(ಸಾಂದರ್ಭಿಕ ಚಿತ್ರ)
ಭಾರತವು ಧರ್ಮ ಪ್ರಧಾನವಾದ ದೇಶ. ಪಾಶ್ಚಾತ್ಯರಂತೆ ಭೋಗವೇ ಪ್ರಧಾನವೆಂದು ಪರಿಗಣಿಸದೆ ಸತ್ಕರ್ಮದ ನೆಲೆಯಲ್ಲಿ ಹಿತಮಿತವಾದ ಭೋಗವನ್ನುಂಡು ಪರಮ ಗುರಿಯನ್ನು ಪಡೆವ ಆದರ್ಶ ಭಾರತೀಯರದು. ಭಾರತೀಯರು ಆಗಮ ಶಾಸ್ತ್ರದಲ್ಲಿ ಉಕ್ತವಾದ ಸತ್ಕರ್ಮಗಳಿಂದ ಬ್ರಹ್ಮಾಂಡ ವ್ಯಾಪ್ತಿಯಾದ ಪರಮಾತ್ಮ ಶಕ್ತಿಯನ್ನು ಅರಿತು ಒಲಿಸಿ ಇಹದ ಸುಖಶಾಂತಿಯ ಬಾಳ್ವೆಗೆ ಬೇಕಾದ ಅನುಗ್ರಹವನ್ನು ಪಡೆಯಲು ಹಾಗೆಯೇ ಅಂತ್ಯದಲ್ಲಿ ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ. ಈ ದೇವಾಯಲವು ಆಗಮ ಶಾಸ್ತ್ರಕ್ಕೆ ಅನುಸಾರವಾಗಿ ತಾಂತ್ರಿಕ ವಿಧಾನಗಳಿಂದ ನಿರ್ಮಿಸಲ್ಪಟ್ಟಿದೆ. ಆಹವನೀಯಾದಿ(ದೇವರನ್ನು ಬರಿಸುವ) ಮುದ್ರಿಕೆಗಳು ಹಾಗೂ ಮಂತ್ರಶಕ್ತಿಯಿಂದೊಡಗೂಡಿ ವಿಶ್ವಾತ್ಮ ಶಕ್ತಿಯನ್ನು ಒಂದು ಬಿಂಬದಲ್ಲಿ ಬರಿಸಿ ಸ್ಥಿರಗೊಳಿಸುವುದೇ ಆಗಮ (ಬರಿಸುವ) ಶಾಸ್ತ್ರದ ಕೇಂದ್ರ ಬಿಂದು. ಆದುದರಿಂದಲೇ ದೇವಾಲಯದಲ್ಲಿ ಪ್ರತಿಷ್ಟಿತವಾದ ಬಿಂಬಗಳನ್ನು "ಮಂತ್ರ ಬಿಂಬ"ಗಳು ಎನ್ನುತ್ತಾರೆ.
