ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು

ಆಧ್ಯಾತ್ಮಿಕ ಸಂಶೋಧನೆ
ಸನಾತನ ಸಂಸ್ಥೆಯು ಅನೇಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಿದೆ. (ಈ ಎಲ್ಲ ಸಂಶೋಧನೆಗಳನ್ನು ಆಂಗ್ಲ ಭಾಷೆಯಲ್ಲಿ http://spiritualresearchfoundation.org/ ಎಂಬ ಸಂಕೇತಸ್ಥಳದಲ್ಲಿ ಇಡಲಾಗಿದೆ.) ಅವುಗಳಲ್ಲಿ ಒಂದು ವಿಷಯವನ್ನು ನೋಡೋಣ. ಅದೇನೆಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು'.

ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳ ಅಸ್ತಿತ್ವ
ಕೆಟ್ಟ ಶಕ್ತಿಗಳು ಮುಖ್ಯವಾಗಿ ಭುವರ್ಲೋಕ ಮತ್ತು ಸಪ್ತಪಾತಾಳಗಳಲ್ಲಿ ಇರುತ್ತವೆ. ಅಲ್ಲಿಂದಲೇ ಅವು ಭೂಲೋಕಕ್ಕೆ ಬಂದು ಮನುಷ್ಯರಿಗೆ ತೊಂದರೆಗಳನ್ನು ಕೊಡುತ್ತವೆ.

ಪೃಥ್ವಿಯಲ್ಲಿ ಕೆಟ್ಟ ಶಕ್ತಿಗಳು ವಿವಿಧ ಕಡೆಗಳಲ್ಲಿ ಕಂಡು ಬರುತ್ತವೆ. ಅವು ನಿರ್ಜೀವ ಅಥವಾ ಸಜೀವ ವಸ್ತುಗಳಲ್ಲಿ ತಮಗಾಗಿ ಸ್ಥಾನಗಳನ್ನು ನಿರ್ಮಿಸುತ್ತವೆ ಮತ್ತು ಅಲ್ಲಿ ಕಪ್ಪುಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಈ ಸ್ಥಾನಗಳ ಮಾಧ್ಯಮದಿಂದಲೇ ಕೆಟ್ಟ ಶಕ್ತಿಗಳು ನಿರ್ಜೀವ ಅಥವಾ ಸಜೀವ ವಸ್ತುಗಳನ್ನು ಪ್ರವೇಶಿಸುತ್ತವೆ. ಈ ಸ್ಥಾನಗಳೆಂದರೆ ಕಪ್ಪುಶಕ್ತಿಯನ್ನು ಪಡೆಯುವ ಅಥವಾ ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳ ಕೇಂದ್ರಗಳಾಗಿರುತ್ತವೆ. ಕೆಟ್ಟ ಶಕ್ತಿಗಳು ಸಾಮಾನ್ಯವಾಗಿ ವ್ಯಕ್ತಿ, ಮರ, ಮನೆ, ಸ್ಮಶಾನ ಮುಂತಾದ ಕಡೆಗಳಲ್ಲಿ ತಮ್ಮ ಸ್ಥಾನಗಳನ್ನು ನಿರ್ಮಿಸುತ್ತವೆ. ಜನರಿಗೆ ತೊಂದರೆ ನೀಡುವುದು ಕೆಟ್ಟ ಶಕ್ತಿಗಳ ಮುಖ್ಯ ಉದ್ದೇಶವಾಗಿರುತ್ತದೆ. ಇದಲ್ಲದೇ ತಮ್ಮ ಅತೃಪ್ತ ಇಚ್ಛೆಗಳನ್ನು ಪೂರ್ಣಗೊಳಿಸಲು (ಉದಾ: ತಿನ್ನುವುದು, ಮದ್ಯಪಾನ, ಧೂಮ್ರಪಾನ, ಲೈಂಗಿಕ ವಾಸನೆ ಮುಂತಾದವುಗಳ ಪೂರ್ತಿಗಾಗಿ) ಅಥವಾ ಕೊಡು-ಕೊಳ್ಳುವ ಲೆಕ್ಕವನ್ನು ತೀರಿಸಲು ಅವು ವ್ಯಕ್ತಿಯ ಶರೀರದಲ್ಲಿ ಸ್ಥಾನಗಳನ್ನು ನಿರ್ಮಿಸುತ್ತವೆ. ಅವು ವಾಯು ರೂಪದಲ್ಲಿರುವುದರಿಂದ ನಮ್ಮ ಕಣ್ಣುಗಳಿಗೆ ಕಾಣಿಸುವುದಿಲ್ಲ; ಆದರೆ ಸೂಕ್ಷ್ಮದೃಷ್ಟಿ ಇರುವವರು ಅವುಗಳನ್ನು ನೋಡಬಲ್ಲರು.

