ಸನಾತನ ಸಂಸ್ಥೆಯ ಗ್ರಂಥ - ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತ

 

"ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತ" ಗ್ರಂಥದ ಮನೋಗತ


೧. ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳನ್ನು ಆಚರಿಸುವ ಉದ್ದೇಶ

ಅ. ಸರ್ವಸಾಮಾನ್ಯ ಮಾಹಿತಿ: ನಮ್ಮ ಹಬ್ಬ ಮತ್ತು ಉತ್ಸವಗಳು ಹೇಗಿವೆಯೆಂದರೆ, ಇಹಲೋಕದಲ್ಲಿ ಸುಖವನ್ನು ಕೊಡುವಂತಹದ್ದಲ್ಲದೇ, ಮೃತ್ಯುವಿನ ನಂತರವೂ ಸದ್ಗತಿಯನ್ನು ಕೊಡುವಂತಹದ್ದಾಗಿವೆ.

ಆ. ನಿಸರ್ಗದಲ್ಲಿನ ಬದಲಾವಣೆ, ಉದಾ. ಕಾಯಿಹುಣ್ಣಿಮೆ. ಮಳೆಗಾಲ ಮುಗಿಯುತ್ತಿದ್ದಂತೆ ಸಮುದ್ರವು ಶಾಂತವಾಗುತ್ತದೆ, ಆಗ ಕಾಯಿಹುಣ್ಣಿಮೆಯನ್ನು ಆಚರಿಸುತ್ತಾರೆ.

ಇ. ಅವತಾರಗಳ ಜನ್ಮತಿಥಿ, ಉದಾ. ಶ್ರೀರಾಮ ನವಮಿ. ಶ್ರೀರಾಮ, ಶ್ರೀಕೃಷ್ಣ ಮುಂತಾದ ಅವತಾರಗಳ ಜನ್ಮತಿಥಿಯನ್ನು ಆಚರಿಸುತ್ತಾರೆ; ಏಕೆಂದರೆ ದೇಹತ್ಯಾಗವು ಅವರ ಮೃತ್ಯುವಾಗಿರುವುದಿಲ್ಲ. ಅವರು ಭಕ್ತರಿಗಾಗಿ ಯಾವಾಗ ಬೇಕಾದರೂ ದೇಹವನ್ನು ಧರಿಸಬಲ್ಲರು. ಅಂದರೆ ಅವರು ಅಮರರಾಗಿದ್ದಾರೆ.

ಈ. ಸಂತರ ಪುಣ್ಯತಿಥಿ, ಉದಾ. ಶ್ರೀeನೇಶ್ವರರ ಪುಣ್ಯತಿಥಿ. ಸಂತರ ದೇಹತ್ಯಾಗದ ದಿನವನ್ನು ಆಚರಿಸುತ್ತಾರೆ; ಏಕೆಂದರೆ ಜನಿಸಿದಾಗ ಅವರು ಬಾಹ್ಯತಃ ಸಾಮಾನ್ಯ ವ್ಯಕ್ತಿ ಅಥವಾ ಸಾಧಕರಾಗಿರುತ್ತಾರೆ. ಮುಂದೆ ಸಾಧನೆ ಮಾಡಿ ಅವರು ಸಂತಪದವಿಯನ್ನು ತಲುಪುತ್ತಾರೆ. ದೇಹತ್ಯಾಗದ ನಂತರ ಅವರು ಉಚ್ಚಲೋಕಕ್ಕೆ ಹೋಗುತ್ತಾರೆ ಮತ್ತು ಅವರ ಕಾರ್ಯವು ಇನ್ನೂ ಹೆಚ್ಚಾಗುತ್ತದೆ; ಏಕೆಂದರೆ ದೇಹವಿಲ್ಲದಿರುವುದರಿಂದ, ದೇಹಕ್ಕಾಗಿ ಬಳಸಲ್ಪಡುತ್ತಿದ್ದ ಶಕ್ತಿಯೂ ಕಾರ್ಯಕ್ಕಾಗಿಯೇ ಉಪಯೋಗಿಸಲ್ಪಡುತ್ತದೆ. ಆದುದರಿಂದ ಅವರ ಪುಣ್ಯಸ್ಮರಣೆಯ ದಿನವೆಂದು ಪುಣ್ಯತಿಥಿಯನ್ನು ಆಚರಿಸುತ್ತಾರೆ. ಸಾಮಾನ್ಯ ವ್ಯಕ್ತಿಗಳ ವಿಷಯದಲ್ಲಿ ಮಾತ್ರ ಅವರ ಮೃತ್ಯುವಿನ ದಿನದಂದು ಶ್ರಾದ್ಧವನ್ನು ಮಾಡುವುದು ಆವಶ್ಯಕವಾಗಿರುವುದರಿಂದ ಆ ದಿನವನ್ನು ಗಮನದಲ್ಲಿಡುತ್ತಾರೆ.