ನಮ್ಮ ಎಲ್ಲಾ ದೇವಾಲಯಗಳ ಮುಕುಟದ (ಮುಗುಳಿ) ಮುಖಾಂತರ ಸೌರಶಕ್ತಿಯ ತರಂಗಗಳು ಬಂದು ಬಿಂಬದ ಸುತ್ತ ಸೌರಶಕ್ತಿಯನ್ನು ಉತ್ಪಾದಿಸುವ ಒಂದು ಯಂತ್ರದ ಘಟನೆಯ ಪ್ರಯೋಗವೇ ದೇವಾಲಯವಾಗಿದೆ. ಈ ಯಂತ್ರಶಾಸ್ತ್ರವನ್ನು ನಮ್ಮ ಋಷಿಮುನಿಗಳು ತಂತ್ರಾಗಮಗಳ ಮುಖಾಂತರ ಯಂತ್ರಗಳ ಸೌಲಭ್ಯವನ್ನು ಮಂತ್ರಗಳಿಂದ ತಿಳಿಹೇಳಿ ಔಷಧ ಶಕ್ತಿಯಿಂದ ಮತ್ತು ಧಾಡು ಶಕ್ತಿಯೇ ಮೊದಲಾದ ಶಕ್ತಿಗಳಿಂದ ಕೂಡಿದ ಬ್ರಹ್ಮಕಲಶದ ಗುಣಗಳನ್ನು ಮಂತ್ರಶಕ್ತಿಯ ತರಂಗಗಳೂ ಈ ಸೌರಶಕ್ತಿಯ ತರಂಗಗಳೂ ಸೇರಿ ಜನತೆಯ ಐಚ್ಛಿಕ ಕಾಮ್ಯಗಳನ್ನೂ ಮೋಕ್ಷವನ್ನೂ ಋಷಿ ವಿಜ್ಞಾನಿಗಳು ದಾನ ಮಾಡಿದ್ದಾರೆ. ಇದುವೇ "ದೇವಾಲಯ"ವಾಗಿದೆ
ದೇವರು ಪ್ರತಿಷ್ಠಾ ಬಿಂಬದಲ್ಲಿ ಆಗಮೋಕ್ತ ಕ್ರಿಯೆಗಳಿಂದ ಸನ್ನಿಹಿತನಾಗಿದ್ದರೂ ಮತ್ತೊಮ್ಮೆ "ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶವನ್ನು ಯಾಕೆ ಮಾಡಬೇಕು?" ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಸೂರ್ಯಚಂದ್ರನು ಹಾಗೂ ಭೂಮಿಯು ಇರುವವರೆಗೆ ನಮ್ಮ (ಜನತೆಯ) ಸುಖಕ್ಕಾಗಿ ನೀನಿಲ್ಲಿ ಸ್ಥಿರವಾಗಿ ನೆಲೆಸು ಎಂಬ ಸಂಕಲ್ಪದೊಡನೆ ಆಚಾರ್ಯನು (ತಂತ್ರಿಯು) ಪ್ರತಿಷ್ಠೆ ಮಾಡಿದ ಬಿಂಬದಲ್ಲಿಯಾಗಲೀ ಪೀಠದಲ್ಲಿಯಾಗಲೀ ಕ್ರಮೇಣ ವೈಕಲ್ಯಗಳು (ನಿತ್ಯವೂ ಪಂಚಾಮೃತಾಭಿಷೇಕ ಇತ್ಯಾದಿಗಳಿಂದ ಸವೆತ ಇತ್ಯಾದಿ) ಬಂದು ಜೀರ್ಣಾವಸ್ಥೆಯುಂಟಾದರೆ; ದೇವರ ಸ್ಥೂಲದೇಹವಾದ ಮಂಟಪ ಪ್ರಾಸಾದ ಮತ್ತು ಗರ್ಭಗೃಹಗಳಲ್ಲಿ ಕಾಲಕ್ರಮೇಣ ಏನಾದರೂ ವೈಕಲ್ಯಗಳು ಉಂಟಾದರೆ; ದೇವಾಲಯದ ಪ್ರಾಸಾದ, ಅಂತಃಹಾರ ಮತ್ತು ಬಹಿಃಹಾರ (ಒಳಹೊರಾಂಗಣಗಳು) ಇವುಗಳಲ್ಲಿ ಅಥವಾ ಪೀಠಬಿಂಬಗಳಲ್ಲಿ ಆಯ ದೋಷಗಳು ಇತ್ಯಾದಿ ಯಾವುದೇ ದೋಷಗಳು ಕಂಡು ಬಂದರೆ ಅವುಗಳನ್ನು ಸರಿಪಡಿಸಿದ ಕೂಡಲೇ; ಸ್ಥಿರತೆಯಲ್ಲಿ ಕ್ರಮೇಣ ಅಷ್ಟಬಂಧವು ನಶಿಸಿ ದೋಷವುಂಟಾದರೆ ಮತ್ತು ಪೀಠ ಬಿಂಬಗಳನ್ನು ಐಕ್ಯಗೊಳಿಸುವ ನಾಳದಲ್ಲಿ ತಡೆಯುಂಟಾದರೆ ಕೂಡಲೇ ದೇವತಾ ಸಾನಿಧ್ಯವನ್ನು ಸಂಕೋಚಗೊಳಿಸಿ ಬಾಲಾಲಯದಲ್ಲಿ ಇಟ್ಟು ನಾಳಶೋಧನೆಯನ್ನು ಮಾಡಿ ನಾಳದಲ್ಲಿ ಮುತ್ತು ರತ್ನಾದಿಗಳನ್ನು ತುಂಬಿಸಿ, ಜೀರ್ಣಾಷ್ಟಬಂಧವನ್ನು ತೆಗೆದು ನೂತನ ಅಷ್ಟಬಂಧದಿಂದ ಸ್ತ್ರೀ ಪುರುಷ ಸಂಕಲ್ಪದ ಪೀಠ ಬಿಂಬಗಳಿಗೆ ಐಕ್ಯವನ್ನು ಬರಿಸಿ ಬ್ರಹ್ಮಕಲಶ ಮಾಡಿ ಸಾನಿಧ್ಯ ಪುಷ್ಟಿಗೊಳಿಸಬೇಕು.