ಕೆಟ್ಟ ಶಕ್ತಿಗಳ ವಾಸ್ತವ್ಯವು ಅವರ ಆಧ್ಯಾತ್ಮಿಕ ಶಕ್ತಿಯ ಮೇಲೆ ಅವಲಂಬಿಸಿರುವುದು: ಕೆಟ್ಟ ಶಕ್ತಿಗಳು ವಿವಿಧ ಸೂಕ್ಷ್ಮಲೋಕಗಳಲ್ಲಿ ವಾಸಿಸುವುದು ಅವರ ಆಧ್ಯಾತ್ಮಿಕ ಶಕ್ತಿ, ಕ್ಷಮತೆ ಇತ್ಯಾದಿಗಳ ಮೇಲೆ ಅವಲಂಬಿಸಿರುತ್ತದೆ. ಆಧ್ಯಾತ್ಮಿಕ ಶಕ್ತಿಯು ಹೆಚ್ಚಾದಂತೆ ಕೆಟ್ಟ ಶಕ್ತಿಗಳು ಹೆಚ್ಚೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತವೆ. ಕಡಿಮೆ ಆಧ್ಯಾತ್ಮಿಕ ಶಕ್ತಿಯಿರುವ ಕೆಟ್ಟ ಶಕ್ತಿಗಳು ಭುವರ್ಲೋಕದಲ್ಲಿ ಇರುತ್ತವೆ. ಅತ್ಯಂತ ಹೆಚ್ಚು ಶಕ್ತಿಶಾಲಿ ಮತ್ತು ಕ್ರೂರ ಕೆಟ್ಟ ಶಕ್ತಿಗಳು ಮುಂದಿನ ಮುಂದಿನ ಪಾತಾಳದಲ್ಲಿರುತ್ತವೆ. ಯಾವುದಾದರೊಂದು ಜೀವದ (ಮನುಷ್ಯನ ಅಥವಾ ಲಿಂಗದೇಹದ) ಸ್ಪಂದನಗಳು ಯಾವ ಲೋಕದ ಸ್ಪಂದನಗಳೊಂದಿಗೆ ಹೊಂದಾಣಿಕೆಯಾಗುತ್ತವೆಯೋ ಆಯಾ ಲೋಕದಲ್ಲಿಯೇ ಆ ಜೀವವು ವಾಸಿಸುತ್ತದೆ. ದುರ್ಜನರು ಯಾವಾಗಲೂ ಇತರ ದುರ್ಜನರೊಂದಿಗೆಯೇ ಇರುತ್ತಾರೆ, ಇದು ಸಹ ಅದೇ ರೀತಿಯದ್ದಾಗಿದೆ.

ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು

ಅ೧. ಮನುಷ್ಯ: ಕೆಟ್ಟ ಶಕ್ತಿಗಳು ತಮ್ಮ ಅತೃಪ್ತ ಇಚ್ಛೆಗಳನ್ನು ಪೂರ್ಣಗೊಳಿಸಿಕೊಳ್ಳಲು, ಸೇಡು ತೀರಿಸಿಕೊಳ್ಳಲು, ಕೊಡು-ಕೊಳ್ಳುವ ಲೆಕ್ಕವನ್ನು ಪೂರ್ಣಗೊಳಿಸಲು ಅಥವಾ ವ್ಯಕ್ತಿಗೆ ತೊಂದರೆ ನೀಡಿ ಸುಖ ಪಡೆಯಲು ವ್ಯಕ್ತಿಯ ಸುತ್ತಲೂ, ವ್ಯಕ್ತಿಯ ಮೈಮೇಲೆ ಅಥವಾ ಅವನ ಶರೀರದೊಳಗೆ ಇರುತ್ತವೆ. ವ್ಯಕ್ತಿಯ ಶರೀರದಲ್ಲಿನ ಯಾವುದಾದರೊಂದು ಅವಯವದಲ್ಲಿ ಅಥವಾ ಮನಸ್ಸು ಅಥವಾ ಬುದ್ಧಿಯಲ್ಲಿ ಅವು ವಾಸಿಸುತ್ತವೆ. ಸರ್ವಸಾಮಾನ್ಯವಾಗಿ ಇದನ್ನೇ ‘ಭೂತಬಾಧೆ’ ಅಥವಾ ‘ದುಷ್ಟ ಶಕ್ತಿಗಳ / ಅನಿಷ್ಟ ಶಕ್ತಿಗಳ ಕಾಟ’ ಎಂದು ಕರೆಯುತ್ತಾರೆ. ಕೆಟ್ಟ ಶಕ್ತಿಯು ಯಾವುದಾದರೊಬ್ಬ ವ್ಯಕ್ತಿಗೆ ಅನೇಕ ವರ್ಷಗಳಿಂದ ಕಾಟ ನೀಡುತ್ತಿರುವ ಸಾಧ್ಯತೆಗಳಿರುತ್ತವೆ. ಬಹಳಷ್ಟು ಜನರಿಗೆ ‘ತಮಗೆ ಕೆಟ್ಟ ಶಕ್ತಿಗಳ ಕಾಟವಿದೆ’ ಅಥವಾ ‘ತಾವು ಕೆಟ್ಟ ಶಕ್ತಿಗಳ ಇಚ್ಛೆಯಂತೆ ವರ್ತಿಸುತ್ತಿದ್ದೇವೆ’ ಎಂಬುದು ತಿಳಿಯುವುದೇ ಇಲ್ಲ. ಕೆಟ್ಟ ಶಕ್ತಿಯು ವ್ಯಕ್ತಿಯ ಶರೀರದಲ್ಲಿ ಇದೆಯೋ ಅಥವಾ ಶರೀರದ ಹೊರಗೆ ಇದೆಯೋ ಎಂಬುದಕ್ಕೆ ಮಹತ್ವವಿಲ್ಲ; ಏಕೆಂದರೆ ಅದು ಇವೆರಡೂ ವಿಧಗಳಿಂದ ವ್ಯಕ್ತಿಯ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಬಹುದಾಗಿದೆ.

