ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

ನಾವು ಕೆಲವೊಂದು ವಾಸ್ತುಗಳಲ್ಲಿ ಹೋದಾಗ ನಮಗೆ ಒಳ್ಳೆಯದೆನಿಸುತ್ತದೆ ಮತ್ತು ಇನ್ನು ಕೆಲವೊಂದು ವಾಸ್ತುಗಳಲ್ಲಿ ಹೋದಾಗ ನಮಗೆ ತೊಂದರೆಯಾಗುತ್ತದೆ (ತೊಂದರೆದಾಯಕ ಸ್ಪಂದನಗಳ ಅರಿವಾಗುತ್ತದೆ). ಇಂತಹ ವಾಸ್ತುಗಳಿಗೆ ತೊಂದರೆದಾಯಕ ವಾಸ್ತುಗಳು ಎಂದು ಹೇಳುತ್ತಾರೆ. ತೊಂದರೆದಾಯಕ ವಾಸ್ತುಗಳು ಆನಂದದಾಯಕವಾಗಲು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಕೆಲವೊಮ್ಮೆ ನಾವು ಯಾರಾದರೊಬ್ಬರ ಮನೆಗೆ ಹೋದಾಗ ಮನಸ್ಸಿಗೆ ಅಲ್ಲಿ ಇರುವುದು ಬೇಡ ಅಲ್ಲಿಂದ ಬೇಗನೇ ಹೋಗಬೇಕು, ಎಂದು ಅನಿಸು ತ್ತದೆ, ಹೀಗಿದ್ದರೆ ಆ ವಾಸ್ತುವು ವರ್ತಮಾನಕಾಲದಲ್ಲಿಯೇ ದೂಷಿತವಾಗಿದೆ ಅಥವಾ ಆ ವಾಸ್ತುವಿಗೆ ಸಂಬಂಧಪಟ್ಟ ವ್ಯಕ್ತಿಗೆ ಭೂತಕಾಲದಲ್ಲಿ ಬಹಳಷ್ಟು ತೊಂದರೆಗಳಾಗಿವೆ ಅಥವಾ ಭವಿಷ್ಯತ್ಕಾಲದಲ್ಲಿ ಬಹಳಷ್ಟು ತೊಂದರೆಗಳಾಗುವುದಿದೆ ಎಂದು ಅರ್ಥವಾಗುತ್ತದೆ. ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಸೆರೆಮನೆಗಳು, ದುರ್ವ್ಯವಹಾರ ನಡೆಯುವ ಸ್ಥಳಗಳು, ಕೊಲೆ ಯಾಗಿರುವ ಸ್ಥಳಗಳು, ಸ್ಮಶಾನ ಮುಂತಾದ ಕಡೆಗಳಲ್ಲಿ ತೊಂದರೆದಾಯಕ ಸ್ಪಂದನಗಳಿರುತ್ತವೆ; ಏಕೆಂದರೆ ಅಲ್ಲಿಯ ವ್ಯಕ್ತಿಗಳು ದುಃಖಿತರಾಗಿರುತ್ತಾರೆ ಅಥವಾ ದುಷ್ಟಪ್ರವೃತ್ತಿ ಉಳ್ಳವರಾಗಿರುತ್ತಾರೆ.

ಅಯೋಗ್ಯ ವಾಸ್ತುಗಳಿಂದ ಉದ್ಭವಿಸುವ ತೊಂದರೆಗಳು

ಅ. ಹೊಟ್ಟೆಗೆ ಸಂಬಂಧಿಸಿದ ರೋಗಗಳು, ಸಂಧಿವಾತ, ಅಂಗವಿಕಲತೆ ಮುಂತಾದ ಶಾರೀರಿಕ ಕಾಯಿಲೆಗಳು ಬರುವುದು.
ಆ. ಚಿಂತೆ, ನಿರಾಶೆ ಮುಂತಾದ ಮಾನಸಿಕ ಒತ್ತಡಗಳು ನಿರ್ಮಾಣ ವಾಗುವುದು.
ಇ. ಗರ್ಭದ ಮೇಲೆ ದುಷ್ಪರಿಣಾಮವಾಗುವುದು.

