ಕಾರ್ತಿಕೇಯನು ಮಾಡಿದ ಶೂರಪದ್ಮನ ವಧೆ!ತಾರಕಾಸುರನ ವಧೆಯಿಂದ ದೇವತೆಗಳಿಗೆ ತೊಂದರೆ ತಪ್ಪಿದರೂ ಹೆಚ್ಚುಕಾಲ ಸುಖಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗಲಿಲ್ಲ.

ತಾರಕನಂತೆಯೇ ಬಲಾಢ್ಯನಾದ ಶೂರಪದ್ಮನೆಂಬ ರಾಕ್ಷಸ ಇದ್ದನಲ್ಲವೆ? ವೀರಮಹೇಂದ್ರ ಎಂಬ ಸ್ಥಳದಲ್ಲಿ ಅವನ ವಾಸ. ವಿಶ್ವಕರ್ಮನ ಮಗಳಾದ ಪದ್ಮಕೋಮಲೆ ಅವನ ಹೆಂಡತಿ. ಅವಳಲ್ಲಿ ಭಾನುಕೋಪ, ಅಗ್ನಿಮುಖ, ಹಿರಣ್ಯಕ, ವಜ್ರಬಾಹು ಮುಂತಾದ ಶೂರರೂ ದುಷ್ಟರೂ ಆದ ಮಕ್ಕಳಿದ್ದರು. ಆ ಮಕ್ಕಳಿಗೆ ದೇವ-ದಾನವ- ಗಂಧರ್ವ-ಸಿದ್ಧ-ವಿದ್ಯಾಧರ-ಮಾನವ-ನಾಗಕನ್ಯೆಯರನ್ನು ತಂದು ಮದುವೆ ಮಾಡಿಸಿ ರಾಕ್ಷಸ ಸಂತತಿಯನ್ನು ಬಹಳವಾಗಿ ಬೆಳೆಸಿದನು. ಅವರೆಲ್ಲ ಸಜ್ಜನರಿಗೆ ಹಿಂಸೆ ಕೊಡುತ್ತ ಅನ್ಯಾಯ, ಅತ್ಯಾಚಾರ ಮಾಡುತ್ತ ಅಧರ್ಮವನ್ನು ಬೆಳೆಸುತ್ತಿದ್ದರು.

ತಾರಕಾಸುರನು ಹೋದ, ಜನರಿಗೆ ಹಿಂಸೆ ತಪ್ಪಿತು ಎಂದು ಸಂತೋಷ ಪಡುವಾಗಲೇ ಶೂರಪದ್ಮ ಮತ್ತು ಅವನ ಸಂತತಿಯವರ ಹಿಂಸೆ ಪ್ರಾರಂಭವಾಯಿತು. ಇವರನ್ನು ತಡೆಗಟ್ಟುವವರು ಯಾರು? ತಾರಕಾಸುರನನ್ನು ತಡೆದ ಕಾರ್ತಿಕೇಯನೇ ಇವರ ಪೀಡೆಯನ್ನು ತಡೆಯಬೇಕು ಎಂದು ನಾರದ ಮಹರ್ಷಿ ಯೋಚಿಸಿದ.

ಒಮ್ಮೆ ನಾರದನು ವೀಣಾನಾದದೊಡನೆ ಪರಮಾತ್ಮನ ಗುಣಗಾನ ಮಾಡುತ್ತ ವೀರಮಹೇಂದ್ರ ನಗರಕ್ಕೆ ಬಂದನು.

‘‘ಇಂದ್ರನ ಮಡದಿಯಾದ ಶಚಿದೇವಿಯೆಂದರೆ ಸ್ತ್ರೀ ರತ್ನ. ಅವಳನ್ನು ನೀನು ತಂದು ಇಟ್ಟುಕೊಂಡರೆ, ಇಂದ್ರನು ನಿನ್ನ ಸೋದರನಾದ ತಾರಕನನ್ನು ಕಾರ್ತಿಕೇಯನಿಂದ ಕೊಲ್ಲಿಸಿದ ಸೇಡನ್ನು ತೀರಿಸಿದಂತೆ ಆಗುವುದು’’ ಎಂದು ನಾರದನು ಶೂರಪದ್ಮನಿಗೆ ಹೇಳಿಕೊಟ್ಟ.

