ಶ್ರೀ ಹಾಸನಾಂಬಾ ದೇವಿ


ಹಾಸನಾಂಬಾ ದೇವಿಯ ಇತಿಹಾಸ

ಸುಮಾರು ೧೨ ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು.

ದೇವಿಯರು ನೆಲೆಸಿದ ಪುರಾಣ ಕಥೆ

ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವೀ, ವಹಾಹಿಣಿ, ಇಂದ್ರಾಣಿ ಮತ್ತು ಚಾಮುಂಡಿ ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ, ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ, ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿರುವರು. ಬ್ರಾಹ್ಮದೇವಿಯು ಹಾಸನದಿಂದ ಸುಮಾರು ೩೫ ಕಿ.ಮೀ. ದೂರದಲ್ಲಿರುವ ಕೆಂಚಮ್ಮ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ.

ಕ್ಷೇತ್ರ ಮಹಿಮೆ

ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂದು ಹೆಸರಿತ್ತು. ದೇವಿಯರು ನೆಲೆಸಿದ ನಂತರ ಹಾಸನ ಎಂಬ ಹೆಸರು ಬಂದಿತು. ದೇಶವಿದೇಶಗಳಲ್ಲಿ ನೆಲೆಸಿರುವ ಪ್ರತಿಯೊಂದು ದೇವಸ್ಥಾನದಂತೆ ಇಲ್ಲಿ ಪ್ರತಿದಿನ ಭಕ್ತರಿಗೆ ದೇವಿಯರ ದರ್ಶನ ಭಾಗ್ಯವು ಇರುವುದಿಲ್ಲ. ವರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ಬಾಗಿಲು ತೆಗೆದಾಗ ದೇವಿಯರ ದರ್ಶನದ ಲಾಭವಾಗುತ್ತದೆ.
ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ಬಾಗಿಲನ್ನು (ವರ್ಷಕೊಮ್ಮೆ) ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮರುದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ.

ದೇವಸ್ಥಾನದ ವೈಶಿಷ್ಟ್ಯ

ಈ ಸಂದರ್ಭದಲ್ಲಿ ಇರುವ ಇನ್ನೊಂದು ವೈಶಿಷ್ಟ್ಯವೇನೆಂದರೆ ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ಆಕಸ್ಮಿಕ ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ. ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹತ್ಯೆಗೀಡಾದ ಸಂದರ್ಭದಲ್ಲಿ ಈ ಆಕಸ್ಮಿಕ ಸಂಭವಿಸಿತ್ತು.

ಸುಮಾರು ೧೦೦ ವರ್ಷಗಳ ಹಿಂದೆ ಈ ದೇವರ ಎದುರು ೩ ಬುಟ್ಟಿಯಲ್ಲಿ ಅನ್ನವನ್ನು ಮಾಡಿ ಇಡಲಾಗುತ್ತಿತ್ತು. ಆ ಸಮಯದಲ್ಲಿ ಅನ್ನವು ಹಾಳಾಗದೆ ಬಿಸಿಯಾಗಿರುತ್ತಿತ್ತು ಮತ್ತು ಅದನ್ನೇ ದೇವರ ಪ್ರಸಾದವೆಂದು ಬಡಿಸಲಾಗುತ್ತಿತ್ತು. ಈಗ ಆ ಪದ್ಧತಿಯೂ ಕ್ರಮೇಣ ನಿಂತುಹೋಯಿತು.

ಈ ದೇವಿಯ ಭಾವಚಿತ್ರವನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ. ಕಾರಣ ಮನೆಯಲ್ಲಿ ಮಡಿಮೈಲಿಗೆ ಇಲ್ಲದಿದ್ದಲ್ಲಿ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಊರಿನ ಯಾವುದೇ ಮನೆಯಲ್ಲಿ ಈ ದೇವಿಯ ಭಾವಚಿತ್ರವಿಲ್ಲ.

