ಉಟಣೆ (ಸುಗಂಧಿ ಚೂರ್ಣ) ಹಚ್ಚುವುದರ ಮಹತ್ತ್ವ ಮತ್ತು ಬಳಸುವ ಸರಿಯಾದ ಪದ್ಧತಿ
ದೀಪಾವಳಿಯಲ್ಲಿ ನರಕಚತುರ್ದಶಿಯ ದಿನ ಅಭ್ಯಂಗ ಸ್ನಾನ ಮಾಡುವಾಗ ಸುಗಂಧಿ ತೈಲ ಮತ್ತು ಉಟಣೆಯನ್ನು ಹಚ್ಚಲಾಗುತ್ತದೆ. ಆದರೆ ಈ ಪದ್ಧತಿಯು ಕೇವಲ ದೀಪಾವಳಿಯ ೪ ದಿನಗಳಿಗೆ ಮಾತ್ರ ಸೀಮಿತವಾಗಿರದೆ, ಚಳಿಗಾಲದ ದಿನಗಳಲ್ಲಿ ಪ್ರತಿದಿನವೂ ಮೈಗೆ ಸ್ವಲ್ಪವಾದರೂ ಎಣ್ಣೆ ಹಚ್ಚಿ, ಸಾಬೂನಿನ ಬದಲು ಉಟಣೆಯನ್ನು ಬಳಸಿ ಸ್ನಾನ ಮಾಡುವುದು ಅಪೇಕ್ಷಿತವಾಗಿದೆ. ವರ್ಷವಿಡೀ ಹೀಗೆ ಮಾಡಿದರೂ ಯಾವುದೇ ತೊಂದರೆಯಿಲ್ಲ. ಉಟಣೆಯನ್ನು ಯಾವ ರೀತಿಯಾಗಿ, ಯಾವಾಗ, ಹೇಗೆ ಮತ್ತು ಯಾರು ಬಳಸಬೇಕು ಎಂಬ ಬಗ್ಗೆ ಆಯುರ್ವೇದದ ದೃಷ್ಟಿಕೋನದಿಂದ ಮಹತ್ತ್ವದ ಮಾಹಿತಿ ಇಲ್ಲಿದೆ:
೧. ಅಭ್ಯಂಗ ಮತ್ತು ಉಟಣೆಯನ್ನು ಯಾವಾಗ ಬಳಸಬೇಕು ?
ಅಭ್ಯಂಗಕ್ಕಾಗಿ ಎಳ್ಳೆಣ್ಣೆ ಅಥವಾ ಯಾವುದಾದರೂ ವಾತಶಾಮಕ ಸಿದ್ಧ ತೈಲವನ್ನು ಬಳಸಬಹುದು. ಚಳಿಗಾಲದಲ್ಲಿ ಎಣ್ಣೆಯನ್ನು ಉಗುರುಬೆಚ್ಚಗೆ ಮಾಡಿ ಹಚ್ಚಬೇಕು. ಸಣ್ಣ ಮಕ್ಕಳಿಗೆ ವಿಶೇಷವಾಗಿ ‘ಬಲಾ ತೈಲ’ ಅಥವಾ ‘ಚಂದನಬಲಾಲಾಕ್ಷಾದಿ ತೈಲ’ವನ್ನು ಹಚ್ಚುವುದು ಶ್ರೇಯಸ್ಕರ. ಸಂಪೂರ್ಣ ಶರೀರಕ್ಕೆ ಕನಿಷ್ಠ ೫ ರಿಂದ ೧೦ ನಿಮಿಷಗಳವರೆಗೆ, ವಿಶೇಷವಾಗಿ ತಲೆ, ಕಿವಿ, ಕೈ ಮತ್ತು ಕಾಲುಗಳಿಗೆ ಚೆನ್ನಾಗಿ ಅಭ್ಯಂಗ ಮಾಡಿ, ನಂತರ ಉಟಣೆಯನ್ನು ಹಚ್ಚಬೇಕು.
೨. ಯಾವ ರೀತಿಯ ಉಟಣೆಯನ್ನು ಆರಿಸಿಕೊಳ್ಳಬೇಕು ?