ಹೀಗೇಕೆ ಮಾಡಿದ ನಾರದ ಮಹರ್ಷಿ?

ಕೆಟ್ಟ ರಾಕ್ಷಸರಿಗೆ ಒಳ್ಳೆಯ ನೀತಿ ಉಪದೇಶಿಸಿದರೆ ಫಲವಿಲ್ಲ. ಅಂತಹ ಕೆಟ್ಟವರನ್ನು ಮತ್ತೂ ಕೆರಳಿಸಿ ಅವರು ತಮ್ಮ ಅನ್ಯಾಯಗಳ ಫಲದಿಂದಲೇ ಅಳಿದು ಹೋಗುವಂತೆ  ಮಾಡುವುದು ನಾರದನು ಕೈಗೊಂಡ ನೀತಿ.

ರಾಕ್ಷಸ ಗುಣದ ಶೂರಪದ್ಮನಿಗೆ ಮುನಿಯ ಉಪದೇಶ ಅನುಗ್ರಹವೆಂದೇ ತೋರಿತು. ಅವನು ಶಚಿದೇವಿಯನ್ನು ತರಲು ಉದ್ಯುಕ್ತನಾದನು.

ಇಂದ್ರಲೋಕಕ್ಕೆ ದಾಳಿ

ಶೂರಪದ್ಮನು ರಾಕ್ಷಸ ಸೈನ್ಯ ತೆಗೆದುಕೊಂಡು ಇಂದ್ರ ಲೋಕಕ್ಕೆ ದಾಳಿಯಿಡಲು ನಿರ್ಣಯಿಸಿದನು. ಆಗ ಅವನ ಮಗ ಭಾನುಕೋಪನು ಬಂದನು. ‘‘ತಂದೆಯೇ, ನನಗೆ ಅಪ್ಪಣೆಕೊಡು. ನಾನು ಸೈನ್ಯದೊಂದಿಗೆ ದೇವಲೋಕಕ್ಕೆ ಹೋಗುವೆನು. ಎದುರಿಸಿದ ದೇವತೆಗಳನ್ನು ಬಗ್ಗುಬಡಿದು ಶಚಿದೇವಿಯನ್ನು ತರುವೆನು’’  ಎಂದು ಶೌರ್ಯದಿಂದ ನುಡಿದನು. ಶೂರಪದ್ಮನು ಅನುಮತಿ ಕೊಟ್ಟನು. ರಾಕ್ಷಸರ ಸೈನ್ಯ ದೇವಲೋಕಕ್ಕೆ ನುಗ್ಗಿತು.

ನಾರದಮುನಿ ಮುಂಚಿತವಾಗಿಯೇ ಇಂದ್ರನ ಬಳಿಗೆ ಬಂದನು. ಶೂರಪದ್ಮನು ಶಚಿಯನ್ನು ಬಯಸಿ ದೇವಲೋಕಕ್ಕೆ ದಾಳಿಯಿಡುವ ಸಂಗತಿಯನ್ನು ತಿಳಿಸಿದನು.

ದೇವೇಂದ್ರನಿಗೆ ಭಯವಾಯಿತು. ಹಿಂದೆ ಅವನು ತಾರಕಾಸುರನ ಶೌರ್ಯವನ್ನು ಕಂಡಿದ್ದನು. ಶೂರಪದ್ಮನು ಅವನಿಗಿಂತಲೂ ಬಲಾಢ್ಯನೆಂದು ಕೇಳಿದ್ದನು. ‘ಏನು ಮಾಡಲಿ?’ ಎಂದು ಗುರುವಾದ ಬೃಹಸ್ಪತಿಯೊಡನೆ ಯೋಚಿಸಿದನು. ಇಂದ್ರನು ಶಚಿದೇವಿಯನ್ನು ಕರೆದುಕೊಂಡು ಯಾರೂ ತಿಳಿಯದ ಹಾಗೆ ಭೂಲೋಕಕ್ಕೆ ಬಂದನು. ಚಿದಂಬರದ ಸಮೀಪ ಶ್ರೀಕಾಂತ ಎಂಬ ಕಾಡಿನಲ್ಲಿ ಶಿವನನ್ನು ಭಜಿಸುತ್ತ ಇದ್ದನು.

