ಗೋವರ್ಧನ ಪೂಜೆ


ವೃಂದಾವನ ನಿವಾಸಿಗಳು ಸ್ವರ್ಗಾಪತಿ ಇಂದ್ರನನ್ನು ಪೂಜಿಸುವುದನ್ನು ತಪ್ಪಿಸಿ ಗೋವರ್ಧನ ಗಿರಿಯನ್ನು ಪೂಜಿಸುವಂತೆ ಮಾಡಿದ ಕೃಷ್ಣನ ಲೀಲೆ ನೆನಪಿಸುವ ಹಬ್ಬವಿದು.

ಗೋವರ್ಧನ ಗಿರಿ ಕೇವಲ ಒಂದು ಬೆಟ್ಟವಲ್ಲ. ಕೃಷ್ಣ-ಬಲರಾಮರ ಒಡನಾಡಿ ಅದು. ಅವರಿಬ್ಬರೂ ಓಡಾಡಿದ ಪವಿತ್ರ ಗಿರಿ ಅದು. ಆದ್ದರಿಂದ ಗೋವರ್ಧನ ಗಿರಿಗೆ ದೇವೋತ್ತಮ ಪರಮ ಪುರುಷನ ಶ್ರೇಷ್ಠ ಭಕ್ತರ ಸಾಲಿನಲ್ಲಿ ಸ್ಥಾನವಿದೆ. ವೃಂದಾವನ ವಾಸಿಗಳಿಗೆ ರಕ್ಷಣೆ ನೀಡುವುದಲ್ಲದೇ, ಅವರ ಗೋವುಗಳಿಗೆ ಮೇವು ನೀಡುತ್ತಿದ್ದುದೂ ಇದೇ ಗೋವರ್ಧನ ಗಿರಿ. ಒಂದರ್ಥದಲ್ಲಿ ವೃಂದಾವನದ ಜೀವಾಳ ಇದು. ಆದ್ದರಿಂದ ಮಳೆ ದೇವತೆ (ಅಹಂಕಾರಿಯಾಗಿದ್ದ) ಇಂದ್ರನನ್ನು ಪೂಜಿಸುವ ಬದಲು ನಿಮ್ಮೆಲ್ಲರ ರಕ್ಷಕನಾದ ಗೋವರ್ಧನ ಗಿರಿಯನ್ನು ಪೂಜಿಸಿ ಎಂದು ಕೃಷ್ಣ ವೃಂದಾವನ ವಾಸಿಗಳ ಮನವೊಲಿಸಿದ. ಅದರಂತೆ ಅವರೆಲ್ಲರೂ ಗೊವರ್ಧನ ಪೂಜೆಗೆ ಮುಂದಾದರು. ಇದರಿಂದ ಸಿಟ್ಟಿಗೆದ್ದ ಇಂದ್ರ ವೃಂದಾವನವೇ ಕೊಚ್ಚಿಕೊಂಡು ಹೋಗುವಂತೆ ಮಳೆ ಸುರಿಸಿದ. ವೃಂದಾವನ ವಾಸಿಗಳು ಭೀತಿಯಿಂದ ಕೃಷ್ಣನಲ್ಲಿ ಮೊರೆ ಇಟ್ಟರು. ಕೃಷ್ಣ ಗೋವರ್ಧನ ಗಿರಿಯನ್ನು, ಛತ್ರಿಯಂತೆ ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಮಳೆಯನ್ನು ತಡೆದ. ವೃಂದಾವನವಾಸಿಗಳು ಗೋವರ್ಧನ ಗಿರಿಯಡಿ ಆಶ್ರಯ ಪಡೆದರು. ನಂತರ ಕೃಷ್ಣನಿಗೇ ಸವಾಲೆಸೆದ ತನ್ನ ಮೂರ್ಖತನಕ್ಕೆ ನಾಚಿಕೆ ಪಟ್ಟುಕೊಂಡ ಇಂದ್ರ ಕೃಷ್ಣನ ಬಳಿ ಬಂದು ಕ್ಷಮೆ ಯಾಚಿಸಿದ. ನಂತರ ವೃಂದಾವನ ವಾಸಿಗಳು ವಿಜೃಂಭಣೆಯಿಂದ ಗೋವರ್ಧನ ಗಿರಿಯನ್ನು ಪೂಜಿಸಿದರು. ಹೀಗೆ ಕೃಷ್ಣ ತನ್ನ ಮತ್ತೊಂದು ಮಹೋನ್ನತ ಲೀಲೆಯನ್ನು ಜಗತ್ತಿಗೆ ತೋರಿದ. ಮಾತ್ರವಲ್ಲ, ತಾನು ಬೇರೆಯಲ್ಲ; ಗೋವರ್ಧನ ಗಿರಿ ಬೇರೆಯಲ್ಲ. ಗೋವರ್ಧನ ಗಿರಿಯನ್ನು ಪೂಜಿಸಿದರೆ ನನ್ನನ್ನೇ ಪೂಜಿಸಿದಂತೆ ಎಂಬುದಾಗಿ ತಿಳಿಸಿದ.

No comments:

Post a Comment