ಉ. ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳು, ಉದಾ. ವಟಪೂರ್ಣಿಮೆ. ಈ ದಿನದಂದು ಸಾವಿತ್ರಿಯು ಯಮನನ್ನು ವಾದ-ವಿವಾದದಲ್ಲಿ ಸೋಲಿಸಿ ತನ್ನ ಪತಿಯನ್ನು ಜೀವಂತವಾಗಿಸಿಕೊಂಡಳು.

ಊ. ಆಧ್ಯಾತ್ಮಿಕ ಬೋಧನೆ : ಸಾಧಕ, ಸಾಧನೆ ಮತ್ತು ಸಾಧ್ಯ (ಧ್ಯೇಯ) ಇವುಗಳಲ್ಲಿ ಅದ್ವೈತವಾಗಬೇಕು, ಸಾಧಕನು ಪರಮೇಶ್ವರನೊಂದಿಗೆ ಏಕರೂಪವಾಗಬೇಕು ಎನ್ನುವುದೇ ಸಾಧನೆಯ ಏಕೈಕ ಉದ್ದೇಶವಾಗಿರುತ್ತದೆ. ಈ ದೃಷ್ಟಿಯಿಂದ ಒಂದು ಹಂತವೆಂದು ಸಾಧನಗಳಲ್ಲಿಯೂ (ಸಾಮಗ್ರಿ) ಈಶ್ವರನ ರೂಪವನ್ನು ಕಾಣಲು ಕಲಿಯಬೇಕೆಂದು ಕೆಲವು ಹಬ್ಬಗಳನ್ನು ಆಚರಿಸುತ್ತಾರೆ, ಉದಾ.
ಊ ೧. ಶೀತಲಾ ಸಪ್ತಮಿ : ಅಡುಗೆಯ ಒಲೆ, ಬಾಣಲೆ, ಇಕ್ಕಳ ಮುಂತಾದ ಸಾಧನಗಳನ್ನು ಈ ದಿನ ಉಪಯೋಗಿಸದೇ ಅವುಗಳ ಪೂಜೆಯನ್ನು ಮಾಡುತ್ತಾರೆ.
ಊ ೨. ಕಾರಹುಣ್ಣಿಮೆ : ಈ ದಿನ ರೈತರು ಎತ್ತು ಮತ್ತು ನೇಗಿಲುಗಳಿಗೆ ಪೂಜೆ ಮಾಡುತ್ತಾರೆ.
ಊ ೩. ವಿಜಯದಶಮಿ : ಈ ದಿನದಂದು ಪ್ರತಿಯೊಬ್ಬರೂ ತಮ್ಮ ತಮ್ಮ ಸಾಧನ ಗಳಿಗೆ ಪೂಜೆ ಮಾಡುತ್ತಾರೆ. ಉದಾ. ದರ್ಜಿಯು ಕತ್ತರಿ ಮತ್ತು ಹೊಲಿಗೆ ಯಂತ್ರಕ್ಕೆ, ವಿದ್ಯಾರ್ಥಿ ಮತ್ತು ಅಧ್ಯಯನಕಾರರು ತಮ್ಮ ಪುಸ್ತಕಗಳಿಗೆ ಪೂಜೆ ಮಾಡುತ್ತಾರೆ.
ಊ ೪. ಲಕ್ಷ್ಮೀಪೂಜೆ : ವ್ಯಾಪಾರಿಗಳು ತಮ್ಮ ತಕ್ಕಡಿ ಮತ್ತು ಲೆಕ್ಕದ ಪುಸ್ತಕಗಳನ್ನು ಪೂಜಿಸುತ್ತಾರೆ, ಹಾಗೆಯೇ ಗೃಹಿಣಿಯರು ಪೊರಕೆಯನ್ನು ಪೂಜಿಸುತ್ತಾರೆ.

