ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?

ಪ್ರತಿಯೊಬ್ಬರ ಜೀವನದಲ್ಲಿಯೂ ಅತೀಂದ್ರೀಯ ಶಕ್ತಿಗಳು ವಿಶೇಷ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಆಧುನಿಕ ವಿಜ್ಞಾನವು ಸಂಶೋಧನೆಯನ್ನು ಪ್ರಾರಂಭಿಸಿದೆ. ಆದರೆ ನಮ್ಮ ಋಷಿ-ಮುನಿಗಳಿಗೆ ಈ ವಿಷಯವು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ವ್ಯಕ್ತಿಯು ತಾನು ವಾಸ ಮಾಡುವ ಪರಿಸರ, ಮನೆ, ಉದ್ಯೋಗ ಮಾಡುವ ವಾಸ್ತು ಇವು ಅವನ ಮನಸ್ಸು ಮತ್ತು ಶರೀರದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆಯೂ ಅವರು ಆಳವಾದ ಸಂಶೋಧನೆಯನ್ನು ಮಾಡಿದ್ದರು. ಇದನ್ನು ನಾವು ಈಗ ವಾಸ್ತುಶಾಸ್ತ್ರ ಎಂಬ ಹೆಸರಿನಿಂದ ಕರೆಯುತ್ತೇವೆ. ನೂತನ ವಾಸ್ತುವನ್ನು ಕಟ್ಟುವಾಗ, ಭೂಖಂಡವನ್ನು ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ವಾಸ್ತುಶಾಸ್ತ್ರವು ಹೇಳಿರುವ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ವಾಸ್ತುವಿನ ಭೂಖಂಡ
ಭೂಖಂಡದ ಒಂದು ಬದಿಯು ಅಥವಾ ಮನೆಯ ಒಂದು ಗೋಡೆಯು ಆಯಸ್ಕಾಂತದ ಆಕರ್ಷಣೆಯ ಮುಳ್ಳಿಗೆ ಸಮಾನಾಂತರವಾಗಿ ಎಂದರೆ ದಕ್ಷಿಣೋತ್ತರವಾಗಿ ಇರಬೇಕು.

ಉದ್ದ-ಅಗಲ
೧. ಚಂದ್ರವೇಧೀ ಭೂಖಂಡ: ಪೂರ್ವ-ಪಶ್ಚಿಮ ಅಳತೆಗಿಂತ ದಕ್ಷಿಣೋತ್ತರ ಅಳತೆ ಹೆಚ್ಚು. ಇಂತಹ ಭೂಖಂಡವು ಭಾಗ್ಯದಾಯಕವಾಗಿರುತ್ತದೆ. ಚಂದ್ರನಾಡಿ ಯಂತೆ ಇದು ಶೀತಲತೆಯನ್ನು ಕೊಡುತ್ತದೆ.
೨. ಸೂರ್ಯವೇಧೀ ಭೂಖಂಡ: ಪೂರ್ವ-ಪಶ್ಚಿಮ ಅಳತೆಗಿಂತ ದಕ್ಷಿಣೋತ್ತರ ಅಳತೆಯು ಕಡಿಮೆ. ಇಂತಹ ಭೂಖಂಡವು ಹಾನಿಕಾರಕವಾಗಿರುತ್ತದೆ. ಇದು ಸೂರ್ಯನಾಡಿಯಂತೆ ತಾಪದಾಯಕವಾಗಿರುತ್ತದೆ.

ಗೋಮುಖಿ ಮತ್ತು ವ್ಯಾಘ್ರಮುಖಿ
೧. ಗೋಮುಖಿ: ಭೂಖಂಡದಲ್ಲಿ ಪ್ರವೇಶ ಮಾಡುವ ಬದಿಯು ಕಡಿಮೆ ಅಗಲ ಮತ್ತು ಹಿಂದಿನ ಬದಿಯು ಹೆಚ್ಚು ಅಗಲ. ಇದು ವೈಭವ ಮತ್ತು ಶಾಂತಿಯನ್ನು ಕೊಡುವುದಾಗಿದೆ.
೨. ವ್ಯಾಘ್ರಮುಖಿ: ಭೂಖಂಡದಲ್ಲಿ ಪ್ರವೇಶ ಮಾಡುವ ಬದಿಯು ಹೆಚ್ಚು ಅಗಲ ಮತ್ತು ಹಿಂದಿನ ಬದಿಯು ಕಡಿಮೆ ಅಗಲ. ಇಂತಹ ಭೂಖಂಡವು ಯಜಮಾನನನ್ನು ತಿಂದುಹಾಕುತ್ತದೆ, ಅಂದರೆ ಯಜಮಾನನಿಗೆ ಬಹಳಷ್ಟು ತೊಂದರೆ ಕೊಡುತ್ತದೆ.