ಅ೨. ಪ್ರಾಣಿಗಳು: ಬಹಳಷ್ಟು ಪ್ರಾಣಿಗಳ ಶರೀರದ ಮೇಲೆ ಕೆಟ್ಟ ಶಕ್ತಿಗಳು ಕುಳಿತಿರುತ್ತವೆ; ಅಪರೂಪಕ್ಕೆ ಮಾತ್ರ ಅವು ಪ್ರಾಣಿಗಳ ಶರೀರದೊಳಗೆ ಪ್ರವೇಶಿಸುತ್ತವೆ. ಯಾವುದಾದರೊಂದು ಕೆಟ್ಟ ಶಕ್ತಿಗೆ ಓರ್ವ ವ್ಯಕ್ತಿಗೆ ತೊಂದರೆ ನೀಡುವುದಿದ್ದರೆ ಅದು ಆ ವ್ಯಕ್ತಿಯ ಅಕ್ಕಪಕ್ಕದಲ್ಲಿರುವ ಪ್ರಾಣಿಯ ಶರೀರದಲ್ಲಿ ಪ್ರವೇಶಿಸುತ್ತದೆ. ಈ ರೀತಿ ಕೆಟ್ಟ ಶಕ್ತಿಯ ಹಿಡಿತಕ್ಕೊಳಗಾದ ಪ್ರಾಣಿಯು ಒಮ್ಮೆಲೆ ಆಕ್ರಮಣಕಾರಿಯಾಗುತ್ತದೆ ಮತ್ತು ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಅವನಿಗೆ ಹಾನಿಯುಂಟುಮಾಡುತ್ತದೆ.

ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು, ಉದಾ: ನಾಯಿ, ಕುದುರೆ, ಗೂಬೆ, ಕಾಗೆ ಮುಂತಾದವು ಕೆಟ್ಟ ಶಕ್ತಿಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಯಾವುದೇ ಸ್ಥೂಲ ಕಾರಣವಿಲ್ಲದೇ ರಾತ್ರಿಯ ಸಮಯದಲ್ಲಿ ನಾಯಿಯು ಅಕಸ್ಮಾತ್ತಾಗಿ ಬೊಗಳುತ್ತಿದ್ದರೆ ಅಥವಾ ಅಳುತ್ತಿದ್ದರೆ ಆ ಜಾಗದಲ್ಲಿ ಕೆಟ್ಟ ಶಕ್ತಿಗಳ ಅಸ್ತಿತ್ವವಿರುವ ಸಾಧ್ಯತೆಯು ಇರುತ್ತದೆ.

ಅ೩. ಗಿಡ-ಮರಗಳು: ಬಹಳಷ್ಟು ಬಾರಿ ಕೆಟ್ಟ ಶಕ್ತಿಗಳು ಮರಗಳ ಕೊಂಬೆಗಳಿಗೆ ನೇತಾಡುತ್ತಿರುತ್ತವೆ. ಕೆಟ್ಟ ಶಕ್ತಿಗಳ ಸ್ಪಂದನಗಳು ಯಾವ ಮರದ ಸ್ಪಂದನದೊಂದಿಗೆ ಹೊಂದಾಣಿಕೆಯಾಗುತ್ತದೆಯೋ ಅಂತಹ ಮರದ ಮೇಲೆಯೇ ಅವು ವಾಸಿಸುತ್ತವೆ. (ಬ್ರಹ್ಮಾಂಡದಲ್ಲಿನ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟ ಸ್ಪಂದನ ಇದೆ. ವಸ್ತುವಿನ ಸುತ್ತಲಿರುವ ಪ್ರಭಾವಲಯವು ಆ ಸ್ಪಂದನಗಳ ಪ್ರಕಟೀಕರಣವಾಗಿರುತ್ತದೆ) ಎಲ್ಲರಿಗೂ ತಿಳಿದಿರುವಂತೆ ಹುಣಸೆ ಮರವು ಕೆಟ್ಟ ಶಕ್ತಿಗಳು ವಾಸಿಸುವ ಒಂದು ಸ್ಥಾನವಾಗಿದೆ. ಕೆಟ್ಟ ಶಕ್ತಿಗಳು ಪವಿತ್ರವಾದಂತಹ ಆಲದ ಮರದಲ್ಲಿಯೂ ವಾಸ ಮಾಡುತ್ತವೆ. ಇಂತಹ ಕೆಟ್ಟ ಶಕ್ತಿಗಳ ಕ್ಷಮತೆಯು ಹೆಚ್ಚಿಗೆ ಇರುತ್ತದೆ.

ವಾಸಿಸುವ ಜಾಗ                               ಕೆಟ್ಟ ಶಕ್ತಿಯ ವಿಧ
೧. ಆಲದ ಮರ                                    ಪುರುಷ ಭೂತ
೨. ಹುಣಸೇ ಮರ                                 ಬೆಕ್ಕಿನ ರೂಪದಲ್ಲಿರುವ ಚೇಟಕಿಣ ಎಂಬ ಕೆಟ್ಟ ಶಕ್ತಿ
೩. ಅರಳಿ ಮರ                                      ಎಲ್ಲ ತರಹದ ಕೆಟ್ಟ ಶಕ್ತಿಗಳು

