ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ?

'ನಮಗೆ ಸ್ವತಂತ್ರವಾದ ಕರ್ತೃತ್ವವಿಲ್ಲ, ನಾವು ಆತನ ಅಧೀನ' ಎನ್ನುವ ವಿಚಾರದಲ್ಲಿ ನಾವು ಸದಾ ಗೊಂದಲಕ್ಕೊಳಗಾಗುತ್ತೇವೆ. ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ ಅನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಎಷ್ಟು ಅಧ್ಯಯನ ಮಾಡಿದರೂ ಈ ಕರ್ಮಸಿದ್ಧಾಂತ ಅರ್ಥವಾಗುವುದಿಲ್ಲ.  ಇದಕ್ಕೆ ಕಾರಣ ಅರಿವಿನ ಅಭಾವ. ಈ ಅರಿವು ಕೇವಲ ಓದುವುದರಿಂದ ಬರುವುದಿಲ್ಲ. ಅದನ್ನು ಗ್ರಹಿಸಿ-ಗ್ರಹಿಸಿ, ಅನುಭವಿಸಿ ಮನವರಿಕೆ ಮಾಡಿಕೊಳ್ಳಬೇಕು. ಇದನ್ನು ಕೃಷ್ಣ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್    ॥೫.೧೬॥

ನಾವು ನಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಲು ಇರುವುದು ಕೇವಲ ಒಂದೇ ಮಾರ್ಗ. ಜ್ಞಾನ ಮಾರ್ಗದಲ್ಲಿ ಸಾಧನೆ ಮಾಡಿ ಸತ್ಯವನ್ನು ತಿಳಿದುಕೊಳ್ಳುವುದು. ನಮ್ಮ ಸಮಸ್ಯೆ ಅಂದರೆ ನಮ್ಮೊಳಗೆ ಇರುವ ಜೀವ ಸ್ವರೂಪದಲ್ಲಿ ಜ್ಞಾನವಿದೆ-ಆದರೆ ಅದನ್ನು ಅಜ್ಞಾನವೆಂಬ ಮಸುಕು ಕವಿದಿದೆ. ನಾವು ನಮ್ಮ ಜೀವ ಸ್ವರೂಪವನ್ನು ಅಜ್ಞಾನವೆಂಬ ಪೆಟ್ಟಿಗೆಯೊಳಗೆ ಭದ್ರವಾಗಿ ಮುಚ್ಚಿಟ್ಟಿದ್ದೇವೆ. ಜ್ಞಾನಕ್ಕೆ ಮುಚ್ಚಳ-ಅಜ್ಞಾನದ್ದು ಹಾಗೂ ನಮಗೆ ಆ ಮುಚ್ಚಳವನ್ನು ತೆಗೆಯಲು ಇಷ್ಟವಿಲ್ಲ.

ನಾವು  ಮೊದಲು ತಿಳಿಯಬೇಕಾದ ಸಂಗತಿ 'ನಾನು ಅಂದರೆ ಏನು' ಎನ್ನುವುದನ್ನು. ಅದು ಗೊತ್ತಾದಾಗ ನನ್ನ ಸೀಮಿತತೆ ಏನು, ನನ್ನ ಶಕ್ತಿ ಏನು, ನನ್ನ ಅಲ್ಪತ್ವವೇನು ಎನ್ನುವುದು ತಿಳಿಯುತ್ತದೆ. ನಮ್ಮ ಇಂದ್ರಿಯದ ಒಡೆತನ ನಮಗಿಲ್ಲ; ನಮ್ಮ ಮನಸ್ಸು ನಾವು ಹೇಳಿದಂತೆ ಕೇಳುವುದಿಲ್ಲ. ಆದ್ದರಿಂದ ನಾನು ಇವೆಲ್ಲವುದರ ಜೊತೆಗಿದ್ದೇನೆ, ಯಾರೋ ಇದನ್ನೆಲ್ಲಾ ಇಲ್ಲಿ ಇಟ್ಟಿದ್ದಾರೆ; ಇಂದ್ರಿಯದಿಂದ ಅನುಭವ ಬರುತ್ತದೆ ನಾನು ಅನುಭವಿಸುತ್ತೇನೆ ಎನ್ನುವ ಅರಿವು ಮೂಡುತ್ತದೆ.  ಈ ಇಂದ್ರಿಯಗಳನ್ನು ಕೊಟ್ಟವನ್ಯಾರು, ಅದರಿಂದ ಅನುಭವ ಕೊಡುವವನ್ಯಾರು ಎನ್ನುವುದು ಅರ್ಥವಾದಾಗ, ತಾನು ಕೇವಲ ಪ್ರತಿಬಿಂಬ ಮತ್ತು ಮೂಲ ಬಿಂಬ ಭಗವಂತ ಎನ್ನುವ ಅರಿವು ಮೂಡುತ್ತದೆ.

