ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.
ತಿಥಿ
ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.
ದಿನವೊಂದಕ್ಕೆ ಅರುವತ್ತು ಘಳಿಗೆಗಳು (ಒಂದು ಘಳಿಗೆ – ೨೪ ನಿಮಿಷ) ಆದರೆ ಎಲ್ಲಾ ತಿಥಿಗಳು ಅರುವತ್ತು ಘಳಿಗೆಗಳಿರುವುದಿಲ್ಲ. ಕೆಲವು ಕಡಿಮೆಯಿರುತ್ತದೆ. ಕೆಲವು ಜಾಸ್ತಿಯಿರುತ್ತದೆ. ಅರುವತ್ತು ಘಳಿಗೆಗಳಿಗಿಂತ ಕಡಿಮೆಯಿರುವ ತಿಥಿಗಳು ಜೊತೆಯಾಗಿ ಬಂದಾಗ ಒಂದು ತಿಥಿಯ ಮೇಲೆ (ಉಪರಿ) ಒಂದು ತಿಥಿ ಬರುತ್ತದೆ. ಅಂದರೆ ಐದು ದಿನಗಳಲ್ಲೇ ಆರು ತಿಥಿಗಳು ಮುಗಿಯುತ್ತವೆ. ಆಗ ಸೂರ್ಯೋದಯ ಕಾಲಕ್ಕೆ ಯಾವ ತಿಥಿ ಇರುವುದೇ ಇಲ್ಲವೋ ಆ ತಿಥಿಯು ಲೋಪವಾಗಿದೆ ಎನ್ನುತ್ತೇವೆ. ಮತ್ತೆ ಕೆಲವೊಮ್ಮೆ ಅರುವತ್ತು ಘಳಿಗೆಗಿಂತ ಜಾಸ್ತಿಯಿರುವ ತಿಥಿಗಳು ಅವಿಚ್ಛಿನ್ನವಾಗಿ ಬಂದಾಗ ಒಂದೇ ತಿಥಿಯು ಎರಡು ದಿನ ಬರುತ್ತದೆ. ಹೀಗಾಗಿ ಕೆಲವೊಮ್ಮೆ ಎರಡು ಪಾಡ್ಯವೋ ಎರಡು ಏಕಾದಶಿಯೋ ಬರುವುದನ್ನು ಕಾಣಬಹುದಾಗಿದೆ.
ಸೂರ್ಯೋದಯಕಾಲದಲ್ಲಿ ಯಾವ ತಿಥಿಯಿರುವುದೋ ಅದನ್ನು ಅಂದಿನ ತಿಥಿಯೆಂದು ವ್ಯವಹರಿಸಬೇಕು. (ಶ್ರಾದ್ಧಾದಿ ಪಿತೃಕಾರ್ಯಗಳಲ್ಲಿ ಮಾತ್ರ ತಾತ್ಕಾಲಿಕ ತಿಥಿಯನ್ನು ನೋಡಲಾಗುತ್ತದೆ.) ಸೂರ್ಯೋದಯದ ನಂತರ ತಿಥಿ ಎಷ್ಟು ಘಳಿಗೆಯಿರುತ್ತದೆಯೆಂದು ಪಂಚಾಂಗದಲ್ಲಿ ಬರೆದಿರುತ್ತದೆ. ಉದಾಹರಣೆಗೆ ದಶಮೀ ೩-೧೫ ಎಂದು ಬರೆದಿದ್ದರೆ ಸೂರ್ಯೋದಯದ ನಂತರ ಮೂರು ಘಳಿಗೆ ಹದಿನೈದು ವಿಘಳಿಗೆಗಳಷ್ಟು ಕಾಲ ದಶಮಿಯಿದೆ ಎಂದರ್ಥ. (ಒಂದು ಘಳಿಗೆಗೆ ೬೦ ವಿಘಳಿಗೆಗಳು) ಅಂದರೆ ಬೆಳಿಗ್ಗೆ ೬ ಘಂಟೆಗೆ ಸೂರ್ಯೋದಯವಾದರೆ ಆಮೇಲೆ ಸುಮಾರು ಏಳೂವರೆಯವರೆಗೆ ದಶಮಿಯಿದ್ದು ಆಮೇಲೆ ಪೂರ್ತಿ ಏಕಾದಶಿಯಿರುತ್ತದೆ. ಆದರೆ ಸೂರ್ಯೋದಯ ಕಾಲದಲ್ಲಿರುವ ದಶಮಿಯೇ ಅಂದಿನ ದಿನಪೂರ್ತಿ ತಿಥಿಯೆಂದು ವ್ಯವಹರಿಸಬೇಕು. ಅದಕ್ಕಾಗಿಯೇ ಸಂಕಲ್ಪದಲ್ಲಿ “ವ್ಯಾವಹಾರಿಕೇ” ಎಂದು ಹೇಳುವುದುಂಟು.