ಬ್ರಹ್ಮಕಲಶದಲ್ಲಿ ಮಂತ್ರ ಬಿಂಬವನ್ನು ಪೀಠದ ಮೇಲೆ ಸ್ಥಾಪಿಸಲು ೧. ಶಂಖದ ಹುಡಿ ೨. ಧೂಪದ ಹುಡಿ ೩. ಅಣಿಲೆಕಾಯಿ ೪. ಅರಗು ೫. ಹತ್ತಿ ೬. ಬಿಳಿಕಲ್ಲು ೭. ಸಮುದ್ರದ ಹೊಯ್ಗೆ ೮. ನೆಲ್ಲಿ ಕಾಯಿ ಇವುಗಳನ್ನು ತಂತ್ರ ಸಮುಚ್ಚಯ ಗ್ರಂಥದಲ್ಲಿ ಹೇಳಿದ ಪ್ರಮಾಣದಲ್ಲಿ ಚೂರ್ಣ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ, ಮರ್ದಿಸಿ, ಕಣಕದಂತಹ ಒಂದು ತರಹದ ಅಂಟನ್ನು ತಯಾರಿಸಲಾಗುತ್ತದೆ. ಅನಂತರ ಶಾಸ್ತ್ರೀಯ ವಿಧಾನದಂತೆ ಹೋಮ ಮಾಡಿ ಅದಕ್ಕೆ ಸಂಪಾತ ಸ್ಪರ್ಶದ ಮೂಲಕ ದೈವಿಕ ಶಕ್ತಿಯನ್ನು ನೀಡಲಾಗುತ್ತದೆ. ಇದುವೇ ಅಷ್ಟಬಂಧವಾಗಿದೆ.