ಅಕ್ಕ-ಪಕ್ಕದ ಭೂಖಂಡಗಳು: ಎರಡು ದೊಡ್ಡ ಭೂಖಂಡಗಳ ನಡುವಿನ ಸಣ್ಣ ಭೂಖಂಡವು ತ್ರಾಸದಾಯಕವಾಗಿರುತ್ತದೆ. ಏಕೆಂದರೆ ದೊಡ್ಡ ಭೂಖಂಡಗಳ ಸ್ಪಂದನಗಳು ಚಿಕ್ಕ ಭೂಖಂಡದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತವೆ.

ಇತರ ಭೌತಿಕ ಅಂಶಗಳು: ತಗ್ಗು-ದಿಣ್ಣೆಗಳಿರುವ, ಕಲ್ಲು-ಮುಳ್ಳುಗಳಿಂದ ತುಂಬಿರುವ ಮತ್ತು ದೂಷಿತ ವಾಯುವಿನಿಂದ ಆವರಿಸಲ್ಪಟ್ಟ ಹಾಗೂ ಹೊಲಸು ವಾತಾವರಣವಿರುವ ಭೂಖಂಡಗಳು ತ್ರಾಸದಾಯಕವಾಗಿರುತ್ತವೆ.

ಲಾಭದಾಯಕ ರಸ್ತೆಗಳು
ಅ. ನಾಲ್ಕೂ ದಿಕ್ಕುಗಳಲ್ಲಿ ರಸ್ತೆ ಇರುವ ಭೂಖಂಡವು ಸರ್ವೋತ್ತಮವಾದುದು
ಆ. ಮೂರು ಕಡೆಗಳಲ್ಲಿ ರಸ್ತೆ ಇರುವುದು
ಇ. ಉತ್ತರ, ಪಶ್ಚಿಮಕ್ಕೆ ರಸ್ತೆ ಇರುವುದು
ಈ. ಪೂರ್ವ ಮತ್ತು ಉತ್ತರ ದಿಕ್ಕಿಗೆ ರಸ್ತೆ ಇರುವುದು
ಉ. ಉತ್ತರ ದಿಕ್ಕಿಗೆ ರಸ್ತೆ ಇರುವುದು

ಪ್ರತ್ಯಕ್ಷ ವಾಸ್ತು
ಕಟ್ಟಡ ನಿರ್ಮಾಣಕ್ಕಾಗಿ ಬಳಸಿದ ಸಾಮಗ್ರಿ:ಕಟ್ಟಡ ನಿರ್ಮಾಣಕ್ಕಾಗಿ ಕಲ್ಲು, ಮಣ್ಣು, ಸಿಮೆಂಟ್ ಇತ್ಯಾದಿ ಯಾವ ವಸ್ತುಗಳನ್ನು ಬಳಸಲಾಗುತ್ತದೆಯೋ ಅದರ ಮೇಲೆ, ಆ ವಾಸ್ತುವಿನಲ್ಲಿ ಯಾವ ವಿಧದ ಸ್ಪಂದನಗಳು ನಿರ್ಮಾಣವಾಗುತ್ತವೆ ಎನ್ನುವುದು ಅವಲಂಬಿಸಿರುತ್ತದೆ. ಸಿಮೆಂಟ್‌ಗಿಂತ ಕಲ್ಲು ಮತ್ತು ಮಣ್ಣಿನಲ್ಲಿ ಒಳ್ಳೆಯ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ.

ಬೆಟ್ಟದ ಮೇಲಿನ ಸ್ಥಾನ: ಎಲ್ಲಕ್ಕಿಂತ ಎತ್ತರವಾದ ಭೂಖಂಡವು ತ್ರಾಸದಾಯಕವಾಗಬಹುದು. (ಅಲ್ಲಿ ನೀರಿನ ಕೊರತೆಯೂ ಉಂಟಾಗಬಹುದು.)