ನಾವು ಹೇಗೆ ನಮ್ಮ ಅಜ್ಞಾನದ ಪರದೆಯನ್ನು ಕಳಚಿ ಜ್ಞಾನದ ಮಾರ್ಗವನ್ನು ಹಿಡಿಯಬಹುದು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. "ಜ್ಞಾನ ಎನ್ನುವುದು ಬೆಂಕಿಯಂತೆ. ಒಳಗಿರುವ ಜ್ಞಾನದ ಕಿಡಿಯನ್ನು ಸತತ ಅಂತರಂಗದ ಮನನದಿಂದ ಪ್ರಜ್ವಲಿಸು. ಆಗ ಅದು ಈ ಅಜ್ಞಾನವೆಂಬ ಪರದೆಯನ್ನು ಸುಟ್ಟುಬಿಡುತ್ತದೆ". ನಿರಂತರ ಅಂತರಂಗದ ಮನನ ಮಾತ್ರ ನಮ್ಮ ಅಂತರಂಗದ ಜ್ಞಾನವನ್ನು ಪ್ರಜ್ವಲಿಸಬಲ್ಲದು. ಹೊರಗಿನ ಶ್ರವಣ, ಅಧ್ಯಯನ ಇದಕ್ಕೆ ಪೂರಕ. ಒಮ್ಮೆ ಅಜ್ಞಾನದ ಪರದೆ ಸುಟ್ಟು ನಾಶವಾದಾಗ ನಮಗೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇದರಿಂದ 'ನಾನು ಮಾಡಿದೆ' ಎನ್ನುವ ಅಹಂಕಾರ ಬರಲು ಸಾಧ್ಯವೇ ಇಲ್ಲ. ಈ ಜ್ಞಾನದ ಬೆಂಕಿ ಸೂರ್ಯ ಪ್ರಕಾಶಕ್ಕಿಂತ ದೊಡ್ಡದು ಎನ್ನುತ್ತಾನೆ ಕೃಷ್ಣ. ಹೇಗೆ ಹೊರ ಪ್ರಪಂಚವನ್ನು ಸೂರ್ಯ ಬೆಳಗಿಸುತ್ತಾನೋ  ಹಾಗೇ ಈ ಜ್ಞಾನ ಅಂತರಂಗ ಪ್ರಪಂಚವನ್ನು ಬೆಳಗಿಸುತ್ತದೆ. ಇದು ಅಪರೋಕ್ಷ ಜ್ಞಾನ ಹಾಗೂ ಈ ಜ್ಞಾನ ಭಗವಂತನ ಸಾಕ್ಷಾತ್ಕಾರ ಮಾಡಿಸುತ್ತದೆ.

ಕೃಷ್ಣನ ಈ ವಿವರಣೆಯನ್ನು ಕೇಳಿದಾಗ ನಮಗೆ ನಾವೂ ಅಪರೋಕ್ಷ ಜ್ಞಾನವನ್ನು ಪಡೆಯಬೇಕು ಅನ್ನಿಸುತ್ತದೆ. ಆದರೆ ಅದು ಹೇಗೆ? ಅಪರೋಕ್ಷ ಜ್ಞಾನ ಬರಬೇಕಾದರೆ ನಾವು  ಏನು ಮಾಡಬೇಕು? ಇದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.

