್ನು ಪಡೆದುಕೊಳ್ಳುವ ತೀವ್ರ ತಳಮಳವಿದ್ದರೆ ಅವರಿಗೆ ಉಚ್ಚಸ್ತರದಲ್ಲಿನ ಸೂಕ್ಷ್ಮಶಕ್ತಿಗಳಿಂದ ಮತ್ತು ಉಚ್ಚಲೋಕಗಳಲ್ಲಿನ ಸೂಕ್ಷ್ಮಶಕ್ತಿಗಳ ಮೂಲಕ ಗುರುಕೃಪೆಯಿಂದ ಜ್ಞಾನವು ಸಿಗುತ್ತದೆ.

ಇ. ಈಶ್ವರೀ ಕಾರ್ಯದ ಅವಶ್ಯಕತೆಗನುಸಾರ
ಈ. ಆಧ್ಯಾತ್ಮಿಕ ಮಟ್ಟವು ಶೇ.೭೦ಕ್ಕಿಂತ ಹೆಚ್ಚಿರುವ ಗುರುಗಳ ಸಂಕಲ್ಪ ಮತ್ತು ಕೃಪಾಶೀರ್ವಾದ
ಉ. ಪ್ರಾರಬ್ಧ

ಪೂರ್ವಸೂಚನೆ ಸಿಗುವುದು ಅಥವಾ ಭೂತಕಾಲದಲ್ಲಿನ ಘಟನೆಗಳ ಅರಿವಾಗುವುದು

ಕೆಲವೊಮ್ಮೆ ಕೆಲವು ವ್ಯಕ್ತಿಗಳಿಗೆ ಯಾವುದಾದರೊಂದು ಘಟನೆಯ ಪೂರ್ವಸೂಚನೆಯು ಸಿಗುತ್ತದೆ ಅಥವಾ ಭೂತಕಾಲದಲ್ಲಿನ ಘಟನೆಗಳ ಅರಿವಾಗುತ್ತದೆ. ಇದರ ಕಾರಣಗಳು ಮುಂದಿನಂತಿವೆ.

೧. ಸೂಕ್ಷ್ಮಶಕ್ತಿಗಳ ಮಾಧ್ಯಮದಿಂದ: ಸೂಕ್ಷ್ಮಶಕ್ತಿಯು ಯಾವುದಾದ ರೊಂದು ಘಟನೆಯ ಪೂರ್ವ ಸೂಚನೆಯನ್ನು ವ್ಯಕ್ತಿಯ ಅಂತರ್ಮನಸ್ಸಿನಲ್ಲಿ ಹಾಕುತ್ತದೆ. ಬಹಳಷ್ಟು ಸಲ ಈ ಸೂಕ್ಷ್ಮಶಕ್ತಿಗಳು ಭುವರ್ಲೋಕ ಅಥವಾ ಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳಾಗಿರುತ್ತವೆ. ಕೆಟ್ಟ ಶಕ್ತಿಗಳು ಮುಂದೆ ಬರಲಿರುವ ಕೆಲವು ಘಟನೆಗಳನ್ನು ನೋಡಬಹುದು. ಈ ಕ್ಷಮತೆಯಿಲ್ಲದ ಸೂಕ್ಷ್ಮಶಕ್ತಿಗಳಿಗೆ ಬಹಳಷ್ಟು ಸಲ ಉಚ್ಚ ಮಟ್ಟದ ಕೆಟ್ಟಶಕ್ತಿಗಳಿಂದ ಉದಾ.ಮಾಂತ್ರಿಕರಿಂದ ಜ್ಞಾನವು ಸಿಗುತ್ತದೆ. 

೨. ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾದಾಗ: ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ಏಳು ಸ್ತರಗಳಿವೆ. ವ್ಯಕ್ತಿಯ ಆರನೆಯ ಇಂದ್ರಿಯದ ಕ್ಷಮತೆಗನುಸಾರ ಅವನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿ ಇವುಗಳ ಕನಿಷ್ಠ ಅಥವಾ ಉಚ್ಚ ಸ್ತರದ ಜ್ಞಾನವನ್ನು ಗ್ರಹಣ ಮಾಡಬಹುದು.