ಅ೪. ಕೆಟ್ಟ ಶಕ್ತಿಗಳಿಂದ ತುಂಬಿದ ವಸ್ತುಗಳು: ಕೆಲವರು ತಮ್ಮ ಮೃತ್ಯುವಿನ ನಂತರವೂ ತಾವು ಜೀವಂತವಾಗಿದ್ದಾಗ ಅವರಿಗೆ ಇಷ್ಟವಾಗುತ್ತಿದ್ದ ವಸ್ತುಗಳಲ್ಲಿ ಸಿಲುಕಿಕೊಂಡಿರುತ್ತಾರೆ, ಉದಾ.ಇಷ್ಟವಾದ ಕುರ್ಚಿ, ಆಭರಣಗಳು ಇತ್ಯಾದಿ. ಇಂತಹ ವಸ್ತುಗಳ ಸುತ್ತಲೂ ಅವರ ಲಿಂಗದೇಹವು ಸುಳಿದಾಡುತ್ತಿರುತ್ತದೆ, ಉದಾ. ಓರ್ವ ಸ್ತ್ರೀಯು ತನ್ನ ಮೃತ್ಯುವಿನ ನಂತರ ತನಗಿಷ್ಟವಾದ ಆಭರಣದ ಮೇಲೆ ಆಸಕ್ತಿಯನ್ನು ಇಟ್ಟುಕೊಂಡಿದ್ದರೆ ಅವಳ ಮನಸ್ಸು ಸತತವಾಗಿ ಆ ಆಭರಣದ ಸುತ್ತಲೂ ಸುಳಿದಾಡುತ್ತಿರುತ್ತದೆ. ಇಂತಹ ವಸ್ತುಗಳಿಗೆ ‘ಕೆಟ್ಟ ಶಕ್ತಿಗಳಿಂದ ತುಂಬಿದ ವಸ್ತುಗಳು’ ಎಂದು ಹೇಳುತ್ತಾರೆ. ಓರ್ವ ವ್ಯಕ್ತಿಯು ಇಂತಹ ಆಭರಣವನ್ನು ಉಪಯೋಗಿಸಿದರೆ ಮತ್ತು ಅದು ಆ ಲಿಂಗದೇಹಕ್ಕೆ ಇಷ್ಟವಾಗದಿದ್ದಲ್ಲಿ ಆ ಲಿಂಗದೇಹವು ಆ ವ್ಯಕ್ತಿಗೆ ತೊಂದರೆಯನ್ನು ನೀಡುತ್ತದೆ. ಒಂದು ವೇಳೆ ಯಾವುದಾದರೂ ವಸ್ತುವಿನಲ್ಲಿ ಕೆಟ್ಟ ಶಕ್ತಿಯ ವಾಸ್ತವ್ಯವಿದ್ದಲ್ಲಿ ಅಂದರೆ ಆ ವಸ್ತುವು ಕೆಟ್ಟ ಶಕ್ತಿಗಳ ಹಿಡಿತದಲ್ಲಿದ್ದರೆ ಅದರ ಸಂಪರ್ಕಕ್ಕೆ ಬಂದಾಗ ಅದರಲ್ಲಿನ ಕಪ್ಪು ಶಕ್ತಿಯಿಂದಾಗಿ ಬಹಳ ತೊಂದರೆಯಾಗಬಹುದು.

ಅ೫. ಕೆಟ್ಟ ಶಕ್ತಿಗಳ ತೊಂದರೆಯಿರುವ ಜಾಗ: ಯಾವುದಾದರೊಂದು ಜಾಗವನ್ನು ಹಿಂಸಕ ಮಾರ್ಗದಿಂದ ಕಬಳಿಸಿದ್ದಲ್ಲಿ ಮತ್ತು ಆ ಸಂಘರ್ಷದಲ್ಲಿ ಆ ಜಾಗದ ಮಾಲೀಕನ ಮೃತ್ಯುವಾಗಿದ್ದಲ್ಲಿ, ಅವನ ಲಿಂಗದೇಹವು ಅದೇ ಜಾಗದಲ್ಲಿರುತ್ತದೆ. ಆ ಲಿಂಗದೇಹವು ಬೇರೆ ಯಾರಿಗೂ ಆ ಜಾಗದಲ್ಲಿ ಪ್ರವೇಶಿಸಲು ಬಿಡುವುದಿಲ್ಲ. ಆ ಜಾಗದ ಅಕ್ಕಪಕ್ಕದಲ್ಲಿ ತಿರುಗಾಡುವವರಿಗೂ ಆ ಲಿಂಗದೇಹವು ತೊಂದರೆ ನೀಡುತ್ತದೆ. ಇಂತಹ ಜಾಗವನ್ನು ‘ಕೆಟ್ಟ ಶಕ್ತಿಗಳ ಕಾಟವಿರುವ ಜಾಗ’ ಎಂದು ಹೇಳುತ್ತಾರೆ.

ಅ೬. ಕೆಟ್ಟ ಶಕ್ತಿಗಳ ತೊಂದರೆಯಿರುವ ವಾಸ್ತು : ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗದಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಆ ಜಾಗದಲ್ಲಿನ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಯ ಮೃತ್ಯುವಾದರೆ ಅವನ ಲಿಂಗದೇಹವು ಸಹ ಅದೇ ಜಾಗದಲ್ಲಿ ಅಲೆದಾಡುತ್ತಿರುತ್ತದೆ. ಇಂತಹ ವಾಸ್ತುವಿನಲ್ಲಿ ಹೊರಗಿನ ವ್ಯಕ್ತಿಗಳಿಗೂ ಅಮಾವಾಸ್ಯೆ, ಹುಣ್ಣಿಮೆ ಅಥವಾ ಮಧ್ಯರಾತ್ರಿಯ ಸಮಯದಲ್ಲಿ ಕಿರುಚುವುದು ಅಥವಾ ವಿಚಿತ್ರವಾದ ಧ್ವನಿಯು ಕೇಳಿಸುತ್ತದೆ. ಇಂತಹ ವಾಸ್ತುಗಳಿಗೆ ‘ಕೆಟ್ಟ ಶಕ್ತಿಗಳ ತೊಂದರೆ ಇರುವ ವಾಸ್ತು’ ಎಂದು ಹೇಳುತ್ತಾರೆ. ಅದೇ ರೀತಿ ಯಾರಾದರೊಬ್ಬರಿಗೆ ಯಾವುದಾದರೊಂದು ವಾಸ್ತುವಿನ ಬಗ್ಗೆ ಆಸಕ್ತಿ ಇದ್ದು, ಅವರು ಮೃತರಾದರೆ ಅವರ ಲಿಂಗದೇಹವು ಆ ಜಾಗದಲ್ಲಿ ವಾಸಿಸಲು ಬಂದವರಿಗೆ ತೊಂದರೆ ನೀಡುವ ಸಾಧ್ಯತೆ ಇರುತ್ತದೆ.