ದೇವಸ್ಥಾನ: ಭೂಖಂಡದೆದುರು ದೇವಸ್ಥಾನಗಳು ಇರಬಾರದು ಅಥವಾ ದೇವಸ್ಥಾನದ ನೆರಳೂ ಸಹ ಭೂಖಂಡದ ಮೇಲೆ ಬೀಳಬಾರದು; ಇಲ್ಲವಾದರೆ ಅಲ್ಲಿ ನೆಲೆಸುವ ವ್ಯವಹಾರಿ ವ್ಯಕ್ತಿಯ ರಜೋಗುಣವು ಕಡಿಮೆಯಾಗಿ ಅವನು ಸಾತ್ತ್ವಿಕನಾದರೆ, ಅವನಿಗೆ ವ್ಯವಹಾರದಲ್ಲಿ ಹಾನಿಯಾಗಬಹುದು! (ಸಾಧಕರಿಗೆ ದೇವಸ್ಥಾನವು ಪೂರಕವಾಗಿದೆ.)

ನದಿ, ಕೆರೆ ಅಥವಾ ಹೊಂಡ: ಪೂರ್ವ-ಉತ್ತರ ಭಾಗದಲ್ಲಿ ನದಿ ಅಥವಾ ಬಾವಿ ಇದ್ದರೆ ಅದು ಉತ್ತಮ. ಮನೆಯ ಮುಂಬಾಗಿಲಿನೆದುರು ಯಾವಾಗಲೂ ಹರಿಯುತ್ತಿರುವ ನೀರು ಇದ್ದರೆ ಸಂಪತ್ತು ನಾಶವಾಗುತ್ತದೆ. ತೆರೆದ ಚರಂಡಿ ಇದ್ದರೆ ತೊಂದರೆಯಾಗುತ್ತದೆ. ಬಾವಿಯೂ ಮನೆಯ ಎದುರಿನಲ್ಲಿ ಇರಬಾರದು, ಹಿಂಬದಿಯಲ್ಲಿರಬೇಕು; ಏಕೆಂದರೆ ಅದರ ದಡದಲ್ಲಿ ‘ಸಾತ್ ಆಸರಾ’ ಮುಂತಾದ ಕ್ಷುದ್ರದೇವತೆಗಳು ಬಂದು ವಾಸ ಮಾಡಿದರೆ ತೊಂದರೆಯಾಗುತ್ತದೆ.

ಮರ ಮತ್ತು ಕಂಬ: ಇವುಗಳ ಮೇಲೆ ಭೂತಗಳ ವಾಸ್ತವ್ಯವಿರುವ ಸಾಧ್ಯತೆಗಳಿರುವುದರಿಂದ ಮನೆಯ ಎದುರುಗಡೆ ಮರ ಅಥವಾ ಕಂಬಗಳು ಇರಬಾರದು.

ಗುಡ್ಡ: ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಗುಡ್ಡಗಳು ಅಥವಾ ಎತ್ತರದ ಜಾಗಗಳಿದ್ದರೆ ಅದು ಉತ್ತಮ; ಆದರೆ ಪೂರ್ವ-ಉತ್ತರ ದಿಕ್ಕಿನಲ್ಲಿ ಗುಡ್ಡಗಳು ಅಥವಾ ಎತ್ತರದ ಜಾಗಗಳು ಇರಬಾರದು. ಹೀಗಿದ್ದರೆ ಅಧೋಗತಿಗೆ ಕಾರಣವಾಗುತ್ತದೆ.

ಸ್ಮಶಾನ: ಅಕ್ಕ-ಪಕ್ಕದಲ್ಲಿ ಸ್ಮಶಾನವಿದ್ದರೆ ಅಲ್ಲಿರುವ ಭೂತಗಳು ಮತ್ತು ಅಲ್ಲಿಗೆ ಬರುವ ತಾಂತ್ರಿಕರು ಮುಂತಾದವರಿಂದ ತೊಂದರೆಯಾಗುವ ಸಾಧ್ಯತೆಗಳು ಇರುತ್ತವೆ.
ವಾಸ್ತುವಿನ ಎತ್ತರದ ಎರಡು ಪಟ್ಟುಗಳಿಗಿಂತ ಹೆಚ್ಚಿನ ಅಂತರದಲ್ಲಿ ರಸ್ತೆ, ಮರ, ಕಂಬ, ಬಾವಿ, ಮಂದಿರ, ತಿರುಗುವ ಚಕ್ರ ಮುಂತಾದವುಗಳಿದ್ದರೆ ಅವುಗಳಿಂದ ತೊಂದರೆಯಾಗುವುದಿಲ್ಲ.

