ಏಕಾದಶಿ ವ್ರತ


೧. ದೇವತೆ: ಶ್ರೀವಿಷ್ಣು

೨. ವಿಧಗಳು: ಒಂದು ಮಾಸದಲ್ಲಿ (ತಿಂಗಳಲ್ಲಿ) ಎರಡು ಏಕಾದಶಿ ಬರುತ್ತದೆ. ಒಂದು ಶುಕ್ಲ ಪಕ್ಷದಲ್ಲಿ ಮತ್ತೊಂದು ಕೃಷ್ಣಪಕ್ಷದಲ್ಲಿ. ಏಕಾದಶಿಯಲ್ಲಿ ಸ್ಮಾರ್ತ ಮತ್ತು ಭಾಗವತ ಎಂಬ ಎರಡು ವಿಧಗಳಿವೆ. ಯಾವಾಗ ಒಂದು ಪಕ್ಷದಲ್ಲಿ ಈ ಎರಡೂ ಭೇದಗಳು ಸಂಭವಿಸುತ್ತವೆಯೋ, ಆಗ ಪಂಚಾಂಗದಲ್ಲಿ ಮೊದಲನೆಯ ದಿನ ಸ್ಮಾರ್ತ ಮತ್ತು ಎರಡನೆಯ ದಿನ ಭಾಗವತ ಏಕಾದಶಿ ಎಂದು ಬರೆದಿರುತ್ತದೆ. ಶೈವರು ಸ್ಮಾರ್ತ ಏಕಾದಶಿ ಮತ್ತು ವೈಷ್ಣವರು ಭಾಗವತ ಏಕಾದಶಿಯನ್ನು ಪಾಲಿಸುತ್ತಾರೆ. ಪ್ರತಿ ತಿಂಗಳೂ ಎರಡರಂತೆ ವರ್ಷದಲ್ಲಿ ೨೪ ಏಕಾದಶಿಗಳು ಬರುತ್ತವೆ. ಅವು ಈ ಕೆಳಗಿನಂತಿವೆ.

ಶುಕ್ಲಪಕ್ಷ (ಚೈತ್ರದಿಂದ): ಕಾಮದಾ, ಮೋಹಿನಿ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನೀ, ಪಾಶಾಂಕುಶಾ, ಪ್ರಬೋಧಿನೀ, ಮೋಕ್ಷದಾ, ಪ್ರಜಾವರ್ಧಿನೀ, ಜಯದಾ ಮತ್ತು ಆಮಲಕೀ.

ಕೃಷ್ಣಪಕ್ಷ (ಚೈತ್ರದಿಂದ): ಪಾಪಮೋಚನೀ, ವರೂಥಿನೀ, ಅಪರಾ, ಯೋಗಿನೀ, ಕಾಮಿಕಾ, ಅಜಾ, ಇಂದಿರಾ, ರಮಾ, ಫಲದಾ, ಸಫಲಾ, ಷಟ್‌ತಿಲಾ ಮತ್ತು ವಿಜಯಾ.

ಪ್ರತಿ ತಿಂಗಳಿನಲ್ಲಿನ ಎರಡೂ ಏಕಾದಶಿಗಳನ್ನು ಮಾಡುವುದು ಉತ್ತಮ; ಅದು ಸಾಧ್ಯವಿಲ್ಲದಿದ್ದರೆ ಕನಿಷ್ಠ ಪಕ್ಷ, ಶುಕ್ಲ ಏಕಾದಶಿಯನ್ನಾದರೂ ಮಾಡಬೇಕು.

