ಗೋವತ್ಸ ದ್ವಾದಶಿ

ಅ. ತಿಥಿ :  
ಆಶ್ವಯುಜ ಕೃಷ್ಣ ದ್ವಾದಶಿ

ಆ. ಇತಿಹಾಸ :  
ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ.

ಇ. ಉದ್ದೇಶ : 
ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು ಮತ್ತು ಪೂಜೆಯನ್ನು ಮಾಡುತ್ತಿರುವ ಆಕಳ ಶರೀರದ ಮೇಲೆ ಎಷ್ಟು ರೋಮಗಳು (ಕೂದಲುಗಳು) ಇವೆಯೋ ಅಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿ ಸ್ಥಾನ ಸಿಗಬೇಕೆಂದು ಈ ಹಬ್ಬವನ್ನು ಆಚರಿಸುತ್ತಾರೆ.

ಈ. ಹಬ್ಬವನ್ನು ಆಚರಿಸುವ ಪದ್ಧತಿ :  
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರುಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.
 
ಉ. ಗೋವತ್ಸದ್ವಾದಶಿಯ ಮಹತ್ವ
 
ಆಕಳಿನ ಪೂಜೆಯನ್ನು ಮಾಡಿ ಅವಳಲ್ಲಿರುವ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದು: ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನ ಗೊಳಿಸುವ, ತನ್ನ ಹಾಲಿನಿಂದ ಸಮಾಜ ವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆಯೋ ಹಾಗೂ ಪೂಜ್ಯ ಭಾವದಿಂದ ಅವಳನ್ನು ಪೂಜಿಸಲಾಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜಿಸಿ ದೀಪೋತ್ಸವವನ್ನು (ದೀಪಾವಳಿಯನ್ನು) ಆಚರಿಸಬೇಕು. - ಪ.ಪೂ.ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ.

ಗುರುದ್ವಾದಶಿ

ಅ. ತಿಥಿ: ಆಶ್ವಯುಜ ಕೃಷ್ಣ ದ್ವಾದಶಿ

ಆ. ಮಹತ್ವ: ಶಿಷ್ಯರು ಈ ದಿನ ಗುರುಗಳ ಪೂಜೆಯನ್ನು ಮಾಡುತ್ತಾರೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

ಸಂಬಂಧಿತ ವಿಷಯಗಳು

1 comment:

  1. its really usefull for us to celebrate festivals in a good and correct manner

    ReplyDelete

Note: only a member of this blog may post a comment.