ಈಗಿನ ಧನಸಂಪನ್ನ ಮತ್ತು ಜ್ಞಾನಸಂಪನ್ನ ದೇಶಗಳು ಭೂತಕಾಲದಲ್ಲಿ ಯಾವಾಗ ಹಿಂದುಳಿದ ಅರಣ್ಯ ಜೀವನವನ್ನು ನಡೆಸುತ್ತಿದ್ದರೋ ಆಗ ಭಾರತದಲ್ಲಿ ಉಚ್ಚ ಸ್ತರದ ಸಾಂಸ್ಕೃತಿಕ ಕೇಂದ್ರಗಳ ಮತ್ತು ವಿದ್ಯಾಪೀಠಗಳ ವಿಕಾಸವಾಗಿತ್ತು. ಪ್ರಾಚೀನ ಭಾರತದ ಅನೇಕ ಪ್ರತಿಷ್ಠಿತ ಕೇಂದ್ರಗಳಲ್ಲಿ ನಾಲಂದಾ ವಿಶ್ವವಿದ್ಯಾಲಯವು ಒಂದು ಪ್ರಮುಖ ಕೇಂದ್ರವಾಗಿತ್ತು. ಮಗಧ ದೇಶದ ಸಾಮ್ರಾಟನಾದ ಕುಮಾರ ಗುಪ್ತನು ಇ.ಸ. ೪೧೪ ರ ಸುಮಾರಿಗೆ ಶಿಕ್ಷಣದ ಪ್ರಸಾರ ಮತ್ತು ಜ್ಞಾನದ ವಿಕಾಸಕ್ಕಾಗಿ ನಾಲಂದಾದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದನು. ಅದೇ ರೀತಿ ಬೌದ್ಧರ ಕಾಲದಲ್ಲಿಯೂ ನಾಲಂದಾವು ಒಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇದರ ಲಿಖಿತ ಪುರಾವೆಗಳಿವೆ, ಆದರೆ ಆ ಸಮಯದಲ್ಲಿ ನಾಲಂದಾದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯಾಗಿರಲಿಲ್ಲ.
ಚೀನಾದ ಪ್ರವಾಸಿಗ ಹ್ಯೂ-ಎನ್-ತ್ಸಾಂಗ್‌ನ ಪ್ರವಾಸದ ವರ್ಣನೆಯಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾನ್ ಸಾಂಸ್ಕೃತಿಕ ಕೇಂದ್ರದ ಸ್ವರೂಪದಲ್ಲಿ ನಾಲಂದಾದ ಸತ್ಯವರ್ಣನೆಯು ನೋಡಲು ಸಿಗುತ್ತದೆ. ಈ ಚೀನಾದ ಜಿಜ್ಞಾಸು ಪ್ರವಾಸಿಗನು ಅನೇಕ ವರ್ಷಗಳ ಕಾಲ ದೇಶದ ಬೇರೆ-ಬೇರೆ ನಗರಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿ ನೀಡಿದ್ದನು. ಅವನು ಕನೌಜನ ಚಕ್ರವರ್ತಿ ಹರ್ಷವರ್ಧನನ ಆಸ್ಥಾನದಲ್ಲಿ ಅನೇಕ ವರ್ಷಗಳ ಕಾಲ ವಾಸ ಮಾಡಿ ಸಂಸ್ಕೃತ ಮತ್ತು ಪಾಲಿ ಭಾಷೆಯ ಜ್ಞಾನವನ್ನು ಪ್ರಾಪ್ತ ಮಾಡಿಕೊಂಡಿದ್ದನು. ಅನಂತರ ಅವನು ವೈಶಾಲಿ, ಬೌದ್ಧಗಯಾ ಹೀಗೆ ಪ್ರವಾಸ ಮಾಡುತ್ತ ನಾಲಂದಾಗೆ ಬಂದನು. ಇ.ಸ. ೬೩೫ ರ ಸುಮಾರಿಗೆ ಹ್ಯೂ-ಎನ್- ತ್ಸ್ಯಾಂಗನು ನಾಲಂದಾದಲ್ಲಿ ಅಧ್ಯಯನ ಮಾಡಿದನು. ಅವನು ೫ ವರ್ಷಗಳ ನಂತರ ನಾಲಂದಾಗೆ ಮರಳಿ ಬಂದು ೨-೩ ವರ್ಷಗಳ ಕಾಲ ವಾಸ್ತವ್ಯವಿದ್ದು ವೈದಿಕ ಸಾಹಿತ್ಯ ಮತ್ತು ಬೌದ್ಧ ಧರ್ಮಗ್ರಂಥಗಳನ್ನು ಚೀನಿ ಭಾಷೆಯಲ್ಲಿ ಅನುವಾದಿಸಿದ್ದನು.
