ಈ ವಿಶ್ವವನ್ನು ಸೃಷ್ಟಿಸಿ, ಸಕಲ ಜೀವರಾಶಿಗಳ ಪಾಲನೆ, ಪೋಷಣೆ ಮತ್ತು ಲಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸರ್ವೇಶ್ವರನನ್ನು ಹೊಂದಿ ಆತನಲ್ಲಿ ಏಕರೂಪವಾಗಲು ಇರುವ ಯೋಗ ಮಾರ್ಗಗಳು ಅನೇಕ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠ ಜ್ಞಾನಿಗಳಾಗಿದ್ದು ಜ್ಞಾನಯೋಗದ ಮೂಲಕ ಪರಮಾತ್ಮನನ್ನು ಹೊಂದಲು ಸಮರ್ಥರಾಗಿದ್ದರೂ ಪರಮಾತ್ಮನ ಆಧ್ಯಾತ್ಮಿಕ ಮಟ್ಟವು ಶೇಕಡಾ ೧೦೦ ಎಂದು ಭಾವಿಸುವುದಾದರೆ ಅಂದಿನ ಜನರ ಮಟ್ಟವು ಶೇಕಡಾ ೮೦ ಆಗಿದ್ದಿತು. ಮುಂದಿನ ತ್ರೇತಾಯುಗದಲ್ಲಿ ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಕಾಲ ನಿರಂತರ ತಪಸ್ಸು ಮಾಡಿ ತಾವು ಕಂಡುಕೊಂಡ ಸತ್ಯವನ್ನು ಜನರಿಗೆ ಬೋಧಿಸುತ್ತಿದ್ದರು. ಆಗ ಧ್ಯಾನ ಯೋಗವು ಪ್ರಚಲಿತವಾಯಿತು. ಅಂದಿನ ಜನಸಾಮಾನ್ಯರ ಆಧ್ಯಾತ್ಮಿಕ ಮಟ್ಟವು ೬೦% ಆಗಿತ್ತು. ಶ್ರೀರಾಮನಂತಹ ಆದರ್ಶ ರಾಜನಿಗೆ ವಸಿಷ್ಠರಂತಹ ಋಷಿ ವರೇಣ್ಯರು ಮಾರ್ಗದರ್ಶಕ ಗುರುಗಳಾಗಿದ್ದು ರಾಜ್ಯಭಾರದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ರಾಜನೂ ಧರ್ಮಭೀರುವಾಗಿ ಧರ್ಮದಂಡದ ಅಂಕುಶಕ್ಕೆ ಒಳಗಾಗಿರುತ್ತಿದ್ದನು. ಮುಂದಿನ ದ್ವಾಪರಯುಗದಲ್ಲಿ ಸಾತ್ವಿಕತೆಯು ನಶಿಸುತ್ತ ಜನತೆಯ ಆಧ್ಯಾತ್ಮಿಕ ಮಟ್ಟವು ಶೇಕಡಾ ೪೦ಕ್ಕೆ ಕುಸಿಯಿತು. ಜನರು ಕರ್ಮಯೋಗದ ಅನುಸಾರ, ಪೂಜೆ, ಹೋಮಹವನ, ತೀರ್ಥಯಾತ್ರೆಗಳಂತಹ ವಿಧಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಕಾಲಕ್ರಮೇಣ ಜನರು ಉತ್ತಮ ಜ್ಞಾನಿಗಳೂ ಆಗಿರದೆ, ಸುದೀರ್ಘ ಆಯಸ್ಸಿಲ್ಲದೆ ಜಪತಪಗಳನ್ನೂ ಆಚರಿಸಲಾಗದೆ, ಕರ್ಮಕಾಂಡದ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ನಡೆಸಬಲ್ಲ ತಪೋಧನರಾದ, ಆಚಾರವಂತರಾದ, ಸುವಿಚಾರೀ ಪುರೋಹಿತರೂ ಪರಿಶುದ್ಧವಾದ ಸಮಿತ್ತು, ಹಾಲು, ತುಪ್ಪ, ದರ್ಭೆ ಮೊದಲಾದ ಯೋಗ್ಯ ಉತ್ಪನ್ನಗಳು ಸಿಗದೆ ನಿರೀಕ್ಷಿತ ಮಟ್ಟದಲ್ಲಿ ಆಧ್ಯಾತ್ಮಿಕ ಸಾಧನೆಯ ಫಲ ದೊರೆಯದಾಯಿತು. ಕಲಿಯುಗವು ಆರಂಭವಾದಾಗ ವಿಧಿ ನಿಯಮದಂತೆ ಅಧಿಕಾರ ಹೊಂದಿದ ಕಲಿಯ ಪ್ರಭಾವಕ್ಕೊಳಗಾಗಿ ಜನ ಸಾಮಾನ್ಯರು ಜೂಜಾಟ, ಸುರಾಪಾನ, ವೇಶ್ಯೇಯರ ಸಹವಾಸ ಹಾಗೂ ಹಿಂಸಾ ಪ್ರವೃತ್ತಿಯಲ್ಲಿ ನಿರತರಾಗತೊಡಗಿದಾಗ ಅವರ ಆಧ್ಯಾತ್ಮಿಕ ಮಟ್ಟವು ಶೇಕಡಾ ೨೦ಕ್ಕೆ ಕುಸಿಯಿತು. ಆದರೂ ಧರ್ಮಭೀರುಗಳಾದ ಮಂದಿ ಭಕ್ತಿಯೋಗದ ಅನುಸಾರ ಸಂತರು, ದಾಸವರೇಣ್ಯರು ತೋರಿದ ಋಜುಮಾರ್ಗದಲ್ಲಿ ನಡೆಯುತ್ತ ಪರಮಾತ್ಮನಲ್ಲಿ ಉತ್ಕಟ ಪ್ರೇಮವಿರಿಸಿ ನವವಿಧ ಭಕ್ತಿಯೆನಿಸಿದ ೧) ಶ್ರವಣ, ೨) ಕೀರ್ತನ, ೩) ಸ್ಮರಣ, ೪) ಪಾದ ಸೇವನ ೫) ಅರ್ಚನ ೬) ವಂದನ ೭) ದಾಸ್ಯ ೮) ಸಖ್ಯ ಮತ್ತು ೯) ಆತ್ಮ ನಿವೇದನಗಳೆನಿಸಿದ ಪ್ರಕಾರಗಳಿಂದ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸತೊಡಗಿದರು.
ಸಂಜೆಯ ಹೊತ್ತು ಮನೆ ಮನೆಗಳಲ್ಲೂ ತಾಳ ತಂಬೂರಿಗಳ ಸುಶ್ರಾವ್ಯ ನಾದದೊಂದಿಗೆ ಭಜನೆಯ ಹಾಡುಗಳು ಮನೆಮಂದಿಯನ್ನು ಭಕ್ತಿ ರಸದ ಹೊನಲಲ್ಲಿ ತೇಲಾಡಿಸುತ್ತಿದ್ದವು. ಶಾಲೆಗಳಲ್ಲಿ ಪ್ರತೀ ವಾರ ಭಜನೆ, ದೇವಸ್ಥಾನಗಳಲ್ಲಿ, ಮಠ ಮಂದಿರಗಳಲ್ಲಿ ಹರಿಕಥಾಕಾಲಕ್ಷೇಪ, ಪ್ರವಚನ ನಡೆಯುತ್ತಿದ್ದವು. ಆದರೆ ಕಲಿಯುಗವು ದಾಂಗುಡಿಯಿಡುತ್ತ ೫೦೦೦ ವರ್ಷಗಳು ಸಮೀಪಿಸುವ ಹೊತ್ತಿಗೆ ರಾಜ್ಯಾಡಳಿತವು ಜಾತ್ಯತೀತ, ಭ್ರಷ್ಟ, ಧರ್ಮದ್ರೋಹೀ ರಾಜಕಾರಣಿಗಳ ತೆಕ್ಕೆಗೆ ಬಂದಿದ್ದು ಎಲ್ಲೆಲ್ಲೂ ಧರ್ಮ ಹಾನಿಯಾಗತೊಡಗಿತು. ಎಲ್ಲೂ ಭಜನೆಗಳಿಲ್ಲ-ಹರಿಕಥೆ ಪ್ರವಚನಗಳ ಸದ್ದು ಅಡಗಿ ಹೋಯಿತು. ಇಂತಹ ಸಂದರ್ಭದಲ್ಲಿ ಜ್ಞಾನ ಯೋಗ, ಧ್ಯಾನ ಯೋಗ, ಕರ್ಮ ಯೋಗ ಹಾಗೂ ಭಕ್ತಿ ಯೋಗ ಇವೆಲ್ಲವುಗಳ ಸಾರವಾಗಿರುವ ಗುರುಕೃಪಾಯೋಗ ಹಾಗೂ ಕ್ಷಾತ್ರಧರ್ಮ ಇವುಗಳ ಅನುಸಾರ ಆಧ್ಯಾತ್ಮಿಕ ಸಾಧನೆ ಮಾಡುವುದೇ ಪರಿಣಾಮಕಾರಿಯಾಗಿದೆ. ಗುರುಕೃಪಾಯೋಗಾನುಸಾರ ಸಾಧನೆಗೆ ನಾಮ ಸಂಕೀರ್ತನ ಯೋಗವೂ ಪೂರಕವಾಗಿದೆ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯಂತೆ ಗುರುಗಳ ಮಾರ್ಗದರ್ಶನದಂತೆ ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ (ನಿರಪೇಕ್ಷ ಪ್ರೇಮ), ಸ್ವಭಾವ ದೋಷ ನಿರ್ಮೂಲನ, ಅಹಂ ನಿರ್ಮೂಲನ ಮತ್ತು ಭಾವ ಜಾಗೃತಿ- ಇವುಗಳನ್ನು ಮಾಡಿ ಗುರುವಿನ ಕೃಪೆ ಪಡೆದು ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಪ್ರಸ್ತುತ ಕಾಲದಲ್ಲಿ ಮುಗಿಲು ಮುಟ್ಟಿರುವ ಭ್ರಷ್ಟಾಚಾರ, ಲಂಚಕೋರತನ, ದಂಗೆ, ಕೊಲೆ ಇತ್ಯಾದಿಗಳ ವಿರುದ್ಧ ಈಶ್ವರ ಪ್ರಾಪ್ತಿಗಾಗಿ ಆಧ್ಯಾತ್ಮಿಕ ಸಾಧನೆಯೆಂದು ಮಾಡಬೇಕಾದ ಧರ್ಮ ಯುದ್ಧದ ಮಹತ್ವವನ್ನು ಕ್ಷಾತ್ರ ಧರ್ಮವು ಕಲಿಸುತ್ತದೆ. ಆಧ್ಯಾತ್ಮಿಕ ಸಾಧನೆಯ ಅಡಿಪಾಯವಾಗಿರುವ ನಾಮ ಸ್ಮರಣೆಯ ಮಹತ್ವ, ಆಚರಿಸುವ ರೀತಿ ಇತ್ಯಾದಿಗಳನ್ನು ನಾಮಸಂಕೀರ್ತನಯೋಗವು ಕಲಿಸುತ್ತದೆ. ಈ ಲೇಖನದಲ್ಲಿ ಸರಳವೂ ಸುಲಭವೂ ಆಗಿರುವ ನಾಮ ಸ್ಮರಣೆಯ ಮಹತ್ವವನ್ನು ಸರಳ ಭಾಷೆಯಲ್ಲಿ ಓದುಗರಿಗೆ ವಿವರಿಸುವ ಕಿರು ಪ್ರಯತ್ನ ಮಾಡಲಾಗಿದೆ.
ನಾಮ ಸ್ಮರಣೆ / ನಾಮ ಜಪ ಎಂದರೇನು?
’ನಾಮ’ ಎಂದರೇನು? ದೇವರ ಅಸಂಖ್ಯ ಹೆಸರುಗಳಲ್ಲೊಂದು. ’ಸ್ಮರಣೆ’ ಎಂದರೆ ’ಧ್ಯಾನ’ ಅಥವಾ ನೆನಪು. ’ಜಪ’ ಎಂದರೆ ಯಾವುದೇ ಒಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದು. ’ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕ: ಎಂದರೆ ಯಾವುದು ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡಿ ಜನನ ಮರಣಗಳ ಚಕ್ರದಿಂದ ನಮ್ಮನ್ನು ಬಿಡಿಸುತ್ತದೆಯೋ ಅದುವೇ ’ಜಪ’. ಒಟ್ಟಿನಲ್ಲಿ ’ನಾಮ ಜಪ’ವೆಂದರೆ ದೇವರ ನಾಮವನ್ನು ಈಶ್ವರ ಪ್ರಾಪ್ತಿಯ ಸಾಧನೆಯೆಂದು ಪುನಃ ಪುನಃ ಹೇಳುತ್ತಿರುವುದು.
ನಾಮಜಪ / ನಾಮಸ್ಮರಣೆಯ ವೈಶಿಷ್ಟ್ಯಗಳು:
- ವೇದಗಳಿಗಿಂತ ನಾಮವು ಶ್ರೇಷ್ಠವಾಗಿದೆ. ಏಕೆಂದರೆ ಓಂಕಾರವೆಂಬ ನಾಮದಿಂದಲೇ ವೇದಗಳ ಉತ್ಪತ್ತಿಯಾಗಿದೆ. ವೇದಗಳು, ಉಪನಿಷತ್ತುಗಳು, ಗೀತೆ ಇತ್ಯಾದಿಗಳ ಅಭ್ಯಾಸವು ಎಲ್ಲರಿಂದಲೂ ಸಾಧ್ಯವಾಗದು. ಆದರೆ ನಾಮದ ಅಭ್ಯಾಸವನ್ನು ಯಾರೂ ಮಾಡಬಲ್ಲರು. ಅದರಿಂದ ಸತತವಾಗಿ ದೇವರೊಂದಿಗೆ ಅನುಸಂಧಾನ ಹೊಂದಬಲ್ಲರು.