ಅ೭. ಶಾಪಗ್ರಸ್ತ ಮನೆಗಳು: ಹಿಂದಿನ ಕಾಲದಲ್ಲಿ ಸಾತ್ತ್ವಿಕ ಋಷಿಮುನಿಗಳು ಹಾಗೆಯೇ ಮಹಾಜ್ಞಾನಿ ಪಂಡಿತರೂ ಇದ್ದರು. ಅವರಿಗೆ ತುಂಬಾ ಆದರ-ಸತ್ಕಾರವನ್ನು ಮಾಡಲಾಗುತ್ತಿತ್ತು. ಅವರ ಆಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತಿತ್ತು. ಅದರಲ್ಲಿ ಏನಾದರೂ ತಪ್ಪುಗಳಾದರೆ ಆ ಋಷಿಗಳು ಸಿಟ್ಟಿನಿಂದ ಆ ಮನೆಗೆ ಶಾಪ ಕೊಡುತ್ತಿದ್ದರು, ಉದಾ: ‘ವಂಶವು ಸರ್ವನಾಶ ವಾಗಲಿ’ ಇದರಿಂದಾಗಿ ಆ ವಂಶದಲ್ಲಿನ ವ್ಯಕ್ತಿಯ ಅಪಮೃತ್ಯುವಾಗುವುದರಿಂದ ಜೀವನದಲ್ಲಿ ಅವರ ಇಚ್ಛೆಗಳು ಅತೃಪ್ತವಾಗುವುದರಿಂದ ಆ ಲಿಂಗದೇಹವು ಅ ಮನೆಯಲ್ಲಿಯೇ ಅಲೆದಾಡುತ್ತಿರುತ್ತದೆ. ತನ್ನ ಮುಕ್ತಿಗಾಗಿ ಆ ಮನೆಯವರಿಗೆ ತೊಂದರೆ ನೀಡುತ್ತಿರುತ್ತದೆ. ಆಗ ಅಂತಹ ಮನೆಗೆ ‘ಶಾಪಗ್ರಸ್ತ ಮನೆ’ ಎಂದು ಸಂಬೋಧಿಸುತ್ತಾರೆ.

ಅ೮. ಕೆಟ್ಟ ಶಕ್ತಿಗಳ ಕಾಟವಿರುವ ವಾಹನ: ಯಾವುದಾದರೊಬ್ಬ ವ್ಯಕ್ತಿಯ ಕೊಲೆ ಅಥವಾ ಅಪಮೃತ್ಯುವು ವಾಹನದಲ್ಲಿ ಆದರೆ ಅವನ ಲಿಂಗದೇಹವು ಆ ವಾಹನದಲ್ಲಿಯೇ ಅಲೆದಾಡುತ್ತಿರುತ್ತದೆ. ಪ್ರತಿಯೊಂದು ವಾಹನ ಅಪಘಾತದಲ್ಲಿ ಹೀಗೆಯೇ ಆಗುತ್ತದೆ ಎಂದೇನಿಲ್ಲ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ, ಪ್ರಾರಬ್ಧ, ಚಿತ್ತದಲ್ಲಿನ ಅಯೋಗ್ಯ ಸಂಸ್ಕಾರಗಳ ಪ್ರಮಾಣ, ಅಹಂಭಾವ ಮತ್ತು ಅವನು ತನ್ನ ಜೀವಿತಾವಧಿಯಲ್ಲಿ ಮಾಡಿದ ಕರ್ಮ ಮುಂತಾದ ವಿಷಯಗಳ ಮೇಲೆ ಇದು ಅವಲಂಬಿಸಿರುತ್ತದೆ.

ಯಾವುದಾದರೊಬ್ಬ ವ್ಯಕ್ತಿಗೆ ಯಾವುದಾದರೊಂದು ವಾಹನದಲ್ಲಿ ಪದೇ ಪದೇ ತೊಂದರೆಗಳಾಗುತ್ತಿದ್ದಲ್ಲಿ (ಉದಾ.ವಾಹನವನ್ನು ನಡೆಸುವಾಗ ಭಯವಾಗುವುದು, ವಾಹನದ ಒಳಗೆ ಅಥವಾ ಅಕ್ಕಪಕ್ಕದಲ್ಲಿ ಯಾರಾದರೂ ಸುಳಿದಾಡುತ್ತಿರುವಂತೆ ಭಾಸವಾಗುವುದು ಅಥವಾ ಅನಿರೀಕ್ಷಿತವಾಗಿ ವಾಹನದ ಮೇಲಿನ ನಿಯಂತ್ರಣವು ತಪ್ಪಿಹೋಗುವುದು) ಇಂತಹ ವಾಹನದ ಮೇಲೆ ಕೆಟ್ಟ ಶಕ್ತಿಗಳ ಹಿಡಿತವಿರುವ ಸಾಧ್ಯತೆಗಳು ತುಂಬಾ ಇರುತ್ತವೆ.