ವಾಸ್ತುವು ಆನಂದದಾಯಕವಾಗಬೇಕೆಂದು ಮಾಡಬೇಕಾದ ಪರಿಹಾರೋಪಾಯಗಳು

ಭೂಖಂಡ ಪ್ರವೇಶ ವಿಧಿ:ಭೂಖಂಡವನ್ನು ಖರೀದಿಸಿದ ನಂತರ ಎಂದರೆ ಕಾಗದಪತ್ರಗಳು ತಯಾರಾಗಿ ಒಡೆತನವು ಸಿಕ್ಕಿದ ನಂತರ ಮಾಲೀಕನೆಂದು ಆ ಜಾಗವನ್ನು ಪ್ರವೇಶಿಸುವ ಮೊದಲು ಆ ಭೂಖಂಡದ ಈಶಾನ್ಯ ದಿಕ್ಕಿನಲ್ಲಿ ದೇವರಿಗೆ ಸುಗಂಧಿತ ಹೂಗಳನ್ನು ಅರ್ಪಿಸಿ ಮನಃಪೂರ್ವಕವಾಗಿ ನಮಸ್ಕರಿಸಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ನಂತರ ಭೂಖಂಡಕ್ಕೆ ಸಂಪೂರ್ಣ ಪ್ರದಕ್ಷಿಣೆ ಹಾಕಿ ಮುಖ್ಯ ಪ್ರವೇಶದಿಂದ ಪ್ರವೇಶಿಸುವಾಗ ಬಲಗಾಲಿನ ಹೆಬ್ಬೆರಳನ್ನು ಭೂಖಂಡಕ್ಕೆ ತಗುಲಿಸಿ ಭೂಖಂಡ ದಲ್ಲಿ ಪ್ರವೇಶಿಸಬೇಕು. ಇಂತಹ ಪ್ರವೇಶವು ಕಲ್ಯಾಣಪ್ರದವಾಗಿರುತ್ತದೆ. 

ವಾಸ್ತುಶಾಂತಿ : ‘ವಾಸ್ತುಪುರುಷನ ಪ್ರಸನ್ನತೆಗಾಗಿ ಮತ್ತು ಕಟ್ಟಿರುವ ಮನೆಯು ಯಜಮಾನನಿಗೆ ಆಯುರಾರೋಗ್ಯ, ನಿರ್ವಿಘ್ನತೆ, ಸಂಪತ್ತು ಮುಂತಾದವುಗಳಿಂದ ಶುಭಪ್ರದವಾಗಬೇಕೆಂದು ವಾಸ್ತುವಿನಲ್ಲಿ ಯಾವ ಪೂಜೆ ಯನ್ನು ಮಾಡುತ್ತಾರೆಯೋ ಅದನ್ನು ವಾಸ್ತುಶಾಂತಿ ಎನ್ನುತ್ತಾರೆ.’ ವಾಸ್ತುಶಾಂತಿ ಮಾಡುವಾಗ ವಾಸ್ತುಮಂಡಲದಲ್ಲಿ ೬೪ ಯೋಗಿನಿಯರ ಸ್ಥಾಪನೆಯನ್ನು ಮಾಡುತ್ತಾರೆ.

ವಾಸ್ತುದೇವತೆಯು ಪುರುಷನಾಗಿದ್ದಾನೆಂದು ಭಾವಿಸಿ ಅವನ ವಿವಿಧ ಅವಯವಗಳ ಜಾಗದಲ್ಲಿ ದೇವತೆಗಳ ಸ್ಥಾಪನೆಯನ್ನು ಮಾಡುತ್ತಾರೆ. ಪೂಜೆಯ ಸಮಯದಲ್ಲಿ ವಾಸ್ತುಮಂಡಲದ ಮಧ್ಯಭಾಗದಲ್ಲಿ ಮನೆಯ ಆಗ್ನೇಯ ದಿಕ್ಕಿಗೆ ಒಂದು ಗುಂಡಿಯನ್ನು ತೋಡುತ್ತಾರೆ. ಒಂದು ಪೆಟ್ಟಿಗೆಯಲ್ಲಿ ಏಳು ಧಾನ್ಯಗಳು, ಮೊಸರು, ಹೂ ಮತ್ತು ವಾಸ್ತುಪುರುಷನ ಪ್ರತಿಮೆಯನ್ನು ಇಟ್ಟು ಅದನ್ನು ಆ ಗುಂಡಿಯಲ್ಲಿ ಹೂಳುತ್ತಾರೆ. ಅನಂತರ ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಗೃಹಪ್ರವೇಶ ಮಾಡುತ್ತಾರೆ.