ವಾರ
ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆಂಬ ವ್ಯವಹಾರವು ರೂಡಿಯಲ್ಲಿರುತ್ತದೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ. ಆದರೆ ಪಂಚಾಂಗದಲ್ಲಿ ಸೇರಿದ ವಾರವೆಂದರೆ ಈ ಇಂಗ್ಲಿಷ್‌ನ week ಅಲ್ಲ. ಪ್ರತ್ಯೇಕವಾಗಿ ದಿನಗಳು, ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಸೂರ್ಯೋದಯದಿಂದ ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತದೆ. ಪಂಚಾಂಗದಲ್ಲಿ ವಾರಗಳ ಆದ್ಯಕ್ಷರವನ್ನು ಕೊಡುವುದರ ಮೂಲಕ ವಾರಗಳನ್ನು ಸೂಚಿಸಲಾಗುತ್ತದೆ.
ನಕ್ಷತ್ರ
ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಕೊಟ್ಟು ಮದುವೆ ಮಾಡಿದೆ. ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೆಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ ಮೂಲ ಶಬ್ದಗಳು ನಪುಂಸಕಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗದವು. ಆದ್ದರಿಂದ “ಮೂಲಾನಕ್ಷತ್ರೇ” “ಹಸ್ತಾ ನಕ್ಷತ್ರೇ” ಎಂಬುದಾಗಿ ದೀರ್ಘ ಪ್ರಯೋಗವು ಸಾಧುವೆನಿಸುವುದಿಲ್ಲ. ಮೂಲ ನಕ್ಷತ್ರೇ, ಹಸ್ತನಕ್ಷತ್ರೇ ಎಂದೇ ಪ್ರಯೋಗಿಸಬೇಕಾಗುತ್ತದೆ.
ಚಂದ್ರ ಪ್ರತಿದಿನವೂ ನಕ್ಷತ್ರದಿಂದ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಹೆಚ್ಚುಕಡಿಮೆ ಒಂದು ದಿನಕಾಲ ನಕ್ಷತ್ರವೊಂದರಲ್ಲಿ ಇರುತ್ತಾನೆ. ಚಂದ್ರನಿರುವ ನಕ್ಷತ್ರವನ್ನು ನಿತ್ಯನಕ್ಷತ್ರವೆನ್ನುತ್ತೇವೆ. ಸೂರ್ಯನು ಒಂದು ನಕ್ಷತ್ರದಲ್ಲಿ ಸುಮಾರು ಹದಿಮೂರು ದಿನಗಳಿರುತ್ತಾನೆ. ಸೂರ್ಯನಿರುವ ನಕ್ಷತ್ರವನ್ನು “ಮಹಾನಕ್ಷತ್ರ” ಎನ್ನುತ್ತೇವೆ. ಸೌರಮಾಸಗಳನ್ನು ಅನುಸರಿಸುವ ಉಡುಪಿ ಪಂಚಾಂಗಗಳಲ್ಲಿ “ಮಹಾನಕ್ಷತ್ರ”ದ ಉಲ್ಲೇಖವೂ ಇರುತ್ತದೆ.
ಪಂಚಾಂಗಗಳಲ್ಲಿ ತಿಥಿ ವಾರಗಳನ್ನು ಬರೆದ ಮೇಲೆ ದಿನದ ನಕ್ಷತ್ರವನ್ನು ಸಂಕ್ಷಿಪ್ತಾಕ್ಷರಗಳಲ್ಲಿ ಬರೆದಿರುತ್ತಾರೆ. ಅದರ ನಂತರ ಘಳಿಗೆಯನ್ನು ಸೂಚಿಸಿರುತ್ತಾರೆ. ಇದು ಸೂರ್ಯೋದಯಾನಂತರ ನಕ್ಷತ್ರ ಇರುವ ಕಾಲವನ್ನು ತಿಳಿಸುತ್ತದೆ. ಉದಾಹರಣೆಗೆ “ಅಶ್ವಿ-೧೫” ಎಂದು ಬರೆದಿದ್ದರೆ ಸೂರ್ಯೋದಯದಿಂದ ಹದಿನೈದು ಘಳಿಗೆಗಳ ಕಾಲ (೬ ಘಂಟೆ) ಅಶ್ವಿನೀ ನಕ್ಷತ್ರ ಇದೆ ಎಂದರ್ಥ.