ಅ೯. ಕೆಟ್ಟ ಶಕ್ತಿಗಳ ಕಾಟವಿರುವ ರಸ್ತೆಗಳು: ವ್ಯಕ್ತಿಯು ಯಾವ ಸ್ಥಳದಲ್ಲಿ ಅಪಘಾತಕ್ಕೊಳಗಾಗಿ ಸಾಯುತ್ತಾನೆಯೋ ಅದೇ ಸ್ಥಳದಲ್ಲಿ ಅವನ ಲಿಂಗದೇಹವು ಅಲೆದಾಡುತ್ತಿರುತ್ತದೆ. ಅಪಘಾತದಲ್ಲಿ ತನಗಾದ ಮೃತ್ಯುವಿನ ಸಿಟ್ಟಿನಿಂದ ಅವನು ಇತರ ವಾಹನಗಳಿಗೂ ಅಪಘಾತವಾಗುವಂತೆ ಮಾಡುತ್ತಾನೆ. ಈ ರೀತಿ ಅಪಘಾತದಲ್ಲಿ ಮೃತರಾದ ವ್ಯಕ್ತಿಗಳ ಲಿಂಗದೇಹಗಳು ಅಲ್ಲಿಯೇ ಇರುತ್ತವೆ. ಇದರಿಂದಾಗಿ ಆ ಸ್ಥಳದಲ್ಲಿ ಅಂತಹ ಲಿಂಗದೇಹಗಳ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳಾಗುತ್ತವೆ. ಇಂತಹ ಸ್ಥಳಗಳಲ್ಲಿ ಜಾತ್ಯತೀತ ಸರಕಾರದವರು ‘ಅಪಘಾತ ವಲಯ’ ಎಂದು ಸುಮ್ಮನೆ ಒಂದು ಫಲಕವನ್ನು ಹಾಕಿಬಿಡುತ್ತಾರೆ; ಆದರೆ ಅಲ್ಲಿನ ಲಿಂಗದೇಹಗಳ ಮುಕ್ತಿಗಾಗಿ ಏನೂ ಮಾಡುವುದಿಲ್ಲ! ಈ ಲಿಂಗದೇಹಗಳಿಗೆ ಆ ಸ್ಥಾನದ ಆಸಕ್ತಿಯಿಂದ ಮುಕ್ತಗೊಳಿಸಲು ಎಲ್ಲಿಯವರೆಗೆ ಆಧ್ಯಾತ್ಮಿಕ ಪರಿಹಾರವನ್ನು ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಅಪಘಾತಗಳನ್ನು ತಡೆಯಲು ಸ್ಥೂಲದಲ್ಲಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ. ಆದುದರಿಂದಲೇ ಕೆಲವು ಕಡೆಗಳಲ್ಲಿ ರಸ್ತೆಯು ನೇರವಾಗಿದ್ದರೂ ಮತ್ತು ‘ಅಪಘಾತ ವಲಯ’ ಎಂಬ ಸೂಚನಾ ಫಲಕವಿದ್ದರೂ ಆ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತವೆ.

ಕೆಲವು ಜನರು ಅಪಘಾತವಾದ ಸ್ಥಳದ ಹತ್ತಿರ ಮೃತ ವ್ಯಕ್ತಿಯ ಸ್ಮರಣಾರ್ಥ ಸಣ್ಣದಾದ ಸಾಂಕೇತಿಕ ಚಿಹ್ನೆಯನ್ನು ಇಡುತ್ತಾರೆ. ಇದರಿಂದಲೂ ಮೃತವ್ಯಕ್ತಿಯ ಸೂಕ್ಷ್ಮದೇಹವು ಈ ಸ್ಥಳದ ಹತ್ತಿರ ಸುಳಿದಾಡುತ್ತಿರುತ್ತದೆ. ಇದರಿಂದಾಗಿ ಆ ಲಿಂಗದೇಹದ ಕರ್ಮಪ್ರಾರಬ್ಧಕ್ಕನುಸಾರ ಮುಂದಿನ ಲೋಕಗಳಿಗೆ ಹೋಗುವ ಗತಿಯು ಕುಂಠಿತವಾಗುತ್ತದೆ. ಇದರ ಪರಿಣಾಮದಿಂದಾಗಿ ಆ ಲಿಂಗದೇಹವು ತೊಂದರೆಗಳನ್ನೇ ಅನುಭವಿಸುತ್ತಿರುತ್ತದೆ.

ಅ೧೦. ಪೊಲೀಸು ಠಾಣೆ: ಪೊಲೀಸು ಠಾಣೆಯಲ್ಲಿ ಯಾತನೆಗೊಳಗಾಗಿ ಮೃತ್ಯುವಾದ ಅತೃಪ್ತ ಲಿಂಗದೇಹಗಳು ತುಂಬಾ ಪ್ರಮಾಣದಲ್ಲಿ ಅಲೆದಾಡುತ್ತಿರುತ್ತವೆ. ಪೊಲೀಸು ಠಾಣೆಗೆ ಹೋದಾಗ ಒಳ್ಳೆಯದೆನಿಸದಿರಲು ಇದು ಸಹ ಒಂದು ಕಾರಣವಾಗಿದೆ.

ಅ೧೧. ಕಾರಾಗೃಹ: ಅಪರಾಧ ಮಾಡದಿರುವಾಗಲೂ ಗಲ್ಲುಶಿಕ್ಷೆಗೆ ಒಳಗಾದ ಲಿಂಗದೇಹಗಳು ಇಲ್ಲಿ ಇರುತ್ತವೆ.