ವಾಸ್ತುಶಾಂತಿಯ ಸಮಯದಲ್ಲಿ ಸುವರ್ಣದ ಅಥವಾ ತಾಮ್ರದ ವಾಸ್ತು ದೇವತೆಯ ಪ್ರತಿಮೆಯನ್ನು ನೆಲದಲ್ಲಿ ಹೂಳುವುದರಿಂದ ನೆಲದಿಂದ ಮೇಲೆ ಬರುವ ಲಹರಿಗಳು (ಆಕೃತಿಯಲ್ಲಿನ ಕ್ರಮಾಂಕ. 1) ವಾಸ್ತುದೇವತೆಯ ಕಡೆಗೆ ಒಟ್ಟುಗೂಡುತ್ತವೆ. ವಾಸ್ತುದೇವತೆಯ ಕಡೆಯಿಂದ ಈ ಲಹರಿಗಳು ಒಟ್ಟಿಗೆ ಹೊರಬರುವುದರಿಂದ ಅವುಗಳಲ್ಲಿ ಶಕ್ತಿ ಇರುತ್ತದೆ. ಇದರಿಂದಾಗಿ ‘೩೬೦ ಲಹರಿಗಳು’ (ಆಕೃತಿಯಲ್ಲಿನ ಕ್ರಮಾಂಕ 2) ಮತ್ತು ವಾಸ್ತು ವಿನಲ್ಲಿರುವ ಜನರ ವಿಚಾರಗಳ ಲಹರಿಗಳು (ಆಕೃತಿಯಲ್ಲಿನ ಕ್ರಮಾಂಕ 3) ಒಂದು ವಿಶಿಷ್ಟ ಪದ್ಧತಿಯಲ್ಲಿ ಲಯಬದ್ಧವಾಗಿ ಆ ವಾಸ್ತುವಿನಲ್ಲಿ ತಿರುಗುತ್ತವೆ. ಇದರಿಂದ ‘ಗೊಂದಲ’ಮಯ ಲಹರಿಗಳು ‘ನಾದ’ದಲ್ಲಿ ರೂಪಾಂತರಗೊಳ್ಳುತ್ತವೆ. ಅಂದರೆ, ಈ ಲಹರಿಗಳು ಆನಂದಮಯ ಮತ್ತು ಶುಭಕಾರಕವಾಗುತ್ತವೆ.


ನೆಲದಲ್ಲಿ ಹೂಳಿದ ವಸ್ತುಗಳಿಗೆ ನಿಕ್ಷೇಪ ಎನ್ನುತ್ತಾರೆ. ವಾಸ್ತುಶಾಂತಿಯ ಸಮಯದಲ್ಲಿ ಪ್ರತಿಮೆಯನ್ನು ಆಗ್ನೇಯ ದಿಕ್ಕಿನಲ್ಲಿ ಹೂಳುತ್ತಾರೆ. (ಕೆಲವರು ಸ್ಥಿರಲಕ್ಷ್ಮೀ ಎನ್ನುವ ವಿಧಿಯನ್ನು ಮಾಡುವಾಗ ಪಶ್ಚಿಮ ದಿಕ್ಕಿನಲ್ಲಿ ಪ್ರತಿಮೆ, ನಾಣ್ಯಗಳು ಮುಂತಾದ ವಸ್ತುಗಳನ್ನು ಹೂಳುತ್ತಾರೆ.) ‘ವಾಸ್ತುನಿಕ್ಷೇಪ ಜಾಗದಲ್ಲಿ ಕಸಕಡ್ಡಿಗಳು ಬೀಳಲು ಬಿಡಬಾರದು. ಪ್ರತಿನಿತ್ಯ ಪೂಜೆಯ ಸಮಯದಲ್ಲಿ ವಾಸ್ತುದೇವತೆಗೆ ನಮಸ್ಕಾರ ಮಾಡುವ ಪದ್ಧತಿಯನ್ನು ಇಡ ಬೇಕು. ಸಾಧ್ಯವಾದಾಗ ಪ್ರತಿವರ್ಷ ಪಂಚೋಪಚಾರ, ಷೋಡಶೋಪಚಾರ ಪೂಜೆಗಳನ್ನು ಮಾಡಬೇಕು. ವಾಸ್ತುಶಾಂತಿ ಆದ ನಂತರ ಕೂಡಲೇ ಅಂದರೆ ಅದೇ ದಿನ ಮನೆಯನ್ನು ಮುಚ್ಚಿಡಬಾರದು. ಕೆಲವು ದಿನಗಳ ವರೆಗಾದರೂ ಅಲ್ಲಿ ವಾಸ ಮಾಡಬೇಕು. ಪ್ರತಿ ಹತ್ತು ವರ್ಷಗಳಿಗೊಮ್ಮೆ ವಾಸ್ತುಪೂಜೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಆ ಸಮಯದಲ್ಲಿ ವಾಸ್ತುನಿಕ್ಷೇಪವನ್ನು ಬಿಟ್ಟು ಇತರ ಎಲ್ಲ ವಿಧಿಗಳನ್ನೂ ಮಾಡಬೇಕು.’