ಯೋಗ
ಯೋಗವೆಂಬ ಶಬ್ದಕ್ಕೆ ಕೋಶದಲ್ಲಿ ಇಪ್ಪತ್ತೈದಕ್ಕಿಂತಲೂ ಹೆಚ್ಚು ಅರ್ಥವಿದೆ. ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಮಾನ್ಯವಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಪಂಚಾಂಗದಲ್ಲಿ ಯೋಗವನ್ನು ಸಂಕ್ಷಿಪ್ತಾಕ್ಷರದಲ್ಲಿ ಸೂಚಿಸಿ ಅದರ ಮುಂದೆ ಉದಯಾನಂತರ ಉದಯಾನಂತರ ಯೋಗದ ಅವಧಿಯನ್ನು ಘಳಿಗೆಗಳಲ್ಲಿ ಸೂಚಿಸಿರುತ್ತಾರೆ. ಉದಾಹರಣೆಗೆ ವರಿ ೧೦ ಬರೆದಿದ್ದರೆ ಉದಯಾನಂತರ ೧೦ ಘಳಿಗೆ (೪ ಘಂಟೆ) ವರೀಯಾನ್ ಎಂಬ ಯೋಗವಿದೆಯೆಂದರ್ಥ. ತಿಥಿ ನಕ್ಷತ್ರಗಳಂತೆ ಯೋಗಗಳಿಗೂ ಅಧಿಪತಿಗಳನ್ನೂ ಸ್ಮೃತಿಗ್ರಂಥಗಳು ಹೇಳುತ್ತದೆ. ಒಟ್ಟು 27 ಯೋಗಗಳು. ಈ 27 ಯೋಗಗಳಲ್ಲಿ ವ್ಯತೀಪಾತ ಮತ್ತು ವೈದೃತಿ ಎಂಬ ಯೋಗಗಳು ವಿಶೇಷ ಮಹತ್ವವನ್ನು ಪಡೆದಿವೆ. ಈ ಯೋಗವುಳ್ಳ ದಿನದಂದು ಏಕಭುಕ್ತಿ (ಉಪವಾಸ) ಸ್ನಾನ ದಾನ ಶ್ರಾದ್ಧ ಬ್ರ್ರಾಹ್ಮಣ ಭೋಜನಗಳೆಂಬ ಆಚಾರಗಳನ್ನು ಕೃಷ್ಣಾಚಾರ್ಯಸ್ಮೃತಿಮುಕ್ತಾವಳಿಯಲ್ಲಿ ಹೇಳಿದ್ದಾರೆ.
ವ್ಯತೀಪಾತೋ ಮಹಾಯೋಗಃ ಸರ್ವಕಾರ್ಯೇಷು ಸಿದ್ಧಿದಃ |
ದೃತಿಸ್ತು ಧೈರ್ಯದಾನಿತ್ಯಂ ||
ಎಂಬುದಾಗಿ ಈ ವ್ಯತೀಪಾತ ವೈದೃತಿ ಯೋಗವುಳ್ಳ ಕಾಲವು ಪರ್ವಕಾಲವಾಗಿ ಪರಿಗಣಿಸಲ್ಪಟ್ಟಿದೆ. ಆದ್ದರಿಂದಲೇ ಕೆಲವು ಪಂಚಾಂಗಗಳಲ್ಲಿ ಈ ಎರಡು ಯೋಗಗಳನ್ನು ದಪ್ಪ ಅಕ್ಷರಗಳಲ್ಲಿ ಬರೆದಿರುತ್ತಾರೆ.
ಕರಣ
ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನುಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ ಅರುವತ್ತು ಘಳಿಗೆಗಳಿದ್ದರೆ ೩೦ ಘಳಿಗೆಯನ್ನು ಹಂಚಿಕೊಂಡು ೨ ಕರಣಗಳಿರುತ್ತವೆ. ಇದರಲ್ಲಿ ಚರ ಕರಣಗಳು ಕ್ರಮವಾಗಿ ಪ್ರತಿ ಮಾಸದ ಶುಕ್ಲ ಪಾಡ್ಯದ ಉತ್ತರಾರ್ದದಿಂದ ಪ್ರಾರಂಬಿಸಿ, ಕೃಷ್ಣಚತುರ್ದಶಿಯ ಪೂರ್ವಾರ್ಧದವರೆಗೆ ಒಂದು ತಿಂಗಳಿಗೆ 8 ಆವರ್ತಿ ಪುನಃಪುನಃ ಬರುತ್ತದೆ. ಉಳಿದ ೪ ಸ್ಥಿರ ಕರಣಗಳು ಮಾತ್ರ ಕೃಷ್ಣಚತುರ್ದಶಿಯ ಉತ್ತರಾರ್ಧದಿಂದ ಪ್ರಾರಂಭಿಸಿ ಶುಕ್ಲ ಪಾಡ್ಯದ ಪೂರ್ವಾರ್ಧದವರೆಗೆ ತಿಂಗಳಿಗೆ ಒಂದು ಸಲ ಮಾತ್ರ ಬರುತ್ತದೆ.
ಕೃಪೆ - ಶಿವಳ್ಳಿ ಬ್ರಾಹ್ಮಣರು