- ಪರಮೇಶ್ವರನ ರೂಪವು ತೇಜ ತತ್ವಕ್ಕೆ ಸಂಬಂಧಿಸಿದ್ದರೆ, ಆತನ ನಾಮವು ತೇಜ ತತ್ವಕ್ಕಿಂತಲೂ ಶ್ರೇಷ್ಠವಾದ ಆಕಾಶ ತತ್ವಕ್ಕೆ ಸಂಬಂಧಿಸಿದೆ.
- ವಾನರರು ಜೈ ಶ್ರೀರಾಮ್ ಎಂದು ನಾಮ ಸ್ಮರಣೆ ಮಾಡುತ್ತ ಬಂಡೆಗಳನ್ನು ಸಮುದ್ರದಲ್ಲಿ ಎಸೆದಾಗ ಬಂಡೆಗಳು ತೇಲುತ್ತ ಒಂದನ್ನೊಂದು ಜತೆಗೂಡಿ ಭವ್ಯ ರಾಮಸೇತುವಿನ ನಿರ್ಮಾಣವಾಯಿತು. ಆದರೆ ನಾಮ ಸ್ಮರಣೆ ಮಾಡದೆ ಸ್ವತಃ ಶ್ರೀರಾಮನೇ ಸಮುದ್ರಕ್ಕೆ ಬಂಡೆಯನ್ನೆಸೆದಾಗಲೂ ಅದು ಮುಳುಗಿ ಹೋಯಿತು! ಆದುದರಿಂದ ದೇವನಿಗಿಂತಲೂ ದೇವ ನಾಮವೇ ದೊಡ್ಡದು ಎಂಬುದು ಸ್ಪಷ್ಟವಾಯಿತು!
- ಪುರಂದರ ದಾಸರ ಕೀರ್ತನೆಗಳಲ್ಲಿ ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು ಸಾರುತ್ತ ನಮಗೆ ನಾಮದ ಹಿರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ನರನಾದ ಮೇಲೆ ಶ್ರೀ ಹರಿಯ ನಾಮ ಜಿಹ್ವೆ(ನಾಲಿಗೆ)ಯೊಳಿರಬೇಕೆಂಬುದು ಅವರ ಮತವಾಗಿದೆ.
- ’ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲ ಕೋಟಿಗಳುದ್ಧರಿಸುವುವು’ ಎನ್ನುವ ಮೂಲಕವೂ ಕಲಿಯುಗದಲ್ಲಿ ನಾಮ ಸ್ಮರಣೆಯ ಮಹತ್ವವನ್ನು ಅವರು ನಿರೂಪಿಸಿದ್ದಾರೆ.
- ’ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ, ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ’ ಎನ್ನುವ ಹಾಡೂ ನಾಮ ಸ್ಮರಣೆಯು ಆನಂದವನ್ನು ದೊರಕಿಸಿ ಕೊಡುವುದು ಎಂದು ಸಾರಿದೆ.
- ಬ್ರಾಹ್ಮಣ ಪುತ್ರನಾಗಿದ್ದೂ ಬೇಡರ ದುಸ್ಸಂಗದಿಂದ ದರೋಡೆಕೋರನಾದ ರತ್ನಾಕರನೂ ನಾರದ ಮುನಿಗಳ ಸತ್ಸಂಗದಿಂದ ಶ್ರೀ ರಾಮನ ಸ್ಮರಣೆ ಮಾಡುತ್ತ ವಾಲ್ಮೀಕಿ ಮಹರ್ಷಿಯೆನಿಸಿದನು.
- ಭಗವಂತನು ಗುಪ್ತನಾಗಿದ್ದರೂ ಆತನ ’ನಾಮ’ವು ಗುಪ್ತವಾಗಿಲ್ಲ. ಆದುದರಿಂದ ನಾಮದ ಬಲದಿಂದ ಆತನನ್ನು ಕಂಡು ಹಿಡಿಯಬಹುದು. ಮೇಯಲು ಬಿಟ್ಟ ದನವು ಸಂಜೆ ಹಟ್ಟಿಗೆ ಮರಳದಿದ್ದಾಗ ಅದು ಮೇಯುವ ಜಾಗಗಳಲ್ಲಿ ಹುಡುಕಿಯೂ ಕಂಡು ಬಾರದಿರಲು ಅದರ ಹೆಸರನ್ನು ಕೂಗಿ ಕರೆದಾಗ ಅದು ತಾನಿರುವ ಗುಪ್ತ ಜಾಗದಿಂದ ಕರೆಗೆ ಓಗೊಡುವಂತೆ.