‘ಮತ್ಸ್ಯಪುರಾಣದಲ್ಲಿ, (೨೬೫.೧೦/೧೧) ಮನೆಗೆ ಸಂಬಂಧಪಟ್ಟಂತೆ ಕೆಳಗಿನ ಐದು ಪ್ರಸಂಗಗಳಲ್ಲಿ ವಾಸ್ತುಯಜ್ಞವನ್ನು ಮಾಡಬೇಕೆಂದು ಹೇಳಲಾಗಿದೆ –

೧. ಶಂಕುಸ್ಥಾಪನೆ
೨. ವಾಸ್ತುವಿನ ಪ್ರಥಮ ಕಂಬವನ್ನು ನಿಲ್ಲಿಸುವಾಗ
೩. ಮೊದಲನೆಯ ಬಾಗಿಲನ್ನು ನಿಲ್ಲಿಸುವಾಗ
೪. ಗೃಹಪ್ರವೇಶ ಮಾಡುವಾಗ
೫. ಅರಿಷ್ಟವು ಅಥವಾ ಅನಿಷ್ಟವು ಕಂಡು ಬಂದಾಗ ಅದರ ನಿವಾರಣೆಗೆಂದು ವಾಸ್ತುಶಾಂತಿಯನ್ನು ಮಾಡುವಾಗ ವಾಸ್ತುಯಜ್ಞವನ್ನು ಮಾಡಬೇಕು.

ಇತ್ತೀಚೆಗೆ ಗೃಹಪ್ರವೇಶದ ಸಮಾರಂಭವು ಒಂದು ಮಹತ್ವದ ಸಮಾರಂಭವಾಗಿದೆ. ಶುಭಮುಹೂರ್ತದಲ್ಲಿ ಗೃಹಪ್ರವೇಶ ಮಾಡುತ್ತಾರೆ. ಆ ದಿನ ವಾಸ್ತುವಿನಲ್ಲಿ ವಾಸ್ತುಶಾಂತಿ ಮಾಡುತ್ತಾರೆ. ಈ ವಾಸ್ತುಶಾಂತಿ ವಿಧಿಯಲ್ಲಿನ ಒಂದು ಪ್ರಮುಖ ಅಂಗವೆಂದರೆ ಗ್ರಹಮುಖವಾಗಿದೆ. ಮನೆಯ ಆಗ್ನೇಯ ದಿಕ್ಕಿನ ಒಂದು ಭಾಗದಲ್ಲಿ ಒಂದು ಗುಂಡಿಯನ್ನು ತೋಡಿ ಸುಟ್ಟ ಇಟ್ಟಿಗೆಗಳ ಒಂದು ಪೆಟ್ಟಿಗೆಯ ಆಕಾರವನ್ನು ತಯಾರು ಮಾಡುತ್ತಾರೆ ಮತ್ತು ಅದರಲ್ಲ್ಲಿ ಏಳು ವಿಧದ ಧಾನ್ಯಗಳು, ಹೂ ಮುಂತಾದವುಗಳನ್ನು ಇಡುತ್ತಾರೆ. ಮನೆಯ ಯಜಮಾನನು ತನ್ನ ಪತ್ನಿ, ಪುತ್ರರು ಹಾಗೂ ಬ್ರಾಹ್ಮಣರೊಂದಿಗೆ ವಾದ್ಯ ಗಳೊಂದಿಗೆ ಗೃಹಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ಅವನ ಕೈಯಲ್ಲಿ ನೀರು ತುಂಬಿರುವ ಒಂದು ಕಲಶವಿರುತ್ತದೆ. ಆ ಕಲಶವನ್ನು ಧಾನ್ಯದ ರಾಶಿಯ ಮೇಲಿಡುತ್ತಾರೆ. ನಂತರ ಪುಣ್ಯಾಹವಾಚನ ಮಾಡಿ, ಬ್ರಾಹ್ಮಣರು ಆಶೀರ್ವಾದ ಮಾಡಿದ ನಂತರ ಅವರಿಗೆ ಭೋಜನವನ್ನು ನೀಡುತ್ತಾರೆ. ನಂತರ ಇಷ್ಟಮಿತ್ರರಿಗೆ ಭೋಜನವನ್ನು ನೀಡಿ ಮನೆಯ ಯಜಮಾನನು ಮನೆಯವರೊಂದಿಗೆ ಭೋಜನವನ್ನು ಮಾಡುತ್ತಾನೆ.’