೩. ವೈಶಿಷ್ಟ್ಯಗಳು
ಅ. ಎಲ್ಲ ವ್ರತಗಳಲ್ಲಿ ಇದೊಂದು ಮೂಲಭೂತ ವ್ರತವಾಗಿದೆ.
ಆ. ಇತರ ವ್ರತಗಳಂತೆ ಈ ವ್ರತವನ್ನು ಸಂಕಲ್ಪದಿಂದ ವಿಧಿಪೂರ್ವಕವಾಗಿ ಪ್ರಾರಂಭಿಸಬೇಕಾಗುವುದಿಲ್ಲ.
ಇ. ಕಾಲಕ್ಕನುಸಾರ ಪ್ರತಿಯೊಬ್ಬನಲ್ಲಿರುವ ಸತ್ತ್ವ, ರಜ ಮತ್ತು ತಮ ಗುಣಗಳ ಪ್ರಮಾಣವು ಬದಲಾಗುತ್ತಿರುತ್ತದೆ. ಏಕಾದಶಿಯ ದಿನದಂದು ಎಲ್ಲ ಪ್ರಾಣಿಮಾತ್ರರ ಸಾತ್ತ್ವಿಕತೆಯು ಅತ್ಯಧಿಕವಾಗಿರುತ್ತದೆ. ಆದುದರಿಂದಲೇ ಈ ಕಾಲದಲ್ಲಿ ಸಾಧನೆಯನ್ನು ಮಾಡಿದರೆ ಅದರಿಂದ ಅಧಿಕ ಲಾಭವಾಗುತ್ತದೆ.
ಈ. ಏಕಾದಶಿಯಂದು ಪೃಥ್ವಿಯ ಮೇಲೆ ಶ್ರೀವಿಷ್ಣುವಿನ ಸ್ಪಂದನಗಳು ಹೆಚ್ಚಿಗೆ ಬರುತ್ತವೆ. ಆಷಾಢ ಮತ್ತು ಕಾರ್ತಿಕ ಏಕಾದಶಿ ತಿಥಿಗಳಂದು ಪೃಥ್ವಿಯ ಮೇಲೆ ಶ್ರೀವಿಷ್ಣುವಿನ ಸ್ಪಂದನಗಳು ಇತರ ಏಕಾದಶಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ; ಆದುದರಿಂದ ಈ ಎರಡು ಏಕಾದಶಿಗಳಿಗೆ ಹೆಚ್ಚಿನ ಮಹತ್ವವಿದೆ.

೪. ವ್ರತವನ್ನು ಮಾಡುವ ಪದ್ಧತಿ:
ಏಕಾದಶಿಯ ದಿನ ಏನನ್ನೂ ತಿನ್ನದೇ ಕೇವಲ ನೀರು, ಶುಂಠಿ-ಸಕ್ಕರೆ ಉಪಯೋಗಿಸುವುದು ಸರ್ವೋತ್ತಮ. ಅದು ಆಗದಿದ್ದರೆ ಉಪವಾಸದ ಪದಾರ್ಥಗಳನ್ನು ತಿನ್ನಬೇಕು. ಏಕಾದಶಿಯಂದು ಉಪವಾಸ ಮಾಡಿ ಮರುದಿನ ಪಾರಣೆ ಮಾಡುತ್ತಾರೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

ಉಪವಾಸ
ಉಪ ಎಂದರೆ ಹತ್ತಿರ. ವಾಸ ಎಂದರೆ ಇರುವುದು ಎಂದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಕೆಟ್ಟ ಯೋಚನೆಗಳನ್ನು ಮಾಡದೆ ಭಗವಂತನ ಸಮೀಪ ಇರುವುದು. ಆ ಸಮಯದಲ್ಲಿ ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ ಪಠಣ ಮಾಡಬೇಕು. ಉಪವಾಸ ಮಾಡುವುದರಿಂದ ಶಾಂತಿ, ತಾಳ್ಮೆ ಸಿಗುವುದು. ರಕ್ತದೊತ್ತಡ, ರಕ್ತಹೀನತೆ ಇನ್ನೂ ಅನೇಕ ರೋಗ ರುಜಿನ ಇದ್ದರೆ ಗುಣವಾಗುವುದು.

ಸಂಬಂಧಿತ ವಿಷಯಗಳು
ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.