ಇತ್ತ ದೇವತೆಗಳು ತಮ್ಮ ದೊರೆಯಾದ ಇಂದ್ರನು ಇಲ್ಲದೆ, ಎಲ್ಲಿ ಹೋಗಿರುವನೆಂಬುದನ್ನೂ ತಿಳಿಯದೆ ಕಂಗೆಟ್ಟರು. ಬೃಹಸ್ಪತಿ ಅವರನ್ನು ಸಮಾಧಾನಪಡಿಸಿ, ಇಂದ್ರನ ಮಗನಾದ ಜಯಂತನಿಗೆ ದೇವತೆಗಳ ಒಡೆತನವನ್ನು ಕೊಟ್ಟನು. ಶೂರಪದ್ಮನನ್ನು ಎದುರಿಸಲು ದೇವತೆಗಳು ಸಿದ್ಧವಾಗುವಂತೆ ಸೂಚಿಸಿದನು.

ದೇವತೆಗಳಿಗೆ ಸೋಲು

ರಾಕ್ಷಸ ಸೈನ್ಯ ದೇವಲೋಕಕ್ಕೆ ಮುತ್ತಿಗೆ ಹಾಕಿತು. ರಕ್ಕಸರು ಮನೆಮನೆಗಳಿಗೆ ನುಗ್ಗಿದರು. ಹೆಂಗಸರನ್ನು ಹಿಡಿದು ಎಳೆದರು. ಅವರ ಆಭರಣಗಳನ್ನು ಕಿತ್ತರು. ಮಕ್ಕಳನ್ನು ನಿಷ್ಕರುಣೆಯಿಂದ ಕತ್ತರಿಸಿದರು. ‘ನಿಮ್ಮ ಇಂದ್ರನನ್ನು ತೋರಿಸು’  ಎನ್ನುತ್ತ ಸಿಕ್ಕಿದವರಿಗೆಲ್ಲ ಹೊಡೆದರು. ‘ಶಚಿ ಎಲ್ಲಿರುವಳು’  ಎನ್ನುತ್ತ ಬಲಾತ್ಕರಿಸಿದರು. ದೇವಲೋಕದ ಸುಂದರ ಉದ್ಯಾನಗಳನ್ನು ಹಾಳುಗೆಡವಿದರು. ಮನೆಗಳಿಗೆ ಬೆಂಕಿ ಹಚ್ಚಿದರು.

ದೇವತೆಗಳ ಸೈನ್ಯ ರಾಕ್ಷಸರನ್ನು ಎದುರಿಸಿತು. ಭಾನುಕ, ರೇಣುಕ ಮುಂತಾದ ಸೇನಾಪತಿಗಳು ಅವರೊಡನೆ ಕಾದಿ ಸೋತರು. ಜಯಂತನು ಬಂದು ಶೌರ್ಯದಿಂದ ಯುದ್ಧ ಮಾಡಿದನು. ಆದರೆ ಭಾನುಕೋಪನು ಅವನನ್ನು ಸೋಲಿಸಿ ಸೆರೆಹಿಡಿದನು. ದೇವೇಂದ್ರ-ಶಚಿ ಇಬ್ಬರನ್ನು ಸ್ವರ್ಗಲೋಕದಲ್ಲೆಲ್ಲಾ ಹುಡುಕಿದರೂ ಅವರು ಸಿಕ್ಕಲಿಲ್ಲ. ಭಾನುಕೋಪನು ದೇವಲೋಕದಿಂದ ಬಹಳ ಹೆಚ್ಚಿನ ಸಂಪತ್ತನ್ನು ಕೊಳ್ಳೆಹೊಡೆದು, ಅದನ್ನು ಸೆರೆಯಾಳುಗಳಾದ ದೇವತೆಗಳಿಂದ ಹೊರಿಸಿಕೊಂಡು ವೀರಮಹೇಂದ್ರ ನಗರಕ್ಕೆ ಹಿಂದೆರಳಿದನು.