ಅ೧೨. ಆಸ್ಪತ್ರೆಗಳು: ತುಂಬಾ ತೊಂದರೆಗಳಿಂದ ಮೃತರಾದ ಅನೇಕ ರೋಗಿಗಳ ಲಿಂಗದೇಹಗಳು ಆಸ್ಪತ್ರೆಗಳಲ್ಲಿ ಅಲೆದಾಡುತ್ತಿರುತ್ತವೆ. ಲಿಂಗದೇಹಗಳು ಮತ್ತು ಕೆಟ್ಟ ಶಕ್ತಿಗಳಾಗಿ ರೂಪಾಂತರಿತವಾದ ಲಿಂಗದೇಹಗಳ ಅಸ್ತಿತ್ವದಿಂದಾಗಿ ಅಲ್ಲಿನ ವಾತಾವರಣವು ತೊಂದರೆದಾಯಕವಾಗುತ್ತದೆ. ಇದರ ಪರಿಣಾಮವು ಅಲ್ಲಿನ ರೋಗಿಗಳು, ಅವರ ಶುಶ್ರೂಷೆ ಮಾಡುವವರು ಮತ್ತು ಅವರನ್ನು ನೋಡಲು ಬರುವಂತಹ ಸಂಬಂಧಿಕರ ಮೇಲೂ ಆಗುತ್ತದೆ. ಅದೇ ರೀತಿ ಇವರೆಲ್ಲರಿಗೂ ಮತ್ತು ಆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೂ ಕೆಟ್ಟ ಶಕ್ತಿಗಳ ತೊಂದರೆಯು ಆಗಬಹುದು ಅಥವಾ ಅವರು ಕೆಟ್ಟ ಶಕ್ತಿಗಳ ಹಿಡಿತಕ್ಕೊಳಗಾಗಬಹುದು. ಇಂತಹ ತೊಂದರೆದಾಯಕ ವಾತಾವರಣದಿಂದಾಗಿ ರೋಗಿಗಳಿಗೆ ಗುಣಮುಖರಾಗಲು ಹೆಚ್ಚಿನ ಕಾಲಾವಧಿಯು ಬೇಕಾಗುತ್ತದೆ.

ಅ೧೩. ಸ್ಮಶಾನಭೂಮಿ: ಕೆಲವು ವ್ಯಕ್ತಿಗಳ ಅಂತ್ಯಸಂಸ್ಕಾರವು ಸರಿಯಾದ ರೀತಿಯಲ್ಲಿ ಆಗಿರುವುದಿಲ್ಲ. ಅಂತಹ ವ್ಯಕ್ತಿಗಳ ಲಿಂಗದೇಹಗಳು ಸ್ಮಶಾನ ಭೂಮಿಯಲ್ಲಿಯೇ ಅಲೆದಾಡುತ್ತಿರುತ್ತವೆ. ಇಂತಹ ಸ್ಥಳಕ್ಕೆ ಹೋದಾಗ ಬಹಳಷ್ಟು ಜನರಿಗೆ ಅಸ್ವಸ್ಥವೆನಿಸುವುದು, ಶರೀರವು ಭಾರವೆನಿಸುವುದು, ಆಯಾಸವೆನಿಸುವುದು ಮುಂತಾದ ತೊಂದರೆಗಳಾಗುತ್ತವೆ. ಆದರೆ ಬಹಳಷ್ಟು ಸಲ ‘ಈ ಮೇಲಿನ ತೊಂದರೆಗಳು ಮಾನಸಿಕ ಕಾರಣದಿಂದ ಆದವು’ ಎಂದು ಜನರು ತಿಳಿಯುತ್ತಾರೆ.

ಅ೧೪. ಶಿವನ ದೇವಸ್ಥಾನದ ಪರಿಸರ: ಭಕ್ತರ ಸೇವೆ ಮಾಡಬೇಕೆಂದು ಮತ್ತು ಶಿವತತ್ತ್ವವನ್ನು ಪಡೆಯಲು ಒಳ್ಳೆಯ ಆಧ್ಯಾತ್ಮಿಕ ಮಟ್ಟವಿರುವ ಶಿವಭಕ್ತ ಭೂತಗಳು ಅಲ್ಲಿರುತ್ತವೆ. ವ್ಯಕ್ತಿಗಳು ಕೆಟ್ಟ ಶಕ್ತಿಗಳ ತೊಂದರೆ ಇರುವವರ ಸಂರ್ಪಕದಲ್ಲಿ ಬಂದಾಗ ಅವರಿಗೆ ತೊಂದರೆಯಾಗುವ ಅಥವಾ ಅವುಗಳ ಹಿಡಿತಕ್ಕೊಳಗಾಗುವ ಸಾಧ್ಯತೆಗಳಿರುವುದು

ಕೆಲವೊಮ್ಮೆ ನಾವು ಒಬ್ಬ ವ್ಯಕ್ತಿ, ಒಂದು ಸ್ಥಳ ಅಥವಾ ಒಂದು ವಸ್ತು ಇವುಗಳ ಸಂಪರ್ಕದಲ್ಲಿ ಬಂದಾಗ ನಮಗೆ ಪದೇ ಪದೇ ತೊಂದರೆಗಳಾಗುತ್ತವೆ ಮತ್ತು ಈ ತೊಂದರೆಗಳ ಕಾರಣವು ನಮಗೆ ತಿಳಿಯುವುದಿಲ್ಲ. ಇಂತಹ ಸಮಯದಲ್ಲಿ ಆ ವ್ಯಕ್ತಿ, ಸ್ಥಳ ಅಥವಾ ವಸ್ತುಗಳಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುವ ಅಥವಾ ಅವುಗಳನ್ನು ಕೆಟ್ಟ ಶಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಸಾಧ್ಯತೆಗಳಿರುತ್ತದೆ. ಆ ಸಮಯದಲ್ಲಿ ಆಗುವ ತೊಂದರೆಗಳು ಮುಂದಿನಂತಿರಬಹುದು.