ಅವನ ನೊಂದಣಿಯಂತೆ, ನಾಲಂದಾ ವಿಶ್ವವಿದ್ಯಾಲಯದ ಪರಿಸರವು ಅತ್ಯಂತ ಭವ್ಯವಾಗಿತ್ತು. ಈ ಪರಿಸರದಲ್ಲಿ ೫ ಬಹು ದೊಡ್ಡ ಕಟ್ಟಡಗಳಿದ್ದವು. ಸಾಮ್ರಾಟ ಹರ್ಷವರ್ಧನನು ಸಹ ಇಂತಹದ್ದೇ ಒಂದು ಭವ್ಯ ಕಟ್ಟಡದ ನಿರ್ಮಾಣ ಮಾಡುತ್ತಿದ್ದನು. ಈ ಭವ್ಯ ಪರಿಸರದ ಸುತ್ತಲು ತಡೆಗೋಡೆ ಇತ್ತು. ಇವೆಲ್ಲವುದರ ಮಧ್ಯಭಾಗದಲ್ಲಿ ವಿದ್ಯಾಪೀಠವಿತ್ತು. ಆಯತಾಕಾರದಲ್ಲಿ ರಚಿಸಲಾದ ಎಂಟು ಸಭಾಗೃಹಗಳಿದ್ದವು. ಈ ಸಭಾಗೃಹಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿತ್ತು ಮತ್ತು ಆಚಾರ್ಯರು ಭಾಷಣವನ್ನು ಮಾಡುತ್ತಿದ್ದರು. ಇನ್ನೊಂದು ಕಡೆಯಲ್ಲಿ ವೇಧಶಾಲೆ (ಹವಾಮಾನ ನಿರ್ಧರಿಸುವ ಸಂಸ್ಥೆ) ಮತ್ತು ಕಾರ್ಯ ಶಾಲೆಯ ಅನೇಕ ಕಟ್ಟಡಗಳಿದ್ದವು. ಈ ಕಟ್ಟಡಗಳಲ್ಲಿ ವಿವಿಧ ಪ್ರಕಾರದ ಯಂತ್ರಗಳಿದ್ದವು. ಅವುಗಳ ಸಹಾಯದಿಂದ ಹವಾಮಾನ ಮತ್ತು ಮಳೆಯನ್ನಷ್ಟೇ ಅಲ್ಲದೇ ಗ್ರಹ-ನಕ್ಷತ್ರಗಳ ಅಭ್ಯಾಸ ಮಾಡಲಾಗುತ್ತಿತ್ತು.
ಅಲ್ಲದೇ ವಿದ್ಯಾರ್ಥಿಗಳಿಗಾಗಿ ಸ್ವತಂತ್ರ ನಾಲ್ಕು ಮಹಡಿಗಳ ವಸತಿಗೃಹದ ಕಟ್ಟಡವಿತ್ತು. ಈ ವಸತಿಗೃಹದಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದರು. ನಾಲಂದಾ ವಿಶ್ವವಿದ್ಯಾಲಯದಲ್ಲಿ ವೇದಪುರಾಣ, ಬೌದ್ಧತತ್ತ್ವಜ್ಞಾನ, ಗಣಿತ, ಜ್ಯೋತಿಷ್ಯ, ಆಯುರ್ವೇದ, ಚಿಕಿತ್ಸಾಶಾಸ್ತ್ರ, ನ್ಯಾಯದರ್ಶನ ಮತ್ತು ಚಿತ್ರಕಲೆ ಇತ್ಯಾದಿಗಳ ಶಿಕ್ಷಣ ನೀಡಲು ೧,೫೦೦ ಕ್ಕೂ ಹೆಚ್ಚು ವಿದ್ವಾಂಸರು, ಆಚಾರ್ಯರು ಮತ್ತು ಪ್ರಾಚಾರ್ಯರಿದ್ದರು. ಆ ಕಾಲದ ಖ್ಯಾತವಿದ್ವಾಂಸರಾದ ಶೀಲಭದ್ರರು