- ವೇದ ಪಠಣದಲ್ಲಿ ಅಕ್ಷರಗಳು ಲೋಪವಾದರೆ/ಉಚ್ಛಾರವು ಅಶುದ್ಧವಾದರೆ ತೊಂದರೆಯುಂಟಾಗುತ್ತದೆ. ಅನಕ್ಷರಂ ಅನಾಯುಷ್ಯಂ ವಿಸ್ವರಂ ವ್ಯಾಧಿಪೀಡಿತಮ್ ಎಂದರೆ ವೇದಾಕ್ಷರಗಳ ಉಚ್ಛಾರವು ಅಶುದ್ಧವಾಗಿದ್ದರೆ ಆಯುಷ್ಯವು ಕ್ಷೀಣಿಸುತ್ತದೆ. ಅದು ಸ್ವರಹೀನವಾಗಿ ಆದರೆ ವ್ಯಾಧಿಗಳುಂಟಾಗುತ್ತವೆ. ಆದರೆ ಅರಿವಿಲ್ಲದೆ ನಾಮ ಸ್ಮರಣೆಯಲ್ಲಿ ನಾಮವನ್ನು ಭಕ್ತಿಯಿಂದ ತಪ್ಪಾಗಿ ಉಚ್ಚರಿಸಿದಾಗಲೂ ಅದು ಪಾಪವನ್ನು ಸುಟ್ಟು ಹಾಕುತ್ತದೆ!
- ನಾಮಜಪಕ್ಕೆ ವ್ಯಕ್ತಿ, ಸ್ಥಳ, ಕಾಲ, ಮಡಿಮೈಲಿಗೆ ಇತ್ಯಾದಿಗಳ ಬಂಧನವಿಲ್ಲ. ವಾದ್ಯ, ಪರಿಕರಗಳ ಅವಶ್ಯಕತೆಯಿಲ್ಲ. ಭಜನೆಯಲ್ಲಿರುವಂತೆ ರಾಗ, ತಾಳ, ಆಲಾಪನೆಗೆ ಮಹತ್ವವಿಲ್ಲ. ಒಬ್ಬನೇ ಎಲ್ಲೇ ಇದ್ದರೂ ನಾಮ ಜಪಿಸಬಹುದು.
- ನಾಮವು ಸಾಧಕನಿಗೂ ಮೋಕ್ಷಕ್ಕೆ ಹೊಂದಲು ಆಸಕ್ತನಿಗೂ ಜ್ಞಾನ ಪ್ರಾಪ್ತಿ ಮಾಡಿಕೊಡುತ್ತದೆಯಾದರೆ ಜ್ಞಾನಿಗೆ ಜ್ಞಾನದ ಪರಿಪಕ್ವತೆ ಕೊಡುವಂತಹದ್ದಾಗಿದೆ.
ಆದುದರಿಂದ ನಾಮಜಪವು ಸಾಧನೆ ಹಾಗೂ ಸಾಧಿಸಬೇಕಾದ ಗುರಿ(ಧ್ಯೇಯ) ಇವೆರಡೂ ಆಗಿದೆ. - ಈಶ್ವರ ಪ್ರಾಪ್ತಿ ಮಾಡಿಸಿಕೊಡುವ ಪರಮೋಚ್ಚ ಗುರುವಾಗಿದೆ.
ಹೆಚ್ಚಿನ ಮಾಹಿತಿಗೆ ಸನಾತನ ಸಂಸ್ಥೆಯ ’ನಾಮಸಂಕೀರ್ತನಯೋಗ’ ಗ್ರಂಥ ಓದಿರಿ.
ಸಂಕಲನ: ಬಿ. ರಾಮ ಭಟ್, (ನಿವೃತ್ತ ಉಪ ತಹಶೀಲ್ದಾರ್), ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ ದ.ಕ.ಜಿಲ್ಲೆ. ದೂ. ಕ್ರ: ೯೪೮೧೭೫೬೦೨೮
ಸಂಬಂಧಿತ ವಿಷಯಗಳು
ಪ್ರಾರ್ಥನೆಯ ವೈಜ್ಞಾನಿಕತೆಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
No comments:
Post a Comment
Note: only a member of this blog may post a comment.