ಕರದರ್ಶನ


ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ, ಬೊಗಸೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ಮುಂದಿನ ಶ್ಲೋಕವನ್ನು ಹೇಳಬೇಕು.

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||

ಅರ್ಥ: ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು.
(ಅಪವಾದ: ಕೈಗಳ ಮೂಲಭಾಗದಲ್ಲಿ ಬ್ರಹ್ಮನಿದ್ದಾನೆ / ಗೌರಿ ಇದ್ದಾಳೆ.)

ಶ್ಲೋಕದ ಭಾವಾರ್ಥ

ಅ. ಲಕ್ಷ್ಮೀಯ ಮಹತ್ವ: ಕೈಗಳ ಅಗ್ರಭಾಗದಲ್ಲಿ (ಕರಾಗ್ರೆ) ಲಕ್ಷ್ಮೀ ಇದ್ದಾಳೆ, ಅಂದರೆ ಬಾಹ್ಯ ಭೌತಿಕ ಭಾಗವು ಲಕ್ಷ್ಮೀಯ ರೂಪದಲ್ಲಿ ವಿಲಾಸ ಮಾಡುತ್ತಿದೆ. ಅಂದರೆ ಭೌತಿಕ ವ್ಯವಹಾರಕ್ಕಾಗಿ ಲಕ್ಷ್ಮೀಯ (ಧನ ಮಾತ್ರವಲ್ಲ, ಪಂಚಮಹಾಭೂತಗಳು, ಅನ್ನ, ವಸ್ತ್ರ ಇತ್ಯಾದಿ) ಆವಶ್ಯಕತೆಯಿದೆ.

ಆ. ಸರಸ್ವತಿಯ ಮಹತ್ವ: ಧನ ಅಥವಾ ಲಕ್ಷ್ಮೀಯನ್ನು ಪ್ರಾಪ್ತಮಾಡಿಕೊಳ್ಳುವಾಗ ಜ್ಞಾನ ಮತ್ತು ವಿವೇಕವು ಇಲ್ಲದಿದ್ದರೆ ಲಕ್ಷ್ಮೀಯು ಅವಲಕ್ಷ್ಮೀಯಾಗಿ ನಾಶಕ್ಕೆ ಕಾರಣವಾಗುತ್ತಾಳೆ. ಆದುದರಿಂದ ಸರಸ್ವತಿಯ ಆವಶ್ಯಕತೆ ಇದೆ.

ಇ. ಎಲ್ಲವೂ ಗೋವಿಂದನೇ ಆಗಿರುವುದು: ಗೋವಿಂದನೇ ಸರಸ್ವತಿಯ ರೂಪದಲ್ಲಿ ಮಧ್ಯ ಭಾಗದಲ್ಲಿ ಮತ್ತು ಲಕ್ಷ್ಮೀಯ ರೂಪದಲ್ಲಿ ಅಗ್ರಭಾಗದಲ್ಲಿದ್ದಾನೆ. ಸಂತ ಜ್ಞಾನೇಶ್ವರ ಮಹಾರಾಜರು ಅಮೃತಾನುಭವದ ಶಿವ-ಪಾರ್ವತಿ ಸ್ತವನದಲ್ಲಿ ಹೀಗೆ ಹೇಳುತ್ತಾರೆ, ‘ಮೂಲ, ಮಧ್ಯ ಮತ್ತು ಅಗ್ರ ಈ ಮೂರೂ ರೂಪಗಳು ಬೇರೆಬೇರೆ ಕಾಣಿಸುತ್ತಿದ್ದರೂ ಈ ಮೂರರಲ್ಲಿಯೂ ಗೋವಿಂದನೇ ಕಾರ್ಯವನ್ನು ಮಾಡುತ್ತಿದ್ದಾನೆ. ಹೆಚ್ಚುಕಡಿಮೆ ಎಲ್ಲ ಉದ್ಯೋಗಗಳು (ಕಾರ್ಯಗಳು) ಕೈಗಳ ಬೆರಳುಗಳ ಅಗ್ರಭಾಗದಿಂದಲೇ ಆಗುತ್ತವೆ ಆದುದರಿಂದ ಅಲ್ಲಿ ಲಕ್ಷ್ಮೀಯ ವಾಸ್ತವ್ಯವಿದೆ; ಆದರೆ ಆ ಕೈಯಲ್ಲಿ ಮೂಲ ಸ್ರೋತದಿಂದ ಬರುವ ಅನುಭವೀ ಜ್ಞಾನದ ಪ್ರವಾಹವು ಹೋಗದೇ ಇದ್ದರೆ ಅವನು ಕಾರ್ಯವನ್ನು ಮಾಡಲಾರನು.’ - ಪ.ಪೂ.ಪರಶುರಾಮ ಪಾಂಡೆ ಮಹಾರಾಜರು

ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳನ್ನು ಓದಲು ಕ್ಲಿಕ್ ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿರಿ ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ)

No comments:

Post a Comment

Note: only a member of this blog may post a comment.