ಪೂರ್ವಸೂಚನೆಯ ಬಗ್ಗೆ ದೊರಕಿದ ಬಹುತಾಂಶ ಮಾಹಿತಿಯು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿ ಇವುಗಳೊಂದಿಗೆ ಏಕರೂಪವಾಗಿ ಪಡೆದುಕೊಂಡ ಮಾಹಿತಿ ಯಾಗಿರದೇ ಅದು ಸೂಕ್ಷ್ಮಶಕ್ತಿಗಳಿಂದ ಪ್ರಾಪ್ತವಾದ ಮಾಹಿತಿಯಾಗಿರುತ್ತದೆ.

ಸೂಕ್ಷ್ಮ-ಜಗತ್ತಿನಲ್ಲಿನ ಕೆಟ್ಟ ವಿಷಯಗಳ ಬಗ್ಗೆ ಉದಾ. ಕೆಟ್ಟಶಕ್ತಿಗಳು, ಕೆಟ್ಟ ಶಕ್ತಿಗಳ ಕಾಟ ಮತ್ತು ಕೆಟ್ಟ ಶಕ್ತಿಗಳ ಹಲ್ಲೆ ಇವುಗಳ ಬಗೆಗಿನ ಮಾಹಿತಿಯು ವಿವಿಧ ಸ್ತರದಲ್ಲಿ ಸಿಗಬಹುದು. ಬಹಳಷ್ಟು ಸಲ ನಮಗೆ ಬರುವ ಅನುಭೂತಿಗಳು ಅಥವಾ ನಮಗೆ ಪ್ರಾಪ್ತವಾಗುವ ಜ್ಞಾನವು ಕೇವಲ ಸೂಜಿಯ ಮೊನೆಯಷ್ಟೇ ಆಗಿರುತ್ತದೆ. ಶೇ.೯೦ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳಿಗೆ ಮಾತ್ರ ಸೂಕ್ಷ್ಮ-ಜಗತ್ತಿನ ಬಗ್ಗೆ ಸಂಪೂರ್ಣ ಮಾಹಿತಿಯು ಸಿಗಬಹುದು.

ಸೂಕ್ಷ್ಮಜಗತ್ತಿನಿಂದ ಪಡೆದುಕೊಂಡ ಜ್ಞಾನದ ಪರಿಪೂರ್ಣತೆ

ಸರ್ವಸಾಧಾರಣ ಜ್ಞಾನ ಪಡೆದುಕೊಳ್ಳುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಎಷ್ಟಿರುತ್ತದೆಯೋ, ಅವನು ಅಷ್ಟೇ ಮಟ್ಟವಿರುವ ಸೂಕ್ಷ್ಮಶಕ್ತಿಗಳಿಂದ ಜ್ಞಾನವನ್ನು ಪಡೆದುಕೊಳ್ಳಬಹುದು ಮತ್ತು ಆ ಜ್ಞಾನದ ಪರಿಪೂರ್ಣತೆಯೂ ಅಷ್ಟೇ ಇರುತ್ತದೆ. ಈ ವಿಷಯವು ಇನ್ನೂ ಸ್ಪಷ್ಟವಾಗಲು ‘ಶೇ. ೧ ಎಂದರೆ ಎಲ್ಲಕ್ಕಿಂತ ಕನಿಷ್ಠ ಜ್ಞಾನ ಮತ್ತು ಶೇ.೧೦೦ ಎಂದರೆ ವಿಶ್ವಬುದ್ಧಿಯಿಂದ ದೊರಕಿದ ಸರ್ವೋಚ್ಚ ಜ್ಞಾನ’ ಎಂದು ತಿಳಿದುಕೊಂಡರೆ,

೧. ಶೇ. ೪೦ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳಿಗೆ ಸರ್ವಸಾಧಾರಣ ಅಷ್ಟೇ ಅಂದರೆ ಶೇ.೪೦ರಷ್ಟು ಮಟ್ಟವಿರುವ ಸೂಕ್ಷ್ಮಶಕ್ತಿಗಳಿಂದ ಜ್ಞಾನವು ಸಿಗುತ್ತದೆ ಮತ್ತು ಅದರಲ್ಲಿ ಶೇ.೪೦ರಷ್ಟು ಪರಿಪೂರ್ಣತೆ ಅಥವಾ ಸತ್ಯತೆ ಇರುತ್ತದೆ.