ದೇವತೆಗಳಿಗೆ ಅಭಯ

ರಾಕ್ಷಸರು ದೇವಲೋಕದಲ್ಲಿ ಮಾಡಿದ ಹಾವಳಿಯನ್ನು ಬೃಹಸ್ಪತಿ ಮತ್ತು ದೇವತೆಗಳು ಶ್ರೀಕಾಶದ ವನಕ್ಕೆ ಬಂದು ಇಂದ್ರನಿಗೆ ತಿಳಿಸಿದರು. ಇಂದ್ರ, ಶಚಿ ಇಬ್ಬರೂ ಬಹಳ ದುಃಖಪಟ್ಟರು. ಇಂದ್ರನು ಶಚಿಯನ್ನು ಆ ವನದ ರಕ್ಷಕನಾದ ಶಾಸ್ತಾರನೆಂಬ ದೇವತೆಯ ರಕ್ಷಣೆಯಲ್ಲಿ ಬಿಟ್ಟು ಬೃಹಸ್ಪತಿಯೊಂದಿಗೆ ದೇವತೆಗಳನ್ನು ಕೂಡಿಕೊಂಡು ಬ್ರಹ್ಮನ ಬಳಿಗೆ ಹೋದನು. ಎಲ್ಲರೂ ಶಿವನ ಮೊರೆಹೊಕ್ಕರು.

‘‘ನೀವೆಲ್ಲ ಈಗ ರಜತಾದ್ರಿಯ ಬಳಿಯಿರುವ ಕಾಕಾಚಲದಲ್ಲಿ ಸುರಕ್ಷಿತವಾಗಿ ಇದ್ದುಕೊಳ್ಳಿ. ಶೂರಪದ್ಮ ಮುಂತಾದ ದುಷ್ಟರನ್ನು ಕಾರ್ತಿಕೇಯನ ಮೂಲಕ ಕೊಲ್ಲಿಸಿ, ನಿಮ್ಮ ಕಷ್ಟವನ್ನು ಪರಿಹರಿಸುವೆನು’  ಎಂದು ಶಿವನು ಅಭಯ ಕೊಟ್ಟನು. ದೇವತೆಗಳೆಲ್ಲ ಅಲ್ಲಿ ನಿಂತರು.

ಅಜಮುಖಿಯ ಕುಹಕ

ಶೂರಪದ್ಮನ ತಂಗಿ ಅಜಮುಖಿ. ಶಚಿದೇವಿಯು ಎಲ್ಲಿದ್ದಾಳೆ ಎಂದು ತಾನು ಕಂಡುಹಿಡಿಯುತ್ತೇನೆ ಎಂದು ಅಣ್ಣನಿಗೆ ಹೇಳಿ ಅವನ ಅಪ್ಪಣೆ ಪಡೆದು ಹೊರಟಳು. ಬುದ್ಧಿವಂತಿಕೆಯಿಂದ ಕಂಡೂ ಹಿಡಿದಳು. ದೇವತೆಯಂತೆ ವೇಷ ಮರೆಸಿಕೊಂಡು ಶಚಿದೇವಿಯನ್ನು ಮಾತನಾಡಿಸಿದಳು. ‘ನನ್ನ ಜೊತೆಗೆ ಬಾ, ಶೂರಪದ್ಮನ ಅರಮನೆಗೆ ಹೋಗೋಣ, ಅಲ್ಲಿ ಸುಖವಾಗಿರು’ ಎಂದು ಹೇಳಿದಳು. ಶಚಿದೇವಿ ಒಪ್ಪಲಿಲ್ಲ. ಅಜಮುಖಿ ಅವಳನ್ನು ಹೆದರಿಸಿದಳು. ಶಚಿದೇವಿಯನ್ನು ಕಾಯುತ್ತಿದ್ದವರು ಅಜಮುಖಿಯನ್ನು ಹಿಡಿದು ಅವಳ ಕೈಗಳನ್ನು ಕತ್ತರಿಸಿದರು. ಅವಳು ಅರಚಿಕೊಂಡು ಅಬ್ಬರಿಸುತ್ತ ಅಣ್ಣನ ಬಳಿಗೆ ಓಡಿ ಹೋದಳು.

ಇಂದ್ರನು ಶಚಿದೇವಿಯನ್ನು ಕಾಕಾಚಲಕ್ಕೆ ಕರೆದುಕೊಂಡು ಹೋಗಿ ಬಿಟ್ಟನು.