ವಿಶ್ವವಿದ್ಯಾಲಯದ ಮುಖ್ಯ ಆಚಾರ್ಯರಾಗಿದ್ದರು. ೧೬ ಭಾಷೆಗಳ ಜ್ಞಾನವಿದ್ದ ಶೀಲಭದ್ರರು ಅನೇಕ ವಿದ್ಯೆಗಳಲ್ಲಿ ಪಾರಂಗತರಾಗಿದ್ದರು. ಇಂದಿಗೂ ಯಾರ ಕೀರ್ತಿಯನ್ನು ಹೊಗಳುತ್ತೇವೆಯೋ ಅಂತಹ ಅನೇಕ ತತ್ತ್ವಜ್ಞಾನಿಗಳಿಗೆ ಈ ವಿಶ್ವವಿದ್ಯಾಲಯವು ತರಬೇತಿಯನ್ನು ನೀಡಿತ್ತು. ಇಂತಹ ವಿದ್ವಾಂಸರಲ್ಲಿ ಅಶ್ವಘೋಷ, ನಾಗಾರ್ಜುನ, ಪ್ರಭಾಕರ ಮಿತ್ರ, ಅಸಂಗ ಶೀಲಭದ್ರ, ರಾಹುಲ ಶೀಲಭದ್ರ, ಪದ್ಮ ಸಂಭವ, ವಸುಬಂಧು ಇವರ ಸಮಾವೇಶವಿದೆ.
ಈ ವಿಶಾಲವಾದ ವಿಶ್ವವಿದ್ಯಾಲಯದಲ್ಲಿ ಆಚಾರ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರೆಲ್ಲ ಸೇರಿ ೧೦ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಮಗಧ ದೇಶದ ಸಾಮ್ರಾಟನು ಅವರ ನಿವಾಸ ಮತ್ತು ಭೋಜನದ ವಿಶೇಷ ಸೌಲಭ್ಯವನ್ನು ಮಾಡಿದ್ದನು. ನಾಲಂದಾದ ಸುತ್ತಮುತ್ತಲಿನ ೧೦೦ ಗ್ರಾಮಗಳ ಉತ್ಪನ್ನದಿಂದ ಈ ವಿಶ್ವವಿದ್ಯಾಲಯದ ಖರ್ಚನ್ನು ನಿಭಾಯಿಸಲಾಗುತ್ತಿತ್ತು. ಹ್ಯೂ-ಎನ್-ತ್ಸ್ಯಾಂಗ್ ನಂತರ ಇತ್ಸಿಂಗ್ ಈ ಚೀನಾದ ಪ್ರವಾಸಿಗನು ನಾಲಂದಾಕ್ಕೆ ಬಂದಿದ್ದನು. ಅವನು ಇಲ್ಲಿ ಶಿಕ್ಷಣ ಮತ್ತು ಪ್ರಾವೀಣ್ಯತೆಯನ್ನು ಪ್ರಾಪ್ತ ಮಾಡಿಕೊಂಡನು. ಅವನು ನಾಲಂದಾ ವಿದ್ಯಾಪೀಠದಲ್ಲಿರುವ ಪ್ರಮುಖ ಗ್ರಂಥಾಲಯದ ವಿಶೇಷ ಉಲ್ಲೇಖವನ್ನು ಮಾಡಿದ್ದಾನೆ. ರತ್ನಸಾಗರ, ರತ್ನೋದಧಿ ಮತ್ತು ರತ್ನರಂಜನ ಈ ಹೆಸರಿನ ಪ್ರಮುಖ ಗ್ರಂಥಾಲಯಗಳಿದ್ದವು. ಇವುಗಳಲ್ಲಿ ರತ್ನೋದಧಿ ಗ್ರಂಥಾಲಯವು ಅತಿ ದೊಡ್ಡದಾಗಿತ್ತು ಮತ್ತು ಅದರಲ್ಲಿ ೯ ಖಂಡಗಳಿದ್ದವು. ಈ ವಿಭಾಗದಲ್ಲಿ ನೂರಾರು