ಉದಕಶಾಂತಿ: ‘ವಾಸ್ತುಶಾಂತಿಯನ್ನು ಮಾಡಿದ ನಂತರ ಉದಕ ಶಾಂತಿಯನ್ನು ಮಾಡುವುದೂ ಅಷ್ಟೇ ಆವಶ್ಯಕವಾಗಿದೆ. ಮನೆಯಲ್ಲಿ ಪುರುಡು, ಸೂತಕ, ರಜಸ್ವಲೆ ಮುಂತಾದವುಗಳಿಂದ ಮೈಲಿಗೆ ಆಗುವುದರಿಂದ ನೀರು ಮತ್ತು ಅನ್ನಗಳ ಮೇಲೆ ಕುಸಂಸ್ಕಾರಗಳಾಗುತ್ತವೆ. ಇದಕ್ಕಾಗಿ ಉದಕ ಶಾಂತಿಯನ್ನು ಮಾಡಬೇಕು. ಪ್ರತಿವರ್ಷ ಉದಕಶಾಂತಿಯನ್ನು ಕನಿಷ್ಟ ಪಕ್ಷ ಒಮ್ಮೆಯಾದರೂ ಮಾಡಬೇಕೆನ್ನುವ ಶಾಸ್ತ್ರಸಂಕೇತವಿದೆ.’

ಸ್ವಭಾವದೋಷಗಳ ನಿರ್ಮೂಲನೆ: ವಾಸ್ತುವಿನಲ್ಲಿರುವವರು ಒಳ್ಳೆಯ ಸ್ವಭಾವದವರಾಗಿರಬೇಕು. ಮನೆಯಲ್ಲಿರುವವರ ಸ್ವಭಾವಗಳು ಒಳ್ಳೆಯ ದಿಲ್ಲದಿದ್ದರೆ ಅವರು ಸ್ವಭಾವಗಳನ್ನು ಸುಧಾರಿಸಿಕೊಳ್ಳಬೇಕು. ಏಕೆಂದರೆ ಶೇ.೩೦ರಷ್ಟು ವಾಸ್ತುದೋಷಗಳು ಅಲ್ಲಿ ವಾಸವಾಗಿರುವವರಿಂದಲೇ ಉಂಟಾಗುತ್ತವೆ.

ಕಿಟಕಿ-ಬಾಗಿಲುಗಳನ್ನು ತೆರೆದಿಡಬೇಕು: ದೇವಸ್ಥಾನಗಳಲ್ಲಿ ದೇವತೆಗಳ ಪಂಚೋಪಚಾರ ಇತ್ಯಾದಿ ಪೂಜೆಗಳನ್ನು ಮಾಡುವುದರಿಂದ ಒಳ್ಳೆಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ಸ್ಪಂದನಗಳು ಹೊರಗೆ ಹೋಗಬಾರ ದೆಂದು ಗರ್ಭಗುಡಿಗಳಿಗೆ ಕಿಟಕಿಗಳಿರುವುದಿಲ್ಲ, ಹಾಗೆಯೇ ಗರ್ಭಗುಡಿಯ ಪ್ರವೇಶದ್ವಾರವು ಸಹ ಚಿಕ್ಕದಾಗಿರುತ್ತದೆ. ತದ್ವಿರುದ್ಧವಾಗಿ ಕಲಿಯುಗದಲ್ಲಿ ಬಹುತೇಕ ಮನೆಗಳಲ್ಲಿ ತೊಂದರೆಗಳೇ ಹೆಚ್ಚಿಗೆ ಇರುವುದರಿಂದ ಅವುಗಳಿಂದ ಉತ್ಪನ್ನವಾಗುವ ತೊಂದರೆದಾಯಕ ಸ್ಪಂದನಗಳು ಆ ವಾಸ್ತುವಿನಲ್ಲಿರುತ್ತವೆ. ಈ ತೊಂದರೆದಾಯಕ ಸ್ಪಂದನಗಳು ಹೊರಗೆ ಹೋಗಬೇಕೆಂದು ವಾಸ್ತುಗಳ ಕಿಟಕಿ-ಬಾಗಿಲುಗಳನ್ನು ಆದಷ್ಟೂ ತೆರೆದಿಡಬೇಕು. ವಾಸ್ತುವಿನಲ್ಲಿನ ಯಾವುದಾದರೊಂದು ಗೋಡೆಯ ಕಡೆಗೆ ಒಂದೆರಡು ನಿಮಿಷ ನೋಡಿದರೆ ಅಸ್ವಸ್ಥ ವೆನಿಸುತ್ತದೆ, ಇದನ್ನು ಯಾರು ಬೇಕಾದರೂ ಮಾಡಿ ನೋಡಬಹುದು.

ತ್ರಾಸದಾಯಕ ಸ್ಪಂದನಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ಆಕರ್ಷಿಸುವಂತಹ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಉದಾಹರಣೆಗೆ ಕಪ್ಪು ಗೊಂಬೆ. ಲಿಂಗದೇಹಗಳ ಸಹಾಯದಿಂದ ಮಾಡುವಂತಹ ಪ್ಲ್ಯಾಂಚೆಟ್ ಮುಂತಾದವುಗಳನ್ನು ಹಾಗೂ ತ್ರಾಸದಾಯಕ ಸೂಕ್ಷ್ಮಶಕ್ತಿಗಳ ಪ್ರಯೋಗಗಳನ್ನು ಮನೆಯಲ್ಲಿ ಮಾಡಬಾರದು. ಕೆಲವೊಮ್ಮೆ ಲಿಂಗದೇಹಗಳು ಅಥವಾ ದುಷ್ಟ ಶಕ್ತಿಗಳು ಮನೆಯಲ್ಲಿಯೇ ಉಳಿದುಕೊಳ್ಳಬಹುದು. ಹೀಗಾಗಬಾರದೆಂದು ಇಂತಹ ಪ್ರಯೋಗಗಳನ್ನು ಮಾಡುವುದಿದ್ದರೆ ಬಯಲು ಜಾಗದಲ್ಲಿಯೇ ಮಾಡಬೇಕು. ವಾಸ್ತುದೇವತೆಯು ಶಾಂತವಾಗಿದ್ದರೆ ಒಳ್ಳೆಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಇಂತಹ ವಾಸ್ತುಗಳಲ್ಲಿ ಪ್ರಾಣಶಕ್ತಿ ಹಾಗೂ ಪ್ರಾಣವಾಯುವಿನ ಪ್ರಮಾಣವು ಹೆಚ್ಚಿಗೆ ಇರುತ್ತದೆ. ಮನೆಯ ಮುಂದೆ ತುಳಸಿಕಟ್ಟೆ ಇದ್ದರೆ ಇದರಿಂದಲೂ ವಾತಾವರಣದಲ್ಲಿನ ಪ್ರಾಣಶಕ್ತಿಯ ಹಾಗೂ ಪ್ರಾಣವಾಯುವಿನ ಪ್ರಮಾಣವು ಹೆಚ್ಚಾಗಲು ಸಹಾಯವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ಪ್ರಕಟಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)

ಸಂಬಂಧಿತ ವಿಷಯಗಳು
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸುವುದು ?
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ

No comments:

Post a Comment

Note: only a member of this blog may post a comment.