ತಂಗಿಯ ದುರವಸ್ಥೆಯನ್ನು ನೋಡಿ ಶೂರಪದ್ಮನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ‘ಈ ದೇವತೆಗಳಿಗೆ ಬುದ್ಧಿ ಕಲಿಸುತ್ತೇನೆ, ನಿನಗಾದ ಅಪಮಾನಕ್ಕೆ ಅವರಿಗೆ ಶಾಸ್ತಿ ಮಾಡುತ್ತೇನೆ’  ಎಂದು ಗುಡುಗಿದನು. ದೇವತೆಗಳನ್ನು ಹಿಡಿದು ಹೊಡೆದನು, ಸೆರೆಮನೆಗೆ ನೂಕಿದನು. ಶ್ರೀಕಾಶವನಕ್ಕೆ ಬಂದು ಇಂದ್ರನನ್ನೂ ಶಚಿದೇವಿಯನ್ನೂ ಹುಡುಕಿದನು. ಅವರು ಕಾಣಲಿಲ್ಲ. ಕೋಪದಿಂದ ಶ್ರೀಕಾಶವನವನ್ನೆಲ್ಲ ಹಾಳುಮಾಡಿದನು.

ಶಿವನ ಆಜ್ಞೆ-ಮುತ್ತಿಗೆ

ದೇವತೆಗಳಿಗೆ ಶಿವನು ಅಭಯ ಕೊಟ್ಟನಂತರ ಕಾರ್ತಿಕೇಯನನ್ನು ಕರೆಸಿದನು. ಲೋಕದಲ್ಲಿ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿ, ರಾಕ್ಷಸರನ್ನೆಲ್ಲ ನಾಶಮಾಡುವಂತೆ ಆಜ್ಞೆಮಾಡಿದನು. ಕಾರ್ತಿಕೇಯನು ತಂದೆಯ ಆಜ್ಞೆಯನ್ನು ಶಿರಸಾವಹಿಸಿದನು. ತಾಯಿಯ ಆಶೀರ್ವಾದವನ್ನೂ ಪಡೆದು ದೇವತೆಗಳ ಸೈನ್ಯವನ್ನು ಕೂಡಿಸಿದನು. ಶೂರಪದ್ಮನ ವೀರಮಹೇಂದ್ರ ನಗರವನ್ನು ಮುತ್ತಲು ಸಿದ್ಧತೆಯಾಯಿತು.

ಕಾರ್ತಿಕೇಯನ ಸೇನೆಯ ವೀರರಲ್ಲಿ ಒಬ್ಬನಾದ ವೀರಬಾಹು ಶೂರಪದ್ಮನಿಗೆ ನೀತಿಯನ್ನು ಸಾರುವುದಕ್ಕಾಗಿ ಹೋದನು. ತಡೆದ ರಕ್ಕಸರನ್ನು ಉರುಳಿಸಿ ಶೂರಪದ್ಮನ ಆಸ್ಥಾನಕ್ಕೆ ಬಂದನು.

‘‘ಎಲೈ ರಾಕ್ಷಸರಾಜನೇ, ತಾರಕನನ್ನು ಕೊಂದಿರುವ ಕಾರ್ತಿಕೇಯನ ಮುಂದೆ ನಿನ್ನ ಶೌರ್ಯ ನಡೆಯದು. ಎದುರಾದರೆ ನಿನ್ನನ್ನೇ ಅವನು ಕೊಲ್ಲುವನು. ಒಳ್ಳೆಯ ಮಾತಿನಿಂದ ದೇವತೆಗಳನ್ನು ಬಿಟ್ಟುಕೊಡು. ಲೋಕಕ್ಕೆ ಅನ್ಯಾಯ ಮಾಡದಿರು. ಅಧರ್ಮದಿಂದ ನಡೆಯುವುದಿಲ್ಲವೆಂದು ಭರವಸೆಕೊಟ್ಟು ಶರಣಾಗತನಾಗು’’ ಎಂದನು.