ದುಃಖ ಸ್ಥಿತಿಯಲ್ಲಿರುವ ದೇವನು ಅವನಿಗೆ ಸಂಬಂಧಪಟ್ಟ ಗ್ರಾಮದ ಜನತೆಗೆ, ಮೊಕ್ತೇಸರನಿಗೆ, ತಂತ್ರಿಗೆ ಹಾಗೂ ಭಕ್ತಜನರಿಗೆ ವಿಪತ್ತನ್ನು ಉಂಟುಮಾಡುವನು. ಹಾಗೆಯೇ ಸ್ವಸ್ಥನಾದ ದೇವನು ತತ್ಸಂಬಂಧಿಗಳಿಗೂ ಭಕ್ತಜನರಿಗೂ ಸಂಪತ್ತು ಅಭ್ಯುದಯಗಳನ್ನು ಅನುಗ್ರಹಿಸುವನು. ದೇವಾಲಯದಲ್ಲಿ ಆಚಾರ್ಯ ಸಂಕಲ್ಪದಿಂದ ವಿಧಿಸಿದ ಆಗಮೋಕ್ತವಾದ ವಿಧಿನಿಯಮಗಳು ಯಾವುದೇ ಒತ್ತಡ ಇತ್ಯಾದಿ ಕಾರಣಗಳಿಂದ ವ್ಯತ್ಯಾಸವಾದರೂ ನ್ಯೂನವಾದರೂ ಅಧಿಕವಾದರೂ ಬಿಂಬದ ಚೈತನ್ಯವು ಹ್ರಾಸನಷ್ಟವಾಗುವುದು. (ಆಭಿಚಾರಾದಿಗಳಿಗೆ ಪ್ರಯೋಗಿಸತಕ್ಕ ಕ್ಷುದ್ರಮಂತ್ರಗಳಿಂದ ಪೂಜೆ ಮಾಡುವುದು, ಅಥವಾ ತತ್ತದೇವತೆಗಳಿಗೆ ಸಲ್ಲದ ಅನ್ಯಮಂತ್ರಗಳಿಂದ (ವಿಷ್ಣುವಿಗೆ ದುರ್ಗೆಯ ಮಂತ್ರದಿಂದ ಇತ್ಯಾದಿ) ಪೂಜಿಸುವುದು, ಪ್ರತಿಷಿದ್ಧವಾದ ದುಷ್ಟಪುಷ್ಪಗಳಿಂದ ಪೂಜಿಸುವುದು, ಮೆಣಸಿನ ನೀರು ಮೊದಲಾದ ತೀಕ್ಷ್ಮ ದ್ರವ್ಯಗಳ ಲೇಪವನ್ನು ವಿಗ್ರಹಕ್ಕೆ ಮಾಡುವುದು, ಇತ್ಯಾದಿಗಳೆಲ್ಲಾ ದೇವತಾ ಸಾನಿಧ್ಯವು ಕ್ಷಿಣಿಸಲು ಕಾರಣಗಳು. ಸಾನಿಧ್ಯವು ಕ್ಷೀಣಿಸಿದೊಡನೆ ದೇವರ ಸಾನ್ನಿಧ್ಯದಿಂದ ಹೊರಸೂಸುವ ವಿಕಿರಣಗಳಿಗೂ ಈ ದೋಷದ ಕಿರಣಗಳಿಗೂ ಪರಸ್ಪರ ಘರ್ಷಣೆಯುಂಟಾಗಿ ಸ್ಫೋಟವಾಗುವ ಸಂಭವ ಬರುವುದು. ಈ ಸ್ಫೋಟಗಳು ಅಪಮೃತ್ಯು, ಅಗ್ನಿದಾಹ ಇತ್ಯಾದಿ ಯಾವುದೇ ಆಪತ್ತುಗಳ ರೂಪದಲ್ಲಿ ಮಹಾಜನತೆಯ ಯಾವುದೇ ಭಾಗದಲ್ಲಿ ಪರಿಣಾಮ ಬೀರಬಹುದು. ಈ ಮೇಲಿನ ಕಾರಣಗಳಿಂದ ದೇವತಾಶಕ್ತಿಯ ಹ್ರಾಸವಾದಾಗ ಹಲವಾರು ನಿಮಿತ್ತಗಳು ಸೂಚನೆ ಕೊಡುತ್ತವೆ. ಅಂಗಣ, ಮಂಟಪ, ಅರಿಕುಟ್ಟಿಲು ಹಾಗೂ ಪ್ರಾಸಾದಾದಿ ಸ್ಥೂಲ ದೇಹದೊಳಗಾಗಲೀ, ಸೂಕ್ಷ್ಮ ದೇಹವಾದ ಗರ್ಭಗುಡಿಯ ದೇವತಾ ಮೂರ್ತಿಯಲ್ಲಾಗಲೀ ಜನನ, ಮರಣ, ಮೂತ್ರ ರಕ್ತಪಾತ, ಪತಿತಾದಿ ಭ್ರಷ್ಟಜನರ ಹಾಗೂ ಋತುಮತಿಯಾದವರ ಪ್ರವೇಶ, ಗೂಬೆ, ಹದ್ದು, ನಾಯಿ, ಕೇರೆ ಹಾವು, ಕೋಳಿ ಇತ್ಯಾದಿ ಅನಿಷ್ಟ ಪ್ರಾಣಿಗಳ ಪ್ರವೇಶ ಅಥವಾ ಜೇನುಗೂಡುಕಟ್ಟುವುದು ಮೊದಲಾದವು ಚೈತನ್ಯ ಹ್ರಾಸವಾಗಿರುವುದನ್ನು ಸೂಚಿಸುವ ದುರ್ನಿಮಿತ್ತಗಳು. ಬಿಂಬವು ಬೀಳುವುದು, ಸ್ಥಿರ ಪ್ರತಿಷ್ಠೆಯಾದ ಬಿಂಬದಲ್ಲಿ ಚಲನೆ ಬರುವುದು, ಒಡೆಯುವುದು, ಬಿಂಬವು ಬಿಸಿಯಾಗುವುದು, ಬೆವರಿದಂತೆ ಕಾಣುವುದು, ದುಃಖಭಾವ ಅಥವಾ ನಗುವಂತೆ ಕಾಣುವುದು, ದೇವಾಲಯದ ಅಥವಾ ದೇವರ ಮುಗುಳಿ (ಕಿರೀಟ) ಬೀಳುವುದು, ಪೂಜಾಲೋಪವಾಗುವುದು, ಇವೆಲ್ಲಾ ಸಾನ್ನಿಧ್ಯಕ್ಷಯದ ನಿಮಿತ್ತಗಳು. ಈ ರೀತಿಯ ದುರ್ನಿಮಿತ್ತಗಳು ಕಂಡುಬಂದಾಗ ಬಿಂಬದ ಚೈತನ್ಯಕ್ಕೆ ಘಾತಕರಗಳಾದುದರಿಂದ ಗುರುತರವಾದ ದೋಷಗಳಾಗಿದ್ದರೆ ಕೂಡಲೇ ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಮಾಡಿ ಶುದ್ಧಿಗೊಳಿಸಿ ನವಚೈತನ್ಯ ಪುಷ್ಟಿಗಾಗಿ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಮಾಡಲೇ ಬೇಕು. ಈ ರೀತಿಯ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶವನ್ನು ಮಾಡುವ ಅನುಜ್ಞಾಕಲಶ ಮಾಡಬೇಕು. ಅನುಜ್ಞಾಕಲಶದಲ್ಲಿ ದೇವರನ್ನು ಜೀರ್ಣೋದ್ಧಾರದಲ್ಲಿ ತೊಡಗುವ ಮೊದಲು ಅನುಜ್ಞೆ ಕೇಳುವುದು. ಅನಂತರ ದೇವಾಲಯದ ಸಮಗ್ರ ಶಕ್ತಿಯನ್ನು ಬಿಂಬದಲ್ಲಿ ಕ್ರೋಢೀಕರಿಸುವುದು. ಇದೇ ಅನುಜ್ಞಾಕಲಶದ ಕೇಂದ್ರ ಬಿಂದು.