ಇತರೆ: ಮನೆ ಕಟ್ಟಲು ಯಾವ ಸಾಮಗ್ರಿಗಳನ್ನು (ಬಿದಿರು, ಸಿಮೆಂಟ್ ಇತ್ಯಾದಿ) ಬಳಸಲಾಗಿದೆ, ಮನೆಯ ಹೊರಗೆ ತುಳಸಿ ಬೃಂದಾವನವು ಯಾವ ಜಾಗದಲ್ಲಿದೆ, ಇದರೊಂದಿಗೆ ಅಕ್ಕಪಕ್ಕದ ಮನೆಗಳಲ್ಲಿ ಯಾರು ಇರುತ್ತಾರೆ, ಮುಂತಾದ ವಿಷಯಗಳೂ ವಾಸ್ತುವಿನ ಮೇಲೆ ಪರಿಣಾಮವನ್ನು ಬೀರುತ್ತವೆ. ಯಾವುದಾದರೊಂದು ಮನೆಯಲ್ಲಿನ ಯಾವುದಾದರೊಂದು ಕೋಣೆಯಲ್ಲಿನ ಸ್ಪಂದನಗಳು ಹೇಗೆ ತೊಂದರೆದಾಯಕವಾಗಿರಬಹುದೋ ಹಾಗೆಯೇ ನಗರದ ಯಾವುದಾದರೊಂದು ಭಾಗದಲ್ಲಿನ ಸ್ಪಂದನಗಳೂ ತೊಂದರೆದಾಯಕವಾಗಿರಬಹುದು.

ಇದರಿಂದ ಗಮನಕ್ಕೆ ಬರುವ ಸಂಗತಿ ಏನೆಂದರೆ ವಾಸ್ತುವನ್ನು ಕಟ್ಟಿದ ನಂತರ ವಾಸ್ತುಶಾಂತಿ ಮುಂತಾದವುಗಳ ಬಗ್ಗೆ ಆಲೋಚಿಸುವ ಬದಲು ವಾಸ್ತುವನ್ನು ಕಟ್ಟುವಾಗಲೇ ಹಾಗೂ ಮನೆಯಲ್ಲಿನ ಸಾಮಾನುಗಳನ್ನು ಜೋಡಿಸುವಾಗಲೇ ಮೇಲ್ಕಂಡ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಹಾಗೆಯೇ ಯಾವುದೇ ಒಂದು ಭೂಖಂಡದ ಮೇಲೆ ಶಾಲೆಯನ್ನು ಕಟ್ಟಬೇಕೇ ಅಥವಾ ಕಾರ್ಖಾನೆಯನ್ನು ಕಟ್ಟಬೇಕೇ ಎನ್ನುವುದನ್ನು ನಿರ್ಧರಿಸುವುದು ಅವಶ್ಯವಾಗಿರುತ್ತದೆ.

ಬಾಗಿಲು
೧. ಬಾಗಿಲು ಸಾಧ್ಯವಾದಷ್ಟೂ ಪೂರ್ವ ದಿಕ್ಕಿನಲ್ಲಿರಬೇಕು. ದಕ್ಷಿಣಕ್ಕೆ ಇರಬಾರದು.
೨. ಮುಖ್ಯ ಪ್ರವೇಶದ್ವಾರವು ಸುಶೋಭಿ ತವೂ, ಕಾಣಲು ಒಳ್ಳೆಯದಿರಬೇಕು.
೩. ಬಾಗಿಲುಗಳು ಸಮಸಂಖ್ಯೆಯಲ್ಲಿರ ಬೇಕು.
೪. ಮನೆಯಲ್ಲಿನ ಇತರ ಬಾಗಿಲುಗಳು ಪ್ರವೇಶದ್ವಾರಕ್ಕಿಂತ ದೊಡ್ಡದಾಗಿರಬಾರದು.
೫. ಮುರಿದಿರುವ ಅಥವಾ ಗೆದ್ದಲು ತಿಂದಿರುವ ಬಾಗಿಲುಗಳು ಇರಬಾರದು.
೬. ಬಾಗಿಲಿನ ಮೇಲೆ ಓಂ, ಶ್ರೀ, ಸ್ವಸ್ತಿಕ ಹಾಗೆಯೇ ಮಂಗಳ ಕಲಶ ಇತ್ಯಾದಿ ಶುಭಚಿಹ್ನೆಗಳನ್ನು ಬಿಡಿಸಬೇಕು. ಅರಶಿನ ಕುಂಕುಮ, ಆಕಳಿನ ಸಗಣಿ ಮತ್ತು ಗೋಮೂತ್ರವನ್ನು ಮಿಶ್ರಿತ ಮಾಡಿ ಈ ಚಿಹ್ನೆಗಳನ್ನು ಬಿಡಿಸಬೇಕು. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ಬಾಗಿಲಿನಿಂದ ಒಳಗೆ ಪ್ರವೇಶಿಸುವುದಿಲ್ಲ. ಮುಖ್ಯದ್ವಾರದ ಮುಂದೆ ಹಾಕಿರುವ ರಂಗೋಲಿಯಿಂದಲೂ ಇಂತಹ ಲಾಭವೇ ಆಗುತ್ತದೆ.

ಅಡುಗೆ ಕೋಣೆ: ಅಡುಗೆಯನ್ನು ಮಾಡುವ ಕೋಣೆಯು ಆಗ್ನೇಯ ದಿಕ್ಕಿನಲ್ಲಿರಬೇಕು; ಏಕೆಂದರೆ ಆಗ್ನೇಯ ದಿಕ್ಕು ಅಗ್ನಿದೇವನ ದಿಕ್ಕಾಗಿದೆ. ಅಡುಗೆ ಕೋಣೆಯು ಇತರ ದಿಕ್ಕುಗಳಲ್ಲಿದ್ದರೆ ಯಾವ ತೊಂದರೆಗಳಾಗಬಹುದು ಎನ್ನುವುದನ್ನು ಮುಂದೆ ಕೊಡಲಾಗಿದೆ.

೧. ಪೂರ್ವ: ಮಧ್ಯಮ ಸ್ವರೂಪದ ಚಿಂತೆಗೊಳಗಾಗುವುದು.
೨. ಪಶ್ಚಿಮ: ಮನೆಯಲ್ಲಿ ಇರುವವರಿಗೆ ಕಾಯಿಲೆಗಳು ಬರುವುದು ಮತ್ತು ಉದಾಸೀನರಾಗುವುದು.
೩. ದಕ್ಷಿಣ: ಯಮನ ದಿಕ್ಕು. ಮನೆಯ ಯಜಮಾನ ಅಥವಾ ಯಜಮಾನತಿಗೆ ಮೃತ್ಯುವಿನ ಭಯವಿರುತ್ತದೆ.
೪. ಉತ್ತರ: ಮನೆಯಲ್ಲಿ ಯಾವಾಗಲೂ ಜಗಳಗಳಾಗುವುದು
೫. ನೈಋತ್ಯ: ಕಳ್ಳತನದ ಭಯವಿರುತ್ತದೆ ಮತ್ತು ಸಂತತಿಯ ಸುಖವಿರುವುದಿಲ್ಲ.
೬. ವಾಯುವ್ಯ: ಆಕಸ್ಮಿಕ ಧನನಾಶ
೭. ಈಶಾನ್ಯ: ಯಾವಾಗಲೂ ಸಾಲದಲ್ಲಿ ಇರುವುದು

ಈ ರೀತಿಯ ತಪ್ಪು ದಿಕ್ಕುಗಳಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಮನೆಯಲ್ಲಿನ ವಿವಿಧ ಕೋಣೆಗಳು ಕೆಳಗಿನಂತೆ ಇರಬೇಕು.

ಈಶಾನ್ಯಂ ದೇವತಾಗೇಹಂ ಪೂರ್ವಸ್ಯ ಸ್ನಾನಮಂದಿರಮ್|
ಆಗ್ನೇಯಂ ಪಾಕಸದನಂ ಭಾಂಡಗಾರಂ ಚ ಉತ್ತರೇ||


ಅರ್ಥ: ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ (ಪೂರ್ವದ ಕಡೆಗೆ ಮುಖ ಮಾಡಿ), ಪೂರ್ವ ದಿಕ್ಕಿನಲ್ಲಿ ಸ್ನಾನದ ಮನೆ, ಆಗ್ನೇಯ ದಿಕ್ಕಿಗೆ ಅಡುಗೆ ಕೋಣೆ ಮತ್ತು ಉತ್ತರ ದಿಕ್ಕಿಗೆ ಭಂಡಾರವಿರಬೇಕು.

ಪಾಯಖಾನೆ: ಪಾಯಖಾನೆಯು ದಕ್ಷಿಣ ದಿಕ್ಕಿನಲ್ಲಿರಬೇಕು.

1 comment:

  1. nivu kotta melina vishayavannu odidha melle nannage thumba kshi agide. Dhanyavadagallu.

    ReplyDelete

Note: only a member of this blog may post a comment.