ದುಷ್ಟರು ನೀತಿಯಿಂದ ಮೃದುವಾಗುವರೆ? ಶೂರಪದ್ಮನು ಕೆರಳಿ ಕೆಂಡವಾದನು. ವೀರಬಾಹುವನ್ನು ಬಡಿದು ಕೊಲ್ಲಲು ತನ್ನ ಒಂದು ಸಾವಿರ ಸಂಖ್ಯೆಯ ಮೀಸಲು ಪಡೆಗೆ ಆಜ್ಞೆ ಮಾಡಿದನು. ವೀರಬಾಹು ಅವರನ್ನೆಲ್ಲ ಕೊಂದು, ಶೌರ್ಯವನ್ನು ಮೆರೆಸಿ, ಹಿಂದೆರಳಿದನು. ‘ನಾಳೆ ಶೂರಪದ್ಮನನ್ನು ನಾನೇ ಕೊಲ್ಲುವೆನು’ ಎಂದು ಕಾರ್ತಿಕೇಯನು ನುಡಿದನು.

ರಾತ್ರಿ ಕಳೆಯಿತು. ಪ್ರಾತಃಕಾಲದಲ್ಲಿ ಕಾರ್ತಿಕೇಯನು ದೇವತೆಗಳ ಮಹಾಸೈನ್ಯದೊಂದಿಗೆ ದಂಡಯಾತ್ರೆ ಕೈಗೊಂಡನು. ದೇವ ಸೈನ್ಯವು ವೀರಮಹೇಂದ್ರ ನಗರವನ್ನು ಮುತ್ತಿತು.

ಯುದ್ಧ

ಶೂರಪದ್ಮನು ಒಡ್ಡೋಲಗದಲ್ಲಿದ್ದನು. ಆಗ ದೂತನೊಬ್ಬನು ಬಂದು ಕಾರ್ತಿಕೇಯನ ಸೇನೆ ನಗರಕ್ಕೆ ಮುತ್ತಿಗೆ ಹಾಕಿದೆಯೆಂದು ತಿಳಿಸಿದನು.

‘‘ಹಸಿದು ಗರ್ಜಿಸುವ ಸಿಂಹದ ಬಾಯಿಗೆ ಬೀಳಲು ಕುರಿಹಿಂಡು ಬಂತೇ? ಒಳಿತಾಯಿತು. ಹೊರಡಿರಿ ಯುದ್ಧಕ್ಕೆ’’ ಎಂದು ಶೂರಪದ್ಮನು ಹೇಳಿದ್ದೇ ತಡ, ಅವನ ತಮ್ಮಂದಿರು, ಮಕ್ಕಳು ಮತ್ತು ಇತರ ರಾಕ್ಷಸವೀರರು ಎದ್ದುನಿಂತರು.

‘‘ನಾಯಿಗಳನ್ನು ಗೆಲ್ಲಲು ಆನೆಯೇಕೆ? ಆ ದೇವತೆಗಳ್ನು ಕೆಡಹಲು ನಾನು ಸಾಕು, ನಾನೇ ಸಾಕು’’- ಎಂದು ಒಬ್ಬೊಬ್ಬರಾಗಿ ಶೌರ್ಯದ ಮಾತುಗಳನ್ನಾಡಿದರು. ಶೂರಪದ್ಮನು ಅವರಿಗೆ ಅಪ್ಪಣೆಕೊಟ್ಟು ಯುದ್ಧಕ್ಕೆ ಕಳುಹಿಸಿದನು.

ಭಾನುಕೋಪನು ಮುಂದಾಳಾಗಿ ಯುದ್ಧಕ್ಕೆ ಬಂದನು. ಅವನಿಗೆ ಎದುರಾಗಲು ಷಣ್ಮುಖನು ವೀರಬಾಹುವನ್ನು ನೇಮಿಸಿದನು. ಯುದ್ಧ ತೀವ್ರವಾಗಿ ನಡೆಯಿತು. ಮಂತ್ರಾಸ್ತ್ರಗಳು ಪ್ರಯೋಗಗೊಂಡವು. ಕೊನೆಗೆ ವೀರಬಾಹು ಶೂಲದಿಂದ ಭಾನುಕೋಪನನ್ನು ತಿವಿದು ಕೊಂದನು. ಸಹಸ್ರಾರು ರಾಕ್ಷಸವೀರರು ಮಡಿದರು. ಶೂರಪದ್ಮನ ಇತರ ಮಕ್ಕಳೂ ತಮ್ಮಂದಿರೂ ಸತ್ತರು.

