ದಸರಾ ಶಬ್ದದ ವ್ಯುತ್ಪತ್ತಿ
ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ.
ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡಬೇಕಾಗಿರುತ್ತದೆ.
ಸೀಮೋಲ್ಲಂಘನ ಅಂದರೇನು? ಯಾವಾಗ ಮಾಡಬೇಕು?
ಅಪರಾಹ್ನ ಕಾಲದಲ್ಲಿ (ಮಧ್ಯಾಹ್ನ, ೩ ನೆಯ ಪ್ರಹರದಲ್ಲಿ) ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. (ಶಮೀಯನ್ನು ಅಪರಾಜಿತಾ ಮತ್ತು ಮಂದಾರವನ್ನು ಅಶ್ಮಂತಕ ಎಂದೂ ಕರೆಯುತ್ತಾರೆ. ಇವೆರಡರ ಅರ್ಥ ಶತ್ರುವಿನ ನಾಶ ಮಾಡುವವನು ಎಂದಾಗಿದೆ.)
ಶಮೀಪೂಜೆ: ಮುಂದಿನ ಶ್ಲೋಕದೊಂದಿಗೆ ಶಮೀಪೂಜೆಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ|
ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ||
ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ|
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ||
ಅರ್ಥ: ಶಮಿಯು ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸುಗೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯವಾದುದನ್ನು ನುಡಿಯುವಂತಹದ್ದು, ಅರ್ಜುನನ ಬಾಣಗಳನ್ನು ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು.
ಮಂದಾರವೃಕ್ಷದ ಪೂಜೆ ಮಾಡುವುದಿದ್ದಲ್ಲಿ ಮುಂದಿನ ಮಂತ್ರವನ್ನು ಹೇಳುತ್ತಾರೆ.
ಅಶ್ಮಂತಕ ಮಹಾವೃಕ್ಷ ಮಹಾದೋಷ ನಿವಾರಣ|
ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್||
ಅರ್ಥ: ಎಲೈ ಅಶ್ಮಂತಕ ಮಹಾ ವೃಕ್ಷವೇ, ನೀನು ಮಹಾದೋಷಗಳ ನಿವಾರಣಕಾರಿಯಾಗಿರುವೆ. ನನ್ನ ಮಿತ್ರರ ದರ್ಶನವನ್ನು ಮಾಡಿಸು ಮತ್ತು ನನ್ನ ಶತ್ರು ಗಳನ್ನು ನಾಶ ಮಾಡು.
ಅನಂತರ ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ (ಅಥವಾ ತಾಮ್ರದ) ನಾಣ್ಯಗಳನ್ನು ಇಡುತ್ತಾರೆ. ಬಳಿಕ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿಯ ಎಲೆಗಳ ನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರ ವೆಂದು ದೇವರಿಗೆ ಅರ್ಪಿಸುತ್ತಾರೆ ಮತ್ತು ಆಪ್ತಮಿತ್ರರಿಗೆ ಕೊಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕು ಎನ್ನುವ ಸಂಕೇತವಿದೆ.
ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?
ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.
ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅeತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವ ವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವ ವನ್ನು ಆಚರಿಸುತ್ತಿದ್ದರು. ಕಲಶ ಸ್ಥ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವ ರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.
ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ?
ದಸರಾದಂದು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
೧. ಶಮಿಯ ಎಲೆಗಳು: ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು. ಇದರಿಂದ ವಾಸ್ತುವಿನಲ್ಲಿನ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಮಿಯ ಎಲೆಯು ತೇಜತತ್ತ್ವರೂಪಿಯಾಗಿದೆ. ಇದು ರಜ-ತಮಾತ್ಮಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿತವಾಗುವ ತೇಜ ಕಣಗಳು ವಾತಾವರಣದಲ್ಲಿ ಅಗ್ನಿಯನ್ನು ನಿರ್ಮಿಸುತ್ತವೆ. ಈ ಅಗ್ನಿಯ ಸೂಕ್ಷ್ಮ ಜ್ವಾಲೆಗಳಿಂದ ಜೀವದಲ್ಲಿ ಕ್ಷಾತ್ರಭಾವವು ಜಾಗೃತವಾಗಲು ಸಹಾಯವಾಗುತ್ತದೆ. ಕ್ಷಾತ್ರಭಾವವು ಆತ್ಮ ಶಕ್ತಿಯ ಬಲದಿಂದ ಜೀವವನ್ನು ಕ್ಷಾತ್ರವೃತ್ತಿ ಯತ್ತ ಕೊಂಡೊಯ್ಯುತ್ತದೆ.