೧. ಹೆದರಿಕೆಯಾಗುವುದು.
೨. ಇನ್ನೊಬ್ಬರ ಅಸ್ತಿತ್ವದ ಅರಿವಾಗುವುದು.
೩. ತನ್ನಲ್ಲಿರುವ ಪ್ರಾಣಶಕ್ತಿಯನ್ನು ಯಾರೋ ಹೀರಿಕೊಳ್ಳುತ್ತಿರುವುದರ ಅರಿವಾಗುವುದು.
೪. ಯಾವುದೇ ಸ್ಥೂಲ ಕಾರಣಗಳಿಲ್ಲದೇ ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುವುದು. 

ಮಾನಸಿಕವಾಗಿ ಕುಗ್ಗಿದ ಮತ್ತು ಆಧ್ಯಾತ್ಮಿಕ ಮಟ್ಟವು ಕಡಿಮೆ ಇರುವ ಅಥವಾ ಮೊದಲಿನಿಂದಲೂ ಕೆಟ್ಟ ಶಕ್ತಿಗಳ ತೊಂದರೆಯಿರುವವರು, ತೊಂದರೆಯಿರುವ ವ್ಯಕ್ತಿ, ವಸ್ತು ಅಥವಾ ಸ್ಥಳ ಇವುಗಳ ಸಂರ್ಪಕದಲ್ಲಿ ಬಂದರೆ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆಗಳನ್ನು ಕೊಡುತ್ತವೆ ಅಥವಾ ಅವನನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತವೆ.  ಆರನೆಯ ಇಂದ್ರಿಯ ಜಾಗೃತವಾದವರು ಅಥವಾ ಸೂಕ್ಷ್ಮದ ವಿಷಯಗಳು ತಿಳಿದವರೇ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಅಸ್ತಿತ್ವದ ಬಗ್ಗೆ ಹೇಳಬಹುದು.

ಕೆಟ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಮಾಡಬೇಕಾದ ಉಪಾಯಗಳು
ನಾವು ಕೆಟ್ಟ ಶಕ್ತಿಗಳ ವಿಷಯಗಳಿಂದ ದೂರವಿದ್ದರೆ ನಮಗೆ ಕೆಟ್ಟ ಶಕ್ತಿಗಳ ತೊಂದರೆಯೇ ಆಗುವುದಿಲ್ಲ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಕೆಟ್ಟ ಶಕ್ತಿಗಳ ಅಸ್ತಿತ್ವದ ಬಗ್ಗೆ ಮತ್ತು ‘ಅವುಗಳಿಂದ ರಕ್ಷಣೆಯನ್ನು ಪಡೆಯುವುದರ’ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕವಾಗಿದೆ. ಇದರ ಬಗೆಗಿನ ಅಜ್ಞಾನದಿಂದ ಅಥವಾ ಉಷ್ಟ್ರಪಕ್ಷಿಯಂತಹ ವೃತ್ತಿಯಿಂದ ಕೆಟ್ಟ ಶಕ್ತಿಗಳಿಂದ ನಮಗೆ ಹಾನಿಯಾಗುತ್ತದೆ. ಅಂದರೆ ‘ಕೆಟ್ಟ ಶಕ್ತಿಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದರ ಮಾಹಿತಿ ಇಲ್ಲದಿರುವುದರಿಂದ ಮತ್ತು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನೂ ಮಾಡದಿರುವುದರಿಂದ ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗವನ್ನು ಪ್ರವೇಶಿಸುವ ಮೊದಲು ‘ನನ್ನ ರಕ್ಷಣೆಯಾಗಲಿ’ ಎಂದು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ಸತತ ನಾಮಜಪ ಮಾಡುತ್ತಿದ್ದರೆ ನಮ್ಮ ಸುತ್ತಲೂ ಈಶ್ವರನ ರಕ್ಷಾಕವಚವು ನಿರ್ಮಾಣವಾಗುತ್ತದೆ.


ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಮಾಡಬೇಕಾದ ಆಧ್ಯಾತ್ಮಿಕ ಪರಿಹಾರೋಪಾಯಗಳು ಮತ್ತು ನಾಮಜಪದ ಬಗ್ಗೆ ಇದೇ ಬ್ಲಾಗ್‌ನ ವಿವಿಧ ಅಂಕಣಗಳಲ್ಲಿ ಓದಿ ಮತ್ತು ಅದೇ ರೀತಿ ಸಾಧನೆಯನ್ನು ಮಾಡಿ.

ಸಂಬಂಧಿತ ವಿಷಯಗಳು
ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ?
ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

3 comments:

  1. illi prakatavaguttiruva ella lekhanagalu satya satya satya ..... yakendare nanna anubhavakke bandantha vishayagale....

    ReplyDelete
  2. Havudu. Navellaru dharma marga dalli hogabeku. Illa andre intaha kalikaladalli intaha vishaya telukolladu mattu artha madukondi palisavudu tumba kashta anasabovudu

    Dharmo rakshati Rakshitaha

    ReplyDelete

Note: only a member of this blog may post a comment.