೨. ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳಲ್ಲಿನ ವ್ಯತ್ಯಾಸ : ಈ ವ್ಯತ್ಯಾಸವು ಸ್ಪಷ್ಟವಾಗಿಲ್ಲ; ಏಕೆಂದರೆ ಕೆಲವು ಹಬ್ಬಗಳು ಧಾರ್ಮಿಕ ಉತ್ಸವ ಮತ್ತು ವ್ರತಗಳೆಂದೂ ಆಚರಿಸಲ್ಪಡುತ್ತವೆ. ಉದಾ. ಶ್ರೀರಾಮ ನವಮಿಯನ್ನು ವೈಯಕ್ತಿಕವಾಗಿ ಆಚರಿಸಿದಾಗ ಅದು ಹಬ್ಬವಾಗುತ್ತದೆ, ಸಮಾಜದಲ್ಲಿ ಎಲ್ಲರೂ ಸೇರಿ ಆಚರಿಸಿದಾಗ ಅದು ‘ಉತ್ಸವ’ವಾಗುತ್ತದೆ ಮತ್ತು ಸಂಕಲ್ಪವನ್ನು ಮಾಡಿ ವೈಯಕ್ತಿಕ ರೀತಿಯಲ್ಲಿ ಆಚರಿಸಿದಾಗ ಅದು ‘ವ್ರತ’ವಾಗುತ್ತದೆ.