ಶೂರಪದ್ಮನ ವಧೆ

ಈಗ ಶೂರಪದ್ಮನು ಕಾರ್ತಿಕೇಯನನ್ನು ಕೊಂದು ಬಿಡುವೆನೆಂಬ ಹುಚ್ಚು ಧೈರ್ಯದಿಂದ ತಾನೇ ಯುದ್ಧಕ್ಕೆ ಹೊರಟನು. ಅವರಿಬ್ಬರೊಳಗೆ ಯುದ್ಧವಾಯಿತು. ಕಾರ್ತಿಕೇಯನು ಅವನ ಬಾಣಗಳನ್ನು ಕತ್ತರಿಸಿದನು. ರಥವನ್ನು ಉರುಳಿಸಿದನು. ಕತ್ತಿಯನ್ನು ಸೆಳೆದುಕೊಂಡನು. ಶೂರಪದ್ಮನು ಗದೆಯನ್ನು ಹಿಡಿಯಲು,

‘‘ಎಲೋ ದುಷ್ಟ, ಅನ್ಯರ ಹೆಂಡತಿಯನ್ನು ಬಯಸುವ, ನೀತಿಗೆಟ್ಟ, ನಿನ್ನಲ್ಲಿ ಯಾವ ಆಯುಧವಿದ್ದರೇನು? ನೀತಿ ತಪ್ಪಿದವನನ್ನು ಜಯಲಕ್ಷಿ  ಒಲಿಯುವಳೆ?’’ ಎನ್ನುತ್ತ ಅವನ ಗದೆಯನ್ನು ಪುಡಿಮಾಡಿದನು.

ಈಗ ಶೂರಪದ್ಮನು ಮಾಯಾ ಯುದ್ಧವನ್ನು ಪ್ರಾರಂಭಿಸಿದನು. ಬಹು ವಿಧದ ಕ್ರೂರ ಜಂತುಗಳನ್ನೂ ವಿಕಾರ ರೂಪದ ಅಸಂಖ್ಯಾತವಾದ ರಾಕ್ಷಸ-ಭೂತ-ಭೇತಾಳರನ್ನೂ ಮಾಯಕದಿಂದ ನಿರ್ಮಿಸಿದನು.

ಕಾರ್ತಿಕೇಯನು ಬೆದರಲಿಲ್ಲ. ಶೂರಪದ್ಮನ ಮನಸ್ಸು ಯಾವ ಮಟ್ಟದಲ್ಲಿದೆಯೆಂದು ನೋಡುವುದಕ್ಕಾಗಿ ಕಾರ್ತಿಕೇಯನು ತನ್ನ ದಿವ್ಯಶಕ್ತಿಯಿಂದ ಅವನಿಗೆ ವಿಶ್ವರೂಪವನ್ನು ತೋರಿಸಿದನು. ಆಗ ಶೂರಪದ್ಮನು ಬೆರಗಾದನು. ಆದರೂ ಅವನಲ್ಲಿ ಸಾತ್ವಿಕ ಭಾವನೆ ಬರಲಿಲ್ಲ. ಭಕ್ತಿ ಮೂಡಲಿಲ್ಲ.

‘ಈ ಹುಡುಗ ನನ್ನಂತೆಯೇ ಮೋಡಿಯನ್ನೂ ಬಲ್ಲನು’ ಎಂದುಕೊಂಡನು.

ಆಗ ಕಾರ್ತಿಕೇಯನು ‘ಈ ರಕ್ಕಸನಿಗೆ ಧರ್ಮದ ವಿಚಾರದಲ್ಲಿ ಪ್ರೀತಿಯಿಲ್ಲ, ಜ್ಞಾನದಲ್ಲಿ ಮನಸ್ಸಿಲ್ಲ. ನೀತಿ ಇವನಿಗೆ ಕಹಿ. ಇವನಲ್ಲಿ ಭಕ್ತಿ ಮೂಡದು. ಸಾಮವನ್ನು ಇವನಲ್ಲಿ ವರ್ತಿಸಿ ಪ್ರಯೋಜನವಿಲ್ಲ. ಆದುದರಿಂದ ಇವನನ್ನು ಕೊಂದು ಲೋಕವನ್ನು ಉದ್ಧರಿಸುವೆನು’ ಎಂದು ತೀರ್ಮಾನಿಸಿದನು.