ಚಳಿಗಾಲದಲ್ಲಿ ಹಚ್ಚುವ ಉಟಣೆಯು ಸ್ನಿಗ್ಧವಾಗಿರಬೇಕು ಮತ್ತು ತ್ವಚೆಗೆ ಪೋಷಣೆ ನೀಡುವ ಸಸ್ಯಗಳ (ಮೂಲಿಕೆಗಳ) ಮಿಶ್ರಣದಿಂದ ಮಾಡಲ್ಪಟ್ಟಿರಬೇಕು. ಇದು ಕೇವಲ ಕೃತಕ ಸುಗಂಧವನ್ನು ಹೊಂದಿರುವುದಕ್ಕಿಂತ ಔಷಧೀಯ ಗುಣಗಳುಳ್ಳದ್ದಾಗಿರಬೇಕು. ಉಟಣೆಯಲ್ಲಿ ಯಾವುದೇ ರೀತಿಯ ಅತ್ತರು ಅಥವಾ ರಾಸಾಯನಿಕಗಳು ಬೆರೆತಿರಬಾರದು. ತ್ವಚೆಗೆ ಕಾಂತಿಯನ್ನು ನೀಡುವ ಶುದ್ಧ ವನಸ್ಪತಿ ಚೂರ್ಣಗಳಿಂದ ತಯಾರಿಸಿದ ಇಂತಹ ನೈಸರ್ಗಿಕ ಉಟಣೆಯನ್ನು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಸಬಹುದು. ವೈದ್ಯರಿಂದ ಪಡೆದ ಉಟಣೆಯು ಹೆಚ್ಚು ಹಿತಕರ.
೩. ಉಟಣೆಯನ್ನು ಹೇಗೆ ಬಳಸಬೇಕು ?
ಉಟಣೆಯು ಅತೀ ನುಣ್ಣಗಾಗಿರಲು ಅದನ್ನು ವಸ್ತ್ರಗಾಲಿತ ಮಾಡಿರಬೇಕು (ಬಟ್ಟೆಯಲ್ಲಿ ಸೋಸಿರಬೇಕು) ಅಥವಾ ಸಣ್ಣ ಜರಡಿಯಲ್ಲಿ ಜರಡಿಸಿರಬೇಕು. ಇದರಿಂದ ತ್ವಚೆಗೆ ಉಜ್ಜುವಾಗ ಗಾಯವಾಗುವುದಿಲ್ಲ. ಎಣ್ಣೆ ಹಚ್ಚಿದ ಅಂಗಾಂಗಗಳ ಮೇಲೆ ಉಟಣೆಯ ಪುಡಿಯನ್ನು ಹರಡಿ, ಹಗುರವಾಗಿ ಉಜ್ಜಿ ನಂತರ ಸ್ನಾನ ಮಾಡಬೇಕು. ಎಣ್ಣೆ ಹಚ್ಚದೇ ಒಣ ತ್ವಚೆಯ ಮೇಲೆ ಉಟಣೆಯನ್ನು ಜೋರಾಗಿ ಉಜ್ಜಬಾರದು. ಹಾಗೆಯೇ ಎಣ್ಣೆ ಮತ್ತು ಉಟಣೆ ಹಚ್ಚಿದ ಮೇಲೆ ಮತ್ತೆ ಸಾಬೂನು ಹಚ್ಚುವ ತಪ್ಪು ಮಾಡಬಾರದು. ಎಣ್ಣೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು, ಉಟಣೆ ಲೇಪಿಸಿ, ಬಿಸಿ ನೀರಿನಿಂದಲೇ ಸ್ನಾನ ಮಾಡಬೇಕು.
೪. ಉಟಣೆಯನ್ನು ಯಾರು ಬಳಸಬಾರದು ? (ಮುನ್ನೆಚ್ಚರಿಕೆಗಳು)
ಕೆಲವು ನಿರ್ದಿಷ್ಟ ದೈಹಿಕ ಸ್ಥಿತಿಗಳಲ್ಲಿ ಉಟಣೆಯನ್ನು ಹಚ್ಚುವುದನ್ನು
ತಪ್ಪಿಸಬೇಕು:
- ಚರ್ಮದಲ್ಲಿ ಉರಿ ಅಥವಾ ಅತಿಯಾದ ಸಂವೇದನೆ ಇದ್ದರೆ.