೩. ಹಬ್ಬ, ಉತ್ಸವ ಇತ್ಯಾದಿಗಳೆಡೆ ಕೇವಲ ರೂಢಿಯೆಂದು ನೋಡಬೇಡಿ, ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಅರಿತುಕೊಳ್ಳಿ ! : ಭಾರತದಲ್ಲಿ ಅನೇಕ ಹಬ್ಬ, ಉತ್ಸವ ಮತ್ತು ಪರಂಪರೆಗಳಿವೆ. ಬಹುತೇಕ ಜನರು ಅದರೆಡೆಗೆ ಕೇವಲ ರೂಢಿಯೆಂದು ನೋಡುತ್ತಾರೆ ಮತ್ತು ಆ ದೃಷ್ಟಿಯಿಂದಲೇ ಆಚರಿಸುತ್ತಾರೆ; ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಯುಗಾದಿಯಂದು ಕಹಿಬೇವಿನ ಪ್ರಸಾದವನ್ನು ಪ್ರಸಾದವೆಂದು ಸೇವಿಸುತ್ತಾರೆ. ‘ಆ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುವ ಪ್ರಜಾಪತಿ ಲಹರಿಯನ್ನು ಗ್ರಹಿಸುವ ಕ್ಷಮತೆಯು ಇತರ ಯಾವುದೇ ಪದಾರ್ಥಗಳಿಗಿಂತ ಕಹಿಬೇವಿನಲ್ಲಿ ಅಧಿಕವಿರುವುದರಿಂದ, ಅದರ ಪ್ರಸಾದ ವನ್ನು ಸೇವಿಸುವುದರಿಂದ ಪ್ರಜಾಪತಿ ಲಹರಿಗಳ ಅಧಿಕ ಲಾಭವಾಗಲು ಸಹಾಯ ವಾಗುತ್ತದೆ’, ಇದು ಕಹಿಬೇವನ್ನು ಸೇವಿಸುವ ಹಿಂದಿನ ಶಾಸ್ತ್ರವಾಗಿದೆ. ಹಬ್ಬ ಮತ್ತು ಉತ್ಸವಗಳ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರ ತಿಳಿದರೆ, ಅದು ಹೆಚ್ಚಿನ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಆದುದರಿಂದ ಈ ಗ್ರಂಥದಲ್ಲಿ ಗೂಢಾರ್ಥ ಮತ್ತು ಶಾಸ್ತ್ರವನ್ನು ನೀಡಲು ವಿಶೇಷ ಒತ್ತು ನೀಡಲಾಗಿದೆ. ಪ್ರಾದೇಶಿಕ-ಭಿನ್ನತೆ, ಜನಜೀವನ, ಉಪಾಸನೆಯ ಪದ್ಧತಿ ಇತ್ಯಾದಿಗಳಿಂದ ಹಬ್ಬ, ಉತ್ಸವಗಳನ್ನು ಆಚರಿಸುವಾಗ ವಿವಿಧೆಡೆಗಳಲ್ಲಿ ಲೋಕರೂಢಿ ಯಂತೆ ಕೆಲವೊಮ್ಮೆ ವ್ಯತ್ಯಾಸಗಳು ಕಂಡುಬರುತ್ತವೆ. ಶಾಸ್ತ್ರದ ಆಧಾರವಿಲ್ಲದಿರುವಾಗಲೂ ಕೇವಲ ಹಿಂದಿನ ನಡೆದುಬಂದ ಲೌಕಿಕ ರೂಢಿ ಎಂದು ಯಾವುದಾದರೊಂದು ರೂಢಿಯನ್ನು ಆಚರಿಸುವುದು ಅಯೋಗ್ಯವಾಗಿದೆ. ಇಂತಹ ಲೌಕಿಕ ರೂಢಿಗಳಿಗೆ ತಿಲಾಂಜಲಿಯನ್ನಿಟ್ಟು ಶಾಸ್ತ್ರಸಮ್ಮತ ಕೃತಿಗಳನ್ನು ಮಾಡುವುದೇ ಆವಶ್ಯಕವಾಗಿದೆ. ವ್ರತಗಳ ವಿಷಯದಲ್ಲಾದರೆ ಅದರ ಹಿಂದೆ ಯಾರಾದರೊಬ್ಬ ಉನ್ನತರ ಸಂಕಲ್ಪವಿರುವುದೇ ಅದರ ಹಿಂದಿನ ಶಾಸ್ತ್ರೀಯ ಕಾರಣವಾಗಿದೆ.

೪. ಧರ್ಮ ಮತ್ತು ಸಂಸ್ಕೃತಿ ಇವುಗಳ ಹಾನಿ ಮಾಡುವ ರೂಢಿಗಳನ್ನು ವಿರೋಧಿಸಿ ! : ಇತ್ತೀಚೆಗೆ ಇಂತಹ ರೂಢಿಗಳು ಜನರ ಮನಸ್ಸಿನಲ್ಲಿ ಮಹತ್ವದ ಸ್ಥಾನ ಪಡೆದಿವೆ, ಉದಾ. ದೀಪಾವಳಿ ಮತ್ತು ಗಣೇಶೋತ್ಸವಗಳಲ್ಲಿ ಪಟಾಕಿ ಸಿಡಿಸುವುದು, ಗಣೇಶೋತ್ಸವ ಮತ್ತು ನವರಾತ್ರ್ಯೋತ್ಸವಗಳ ನಿಮಿತ್ತ ಅನೇಕ ಅಯೋಗ್ಯ ಪದ್ಧತಿಗಳಾಗುತ್ತವೆ. ‘ಈ ರೂಢಿಗಳೆಂದರೇ ಹಬ್ಬ ಮತ್ತು ಉತ್ಸವಗಳನ್ನು ಆಚರಿಸುವ ಪದ್ಧತಿ’, ಎಂಬ ತಪ್ಪು ಸಂಸ್ಕಾರವು ಭಾವೀ ಪೀಳಿಗೆಯ ಮೇಲಾಗುತ್ತಿದೆ. ಈ ರೂಢಿಗಳನ್ನು ಬಹಿಷ್ಕರಿಸುವುದು ಮತ್ತು ಅವುಗಳನ್ನು ವಿರೋಧಿಸುವುದು ಧರ್ಮಪಾಲನೆಯೇ ಆಗಿದೆ. ಈ ಗ್ರಂಥದಲ್ಲಿ ಇಂತಹ ಕೆಲವು ಅನಿಷ್ಟ ರೂಢಿಗಳಲ್ಲಿನ ಟೊಳ್ಳುತನವನ್ನು ತೋರಿಸಲಾಗಿದೆ.