ಅನುಜ್ಞಾಕಲಶದಲ್ಲಿ ಆಚಾರ್ಯರು, ಮೊಕ್ತೇಸರರು, ಗ್ರಾಮಜನರು ಮತ್ತು ಭಕ್ತರೆಲ್ಲರೂ ಒಗ್ಗೂಡಿ ದೇವಾಲಯದ ಪ್ರಾಸಾದದಿಂದೊಡಗೂಡಿ ಸರ್ವತ್ರ ನೆಲೆಸಿರುವ ಸಪರಿವಾರದೇವತಾ ಸಹಿತವಾದ ಮೂಲಮೂರ್ತಿಯನ್ನು ಮೊತ್ತಮೊದಲಾಗಿ ಪ್ರಾರ್ಥಿಸಿ ಅನುಜ್ಞೆ ಪಡೆಯಬೇಕು. ಈ ರೀತಿ ಪ್ರಾರ್ಥಿಸಿದ ಮೇಲೆ ಬಸವನ ಮೂಲಕ ಹಗ್ಗ ಕಟ್ಟಿ ದೇವಾಲಯದ ಮುಗುಳಿಯನ್ನು ಎಳೆದು ದೇವಾಲಯವನ್ನು ಪ್ರೋಧರಿಸುತ್ತಾರೆ(ಉದ್ಧರಿಸುತ್ತಾರೆ)
ಬಾಲಾಲಯ ಪ್ರತಿಷ್ಠೆ : ದೇವಾಲಯವನ್ನು ಮುರಿಯುವ ಮೊದಲು ಕ್ಷೇತ್ರಪಾಲ ಸಪರಿವಾರವಾಗಿ ದೇವಾಲಯದ ಎಲ್ಲಾ ಶಕ್ತಿಗಳನ್ನು ಬಿಂಬದಲ್ಲಿ ಆವಾಹಿಸಿ ಕ್ರೋಢಿಕರಿಸುವ ಅನುಜ್ಞಾಕಲಶಾಭಿಷೇಕ ಮಾಡುತ್ತಾರೆ. ಅಂತಃಹಾರದ (ಒಳಾಂಗಣದ ಎಡಭಾಗದಲ್ಲಿ ಒಂದು ಬಾಲಗೃಹವನ್ನು ಕಟ್ಟಿ ಅದಕ್ಕೆ ಪ್ರಾಸಾದ ಶುದ್ಧಿಗಳನ್ನು ಮಾಡಿ ತಾತ್ಕಾಲಿಕ ಆಲಯದಲ್ಲಿ ದೇವರಿಗೆ ಅಭಿಮುಖವಾಗಿ ಬಿಂಬವನ್ನು ಸ್ಥಾಪಿಸುವುದೇ ಬಾಲಾಲಯ ಪ್ರತಿಷ್ಠೆ) ಬಾಲಾಲಯ ಪ್ರತಿಷ್ಠೆಯ ಮುನ್ನ ಬಿಂಬದ ಮೇಲೆ ಅನುಜ್ಞಾ ಕಲಶಾಭಿಷೇಕ ಮಾಡಿದಾಗ ದೇವಾಲಯ ರೂಪೀ ದೇಹದಲ್ಲಿ ಪರಮಾತ್ಮನೆಂಬ ಅಣುವಿನ ೧೪೭ ವಿಭಾಗವಾಗಿರುವ ವಿಕಿರಣಗಳು ಸಂಕೋಚಗೊಂಡು ಬಿಂಬದಲ್ಲಿ ಅಣುರೂಪದಲ್ಲಿ ಕ್ರೋಢೀಕರಿಸಲ್ಪಡುತ್ತವೆ. ಪರಮಾಣುವು ಮೂರು ವಿಭಾಗವಾಗಿ ವಿಕಿರಣ ಹೊಂದಿದರೆ ಪರಮಾತ್ಮನೆಂಬ ಅಣುವು ದೇವಾಲಯ ರೂಪೀ ದೇಹದಲ್ಲಿ ೧೪೭ ವಿಭಾಗವಾಗಿ (ಬಲಿಕಲ್ಲುಗಳು, ಸಪ್ತಮಾತೃಕೆಗಳು, ಕ್ಷೇತ್ರಪಾಲ, ಪಾರ್ಶ್ವಸ್ಥರು, ತತ್ಪಾರ್ಶ್ವಸ್ಥರು ಇತ್ಯಾದಿ ೧೪೭ ವಿಕಿರಣಗಳು) ವಿಕಿರಣ ಹೊಂದುತ್ತದೆ. ಈ ವಿಕಿರಣಗಳನ್ನು ಸಂಕೋಚಗೊಳಿಸಿ ಬಿಂಬದಲ್ಲಿ ಕ್ರೋಢಿಕರಿಸುವುದೇ ಅನುಜ್ಞಾಕಲಶದ ಅಂತರಾರ್ಥವಾಗಿದೆ. ಆದ್ದರಿಂದಲೇ ಅನುಜ್ಞಾಕಲಶವಾಗಿ ಬಾಲಾಲಯ ಪ್ರತಿಷ್ಠೆಯಾದ ಮೇಲೆ ಬಲಿತೂಗುವಂತಹಾ ಜಾತ್ರೆ ಇತ್ಯಾದಿ ನೈಮಿತ್ತಿಕ ಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ. ಪೂಜಾದಿ ನಿತ್ಯಕ್ರಿಯೆಗಳನ್ನು ಮಾತ್ರ ಮಾಡಬಹುದು. ಬಾಲಾಲಯ ಪ್ರತಿಷ್ಠೆಯಲ್ಲಿ ದೇವತಾಸಾನ್ನಿಧ್ಯಗಳನ್ನು ಸಂಕೋಚಗೊಳಿಸಿರುವುದರಿಂದ ಆ ಸ್ಥಿತಿಯಲ್ಲೇ ಹೆಚ್ಚುಕಾಲ ಇರಿಸದೆ ಅನಿವಾರ್ಯವಾದಷ್ಟು ಅಲ್ಪ ಸಮಯ ಮಾತ್ರ ಇಟ್ಟು ಜೀರ್ಣೋದ್ಧಾರ ಮಾಡಿ ಕೂಡಲೇ ಮೂಲಾಲಯದಲ್ಲಿಟ್ಟು ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಮಾಡಬೇಕು.
ನವೀಕರಣ ಪ್ರತಿಷ್ಠೆಯಲ್ಲಿ ಮೊದಲಿಗೆ ಸಂಹಾರ ತತ್ವಹೋಮ ಮಾಡಿ ಬಿಂಬದ ಸರ್ವಚೈತನ್ಯಗಳನ್ನು ತತ್ವಕಲಶದಲ್ಲಿ ಆವಾಹಿಸಿಟ್ಟು ಪುನಃ ಸೃಷ್ಟಿತತ್ತ್ವಹೋಮ ಮಾಡಿ ಸೃಷ್ಟಿತತ್ತ್ವಕಲಶದಲ್ಲಿ ಪಂಚವಿಂಶತಿತತ್ತ್ವಗಳನ್ನು ಚತುರ್ಗವತಿ ಕಲೆಗಳನ್ನು ಆವಾಹಿಸಿ ಮುಹೂರ್ತಕಾಲದಲ್ಲಿ ಬಿಂಬದ ಮೇಲೆ ಅಭಿಷೇಕ ಮಾಡಿ ಸಂಯೋಜಿಸುವುದೇ ನವೀಕರಣ ಪ್ರತಿಷ್ಟೆ. ಕುಂಭಮಯಿ ಮುದ್ರೆಯಿಂದ ಬ್ರಹ್ಮಾಂಡಾಕಾರವಾದ ಕುಂಭದೊಳಗೆ ಭಗವಂತನ ಚತುರ್ನವತಿ ಕಲೆಗಳನ್ನು ಆವಾಹಿಸುವುದರಿಂದಲೇ ಬ್ರಹ್ಮ ಕಲಶವೆನಿಸುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಬ್ರಹ್ಮಕಲಶ ಕಾರ್ಯಕ್ರಮಗಳನ್ನು ತೊಡಗುವಾಗ ಮೊದಲಿಗೆ ಅಂಕುರಾರೋಪಣ ಮಾಡಿ ೫-೬ ದಿನಗಳಲ್ಲಿ ದೇವಾಲಯದಲ್ಲಿ ಬರತಕ್ಕ ದೋಷಾದಿಗಳಿಗೆ ಹಲವಾರು ಪ್ರಾಯಶ್ಚಿತ್ತ ಹೋಮಗಳನ್ನು ಕಲಶಗಳನ್ನೂ ಮಾಡಿ ಶುದ್ಧಿಗೊಳಿಸಲಾಗುವುದು. ಅನಂತರ ಪುನಃ ಅಂಕುರ ಹಾಕಿ ಸಾನ್ನಿಧ್ಯ ಪುಷ್ಟಿಗೆ ಬೇಕಾದ ಹಲವಾರು ಹೋಮಗಳನ್ನೂ ಕಲಶಗಳನ್ನೂ ಮಾಡಲಾಗುವುದು. ಈ ರೀತಿ ಎರಡೆರಡು ಸಾರಿ ಅಂಕುರ ಹಾಕಿ ದೇವಾಲಯ ರೂಪೀ ದೇಹದ ದೋಷ ಪರಿಹಾರ ಹಾಗೂ ಶುದ್ಧಿಯನ್ನು ಮಾಡಿ ಸಾನ್ನಿಧ್ಯಗಳನ್ನು ತುಂಬಿಸಿ ಕೊನೆಗೆ ಮುಹೂರ್ತ ಕಾಲದಲ್ಲಿ ಸೃಷ್ಟಿತತ್ತ್ವ ಕಲಶದ ಮೂಲಕ ಪರಮಾತ್ಮನ ಪರಿಪೂರ್ಣ ಕಲೆಗಳನ್ನು ಬಿಂಬಕ್ಕೆ ಯೋಜಿಸಿದಾಗ ಪುನಃ ಚೈತನ್ಯವೆಂಬ ಅಣುವು ವಿಕಿರಣ ಹೊಂದಿ ಪ್ರಾಸಾದಗಳಲ್ಲೂ ಬಲಿಕಲ್ಲು ಇತ್ಯಾದಿಗಳಲ್ಲೂ ಸಾನಿಧ್ಯವು ಬಂದು ಸೇರುವುದು. ಇದೇ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶದ ರಹಸ್ಯವಾಗಿದೆ.
ಈ ರೀತಿ ಪ್ರತಿಷ್ಠೆಯಾದ ದೇವಾಲಯವನ್ನು ಪ್ರತಿದಿನವೂ ಸಂದರ್ಶಿಸಿ ಭಗವಂತನಿಗೆ ನಮಸ್ಕರಿಸಿ ಪ್ರದಕ್ಷಿಣೆ ಬರುವುದರಿಂದ ಒಳಗಿನ ಕೇಂದ್ರಬಿಂದುವಾದ ವಿಗ್ರಹದಿಂದ ಹೊರಸೂಸುವ ಚೈತನ್ಯದ ವಿಕಿರಣಗಳು ಮಾನವ ದೇಹದೊಳಗೆ ಕ್ರಮಬದ್ಧವಾಗಿ ಪ್ರವೇಶಿಸಿ ಮಾನವ ದೇಹದೊಳಗೆ ಕುಂಡಲಿನೀ ಶಕ್ತಿಯೊಡಗೂಡಿದ ಆತ್ಮನನ್ನು ಪ್ರಚೋದಿಸುತ್ತ ಇದ್ದು ಲೌಕಿಕ ಪ್ರಯೋಜನಗಳೊಡನೆ ಆತ್ಮಸಾಕ್ಷಾತ್ಕಾರಕ್ಕೂ ಕಾರಣವಾಗುತ್ತವೆ.
ವಿ.ಸೂ : ಸ್ಥಳವಾಕಾಶದ ಕೊರತೆಯ ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆಧಾರ ಶ್ಲೋಕಗಳನ್ನು ಈ ಲೇಖನದಲ್ಲಿ ಸೇರಿಸಲಾಗಿಲ್ಲ.
ಮೂಲ ಲೇಖನ : ಡಿ. ಸುಗುಣಾ ಬಿ. ತಂತ್ರಿ
ಸಂಕಲನ : ಬಿ. ರಾಮಭಟ್, ಸುಳ್ಯ. ಸಂಪರ್ಕ ಸಂಖ್ಯೆ : 9481756028
No comments:
Post a Comment
Note: only a member of this blog may post a comment.