ಅಮೂಲ್ಯವಾದ ಗ್ರಂಥಗಳನ್ನು ಮತ್ತು ಪ್ರಾಚೀನ ಲಿಪಿಗಳನ್ನು ಕ್ರಮಬದ್ಧವಾಗಿ ಜೋಡಿಸ ಲಾಗಿತ್ತು. ಈ ಗ್ರಂಥಾಲಯದಲ್ಲಿ ಅನೇಕ ಭಿಕ್ಷು ಮತ್ತು ವಿದ್ಯಾರ್ಥಿಗಳು ಪ್ರಾಚೀನ ಲಿಪಿ ಮತ್ತು ಪುಸ್ತಕಗಳ ಪ್ರತಿಗಳನ್ನು ತಯಾರು ಮಾಡುತ್ತಿದ್ದರು. ಹ್ಯೂ-ಎನ್-ತ್ಸ್ಯಾಂಗ್‌ನು ನಾಲಂದಾದಲ್ಲಿ ವಾಸಿಸುತ್ತಿದ್ದಾಗ ಸುಮಾರು ೭೦೦ ಪುಸ್ತಕಗಳ ನಕಲು ಪ್ರತಿಗಳನ್ನು ಬರೆದಿದ್ದನು ಮತ್ತು ಅವುಗಳನ್ನ್ನು ಸಾಂಸ್ಕ ತಿಕ ಖಜಾನೆಯೆಂದು ಚೀನಾಗೆ ತೆಗೆದುಕೊಂಡು ಹೋದನು. ಇದೇ ರೀತಿ ಇತ್ಸಿಂಗನು ಸಹ ನಕಲು ಪ್ರತಿಗಳನ್ನು ಬರೆದು, ವೈದಿಕ ಹಾಗೂ ಬೌದ್ಧ ಸಾಹಿತ್ಯಗಳ ೪೦೦ ಪ್ರತಿಗಳನ್ನು ಚೀನಾಗೆ ತೆಗೆದುಕೊಂಡು ಹೋದನು.
ಪ್ರತಿಯೊಂದು ಅಭಿವೃದ್ಧಿಯ ಹಿಂದೆ ಒಂದು ಪರಾಭವವು ಇದ್ದೇ ಇರುತ್ತದೆ. ಸಂಪೂರ್ಣ ಜಗತ್ತಿನಲ್ಲಿ ಜ್ಞಾನ ಪ್ರಸಾರ ಮಾಡುತ್ತಿದ್ದ ಈ ಕೇಂದ್ರವು ಒಮ್ಮೆಲೆ ಪತನವಾಯಿತು. ಇ.ಸ.೧೨೦೦ರಲ್ಲಿ ಮಹಮ್ಮದ್ ಬಖ್ತಿಯಾರ್ ಖಿಲ್ಜಿಯು ಬಿಹಾರದ ಮೇಲೆ ಆಕ್ರಮಣ ಮಾಡಿದನು. ಆಗ ಅನೇಕ ದೇವಸ್ಥಾನಗಳು, ಮಠ ಮತ್ತು ಬೌದ್ಧವಿಹಾರಗಳನ್ನು ಅವನು ಧ್ವಂಸ ಮಾಡಿದನು. ಈ ಆಕ್ರಮಣದಲ್ಲಿ ನಾಲಂದಾ ಮಹಾವಿಹಾರ ಮತ್ತು ವಿದ್ಯಾಪೀಠಗಳನ್ನು ಸಹ ಅವನು ನಾಶ ಮಾಡಿದನು. ಇಷ್ಟೇ ಅಲ್ಲದೇ ಮೂರ್ತಿಪೂಜೆಯನ್ನು ವಿರೋಧಿಸುತ್ತಿದ್ದ ಖಿಲ್ಜಿಯ ಸೈನಿಕರು ಗ್ರಂಥಾಲಯಗಳನ್ನು ಸಹ ಬಿಡಲಿಲ್ಲ. ಅವರು ಗ್ರಂಥಾಲಯಗಳಿಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ಪುಸ್ತಕಗಳು ಅನೇಕ ತಿಂಗಳುಗಳ ವರೆಗೆ ಉರಿಯುತ್ತಿದ್ದವು.