೫. ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳ ಮಹತ್ವ

ಅ. ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳಿಗೆ ಅಧ್ಯಾತ್ಮಶಾಸ್ತ್ರೀಯ ಆಧಾರವಿರುವುದರಿಂದ ಅವುಗಳನ್ನು ಆಚರಿಸುವಾಗ ಚೈತನ್ಯನಿರ್ಮಿತಿಯಾಗುತ್ತದೆ ಮತ್ತು ಅದರಿಂದ ಸರ್ವಸಾಮಾನ್ಯ ಮನುಷ್ಯನಿಗೂ ಈಶ್ವರನ ಕಡೆ ಹೋಗಲು ಸಹಾಯವಾಗುತ್ತದೆ.

ಆ. ಸಾಧಕರ ದೃಷ್ಟಿಯಿಂದ ಕರ್ಮಕಾಂಡವು ಕನಿಷ್ಟ ಮಟ್ಟದ್ದಾದರೂ, ಸಾಧನೆ ಮಾಡದಿರುವವರನ್ನು ಕ್ರಮೇಣ ಸಾಧನೆಯ ಕಡೆ ಹೊರಳಿಸುವ ದೃಷ್ಟಿಯಿಂದ ಅದು ಮಹತ್ವದ್ದಾಗಿದೆ. ಕರ್ಮಕಾಂಡದ ದೃಷ್ಟಿಯಿಂದ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು ಎಷ್ಟು ಮಹತ್ವದ್ದಾಗಿವೆ ಎಂದರೆ ವರ್ಷದಲ್ಲಿ ಸುಮಾರು ಶೇ. ೭೫ ರಷ್ಟು ತಿಥಿಗಳಂದು ಏನಾದರೊಂದು ಇದ್ದೇ ಇರುತ್ತದೆ.

ಇ. ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಯಾವಾಗಲೂ ಸಂಯಮ ಇರಬೇಕು, ಆದರೆ ಅದನ್ನು ನಾವು ಪಾಲಿಸುವುದಿಲ್ಲ; ಆದುದರಿಂದ ಹಬ್ಬ-ಹರಿದಿನಗಳು, ಧಾರ್ಮಿಕ ಉತ್ಸವಗಳು ಮತ್ತು ವ್ರತಗಳ ದಿನಗಳಲ್ಲಾದರೂ ಅದರ ಪಾಲನೆಯಾಗಬೇಕು; ಅಂದರೆ ಕ್ರಮೇಣ ಸದಾಕಾಲ ಸಂಯಮದಿಂದ ಜೀವನವನ್ನು ನಡೆಸಬಹುದು.

ಹಬ್ಬ, ಉತ್ಸವ ಇತ್ಯಾದಿಗಳ ಹಿಂದಿನ ಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲ್ಪಡಲಿ ಹಾಗೂ ಅದರ ಮೂಲಕ ಜೀವನವು ಕಲ್ಯಾಣಮಯವಾಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

ಗ್ರಂಥದ ಪುಟಗಳು - 124
ಗ್ರಂಥದ ಅರ್ಪಣಾ ಬೆಲೆ - ರೂ. 130/-

ಗ್ರಂಥವನ್ನು ಪಡೆಯಲು ತಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ ವಿ-ಅಂಚೆ ಮಾಡಿ - chaitanya.grantha@gmail.com

No comments:

Post a Comment

Note: only a member of this blog may post a comment.