- ತ್ವಚೆಯು ಅತೀ ತೆಳುವಾಗಿದ್ದು, ಬೇಗನೆ ಕೆಂಪಾಗುವ ಸ್ವಭಾವವಿದ್ದರೆ ಅಥವಾ ‘ಸನ್ ಬರ್ನ್’
ಆಗಿದ್ದರೆ.
- ಇತ್ತೀಚೆಗಷ್ಟೇ ಜ್ವರ ಬಂದು ಹೋಗಿದ್ದರೆ, ಮೈಮೇಲೆ ಗಂಧೆಗಳು (hives) ಎದ್ದಿದ್ದರೆ.
- ಚರ್ಮದ ಆಟೋಇಮ್ಯೂನ್ (ಸ್ವಯಂ ನಿರೋಧಕ) ವ್ಯಾಧಿಗಳು, ಚರ್ಮರೋಗ, ಚರ್ಮದ ನಿರ್ದಿಷ್ಟ ಉರಿಯೂತ
(ಸೆಲ್ಯುಲೈಟಿಸ್), ಬಿರುಕುಗಳು, ತೆರೆದ
ಹುಣ್ಣುಗಳು, ಸ್ರಾವ ಇರುವ ಅಥವಾ ವಾಸಿಯಾಗದ ಗಾಯಗಳಿದ್ದರೆ
(ವೆರಿಕೋಸ್ ಅಲ್ಸರ್).
- ವಯಸ್ಸಾದವರಲ್ಲಿ ತ್ವಚೆ ತುಂಬಾ ತೆಳುವಾಗಿದ್ದರೆ ಅಥವಾ
ಕಾಲಿನಲ್ಲಿ ನರಗಳು ಉಬ್ಬಿಕೊಂಡಿರುವ (ವೆರಿಕೋಸಿಟಿ) ಜಾಗಗಳ ಮೇಲೆ ಉಟಣೆ ಹಚ್ಚಬಾರದು.
- ಸಣ್ಣ ಮಕ್ಕಳಿಗೆ ಮತ್ತು ಹಿರಿಯರಿಗೆ ಹೆಚ್ಚು ಎಣ್ಣೆಯನ್ನು ಹಚ್ಚಿ, ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಸೌಮ್ಯ ಉಟಣೆಯನ್ನು ಬಳಸಬೇಕು.
ಹಬ್ಬವೆಂಬ ಕಾರಣಕ್ಕೆ ಹಠ ಮಾಡಿ ಇಂತಹ ಸ್ಥಿತಿಗಳಲ್ಲಿ ಉಟಣೆ ಬಳಸಬಾರದು. ವ್ಯಾಧಿಯು ನಿಯಂತ್ರಣದಲ್ಲಿದ್ದರೂ, ಲಕ್ಷಣಗಳಿಗನುಸಾರ ವೈದ್ಯರ ಸಲಹೆ ಪಡೆದೇ ಮುಂದುವರಿಯಬೇಕು.
೫. ಉಟಣೆ ಹಚ್ಚುವುದರಿಂದ ಆಗುವ ಲಾಭಗಳು
ಸಾಬೂನಿನ ಬದಲು ಉಟಣೆ ಮತ್ತು ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವು ಒಣಗುವುದಿಲ್ಲ. ತ್ವಚೆಯ ಸ್ವಾಭಾವಿಕ ಜಿಡ್ಡು (ಸ್ನಿಗ್ಧತೆ) ಹಾಗೇ ಉಳಿದು ಚರ್ಮವು ಮೃದುವೂ, ಕಾಂತಿಯುತವೂ ಆಗುತ್ತದೆ. ಚರ್ಮದ ಮೇಲೆ ಬೇಗನೆ ನೆರಿಗೆಗಳು (ಸುಕ್ಕುಗಳು) ಬೀಳುವುದು ಮತ್ತು ಚರ್ಮ ಕಳೆಗುಂದುವುದು ತಪ್ಪುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ಕೇವಲ ಚಳಿಗಾಲದಲ್ಲಿ ಮಾತ್ರವಲ್ಲದೆ, ವರ್ಷಪೂರ್ತಿ ತ್ವಚೆಯ ಆರೋಗ್ಯವು ಅತ್ಯುತ್ತಮವಾಗಿರುತ್ತದೆ.
– ವೈದ್ಯೆ (ಸೌ.) ಸ್ವರಾಲಿ
ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.
No comments:
Post a Comment
Note: only a member of this blog may post a comment.