ಪ್ರಾರ್ಥನೆಯಲ್ಲಿ ತುಂಬ ಉತ್ತಮವಾಗಿ ಪ್ರಭಾವ ಬೀರಬಲ್ಲ ಚಿಕಿತ್ಸಕ ಶಕ್ತಿಯಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಪ್ರಾರ್ಥಿಸುವುದರ ಮೂಲಕ ನಮ್ಮ ಅಪೇಕ್ಷಿತ ಉದ್ದೇಶಗಳನ್ನು ಪೂರೈಸಬಲ್ಲ ಪ್ರಕೃತಿಯ ಶಕ್ತಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಪ್ರಾರ್ಥನೆಯು ಒಂದು ಅತ್ಯುತ್ತಮ ಔಷಧಿಯಾಗಬಲ್ಲದು ಎಂಬುದನ್ನು ಈಗೀಗ ವಿಜ್ಞಾನವೂ ಸಹ ನಂಬಲಾರಂಭಿಸಿದೆ. ಇತ್ತೀಚಿನ ಒಂದು ಸಂಶೋಧನೆಯು ‘ನಿಮಗೆ ಆರೋಗ್ಯಕರ ಹಾಗೂ ಸಂತೃಪ್ತ ಬದುಕು ಬೇಕೆಂದಾದಲ್ಲಿ, ಯಾವುದಾದರೂ ಆಧ್ಯಾತ್ಮಿಕ ಕೇಂದ್ರಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸುವುದನ್ನು ರೂಢಿಸಿಕೊಂಡು ಲಾಭ ಪಡೆದುಕೊಳ್ಳಿ’ ಎಂದು ಹೇಳಿದೆ.
ಈಗ ವಿಜ್ಞಾನಿಗಳು ಭಗವಂತನೆಂದರೆ ಏನು ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ವಿಶ್ವದಾದ್ಯಂತ ಪ್ರಮುಖ ವೈದ್ಯಕೀಯ ಸಂಸ್ಥೆಗಳು ಸಹ ರೋಗಿಗಳ ಸ್ವಂತದ ಆಧ್ಯಾತ್ಮಿಕ ನಂಬಿಕೆಗಳನ್ನು, ಹೈಟೆಕ್ ವೈದ್ಯಕೀಯ ಚಿಕಿತ್ಸೆಯ ಜೊತೆಗೂಡಿಸಬಹುದಾದಂತಹ ಪ್ರಭಾವಿ ಹಾಗೂ ಅತ್ಯಂತ ನೈತಿಕವೂ ಆಗಿರುವ ವಿಧಾನಗಳ ಶೋಧನೆಯನ್ನು ಆರಂಭಿಸಿದೆ.
ಪ್ರಾರ್ಥನೆಯು ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ, ನಮ್ಮ ತಿಳುವಳಿಕೆ ಮತ್ತು ನಮ್ಮ ಸತ್ವ ಇವುಗಳನ್ನು ನಮ್ಮೊಳಗಿನ ಭಗವಂತ ಅಥವಾ ಅಂತರಾತ್ಮನೊಂದಿಗೆ ಮೇಳವಿಸುವ ಪ್ರಕ್ರಿಯೆಯಾಗಿದೆ. ಅದು ಭಗವಂತನನ್ನು ಆತನ ವಿಶಾಲ ಹಾಗೂ ಶಾಶ್ವತವಾದ ಏಕತೆಯನ್ನು ಜೊತೆಗೂಡಿಸಿ ನಮಗೆ ತಿಳಿಸುವಂತಹ ಮಾರ್ಗವಾಗಿದೆ.