ತದ್ ಬುದ್ಧಯಸ್ತದಾತ್ಮಾನಸ್ತನ್ನಿಷ್ಠಾಸ್ತತ್ ಪರಾಯಣಾಃ ।
ಗಚ್ಛಂತ್ಯ ಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ   ॥೫.೧೭॥

ಅಜ್ಞಾನವನ್ನು ಅಳಿಸುವ ಮಾರ್ಗವನ್ನು ಕೃಷ್ಣ ಇಲ್ಲಿ ಸೊಗಸಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ  ಭಗವಂತನಲ್ಲೇ ಬುದ್ಧಿಯನ್ನಿಡುವುದು(ತತ್ ಬುದ್ಧಯಃ); ನಮ್ಮ ಮನಸ್ಸು ಎಲ್ಲಾ ವಿಷಯಗಳನ್ನು ಗ್ರಹಿಸುತ್ತದೆ, ಬುದ್ಧಿ ತೀರ್ಮಾನ ಮಾಡುತ್ತದೆ. ನಾವು ಭಗವಂತನಲ್ಲಿ ಸ್ಥಿರವಾಗಿ ನಮ್ಮ ಬುದ್ಧಿಯನ್ನು ಇಟ್ಟರೆ ಆತ ನಮ್ಮ ಬುದ್ಧಿಯಲ್ಲಿ ಬಂದು ಕೂರುತ್ತಾನೆ. ಇದಕ್ಕಾಗಿ ನಾವು ಭಗವಂತನ ಕುರಿತಾಗಿ ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕು. ಭಗವಂತನ ವಿಷಯದ ನಿರಂತರ ಸಾಧನೆಯಿಂದ ನಾವು ಭಗವಂತನಲ್ಲಿ ನಮ್ಮ ಬುದ್ಧಿಯನ್ನು ನೆಲೆಗೊಳಿಸಿದಾಗ, ಭಗವಂತ ನಮ್ಮ ಬುದ್ಧಿಯಲ್ಲಿ ನೆಲೆಗೊಳ್ಳುತ್ತಾನೆ.

ಭಗವಂತನಿಗೆ ನಿನ್ನ  ಆತ್ಮವನ್ನು, ನಿನ್ನ ಮನಸ್ಸನ್ನು ಅರ್ಪಿಸು(ತತ್ ಆತ್ಮಾನಃ); ಅವನು ನಿನ್ನ  ಸ್ವಾಮಿಯಾಗಲಿ, ನೀನು  'ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು, ಅವನ ನಿಯಂತ್ರಣದಲ್ಲಿ ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ’ ಎಂದು ನಿರಂತರ ಪ್ರಾರ್ಥನೆ ಮಾಡು.

ಭಗವಂತನಲ್ಲಿ ನಿಷ್ಠೆ(ತತ್ ನಿಷ್ಠಾಃ) ಇಲ್ಲದೇ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಷ್ಠಾ ಅಂದರೆ ಭಕ್ತಿ. ಆದ್ದರಿಂದ ಭಗವಂತನಲ್ಲಿ ಸದಾ ಭಕ್ತಿ ಇರಬೇಕು. ಭಕ್ತಿ ಇಲ್ಲದೆ ಧ್ಯಾನ, ಪೂಜೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಒಮ್ಮೆ ನಮಗೆ ಭಗವಂತನ ಬಗ್ಗೆ ಜ್ಞಾನ ಬಂದರೆ ಭಕ್ತಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಜ್ಞಾನವಿಲ್ಲದ ಭಕ್ತಿ-ಮೂಡಭಕ್ತಿ. ಜ್ಞಾನವಿದ್ದು ಭಕ್ತಿ ಇಲ್ಲದಿದ್ದರೆ(ಅಹಂಕಾರದಿಂದ)  ಆ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಅದು ಶುಷ್ಕ ಪಾಂಡಿತ್ಯವೆನಿಸುತ್ತದೆ.