೨. ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವಾಗುವವರೆಗೆ ನಮಗೆ ಸಿಗುವ ಜ್ಞಾನವು ಮುಖ್ಯವಾಗಿ ಕೆಟ್ಟ ಶಕ್ತಿಗಳಿಂದಲೇ ಸಿಗುತ್ತಿರುವುದರಿಂದ ಆ ಜ್ಞಾನವು ಕಪ್ಪುಶಕ್ತಿಯಿಂದ ಕೂಡಿರುತ್ತದೆ. ಸೂಕ್ಷ್ಮಜ್ಞಾನವು ಪ್ರಾಪ್ತವಾಗುವ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದಿರುವವರಿಗೆ ಈ ವಿಷಯವು ತಿಳಿಯುವುದಿಲ್ಲ; ಆದುದರಿಂದ ಅವರು ತಮಗೆ ಸಿಕ್ಕ ಜ್ಞಾನದ ಮೇಲೆ ಸಂಪೂರ್ಣ ವಿಶ್ವಾಸವನ್ನಿಡುತ್ತಾರೆ. ಜ್ಞಾನವು ಕೆಟ್ಟ ಶಕ್ತಿಗಳಿಂದ ಸಿಗುವುದರಿಂದ ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಥವಾ ಪೂರ್ಣತಃ ಅಸತ್ಯವಿರುತ್ತದೆ. ಕೆಟ್ಟ ಶಕ್ತಿಗಳು ಕೊಡುವ ಜ್ಞಾನದ ಬಗ್ಗೆ ನಮ್ಮಲ್ಲಿ ವಿಶ್ವಾಸ ಹೆಚ್ಚಾಗಬೇಕೆಂದು ಪ್ರಾರಂಭದಲ್ಲಿ ಅವು ಕಪ್ಪುಶಕ್ತಿರಹಿತ ಮತ್ತು ಸತ್ಯ ಜ್ಞಾನವನ್ನು ಕೊಡುತ್ತವೆ. ಈ ಜ್ಞಾನದ ಮೇಲೆ ಒಮ್ಮೆ ನಮಗೆ ವಿಶ್ವಾಸವು ನಿರ್ಮಾಣವಾಯಿತೆಂದರೆ ನಂತರ ಅವು ನಮಗೆ ತಪ್ಪು ಮಾಹಿತಿಯನ್ನು ಕೊಡುತ್ತವೆ.

4 comments:

  1. namskar.
    main door opposit inside the house which type hanuman photo will be haning can u tell me please.


    mohan

    ReplyDelete
    Replies
    1. ನಮಸ್ಕಾರ, ಈ ಲಿಂಕ್ ನೋಡಿ. ಇದರಲ್ಲಿದ್ದಂತೆ ನಾಮಪಟ್ಟಿಗಳನ್ನು ಹಾಕಿ. ಏನಾದರೂ ಸಂದೇಹವಿದ್ದರೆ ಕೇಳಿ. http://dharmagranth.blogspot.in/2012/11/blog-post_9760.html

      Delete
  2. ನಮಸಾ್ಕರ
    Thank u very much for sharing such a great information
    I like your Facebook page very much
    Thanks thanks thanks
    ವಂದನೆಗಳು

    ReplyDelete
    Replies
    1. ನಮಸ್ಕಾರ ರವಿಚಂದ್ರರವರೇ, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು, ಧರ್ಮಾಚರಣೆ ಮಾಡಿ ಮತ್ತು ಇತರರಿಗೂ ತಿಳಿಸಿ.

      Delete

Note: only a member of this blog may post a comment.