ಪ್ರಾರ್ಥನೆ ಮತ್ತು ಕರ್ಮಪ್ರಾರಬ್ಧ
ಪ್ರಾರ್ಥನೆಯು ಪ್ರಕೃತಿ ನಿಯಮಗಳ ಜೊತೆ ಹೊಂದಿಕೊಂಡಿರುವಂತಹದೂ ಆಗಿರಬೇಕು. ಭಗವಂತನ ದಯೆ ಮತ್ತು ಕೃಪೆ ನಮಗೆ ಬೇಕೆಂದಾದಲ್ಲಿ ನಾವು ಮಾಡುವ ಪ್ರಾರ್ಥನೆಯೂ ಸಹ ಪ್ರಕೃತಿಯ ನಿಯಮಗಳಿಗನುಗುಣವಾಗಿ ಇರಬೇಕು. ಕ್ಷಣಕಾಲ ಯೋಚಿಸಿ, ಬೆಂಕಿಯೊಳಗೆ ಕೈಯನ್ನಿರಿಸಿ, ಬೆಂಕಿಯು ನನ್ನ ಕೈಯನ್ನು ಸುಡದಿರಲಿ ಎಂದು ಪ್ರಾರ್ಥಿಸಿದಲ್ಲಿ ಅದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದುದು. ಅದೇ ರೀತಿಯಲ್ಲಿ ಯಾರಿಗೋ ಡಯಾಬಿಟಿಸ್ ಮತ್ತು ರಕ್ತದೊತ್ತಡದ ಸಮಸ್ಯೆಯಿದೆ ಎಂದಿಟ್ಟುಕೊಳ್ಳಿ. ಅದರ ಪರಿಹಾರಕ್ಕಾಗಿ ಆತ ಪ್ರಾರ್ಥಿಸುವುದಿಲ್ಲ, ಆತ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪು ಹೆಚ್ಚಿರಬಾರದು ಎಂಬ ಸಂಯಮ ಕಾಪಾಡಬೇಕಾದುದು ಸಹ ಅಷ್ಟೇ ಮಹತ್ವದ ಸಂಗತಿ.
ನಮ್ಮ ಬದುಕು ಈಗಾಗಲೇ ನಮ್ಮ ಹಿಂದಿನ ಕರ್ಮಗಳ ಹೊರೆಯಿಂದ ಕೂಡಿರುವಂತಹದು. ಆದರೆ ಪ್ರಸ್ತುತ ಕೃತಿ ಮತ್ತು ಪ್ರಾರ್ಥನೆಯ ಮೂಲಕ ಅದರಲ್ಲಿ ವ್ಯತ್ಯಾಸ ತರಲು ನಮಗೆ ಅವಕಾಶಗಳಿವೆ. ವಿಜ್ಞಾನಿಗಳು ಹೇಳುವಂತೆ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹಾರಾಡುವ ಒಂದು ಚಿಟ್ಟೆಯ ರೆಕ್ಕೆಗಳ ಬಡಿತದ ತರಂಗವು, ಇನ್ನಾವುದೋ ಮೂಲೆಯಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಬಲ್ಲದು. ಆರ್ಕ್‌ಟಿಕ್ ಪ್ರದೇಶದಲ್ಲಿ ಮಂಜುಗಡ್ಡೆ ಕರಗಿದಲ್ಲಿ ಇನ್ನಾವುದೋ ಪ್ರದೇಶದಲ್ಲಿ ಪ್ರವಾಹವೇ ಉಕ್ಕಬಹುದು. ಹಿಮಾಲಯದಲ್ಲಿ ಹಿಮಮಳೆಯಾದಲ್ಲಿ ದೆಹಲ್ಲಿರುವವರಿಗೆ ಚಳಿಯ ನಡುಕವುಂಟಾಗುತ್ತದೆ. ಅದರರ್ಥವೆಂದರೆ, ಭೌತಿಕ ಜಗತ್ತು ಸಹ ಭೌತಿಕ ನಿಯಮಗಳನ್ನುನಸರಿಸಿ ಕಾರ್ಯವೆಸಗುತ್ತದೆ. ಭೌತಿಕ ಜಗತ್ತಿನ ವ್ಯವಸ್ಥೆಯಲ್ಲಿ ಪರಸ್ಪರ ಸಂಬಂಧಗಳಿರುವುದು ಸುಸ್ಪಷ್ಟ.
ನಮ್ಮ ಸೂಕ್ಷ್ಮ ಜಗತ್ತು ಸಹ ಕರ್ಮದ ನಿಯಮದಂತೆ ಎಂದರೆ ಕಾರ್ಯಕಾರಣದ ನಿಯಮದಂತೆ ಕೆಲಸ ಮಾಡುವಂತಹದು. ನಮ್ಮ ಎಲ್ಲ ಕೃತಿಗಳ ಛಾಪು ನಮ್ಮ ಶರೀರದಲ್ಲಿ ಅನುದ್ದೇಶಿತವಾಗಿಯೇ ಎಲ್ಲೋ ಒಂದು ಕಡೆ ದಾಖಲಾಗಿ ಜಮೆಯಾಗಿರುತ್ತದೆ. ಮುಂದೆ ಸಕಾಲದಲ್ಲಿ ಅದು ತನ್ನ ಫಲವನ್ನು ನೀಡುತ್ತದೆ. ನಮ್ಮೆಲ್ಲ ವಿಚಾರ ಮತ್ತು ಕೃತಿಗಳನ್ನು ಪ್ರಕೃತಿಯು ದಾಖಲು ಮಾಡಿಡುತ್ತದೆ. ಈ ದಾಖಲೆ ನಮ್ಮ ಬದುಕಿನ ವಿಮಾನದ ಎಂದೂ ನಾಶವಾಗದ ಬ್ಲ್ಯಾಕ್ ಬಾಕ್ಸ್ ಇದ್ದಂತೆ. ಅದೇ ರೀತಿಯಲ್ಲಿ ನಮ್ಮ ಅನುದ್ಧಿಷ್ಟಿತ ಶರೀರವೂ ನಮ್ಮ ಹಿಂದಿನ ಎಲ್ಲ ಕೃತಿಗಳ ದಾಖಲೆಗಳನ್ನು ಇರಿಸಿಕೊಂಡಿದ್ದು, ಅದಕ್ಕನುಗುಣವಾಗಿ ಫಲಗಳನ್ನು ನೀಡುತ್ತದೆ. ನಮ್ಮ ಹಿಂದಿನ ಕರ್ಮಗಳಿಗನುಗುಣವಾಗಿ ನಮ್ಮ ಈಗಿನ ಬದುಕು ರೂಪುಗೊಂಡಿರುತ್ತದೆ. ಆದರೆ ಈಗಿನ ಕೃತಿಗಳಿಂದ ಮತ್ತು ಪ್ರಾರ್ಥನೆಯಿಂದ ಅದನ್ನು ಪುನರ್ರೂಪಿಸಲು ಸಹ ನಮಗೆ ಸಾಧ್ಯವಿದೆ.
ಪ್ರಾರ್ಥನೆಯನ್ನು ಒಂದು ಆಧ್ಯಾತ್ಮಿಕ ಸಾಧನವಾಗಿ ಮಾಡಿಕೊಳ್ಳಿ. ಯಾವುದೇ ತೊಂದರೆಯಾದಾಗ ಅಥವಾ ಅಗತ್ಯವೆನಿಸಿದಾಗ ಮೊಟ್ಟಮೊದಲು ಪ್ರತಿಕ್ರಿಯೆಯೆಂದರೆ ಪ್ರಾರ್ಥನೆಯೇ ಆಗಬೇಕು. ಭಗವಂತ ಎಲ್ಲದಕ್ಕೂ ಉತ್ತರಿಸಬಲ್ಲ. ಇನ್ನಾರೂ ನಮ್ಮ ನೆರವಿಗೆ ಬರದಿದ್ದಾಗ, ನಿಜಕ್ಕೂ ನಮ್ಮ ಸಹಾಯಕ್ಕೆ ಬರುವನು ಅವನೊಬ್ಬನೇ. ಪ್ರಾರ್ಥನೆಯಲ್ಲಿ ಅಂತಹ ಸಾಮರ್ಥ್ಯವಿರದಿದ್ದಲ್ಲಿ ಯುಗ ಯುಗಾಂತರಗಳಿಂದ ಜನರು ಅದರಲ್ಲಿ ಭರವಸೆಯಿಡುತ್ತಿದ್ದರೆ? ಪ್ರಾರ್ಥನೆಯಲ್ಲಿರುವ ಶಕ್ತಿಯನ್ನು ನೀವೇ ಗುರುತಿಸಿಕೊಳ್ಳಿ.
ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಮೊದಲೇ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶೀಯರಿಗೆ ಇತ್ತೀಚೆಗೆ ಅರಿವಾಗುವುದು
ಅ. ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಉತ್ತಮ ಪರಿಣಾಮವಾಗುತ್ತದೆ: ಜಪಾನಿನ ವಿಜ್ಞಾನಿ ಡಾ.ಮಾಸಾರೂ ಇಮೋಟೋ ಇವರು, ‘ಪ್ರಾರ್ಥನೆ, ಸಂಗೀತ, ಉತ್ತಮ ಶಬ್ದ, ನಾಮಜಪ ಮತ್ತು ವಾತಾವರಣದಿಂದ ನೀರು ಮತ್ತು ಆಹಾರದ ಮೇಲೆ ಏನು ಪರಿಣಾಮವಾಗುತ್ತದೆ’ ಎಂಬುದರ ಅಧ್ಯಯನವನ್ನು ಮಾಡಿದರು. ಅವುಗಳ ಛಾಯಾಚಿತ್ರಗಳನ್ನೂ ತೆಗೆದರು. ಅದರಲ್ಲಿ ಪ್ರಾರ್ಥನೆಯನ್ನು ಮಾಡದೇ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ, ಪಾಶ್ಚಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಹಾಗೂ ಕೆಟ್ಟ ಶಬ್ದ ಮತ್ತು ಒಳ್ಳೆಯ ಶಬ್ದಗಳ ಪರಿಣಾಮಗಳ ಅಧ್ಯಯನವನ್ನು ಮಾಡಿದರು. ಅವರಿಗೆ ಆಗ ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು. ನಮ್ಮ ಶರೀರದ ರಚನೆಯಲ್ಲ್ಲಿ ಶೇ.೭೨ರಷ್ಟು ನೀರಿರುತ್ತದೆ. ಇದರಿಂದ ಕೆಟ್ಟ ಶಬ್ದಗಳಿಗಿಂತ ಒಳ್ಳೆಯ ಶಬ್ದಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವಾಗುತ್ತದೆ.
ಆ. ಡಾ.ಮಾಸಾರೋ ಇಮೋಟೋ ಇವರಿಗೆ ಚಿಕ್ಕಂದಿನಿಂದ ಅವರ ತಾಯಿಯು ಊಟದ ಮೊದಲು ಪ್ರಾರ್ಥನೆಯನ್ನು ಮಾಡಲು ಕಲಿಸಿದ್ದರು. ಪ್ರಾರ್ಥನೆಯು ಕೇವಲ ಒಳ್ಳೆಯದೆನಿಸಲು ಮಾಡುವ ವಿಷಯವಾಗಿರದೇ ಅದರಿಂದ ತುಂಬಾ ಲಾಭವಾಗುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.
ಇ. ನಾವು ಬಹಳಷ್ಟು ಜನರಿಗೆ ಅವರ ಹುಟ್ಟುಹಬ್ಬದ ದಿನ, ಯಶಸ್ಸು ಪ್ರಾಪ್ತವಾದಾಗ, ಹಬ್ಬಹರಿದಿನಗಳಂದು, ಸಮಾರಂಭ ದಂದು, ಪರೀಕ್ಷೆಗೆ ಹೋಗುವಾಗ ಮುಂತಾದ ಪ್ರಸಂಗಗಳಲ್ಲಿ ಒಳ್ಳೆಯ ಸಕಾರಾತ್ಮಕ ಶಬ್ದಗಳಲ್ಲಿ ಶುಭೇಚ್ಛೆಗಳನ್ನು ನೀಡುತ್ತೇವೆ. ಅದು ಇದಕ್ಕಾಗಿಯೇ ಇದೆ ಎಂದೂ ಡಾ.ಮಾಸಾರೂ ಇಮೋಟೋ ಹೇಳುತ್ತಾರೆ. - ಶ್ರೀ.ನಂದೂ ಮುಳ್ಯೆ, ಸನಾತನ ಆಶ್ರಮ, ದೇವದ, ಪನವೇಲ.
(ಹಿಂದೂ ಧರ್ಮಶಾಸ್ತ್ರದ ಪರ್ಯಾಯವಾಗಿ ಹಿಂದೂ ಧರ್ಮದ ಮಹಾತ್ಮೆಯು ಈ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. - ಸಂಕಲನಕಾರರು)
(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)
ಸಂಬಂಧಿತ ವಿಷಯಗಳು
ಪ್ರಾರ್ಥನೆಯ ಅರ್ಥ ಮತ್ತು ಮಹತ್ವಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
No comments:
Post a Comment
Note: only a member of this blog may post a comment.