ಹೀಗೆ ಮನಸ್ಸು-ಬುದ್ಧಿಯನ್ನು ಭಗವಂತನಲ್ಲಿ ನೆಲೆಸಿ ಜ್ಞಾನಪೂರ್ವಕ ಭಕ್ತಿಯನ್ನು ರೂಢಿಸಿಕೊಂಡಾಗ, ಎಲ್ಲಕ್ಕಿಂತ ದೊಡ್ಡ ಆಶ್ರಯ ಭಗವಂತ(ತತ್ ಪರಾಯಣಾಃ) ಎನ್ನುವ ಅರಿವು ಬರುತ್ತದೆ. ಇದರಿಂದ ಸಂಸಾರವೇ ಸರ್ವಸ್ವ ಎನ್ನುವ ಭ್ರಮೆ ಹೊರಟು ಹೋಗುತ್ತದೆ. ಪುರಂದರದಾಸರು ಹೇಳಿದಂತೆ: "ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ". ಅಂದರೆ ಈ  ಸಂಸಾರ ಶಾಶ್ವತ ಅಲ್ಲ ಹಾಗೂ ಯಾವಾಗ ಇಲ್ಲಿಂದ ಹೊರಡಬೇಕೋ ನಮಗೆ ಗೊತ್ತಿಲ್ಲ. ಹಾಗಿರುವಾಗ 'ನನ್ನದು' ಎನ್ನುವ ಅಹಂಕಾರ ಏಕೆ? ಇದು ಪಲಾಯನವಾದವಲ್ಲ, ನಾವು ಯಾವುದನ್ನೂ ಬಿಡಬೇಕಾಗಿಲ್ಲ, ಆದರೆ ಅದೇ ಸರ್ವಸ್ವ ಎನ್ನುವ ಭ್ರಮೆಯನ್ನು ಬಿಡುವುದು ಅಷ್ಟೇ. ಭಗವಂತ ಕೊಟ್ಟಿದ್ದಾನೆ, ಕೊಟ್ಟಷ್ಟು ಕಾಲ ಇಟ್ಟಷ್ಟು ಕಾಲ ಇರುವುದು. ಅದೇ ರೀತಿ  ಯಾವ ತತ್ತ್ವಾಭಿಮಾನಿ ದೇವತೆಗಳನ್ನೂ ನಾವು ತಿರಸ್ಕರಿಸಬಾರದು. ಅವರು ನಮಗೆ ಭಗವಂತನನ್ನು ಸೇರುವ ಮಾರ್ಗ ತೋರಿಸುವ ಭಗವಂತನ ಪರಿವಾರ, ಆದರೆ ಅವರೇ ಸರ್ವಸ್ವ ಅಲ್ಲ.

ಎಲ್ಲಕ್ಕಿಂತ ಮೇಲೆ ಎಲ್ಲರಿಗೂ ಆಶ್ರಯವಾಗಿರತಕ್ಕಂತಹ ಪರತತ್ವದ ಎಚ್ಚರದೊಂದಿಗೆ ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ಭಗವಂತನ ಪ್ರಸಾದವೆಂದು ಮಾಡು. ಓಡಿಹೋಗಬೇಡ, ಸಂಸಾರದಲ್ಲಿ ಬದುಕು, ಭಗವಂತ ಏನು ಕೊಟ್ಟ ಅದನ್ನು ಸ್ವೀಕರಿಸು. ನಿನ್ನೆಲ್ಲಾ ಸರ್ವಸ್ವವನ್ನು 'ಪರಮ ರಕ್ಷಕ ಭಗವಂತ' ಎಂದು ಅವನಲ್ಲಿ ಅರ್ಪಿಸು. ಹೀಗೆ ಬದುಕುವುದರಿಂದ, ನಮ್ಮ ಆತ್ಮಕ್ಕೆ ಅಂಟಿದ ಕೊಳೆ ತೊಳೆದು ಹೋಗುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ. ಆಗ ಜ್ಞಾನ ಬೆಳಗುತ್ತದೆ - ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದರಿಂದ ಮತ್ತೆ ಮರಳಿ ಬಾರದ ಶಾಶ್ವತ ಮೋಕ್ಷವನ್ನು ಜೀವ ಪಡೆಯಬಲ್ಲ.

ಆಧಾರ - ಭಗವದ್ಗೀತೆ

ಸಂಬಂಧಿತ ವಿಷಯಗಳು
ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ನಾವು ಮಾಡಿದ ಪಾಪ ಕರ್ಮದ ಫಲವನ್ನು ನಾವೇ ಅನುಭವಿಸಬೇಕು

No comments:

Post a Comment

Note: only a member of this blog may post a comment.