ದೇವಿಕೆರೆಯ ವೈಶಿಷ್ಟ್ಯ

ನಗರದ ಮಧ್ಯಭಾಗದಲ್ಲಿ ಹಾಗೂ ದೇವಸ್ಥಾನದಿಂದ ೧೦೦ ಮೀ. ದೂರದಲ್ಲಿರುವ ದೇವಿಗೆರೆಯಲ್ಲಿ ಮೂವರು ದೇವಿಯರು ವಾಸವಾಗಿದ್ದಾರೆ. ಈ ದೇವಿಯರನ್ನು ಪ್ರತಿದಿನ ಭೇಟಿಯಾಗಲು ದೇವಸ್ಥಾನದಿಂದ ಅಕ್ಕಂದಿರು ದೇವಿಗೆರೆಗೆ ಬರುತ್ತಾರೆ ಮತ್ತು ಈ ದೇವಿಗೆರೆಯಲ್ಲಿ ಪ್ರತಿನಿತ್ಯ ಸ್ನಾನ ಮಾಡುತ್ತಾರೆ ಹಾಗೂ ದೇವಸ್ಥಾನದಲ್ಲಿ ಮಾಡಿದ ಪೂಜೆಯ ನೀರಿನ ಅಭಿಷೇಕವು ಈ ದೇವಿಗೆರೆಯಲ್ಲಿ ಬಂದು ಬೀಳುತ್ತದೆ.

ಕಲ್ಲಾದ ಸೊಸೆ

ಓರ್ವ ಸೊಸೆಗೆ ಅತ್ತೆಯು ಬಹಳಷ್ಟು ಕಷ್ಟ ಕೊಡುತ್ತಿದ್ದಳು. ಆ ಸೊಸೆಯು ಪ್ರತಿನಿತ್ಯ ದೇವಸ್ಥಾನಕ್ಕೆ ಬಂದು ದೇವರ ಬಳಿ ಮಾತನಾಡುತ್ತಿದ್ದಳು. ದೇವತೆಯರು ಅವಳಿಗೆ ಪ್ರತ್ಯಕ್ಷರಾಗಿ ಮಾತನಾಡಿಸುತ್ತಿದ್ದರು ಮತ್ತು ಈ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ದೇವಿಯರು ಸೊಸೆಗೆ ಹೇಳಿದ್ದರು. ಒಂದು ದಿನ ಸೊಸೆ ಅಮ್ಮ ನವರ ದರ್ಶನ ಪಡೆಯಲು ಹೊರಟಾಗ, ಅತ್ತೆಯು ಅವಳನ್ನು ಹಿಂಬಾಲಿಸಿ, ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತು ಧ್ಯಾನ ಮಗ್ನಳಾಗಿದ್ದ ಸೊಸೆಯನ್ನು ಕಂಡು ಕೋಪದಿಂದ ಅತ್ತೆಯು ಮನೆಯ ಕೆಲಸ ಕಾರ್ಯಗಳಿಗಿಂತ ಅಮ್ಮನವರ ದರ್ಶನ ಹೆಚ್ಚಾಯಿತೆ! ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಟ್ಟಿದಾಗ ನೋವನ್ನು ತಾಳಲಾರದೆ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ಭಕ್ತಳ ಕಷ್ಟವನ್ನು ನೋಡಿ ಅವಳ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆಯು ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸಲು ಸಿಗುವುದು ಮತ್ತು ಆ ಕಲ್ಲು ವರ್ಷದಿಂದ ವರ್ಷಕ್ಕೆ ಭತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ ಮತ್ತು ಅದು ಸಂಪೂರ್ಣ ಚಲಿಸಿ ದೇವಿಯರ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ಹೇಳುತ್ತಾರೆ.

(ಆಧಾರ : ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

2 comments:

  1. I LIKE THIS STORY SIR , REALLY NICE , THANK YOU SIR FOR YOUR INFORMATION ... :) :) :)

    ReplyDelete

Note: only a member of this blog may post a comment.