ಕಾರ್ತಿಕೇಯನು ತನ್ನ ಅದ್ಭುತವಾದ ಶಕ್ತ್ಯಾಯುಧವನ್ನು ಶೂರಪದ್ಮನ ಮೇಲೆ ಪ್ರಯೋಗಿಸಿದನು. ಅದು ಬೆಂಕಿಯನ್ನು ಕಾರುತ್ತ, ಶೂರಪದ್ಮನ ತಲೆಯನ್ನು ಕತ್ತರಿಸಿ, ಹಿಂದಕ್ಕೆ ಬಂದು ಕಾರ್ತಿಕೇಯನ ಕೈ ಸೇರಿತು. ಉಳಿದ ರಾಕ್ಷಸರು ಓಡಿದರು. ದೇವತೆಗಳು ಹೂವಿನ ಮಳೆ ಸುರಿಸಿದರು.

ಕಾರ್ತಿಕೇಯನು ರಾಕ್ಷಸರ ವಧೆಗೆ ನೆರವಾದ ದೇವತೆಗಳನ್ನು ಮನ್ನಿಸಿದನು. ಶೂರಪದ್ಮನ ಸೆರೆಮನೆಯಲ್ಲಿದ್ದ ದೇವತೆಗಳನ್ನು ಬಿಡಿಸಿದರು. ರಾಕ್ಷಸರು ದೇವಲೋಕದಿಂದಲೂ ಇತರ ಕಡೆಗಳಿಂದಲೂ ಅನ್ಯಾಯವಾಗಿ ತಂದ ಸಂಪತ್ತನ್ನು ಅಲ್ಲಲ್ಲಿಗೆ ಹಿಂದಿರುಗಿಸಲು ಏರ್ಪಡಿಸಿದನು. ರಾಕ್ಷಸರು ಸುಟ್ಟುಹಾಕಿದ ಮತ್ತು ಮುರಿದು ಕೆಡವಿದ ಮನೆಗಳನ್ನೂ ನಗರ-ಉದ್ಯಾನಗಳ್ನೂ ವಿಶ್ವಕರ್ಮನ ಮೂಲಕ ಪುನಃ ನಿರ್ಮಾಣಮಾಡಿಸಿದನು. ಇಂದ್ರನನ್ನು ದೇವಪಟ್ಟದಲ್ಲಿ ಸುಭದ್ರವಾಗಿ ನೆಲೆಗೊಳಿಸಿದನು. ಎಲ್ಲರೂ ಸುಖ ಶಾಂತಿಗಳಿಂದ ಸಮೃದ್ಧಿಯಿಂದ ಸದ್ಗುಣ-ಸದಾಚಾರ ಗಳಿಂದ ಬಾಳುವಂತೆ ಮಾಡಿದನು. ತನ್ನ ನೆಲೆಯನ್ನು ಸೇರಿ, ಲೋಕಕಲ್ಯಾಣವನ್ನೇ ಯೋಚಿಸುತ್ತ ಮೆರೆದನು.

ಶಿವನು ಕುಮಾರನನ್ನು ಮೆಚ್ಚಿ ಕೊಂಡಾಡಿದನು.

ಲೇಖಕರು: ಟಿ. ಕೇಶವ ಭಟ್ಟ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ

3 comments:

  1. ಸುರಸೇನಾಧಿಪತಿ ಶ್ರೀ ಕಾರ್ತಿಕೇಯನು ಮಾಡಿದ ಶೂರಪದ್ಮ ವಧೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟಿರುವ ಶ್ರೀ ಕೇಶವ ಭಟ್ಟರಿಗೆ ಭಕ್ತಿಪೂರ್ವಕ ನಮನಗಳು. ಧರ್ಮಗ್ರಂಥ ವೆಬ್ ಸೈಟ್ ಬಹಳ ಮಾಹಿತಿಪೂರ್ಣವಾಗಿದೆ.
    -ಕಿರಣ್ ಎಸ್ ವಿಪ್ರ‌

    ReplyDelete

Note: only a member of this blog may post a comment.