ಇದೇ ರೀತಿ ಅಲ್ಲಿ ಪುನರ್‌ನಿರ್ಮಾಣದ ಸ್ಥಿತಿಯು ಉಂಟಾಗತೊಡಗಿತು. ಪ್ರಸಿದ್ಧ ಪುರಾತನ ಸ್ಮಾರಕಗಳ ಸಂಶೋಧಕರಾದ ಸರ್ ಕನ್ನಿಂಗ್ ಧಮ್‌ರವರು ಈ ಪ್ರಾಚೀನ ವಿದ್ಯಾಪೀಠದ ಸ್ಥಳವನ್ನು ಹುಡುಕಿ ತೆಗೆದರು. ವಿದ್ವಾನ್ ಇತಿಹಾಸಕಾರರಾದ ಪಂಡಿತ್ ಹಿರಾನಂದ ಶಾಸ್ತ್ರೀಯವರು ತಮ್ಮ ಪರಿಶ್ರಮಗಳಿಂದ ಉತ್ಖನನೆಯನ್ನು ಮಾಡಿ ನಾಲಂದಾ ವಿದ್ಯಾಪೀಠದ ವಿಧ್ವಂಸವಾದ ಅವಶೇಷಗಳನ್ನು ಪತ್ತೆ ಹಚ್ಚಿದರು. ಆಗಿನಿಂದ ಈ ಸ್ಥಳವನ್ನು ನಾಲಂದಾದ ಭಗ್ನಾವಶೇಷವೆಂದು ಕರೆಯಲಾಗುತ್ತದೆ.
೧೯೫೧ರಲ್ಲಿ ನವನಾಲಂದಾ ಮಹಾವಿಹಾರದಲ್ಲಿ ಬೌದ್ಧ ತತ್ತ್ವಜ್ಞಾನ, ಪಾಲೀ ಭಾಷೆ ಮತ್ತು ಸಾಹಿತ್ಯದ ಸಂಶೋಧನೆಯ ಕಾರ್ಯವನ್ನು ಪ್ರಾರಂಭಿಸ ಲಾಯಿತು. ಅನಂತರ ಜಪಾನ್, ಚೀನಾ, ಶ್ರೀಲಂಕಾ ಮತ್ತು ಇಂಡೋನೇಶಿಯಾ ದೇಶಗಳು ಈ ಕಾರ್ಯ ದಲ್ಲಿ ತಮ್ಮಿಂದಾದ ಸಹಾಯವನ್ನು ನೀಡಿದರು. ಪ್ರಸ್ತುತ ನವನಾಲಂದಾ ವಿಹಾರಕ್ಕೆ ವಿದ್ಯಾಪೀಠಕ್ಕೆ ಸಮನಾದ ದರ್ಜೆಯನ್ನು ನೀಡಲಾಗಿದೆ. ಭಾರತ ಸರಕಾರದ ವತಿಯಿಂದ ಅಲ್ಲಿ ಭವ್ಯ ಕಟ್ಟಡ ಮತ್ತು ಸುಂದರ ಗ್ರಂಥಾಲಯವನ್ನು ಕಟ್ಟಲಾಗಿದೆ.
ನವನಾಲಂದಾವು ಈಗ ಕೇವಲ ಪ್ರಾಚೀನ ವಿದ್ಯಾಪೀಠದ ಭಗ್ನಾವಶೇಷವಷ್ಟೇ ಆಗಿರದೆ ಅದು ಒಂದು ಸುಂದರ ಪ್ರವಾಸಿಕೇಂದ್ರವೂ ಆಗಿದೆ. ಅಲ್ಲಿ ದೇಶ-ವಿದೇಶದಿಂದ ಬರುವಂತಹ ಪ್ರವಾಸಿಗರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಪಾಟ್ನಾದಿಂದ ೧೧೦ ಕಿ.ಮೀ.ದೂರದಲ್ಲಿರುವ ನವನಾಲಂದಾವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.
(ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ)
Super.
ReplyDeleteಮಾನ್ಯರೇ, ನಾಲಂದಾ ವಿಧ್ಯಾ ಪೀಠದ ಮಾಹಿತಿ ಚೆನ್ನಾಗಿದೆ. ಇದೇ ರೀತಿ ನಮ್ಮ ಸಿಂಧು ನಾಗರೀಕತೆಯ ಬಗ್ಗೆ ಮಾಹಿತಿ ನೀಡಲು ಕೋರುತ್ತೇನೆ. ನಮ್ಮ ಹಿಂಧೂ ಧರ್ಮವನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾಹಿತಿ ನೀಡಲು ಕೋರುತ್ತೇನೆ.
ReplyDelete