ಪಾಂಡವರು ವನವಾಸಕ್ಕೆ ಹೋಗುವಾಗ ಶಮಿವೃಕ್ಷದ ಪೊಟರೆಯಲ್ಲಿ ಶಸ್ತ್ರಗಳನ್ನು ಇಟ್ಟಿದ್ದರು. ಶಮಿಯ ಕಾಂಡದಿಂದ ಮತ್ತು ಎಲೆಗಳಿಂದ ಉತ್ಪನ್ನವಾಗುವ ತೇಜ ತತ್ತ್ವದ ಶಾಖದಿಂದ ಶಸ್ತ್ರಗಳಲ್ಲಿರುವ ಸುಪ್ತ ಮಾರಕ ಶಕ್ತಿಯು ಅಖಂಡವಾಗಿ ಕಾರ್ಯ ನಿರತಸ್ಥಿತಿಯಲ್ಲಿ ಉಳಿದಿತ್ತು. ಪಾಂಡವರು ವೃಕ್ಷದಿಂದ ಶಸ್ತ್ರಗಳನ್ನು ಕೆಳಗಿಳಿಸಿದ್ದರೂ, ಆ ಶಸ್ತ್ರಗಳ ಮಾಧ್ಯಮದಿಂದ ದುರ್ಜನರ ಮೇಲೆ ಮಾರಕ ಶಕ್ತಿಯನ್ನು ಬಿಟ್ಟು ಶಮಿ ವೃಕ್ಷದ ಎಲೆಗಳ ಸಹಾಯದಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಮಾರಕತತ್ತ್ವದ ಕಾರ್ಯವನ್ನು ಮಾಡಿದರು. ದಸರಾದಂದು ಶ್ರೀರಾಮನ ತಾರಕ ಹಾಗೂ ಹನುಮಂತನ ಮಾರಕತತ್ತ್ವಗಳು ಕಾರ್ಯನಿರತವಾಗುವುದರಿಂದ ಶಮಿಯ ಎಲೆಗಳು ಆಯಾ ತತ್ತ್ವಗಳನ್ನು ಆಕರ್ಷಿಸಿಕೊಂಡು ವಾಯುಮಂಡಲದಲ್ಲಿ ಪ್ರಕ್ಷೇಪಿ ಸುವ ಮಹತ್ಕಾರ್ಯವನ್ನು ಮಾಡುತ್ತವೆ.
೨. ಮಂದಾರದ ಎಲೆಗಳು: ಮಂದಾರದ ಎಲೆಗಳು ಆಪ ಮತ್ತು ತೇಜ ಕಣಗಳಿಗೆ ಸಂಬಂಧಪಟ್ಟಿರುತ್ತವೆ. ಶಮಿಯಿಂದ ಪ್ರಕ್ಷೇಪಿತವಾದ ಲಹರಿಗಳು ಮಂದಾರದ ಎಲೆಗಳಿಂದ ಗ್ರಹಿಸಲ್ಪಟ್ಟು ಆಪ ತತ್ತ್ವದ ಬಲದಿಂದ ಚಲಿಸುವಂತೆ ಮಾಡುತ್ತವೆ. ಮಂದಾರದ ಎಲೆಗಳನ್ನು ಪರಸ್ಪರರಿಗೆ ಹಂಚಿದಾಗ ತೇಜತತ್ತ್ವದ ಕಣಗಳು ಎಲೆಗಳ ಮೂಲಕ ಜೀವದ ಅಂಗೈಯಲ್ಲಿ ಸಂಕ್ರಮಣವಾಗುತ್ತವೆ. ಇದರಿಂದ ಜೀವದ ಕೈಗಳಲ್ಲಿರುವ ದೇವತೆಗಳ ಸ್ಥಾನಗಳ ಬಿಂದುಗಳು ಕಾರ್ಯನಿರತವಾಗಿ ಆ ಬಿಂದುಗಳಿಂದ ಆಯಾಯ (ಅವಶ್ಯಕವಿರುವ) ತತ್ತ್ವಗಳು ಆಪಕಣಗಳ ಸಹಾಯದಿಂದ ಜೀವದ ಸೂಕ್ಷ್ಮದೇಹದಲ್ಲಿ ಹರಡುತ್ತವೆ. ಆದುದರಿಂದ ದಸರಾದಂದು ಶಮಿವೃಕ್ಷದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡು ವಾಯುಮಂಡಲದ ಶುದ್ಧೀಕರಣವನ್ನು ಮಾಡಬೇಕು ಮತ್ತು ಮಂದಾರದ ಎಲೆಗಳ ಮೂಲಕ ತೇಜತತ್ತ್ವವನ್ನು ಪರಸ್ಪರರಿಗೆ ನೀಡಿ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಬೇಕಾಗುವ ಕ್ಷಾತ್ರಭಾವವನ್ನು ಜಾಗೃತವಾಗಿಟ್ಟುಕೊಳ್ಳಬೇಕು.
ರಜ-ತಮಾತ್ಮಕ ಶಮಿಯಿಂದ ತೇಜಕಣಗಳು ಹೇಗೆ ಪ್ರಕ್ಷೇಪಿತವಾಗುತ್ತವೆ?
ಶಮಿಯಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳು ತೇಜತತ್ತ್ವದ ಸಹಾಯದಿಂದ ವಾತಾವರಣದಲ್ಲಿ ಪ್ರಕಟ ಕಾರ್ಯವನ್ನು ಮಾಡುತ್ತವೆ. ಮೊದಲು ಶಮಿಯ ಎಲೆಗಳಲ್ಲಿರುವ ರಜೋಕಣಗಳ ಘರ್ಷಣೆಯಿಂದ ಉತ್ಪನ್ನವಾದ ಇಂಧನವು ತೇಜವನ್ನು ನಿರ್ಮಾಣ ಮಾಡುತ್ತದೆ ಮತ್ತು ಈ ತೇಜವು ಅಗ್ನಿಯ ರೂಪದಲ್ಲಿ ತಮ ಕಣಗಳ ಸಹಾಯದಿಂದ ವಾತಾವರಣದಲ್ಲಿರುವ ಕಪ್ಪು ಕಣಗಳನ್ನು ವಿಘಟನೆ ಮಾಡುತ್ತದೆ. ಅಂದರೆ ಶಮಿ ಪತ್ರವು ತಮ ಕಣಗಳ ಸಹಾಯದಿಂದ ಕಪ್ಪು ಕಣಗಳನ್ನು ನಾಶ ಮಾಡುತ್ತದೆ.
ಅಪರಾಜಿತಾ ಪೂಜೆ
ದಸರಾದಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ‘ಅಪರಾಜಿತಾ’ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದ ಮೇಲೆ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗೆ ಕಾರ್ಯ ಮಾಡುತ್ತದೆ. ಅಷ್ಟದಳದ ಸಿಂಹಾಸನದ ಮೇಲೆ ಆರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹದೇವತೆಯ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶಮಾಡುತ್ತದೆ. ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಯಂತೆ ಅಷ್ಟದಳದ ಮೇಲೆ ಆರೂಢಳಾದ ಅಪರಾಜಿತಾ, ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನಳಾದಾಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳದ ಅಗ್ರಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತಾ ದೇವಿಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶಲಹರಿಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧೀಕರಿಸುತ್ತವೆ. ಬನ್ನಿ ಎಲೆಗಳಲ್ಲಿ ತೇಜವನ್ನು ವೃದ್ಧಿಸುವ ಗುಣವಿರುವುದರಿಂದ ಬನ್ನಿಗಿಡದ ಹತ್ತಿರ ಶ್ರೀದುರ್ಗಾದೇವಿಯನ್ನು ಅಪರಾಜಿತಾ ರೂಪದಲ್ಲಿ ಪೂಜಿಸುತ್ತಾರೆ.
ಅಪರಾಜಿತಾ ಪೂಜೆಯ ಮಹತ್ವ ಮತ್ತು ಅದರ ವಿಧಾನ
ಶಮಿಯ ಪೂಜೆಯನ್ನು ಮಾಡಲಾದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಮುಂದಿನ ಮಂತ್ರದಿಂದ ಪ್ರಾರ್ಥನೆ ಮಾಡುತ್ತಾರೆ.
ಹಾರೇಣ ತು ವಿಚಿತ್ರೇಣ ಭಾಸ್ವತ್ಕನ ಕಮೇಖಲಾ|
ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ||
ಅರ್ಥ: ಕೊರಳಿನಲ್ಲಿ ಚಿತ್ರವಿಚಿತ್ರ ಮಾಲೆ ಧರಿಸಿರುವ, ಸೊಂಟದಲ್ಲಿ ಹೊಳೆ ಯುವ ಸುವರ್ಣ ನಡುಪಟ್ಟಿ ಧರಿಸಿರುವ, ಸದಾಕಾಲ ಭಕ್ತರ ಕಲ್ಯಾಣ ಕಾರ್ಯದಲ್ಲಿ ನಿರತಳಾಗಿರುವ ಅಪರಾಜಿತಾ ದೇವಿಯು ನನ್ನನ್ನು ವಿಜಯಿಯನ್ನಾಗಿ ಮಾಡಲಿ. ಕೆಲವು ಕಡೆ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ಪೂಜೆ ಮಾಡುತ್ತಾರೆ.
ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’
ಸಂಬಂಧಿತ ವಿಷಯಗಳು
ನವರಾತ್ರಿನವದುರ್ಗಾ
ಬನ್ನಿ ಎಲೆಯನ್ನು (ಶಮೀಪತ್ರ) ಬಂಗಾರವೆಂದು ಏಕೆ ಕೊಡುತ್ತಾರೆ?
ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು?
ಕುಮಾರಿ ಪೂಜೆ
ತುಂಬಾ ಉಪಯುಕ್ತವಾದ ಮಾಹಿತಿ.
ReplyDeleteಸರಿಯಾದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು.
H Venkatesh Devanahally Good information usefull to all Thank q
ReplyDelete